-ಲೇಖನ-ಚಿನ್ಮಯ.ಎಂ.ರಾವ್,ಹೊನಗೋಡು
ರಾಷ್ಟ್ರೀಯ ಹೆದ್ದಾರಿ ೨೦೬,ಸಾಗರದಿಂದ ಶಿವಮೊಗ್ಗ ರಸ್ತೆಯಲ್ಲಿ ೧೬ ಕಿಲೋಮೀಟರ್ ದೂರ,ಎಡಭಾಗದಲ್ಲಿ ಮಲೆನಾಡಿನ ಹಸಿರ ತೊಟ್ಟಿಲಲ್ಲಿ ನಮ್ಮೂರು “ಹೊನಗೋಡು”, ೩ ಮತ್ತೊಂದು ಮನೆ ಇರುವ ಈ ಊರಿಗೆ ಕಾಡೇ ಹಸಿರ ತೋರಣ…ಹಕ್ಕಿಗಳ ಚಿಲಿಪಿಲಿಯೇ ಭೂಷಣ.(ಈಗ ಹಿಂದಿನಷ್ಟು ಕಾಡಿಲ್ಲ ಬಿಡಿ,ರಾತ್ರಿ ಕಳೆವುದರೊಳಗೆ ಒಂದೊಂದೇ ಮರ ಅಪಹರಣ!
ಇಂತಹ ಪರಿಸರದ ನಡುವೆ ಹಿಡಿದು ಮುಟ್ಟಿದ್ದಕ್ಕೆಲ್ಲ ಕುತೂಹಲವನ್ನೇರಿ ಕಲ್ಪನಾಲೊಕದಲ್ಲಿ ಸವಾರಿ ಮಾಡಬಯಸುತ್ತಿದ್ದ ನಮಗೆ ಬಾಲ್ಯದಲ್ಲಿ ಹೆದ್ದಾರಿಯ ಆಚೆಕಡೆ ಇರುವ ಹೊಸಗುಂದದ ಕಾನು,ಕಾನುಭಟ್ಟರ ಮನೆ,ಅಲ್ಲೇ ಆಜುಬಾಜಲ್ಲಿ ಭಯಂಕರವಾಗಿ ಆರ್ಭಟಿಸುವ ಹುಲಿಗಳು,ಆ ಹುಲಿಗಳು ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ದನಕರುಗಳನ್ನೂ ಎಳೆದುಕೊಂಡು ಹೋಗಿ ತಿನ್ನುವ ಕಥೆಗಳನ್ನು ಕೇಳಿ ಬಲುರೋಚಕವೆನಿಸುತ್ತಿತ್ತು. ಯಾರೋ ಆಡುವ ಹಾಗಂತೆ ಹೀಗಂತೆ ಎಂಬ ಕಂತೆಕಂತೆ ಅಂತೆಕಂತೆಗಳನ್ನು ಕೇಳಿ ನಿಂತಲ್ಲೇ ಕಳೆದುಹೋಗುತ್ತಿದ್ದ ನಮಗೆ ಮಕ್ಕಳಕಥೆಗಳನ್ನು ಓದುವಾಗ ಅವುಗಳಲ್ಲಿ ಕಾಡಿನ ಸನ್ನಿವೇಶ ಬಂದಾಗ ಹೊಸಗುಂದದ ಕಾಡೇ ನೆನಪಿಗೆ ಬರುತ್ತಿತ್ತು. ಇನ್ನು ಇಂತಹ ಒಂದು ಕಗ್ಗಾಡಿನಲ್ಲಿ ರಾಜರ ಕಾಲದ ಹಾಳುಬಿದ್ದ ಕಲ್ಲಿನ ದೇವಾಲಯವಿದೆಯಂತೆ, ಎಂಬ ಸುದ್ದಿಬಂದರೆ ಸುಮ್ಮನಿರಲಾಗುತ್ತದೆಯೆ? ನೋಡದಿದ್ದರೆ ನಿದಿರೆ ಬರುತ್ತದೆಯೆ?
ಹಟಮಾಡಿ ಅಪ್ಪ-ಅಮ್ಮನನ್ನು ಕರೆದುಕೊಂಡು ನಾನು ನನ್ನ ಅಕ್ಕ ಒಂದು ದಿನ ಮಧ್ಯಾಹ್ನದ ಮೇಲೆ ನಾಲ್ಕು ಗಂಟೆಗೆ ಹೊಸಗುಂದದ ದಾರಿಯನ್ನು ಹಿಡಿದೇ ಬಿಟ್ಟೆವು. ಅರಸರ ಕಾಲದ ದೇವಾಲಯವನ್ನು ಅರಸುವ ಉತ್ಸಾಹದಲ್ಲಿ,ದೇವರೇ ಕಾಪಾಡುತ್ತಾನೆಂಬ ನಂಬಿಕೆಯಲ್ಲಿ ನಮಗೆ ಕಾಡುಪ್ರಾಣಿಗಳ ಭಯ ಮಾಯವಾಗಿ ಹೋಯಿತು. ಒಂದು ದಿಕ್ಕಿನಿಂದ ಕಾಲುದಾರಿಯಲ್ಲಿ ಕಾನನದ ಮಹಾಕೋಟೆಯೊಳಗೆ ಕಾಲಿಟ್ಟ ನಮಗೆ ಆಗಸವನ್ನೇ ಹಸಿರಿನಿಂದಾವರಿಸಿಕೊಂಡು ಆಗಸದೆತ್ತರಕ್ಕೆ ಬೆಳೆದ ಬೃಹದಾಕಾರದ ಮರಗಳ ಸ್ವಾಗತ. ಮುನ್ನಡೆನಡೆದು ನಡುಕಾಡಿಗೆ ಬಂದಂತಾದರೂ ಯಾವ ದೇವಾಲಯವೂ ಕಾಣದಾದಾಗ ನಿರಾಸೆ, ಜೊತೆಗೆ ಆತಂಕ. ಕತ್ತಲಾಗುವುದರೊಳಗೆ ಕಾಡನ್ನು ದಾಟಿ ನಮ್ಮೂರು ಸೇರಿಬಿಡುವ ಎಂದು ಬಂದದಾರಿಗೆ ಸುಂಕವಿಲ್ಲವೆಂದು ಹಿಂದಿರುಗುವಾಗ ಇನ್ನೊಂದು ದಿಕ್ಕಿನಿಂದ ಕಾಡು ಮುಗಿದು ಇನ್ನೇನು ಗದ್ದೆ ಸಿಗಬೇಕು ಅಷ್ಟರಲ್ಲೇ ಕಾಡಂಚಿನಲ್ಲೊಂದು ಶಿಲಾಮಯ ದೇವಸ್ಥಾನ. ನಿಗೂಢವಾಗಿದ್ದ ಅದು ಬಾವುಲಿಗಳಿಗೆ ಆವಾಸಸ್ಥಾನ! ಅನಾಥವಾಗಿ ಒಂಟಿಯಾಗಿದ್ದ ಅದರ ಬುನಾದಿಯಿಂದಾದಿಯಾಗಿ ಅಂಟಿಕೊಂಡಿದ್ದ ಮರಗಳನ್ನು ನೋಡಿದರೆ ಯಾರೂ ಹೇಳಬಹುದಿತ್ತು, ದೇವಾಲಯದ ಜೊತೆಗಿನ ಅದರ ನಂಟು ಹಲವು ಶತಕಗಳದ್ದೆಂದು. ಕಣ್ಣು ಹಾಯಿಸಿದಲ್ಲೆಲ್ಲಾ ಸೊಪ್ಪು,ಸೆದೆ,ಬಳ್ಳಿ,ಮುಳ್ಳು ತುಂಬಿಕೊಂಡಿದ್ದ ದೇವಸ್ಥಾನವನ್ನೊಮ್ಮೆ ದೂರದಿಂದಲೇ ಕಣ್‌ತುಂಬ ತುಂಬಿಕೊಂಡು ಊರದಾರಿ ಹಿಡಿದೆವು. ಅಷ್ಟೇ..ಅವನತಿಯ ಅಂಚಿನಲ್ಲಿರುವ ಅದನ್ನೊಮ್ಮೆ ನಾವೂ ನೋಡಿದಂತಾಯಿತೆಂದು ಕ್ರಮೇಣ ಮರೆತುಬಿಟ್ಟೆವು.
ಆದರೆ ಕಾಲಕ್ರಮೇಣ ಹತ್ತುವರುಷಗಳ ನಂತರ ಇದ್ದಕಿದ್ದಂತೆ ಕಾಲಚಕ್ರ ತನ್ನ ಗತಿಯನ್ನು ಹೇಗೆ ಬದಲಾಯಿಸಿತು ಎಂಬುದೇ ಒಂದು ವಿಸ್ಮಯ. ನಾವೊಂದಂದುಕೊಂಡರೆ ಶಿವನದ್ದೇ ಇನ್ನೊಂದು ಆಶಯ. ಶಿವಲಿಂಗ ಪುನರ್‌ಪ್ರತಿಷ್ಠಾಪನೆಗೊಂಡು ಪುನರ್ನಿರ್ಮಾಣವಾಗುವಂತಾಯಿತು ದೇವಾಲಯ. ಮರುಸೃಷ್ಠಿ ಇದ್ದೇ ಇರುತ್ತದೆ ಆದ ನಂತರ ಒಂದರ ಲಯ.
ಹೌದು..ಬೆಂಗಳೂರಿನ ಉದ್ಯಮಿ ಸಿ.ಎಂ.ನಾರಾಯಣ ಶಾಸ್ತ್ರಿ (ಖ್ಯಾತ ಸಂಸ್ಕೃತ ವಿದ್ವಾಂಸ ಚ.ಮು.ಕೃಷ್ಣಶಾಸ್ತ್ರಿ ಅವರ ಸಹೋದರ) ಈ ದೇವಾಲಯಕ್ಕೆ ಹೊಂದಿಕೊಂಡತಿರುವ ಜಮೀನನ್ನು ಸ್ಥಳೀಯರೊಬ್ಬರಿಂದ ಖರೀದಿಸುವಂತಾಯಿತು. ಸ್ವಲ್ಪ ಕಾಲದಲ್ಲೇ ಅವರಿಗೆ ತೊಂದರೆಗಳು ಉಂಟಾದಾಗ ಆಗಮ ಶಾಸ್ತ್ರಜ್ನ ಕಟ್ಟೆ ಪರಮೇಶ್ವರ ಭಟ್ಟರನ್ನು ಕೆರೆಸಿ ಪರಿಹಾರ ಬೇಡಿದರು. ಶಿವಾಲಯವನ್ನು ಜೀರ್ಣೋದ್ಧಾರ ಮಾಡಿ ತ್ರಿಕಾಲಪೂಜೆಯನ್ನು ವ್ಯವಸ್ಥೆಮಾಡಬೇಕೆಂದರು. ಅಂತೆಯೇ ಗ್ರಾಮಸ್ಥರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡ ಸಿ.ಎಂ.ಎನ್ ನರ್ಮದಾ ನದಿಯಿಂದ ಶಿವಪಾರ್ವತಿಯ ಚಿತ್ರ ಸಹಜವಾಗಿ ಮೂಡಿರುವ ಬಾಣಲಿಂಗವನ್ನು ತರಿಸಿದರು. ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳವರ ದಿವ್ಯಹಸ್ತದಿಂದ ೨೦೦೧,ಮೇ ನಾಲ್ಕರಂದು ಪ್ರತಿಷ್ಠಾಪನೆ ಮಾಡಿಸಿದರು. ಇದೇ ಸಂದರ್ಭದಲ್ಲಿ ಹಿರಿಯರಾದ ನ.ಕೃಷ್ಣಪ್ಪ ದೇವಾಲಯದ ಪುನರ್ನಿರ್ಮಾಣಕ್ಕಾಗಿ ಎಲ್ಲರೂ ಸಂಘಟನೆಗೊಳ್ಳಬೇಕು ಆ ಮೂಲಕ ಸಾಮಾಜಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಬೇಕೆಂದು ಮಾರ್ಗದರ್ಶನ ಮಾಡಿದರು.
ಹೊಸಗುಂದ ಎಂಬ ಊರಿನ ಚಿತ್ರಣವೇ ಬದಲಾಗಲು ಶ್ರೀ ಉಮಾಮಹೇಶ್ವರನ ಪ್ರತಿಷ್ಠಾಪನೆ ಭದ್ರಬುನಾದಿಯಾಯಿತು. ಅಂತೂ ೧೦ನೆಯ ಶತಮಾನದಲ್ಲಿ ಸಾಂತರ ಅರಸರಿಂದ ನಿರ್ಮಾಣವಾಗಿದ್ದ ದೇವಾಲಯ ೩ ಶತಕಗಳ ನಂತರ ಅವನತಿಯತ್ತ ಸಾಗಿ ಈಗ ಮತ್ತೆ ೨೧ನೆಯ ಶತಮಾನದಲ್ಲಿ ಪ್ರಗತಿಯ ಪಥಕ್ಕೆ ಕಾಲಿಟ್ಟು ಉನ್ನತಿ ಹೊಂದುವ ಕಾಲ ಬಂತು.
ಒಂದೆಡೆ ಬಿರುಕು ಬಿಟ್ಟ ದೇವಾಲಯದ ಶಿಲೆಗಳು, ಇನ್ನೊಂದೆಡೆ ಬಿರುಕು ಬಿಟ್ಟ ಹೊಸಗುಂದದ ಮುಖಂಡರ ಮನಸ್ಸುಗಳು,ಎಲ್ಲವನ್ನೂ ಎಲ್ಲರನ್ನೂ ಜೋಡಿಸುವ ಕಾರ್ಯದಲ್ಲಿ ನಿರತರಾದ ಸಿ.ಎಂ.ಎನ್ ಅವರಿಗೆ ಮತ್ತೊಂದೆಡೆ ಲಾಭನಷ್ಟದ ಏರಿಳಿತದಲ್ಲಿ ಅಂತರಾಷ್ಟ್ರೀಯ ಮಟ್ಟದ ವ್ಯಾಪಾರೊದ್ಯಮ. ಹೀಗೆ ಒಮ್ಮೆಲೇ ಎಲ್ಲಾ ದಿಕ್ಕಿನಿಂದಲೂ ಒತ್ತಡ. ಮೊದಲಿಂದಲೂ ಸಂಘಜೀವಿಯಾಗಿದ್ದ ಸಿ.ಎಂ.ಎನ್ ಜಾತಿಬೇಧವನ್ನೆಣಿಸದೆ,ಮೇಲುಕೀಳೆನ್ನದೇ ಎಲ್ಲರೊಡನೆ ನಗುನಗುತ್ತಾ ಬೆರೆತರು. ಗ್ರಾಮಸ್ಥರ ಕಷ್ಟಸುಖಗಳಲ್ಲಿ ಭಾಗಿಯಾದರು. ದುರ್ಬಲರಿಗೆ ಮಾನಸಿಕ ಸ್ಥೈರ್ಯವನ್ನು ತುಂಬಿದರು. ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾದರು. ವ್ಯವಸ್ಥಿತವಾಗಿ ಸಂಘಟಿಸಿದರು. ಸದಾ ಸಹನಶೀಲ ಸಮಚಿತ್ತ ಸಿ.ಎಂ.ಎನ್ ವಾರಕ್ಕೊಮ್ಮೆ ಹೊಸಗುಂದಕ್ಕೆ ಬಂದರೆ ಸಾಕು,ಸುತ್ತಮುತ್ತಲಿನವರಿಗೆ ಏನೊ ಸಂತಸ,”ಅಣ್ಣ ಬರುತ್ತಾರೆ”ಎಂದರೆ ಎಲ್ಲಾ ಚುರುಕು. ಸಂಭ್ರಮಪಡುವುದಕ್ಕೆ ಅಷ್ಟೇ ಸಾಕು.
ಗ್ರಾಮಸ್ಥರನ್ನೊಳಗೊಂಡ “ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್”ರಚಿಸಿಕೊಂಡು ಕೇವಲ ದೇವಾಲಯದ ನಿರ್ಮಾಣ ಮಾತ್ರವಲ್ಲ ಅದರ ಜೊತೆಜೊತೆಗೆ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡರು ಮ್ಯಾನೇಜಿಂಗ್ ಟ್ರಸ್ಟಿ ಸಿ.ಎಂ.ಎನ್.ನೀರಾವರಿ ತಜ್ನರನ್ನು ಕರೆಸಿ ಮಳೆಕೊಯ್ಲು ಪ್ರಾತ್ಯಕ್ಷಿಕೆಯನ್ನು ನಡೆಸಿ ಜಲಸಂರಕ್ಷಣೆಯ ಮಹತ್ವವನ್ನು ತಿಳಿಯಪಡಿಸಿದರು. ಮಳೆಕೊಯ್ಲಿನಿಂದ ಹೊಸಗುಂದದಲ್ಲಿ ಪ್ರತ್ಯಕ್ಷವಾಗಿ ಜಲಮೂಲವನ್ನು ಗಣನೀಯ ಪ್ರಮಾಣದಲ್ಲಿ ಏರಿಸಿದರು. ಅಳಿವಿನಂಚಿನಲ್ಲಿರುವ ೧೦೮ ವಿವಿಧಜಾತಿಯ ಸಸ್ಯಪ್ರಬೇಧವನ್ನುಳಿಸಲು ಪ್ರತಿವರುಷವು ನೆಟ್ಟು ಪೋಷಿಸಿದರು. ಅರಣ್ಯಸಂರಕ್ಷಣೆ,ಅದಕ್ಕಾಗಿ “ದೇವರ ಕಾಡು” ಘೋಷಣೆ, ಆ ಮೂಲಕ ಏರುತ್ತಿರುವ ಜಾಗತಿಕ ತಾಪಮಾನ ಆದಷ್ಟು ನಿವಾರಣೆ, ಪರಿಸರ ಸಮತೋಲನಕ್ಕೆ ಹೊಸಗುಂದ ಎಂಬ ಸಣ್ಣ ಗ್ರಾಮದಿಂದ ಸುಧಾರಣೆ!
ಹೀಗೆ ಸಾಲುಸಾಲು ಕಾರ್ಯಕ್ರಮಗಳು ಕಾರ್ಯಗತ. ಸಂಶೋಧನಾ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ಸತತ.
ಇತ್ತ ಶಿಥಿಲಗೊಂಡ ಶಿವಾಲಯದಲ್ಲಿದ್ದ ಶಿವಲಿಂಗವನ್ನು ಹಾಗು ಪರಿವಾರದ ದೇವರನ್ನು ಶ್ರೀ ರಾಘವೇಶ್ವರಭಾರತೀಸ್ವಾಮಿಗಳವರ ಗೌರವಾಧ್ಯಕ್ಷತೆಯಲ್ಲಿ ಬಾಲಾಲಯಕ್ಕೆ ಸ್ಥಳಾಂತರಿಸಲಾಯಿತು. ೨೦೦೭ ಜನವರಿ ೧೨ರಂದು ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಹಕಾರದಲ್ಲಿ “ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್”ಗೆ ವಹಿಸಿಕೊಡಲಾಯಿತು. ಇದಕ್ಕೆ ಆರ್ಥಿಕ ಕ್ರೋಢೀಕರಣವನ್ನು “ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್”ಕೈಗೆತ್ತಿಕೊಂಡಿತು. ಪ್ರತೀ ಶಿಲೆಗಳನ್ನೂ ಸಂಖ್ಯೆ,ಅಕ್ಷರಗಳಿಂದ ಗುರುತುಮಾಡಿ ಪೂರ್ಣ ದೇವಾಲಯವನ್ನು ಬಿಚ್ಚಿಟ್ಟು ಅಡಿಪಾಯವನ್ನು ಸರಿಪಡಿಸಿ ಪುನಃ ಮೊದಲಿನಂತೆ ಜೊಡಿಸಲಾಯಿತು. ಹೀಗೆ ಪ್ರಪಂಚದಲ್ಲೇ ಪ್ರಪ್ರಥಮ ಬಾರಿಗೆ ಪುನಹ ಅದೇ ಶಿಲೆಗಳನ್ನು ಬಳಸಿ ವಿನೂತನವಾಗಿ ಪುನರ್‌ನಿರ್ಮಾಣಗೊಂಡ ಈ ದೇವಾಲಯದ ಬಗ್ಗೆ ಯುನೆಸ್ಕೊ ಕೂಡ ಆಸಕ್ತಿ ತಳೆದು ತನ್ನ ಪ್ರತಿನಿಧಿಗಳನ್ನು ಕಳಿಸಿಕೊಟ್ಟಿತು!
ಇನ್ನು ಅಷ್ಟಮಂಗಲದಲ್ಲಿ ತಿಳಿಸಿದಂತೆ ಕಾಡಿನಲ್ಲಿ ಕಂಚಿಕಾಳಮ್ಮನ ಗುಡಿಯ ನಿರ್ಮಾಣ ಕೂಡ ಆರಂಭವಾಯಿತು.ಪರಿವಾರದ ಇನ್ನೊಂದು ದೇವರಾದ ಪ್ರಸನ್ನ ನಾರಾಯಣ ದೇವಾಲಯವನ್ನು ಕುರುಹು ಸಿಕ್ಕ ಸ್ಥಳದಲ್ಲಿ ಮುಂದೆ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಯಿತು.ಇಷ್ಟೆಲ್ಲ ಸಾಲದೆಂಬಂತೆ ಚಿಕ್ಕದಾಗಿದ್ದ ತೀರ್ಥ ಪುಷ್ಕರಿಣಿಯನ್ನು ೧೦೦ ಅಡಿ ಉದ್ದ ೧೦೦ ಅಗಲ ಗಾತ್ರದಲ್ಲಿ ಬೃಹದಾಕಾರವಾಗಿ ಶಿಲೆಗಳ ಮೆಟ್ಟಿಲನ್ನು ಮಾಡಿ ನಿರ್ಮಿಸಲಾಗುತ್ತಿದೆ. ಹಾಗು ಇದೂ ಒಂದು ಈ ದೇವಾಲಯದ ಪ್ರಮುಖ ಆಕರ್ಷಣೆಯಾಗಿದೆ.
ಪ್ರತೀ ತಿಂಗಳ ಮೊದಲ ಭಾನುವಾರ ಸಭೆ ಸೇರುತ್ತಿರುವ ಟ್ರಸ್ಟಿನ ಸದಸ್ಯರು,ಗ್ರಾಮಸ್ಥರು ಆಗುತ್ತಿರುವ ಕಾರ್ಯಕ್ರಮಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತ ಆಗಬೇಕಾದ ಕಾರ್ಯಕ್ರಮಗಳ ಬಗ್ಗೆ ವಿಚಾರ ವಿಮರ್ಶೆ ಮಾಡಿ ಮುನ್ನಡೆಯುತ್ತಿದ್ದಾರೆ. ಆರ್ಥಿಕವಾಗಿ ಸಶಕ್ತರಾಗಿದ್ದ ಸಿ.ಏಮ್.ಎನ್ ತಾವೊಬ್ಬರೇ ಕಟ್ಟಬಹುದಾಗಿದ್ದ ದೇವಾಲಯಕ್ಕೆ ಎಲ್ಲರನ್ನೂ ಭಾಗಿಯಾಗುವಂತೆ ಮಾಡಿ ಪುಣ್ಯದ ಪಾಲನ್ನು ಎಲ್ಲರಿಗೂ ನೀಡಿ ಎಲ್ಲರನ್ನೂ ಸಕ್ರಿಯರನ್ನಾಗಿಸಿದ್ದಾರೆ. ಎಲ್ಲರ ಸಲಹೆ,ಸೂಚನೆ,ಅಭಿಪ್ರಾಯಗಳನ್ನೂ ಗೌರವಿಸುತ್ತಾ ಬಂದಿದ್ದಾರೆ. ಅದೇ ವಿಶೇಷ. ಗ್ರಾಮದ ಪ್ರಮುಖರಾದ ದಿ.ನಾಗರಾಜ ಗೌಡ್ರು,ಶೋಭಾ ಶಾಸ್ತ್ರಿ,ಬಸವರಾಜ ಗೌಡ್ರು,ಕೋವಿ ಪುಟ್ಟಪ್ಪ,ಜ್ಯೋತಿಮುರಳಿಧರ್,ಸ್ವಾಮಿರಾವ್,ರಾಮ್‌ದೇವ್,ಶೇಖರಪ್ಪ್,ವಿನಾಯಕ,ರಘುಪತಿ ರಾವ್,ಮೃತ್ಯುಂಜಯ ರಾವ್,ಶೇಷಗಿರಿ ಹೆಗಡೆ ಹಾಗು ಗಣಪತಿ ಶೆಟ್ಟಿ ಈ ಮಹಾಕೈಂಕರ್ಯದಲ್ಲಿ ಬಹಳಷ್ಟು ಶ್ರಮಿಸಿದ್ದಾರೆ. ದೀಪಕ್ ಸಾಗರ್ ಮಾಧ್ಯಮದ ಪ್ರತಿನಿಧಿಯಾಗಿ ಎಲ್ಲಾ ಕಾರ್ಯಕ್ರಮಗಳಲ್ಲೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
“ಉಳ್ಳವರು ಶಿವಾಲಯ ಮಾಡುವರು”ಎಂಬಂತೆ ದುಡ್ಡು,ದೊಡ್ಡಸ್ತಿಕೆ ಇದ್ದವರೆಲ್ಲಾ ಅಹಂಕಾರದಿಂದ ತಮ್ಮ ಭಕ್ತಿಯನ್ನು ಪ್ರದರ್ಶನ ಮಾಡಲು ದೇವಸ್ಥಾನವನ್ನು ಕಟ್ಟಿಸಿದವರು ನಮ್ಮ ನಾಡಲ್ಲಿ ಕೇರಿಗೊಬ್ಬರಂತೆ ಬಹಳಷ್ಟು ಮಂದಿ ಇದ್ದಾರೆ. ಆದರೆ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಇನ್ನೆಲ್ಲೋ ಬಂದು ಅದೇ ತನ್ನೂರೆಂದು ಅಲ್ಲಿಯವರೇ ತನ್ನವರೆಂದು, ತನ್ನದಲ್ಲದ ಶಿವಾಲಯವೊಂದನ್ನು ತಮ್ಮದೆಂದು ಅಲ್ಲಿನವರಿಗೆ ಅರಿವು,ಜಾಗೃತಿ ಮೂಡಿಸಿ, ಅವರೆನ್ನೆಲ್ಲಾ ಒಗ್ಗೂಡಿಸಿ ತನ್ನ ಬುದ್ಧಿಶಕ್ತಿ,ಹಣ,ಸಮಯವನ್ನೆಲ್ಲಾ ಅದಕ್ಕಾಗಿ ತ್ಯಾಗ ಮಾಡಿ, ಲೋಕನಿಂದನೆಗಳನ್ನೆಲ್ಲಾ ಸಹಿಸಿಕೊಂಡು, ಅನುಮಾನ ಅವಮಾನಗಳನ್ನೆಲ್ಲಾ ಸರಿಸಿಕೊಂಡು ನಿರ್ಮಿಸುವುದಿದೆಯಲ್ಲ ಅದಕ್ಕಿಂತ ಮಹತ್ತರ ಸಾಧನೆ ಇನ್ನೊಂದಿಲ್ಲ. ಸಮಸ್ಯೆ ಪರಿಹಾರಕ್ಕೆ ದೇವಾಲಯದ ಜೀರ್ಣೋದ್ಧಾರವಾಗಬೇಕು ಎಂದಾಗಲೇ ಸಿ.ಎಂ.ಏನ್ ಶಾಸ್ತ್ರಿಗಳು ಈ ಜಮೀನಿನ ಸಹವಾಸವೇ ಬೇಡವೆಂದು ಬೇರೊಬ್ಬರಿಗೆ ಮಾರಿ ಪರ ಊರ ದಾರಿ ಹಿಡಿದು ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು.ಆದರೆ ಹಾಗೆ ಪಲಾಯನ ಮಾಡದೆ ಮುಂದೆ ನಿಂತು ಹಲವು ಸಮಸ್ಯೆಗಳನ್ನೆದುರಿಸಿದರು. ಸಮಸ್ಯೆಗಳನ್ನು ಪರಿಹರಿಸಿದರು!
ನೋಡನೋಡುತ್ತಿದ್ದಂತೆಯೇ ಪಾಳುಬಿದ್ದ ಒಂದು ದೇವಾಲಯ,ಆ ದೇವಾಲಯವನ್ನು ಪುನರ್‌ನಿರ್ಮಿಸಲು ಮುಂದಾದ ಒಬ್ಬ ವ್ಯಕ್ತಿಯ ಯುಕ್ತಿಯಿಂದಾಗಿ ಸುತ್ತಲಿನ ಜನರಲ್ಲಿ ನಾವೆಲ್ಲ ಒಂದೆಂಬ ಸಾಂಘಿಕ ಮನೋಭಾವ ಬೆಳೆಯಿತು. ದೇವಾಲಯದ ನಿರ್ಮಾಣದ ಜೊತೆಜೊತೆಗೆ ಜನರಲ್ಲಿ ಸೌಹಾರ್ದಯುತ ವಾತಾವರಣವೂ ನಿರ್ಮಾಣವಾಯಿತು.
ಹತ್ತು ವರುಷಗಳ ನಂತರ ಇತ್ತೀಚೆಗೆ ಮತ್ತೆ ಭೇಟಿಕೊಟ್ಟ ನ.ಕೃಷ್ಣಪ್ಪನವರಿಗೆ ತಾವಂದು ಬಿತ್ತಿದ್ದ ಕನಸಿನ ಬೀಜ ಹೊಸಗುಂದದ ಮರಗಳಷ್ಟೇ ಬೃಹದಾಕಾರವಾಗಿ ಬೆಳೆದು ಹೊಸಗುಂದ ಹಾಗು ಹೊಸಗುಂದದ ಜನಮನ ನಳನಳಿಸುತ್ತಿರುವುದನ್ನು ಕಂಡು ಪರಮಾಶ್ಚರ್ಯ! ಅವರಿಗೆ ನಿರ್ಮಣದ ಪ್ರತಿಹಂತವನ್ನೂ ವಿವರಿಸುತ್ತಿದ್ದ ಸಿ.ಎಂ.ಎನ್ ಅವರಲ್ಲಿ ಅಗಾಧ ಆತ್ಮವಿಶ್ವಾಸ. ಅವರನ್ನು ಹಿಂಬಾಲಿಸುತ್ತಿದ್ದ ಗ್ರಾಮದವರಿಗೆ ತಾವೆಲ್ಲಾ ಒಗ್ಗೂಡಿ ಸಾಧಿಸುತ್ತಿದ್ದೇವೆ ಎಂಬ ಸಾರ್ಥಕತೆಯ ಭಾವ. ಹಿಂದುಳಿಯದೆ ಕಾಲದೊಡನೆ ಮುಂದಾಗಿ ಪರಿವರ್ತನೆಯಾಗುವುದೆಂದರೆ ಇದೇ ಅಲ್ಲವೆ? ಪರಿವರ್ತನೆ ಜಗದ ನಿಯಮವಲ್ಲವೆ?
ಕನಸುಮನಸಿನಲ್ಲೂ ಈ ದೇವಾಲಯ ಮತ್ತೆ ಬೆಳಕಿಗೆ ಬರುತ್ತದೆಯೆಂದುಕೊಂಡಿರದ ಹೊಸಗುಂದದ ಗ್ರಾಮದವರಿಗೆ ಈಗ ಕನಸು ನನಸಾಗುತ್ತಿರುವ ಸಂಭ್ರಮ.ನಾಡಿನ ಮುಖ್ಯವಾಹಿನಿಗೆ ಈ ದೇವಾಲಯ ಸೇರಿ,ಮತ್ತೆ ಅರಸರ ಕಾಲದ ವೈಭವ ತೋರಿ,ದೇಶದುದ್ದಗಲಕ್ಕೂ ಶಿವತತ್ವ ಸಾರಿ,ಇಡೀ ವಿಶ್ವಕ್ಕೆ,ವಿಶ್ವಶಾಂತಿಗೆ ಆಗಲಿ ಹೊಸಗುಂದವೇ ಮಾದರಿ-
ಇದು ಇಲ್ಲಿಯ ಜನರ ಒಮ್ಮತದ ಅಭಿಮತ. ಹೊಸಗುಂದದ ಜನ ವಿಶ್ವದೆಲ್ಲೆಡೆಯಿಂದ ಬರುವ ಭಕ್ತಾದಿಗಳನ್ನೂ, ಪರಿಸರ ಪ್ರೇಮಿಗಳನ್ನೂ, ಸಂಶೋಧಕರನ್ನೂ ಆದರದಿಂದ ಸ್ವಾಗತಿಸುತ್ತಿದ್ದಾರೆ. ಒಮ್ಮೆ ನೀವೂ ಬನ್ನಿ. ಅನನ್ಯತೆಯನ್ನು ಕಂಡು ಧನ್ಯರಾಗಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-ಹೊಸಗುಂದ ದೇವಾಲಯ-೦೮೧೮೩-೨೯೫೮೦೩.೯೯೦೧೧೮೭೨೯೯-೯೯೮೦೨೯೪೦೬೨
ಲೇಖನ-ಚಿನ್ಮಯ.ಎಂ.ರಾವ್,ಹೊನಗೋಡು
Friday, April 15, 2011
*************