-ಚಿನ್ಮಯ ಎಂ.ರಾವ್ ಹೊನಗೋಡು
ಸ್ವಲ್ಪ ಸಮಾಧಾನ…
ಬೆಳೆಯಲು ಸಾಕಷ್ಟು ಸಮಯವಿದೆ
ಕೂಡಲೇ ಫಲಿತಾಂಶ ನೀಡುವುದು
ನಿರ್ಭಾವುಕ ಯಂತ್ರ ಮಾತ್ರ
ಯಂತ್ರಕ್ಕೂ ಒಂದು ಪರಿಮಿತಿ ಇದೆ
ನಿಗದಿತ ಕಾರ್ಯವನ್ನು ಪೂರ್ಣಗೊಳಿಸಿ
ಫಲಿತಾಂಶ ನೀಡುವ ಗುರಿ ಅಷ್ಟೇ..
ಆದರೆ ವ್ಯಕ್ತಿಯ ಸಾಧನೆ ಹಾಗಲ್ಲ
ನಿಗದಿ ಮಾಡಿದಷ್ಟೂ ವಿಸ್ತಾರವಾಗುತ್ತದೆ
ನಿಗದಿ ಮಾಡದಷ್ಟು ವಿಶಾಲವಾಗಿದೆ
ಗುರಿ ಕೇವಲ ನೆಪಕ್ಕಷ್ಟೇ…
ಮುಂದಾಗುತ್ತಿದ್ದಂತೆ ಆ ಗುರಿಯ ಆಚೆ
ಇನ್ನೂ ಮುಂದೆ ಮುಂದೆ
ಹಲವು ಮೈಲಿಗಲ್ಲುಗಳು ಕಾಣುತ್ತವೆ
ಮುಳುಗದೆ ಸಾಗಬೇಕಾಗಿದೆ
ತಲುಪಬೇಕಾಗಿದೆ ನಮ್ಮ ವಾಂಛೆಯ ನಾವೆ…
ಗುರಿಯು ದಿಗಂತದ ಬೊಗಸೆಯೊಳಗೆ
ತಾರೆಗಳನ್ನಿಟ್ಟುಕೊಂಡಿದೆ
ಆ ತಾರೆಗಳೊಡನೆ ವಿಲೀನಗೊಳ್ಳಬೇಕಿದೆ
ಆ ತಾರೆಗಳು ಎಂದೂ
ತಮ್ಮ ಆತ್ಮಪ್ರಶಂಸೆ ಮಾಡಿಕೊಳ್ಳುವುದಿಲ್ಲ
ಮೌನವಾಗಿದ್ದುಕೊಂಡೇ ಹೊಳೆಯುತ್ತವೆ
ಅಬ್ಬರ ಮಾಡದೆ ಮೌನವಾಗಿ
ಬೆಳೆಯುವುದೂ ಒಂದು ಶೈಲಿ
ಹೊಳೆಯುವುದು ಮಾತ್ರ ಇಲ್ಲ ನಮ್ಮ ಕೈಲಿ
ಅದಕ್ಕೆ ಅದೃಷ್ಟವೂ ಬೇಕಾಗುತ್ತದೆ
ನೆನಪಿರಲಿ
ಸಾಧನೆ ಮಾಡದೆ ಹೊಳೆಯುವವರು
ಸಾಧನೆ ಮಾಡಿಯೂ ಹೊಳೆಯದವರು
ಇಂಥವರ ನಡುವೆ
ಸಾಧನೆ ಮಾಡಿ ಹೊಳೆಯುವವರು
ತೀರಾ ವಿರಳ…ವಿಪರ್ಯಾಸ…
ಹೊಳೆಯಬೇಕೆಂಬ ಆತುರದಲ್ಲಿ
ಸಾಧನೆ ಕಳೆದುಕಳೆದುಕೊಳ್ಳುವವರೂ ಉಂಟು
ಅವರಿಗೆ ಬೇಕಾಗಿರುತ್ತದೆ ತುರ್ತಾಗಿ ಗಂಟು…!
ಜೊತೆಗೆ ಕೀರ್ತಿಯ ನಂಟು…!
ಕೆಲವು ತಾರೆಗಳಿಗೆ ಮೋಡ ಕವಿದಾಗ
ಹಲವು ತಾರೆಗಳು ಮಿನುಗಿದಂತಾಗಬಹುದು
ಮಿನುಗಿದಂತಾಗುವುದು ಬೇರೆ…
ನಿಜವಾಗಿಯೂ ಮಿನುಗುವುದು ಬೇರೆ..
ಸಹಜವಾಗಿ ಮಾಗಿ ಬೆಳೆಯುವುದು ಬೇರೆ
ಕಾಯೊಂದನ್ನು ಗುದ್ದಿಕೊಂಡು
ಹಣ್ಣಾಗಿಸಿಕೊಳ್ಳುವುದು ಬೇರೆ
ಅಸಹಜವಾಗಿ ಹಣ್ಣಾಗಿದ್ದು
ಅಷ್ಟೇ ಸಹಜವಾಗಿ ಬೇಗ ಕೊಳೆತು
ಮಣ್ಣಾಗುತ್ತದೆ !
ಲೋಕದ ಕಣ್ಣಿನ ದೃಷ್ಟಿಯಲ್ಲಿ
ನಾವು ಮಿನುಗಬಹುದು
ಮರೆಯಾಗಬಹುದು…ಆದರೆ
ಮೊದಲು ನಮ್ಮೊಳಗೆ ನಾವು
ನಮ್ಮ ನಮ್ಮ ಅಂತರಂಗದಲ್ಲಿ
ಪ್ರಕಾಶಿಸುವುದು “ಅರ್ಥಪೂರ್ಣ”
*******