ನೃತ್ಯ

ಬಲ್ಗೇರಿಯಾಕ್ಕೆ ಸಾಗಿಸಿದಳು ಭರತನಾಟ್ಯವ…! ಇದೇ ಮೀನ…ಆಶ್ಚರ್ಯನಾ?

ಸಂದರ್ಶನ-ಚಿತ್ರ-ಚಿನ್ಮಯ.ಎಮ್.ರಾವ್ ಹೊನಗೋಡು

“ಭರತನಾಟ್ಯ” ದಕ್ಷಿಣಭಾರತದ ಸುಪ್ರಸಿದ್ಧ ಪ್ರಾಚೀನ ಕಲೆ. ಭಾರತೀಯ ಸಂಸ್ಕೃತಿಯ ಸಾಂಸ್ಕೃತಿಕ ರಾಯಭಾರಿ ಎಂದೇ ಹೇಳಬಹುದು. ತನುಮನವನ್ನು ಅರಳಿಸಿ ಆಧ್ಯಾತ್ಮಿಕತೆಯತ್ತ ಕರೆದುಕೊಂಡುಹೋಗುವ ಅಪರೂಪದ ನೃತ್ಯಶೈಲಿ. ಭರತನಾಟ್ಯ ಮಾಡುವವರಿಗಷ್ಟೇ ಅಲ್ಲ ನೋಡುವವರಿಗೂ ಚೆಂದ. ಪ್ರದರ್ಶನಾ ಕಲೆಗಳಲ್ಲೇ ಮುಂಚೂಣಿಯಲ್ಲಿದೆ ಎನ್ನಬಹುದು. ಕಲಿತಷ್ಟೂ ಮುಗಿಯದ ಈ ಕಲೆಯನ್ನು ಪೂರ್ಣ ಕಲಿಯದೆ ಅರ್ಧಕ್ಕೆ ಮುಗಿಸುವವರೇ ನಮ್ಮಲ್ಲಿ ಹೆಚ್ಚು. ಅಂತವರಿಗೆ ಒಂದಷ್ಟು ಕಾಲ ವೇದಿಕೆ, ರಿಯಾಲಿಟಿ ಷೋಗಳಲ್ಲಿ ಕುಣಿಯುವ ಹುಚ್ಚು. ಈ ಕಲೆಯನ್ನೇ ತಪಸ್ಸಾಗಿ ಸ್ವೀಕರಿಸಿ ಅದರ ಅಂತರಾಳವನ್ನು ಬಗೆಯುವವರು ನಮ್ಮಲ್ಲಿ ಅದೆಷ್ಟು ಮಂದಿ? ಕೇವಲ ಬೆರಳೆಣಿಕೆಯಷ್ಟು. ಅಂತಹುದರಲ್ಲಿ ಯೂರೋಪಿನ ಬಲ್ಗೇರಿಯಾದ ಮೀನಾ ಎಂಬಾಕೆ ಪ್ರತೀ ವರುಷ ಚೆನ್ನೈಗೆ ಬಂದು ಈ ವಿದ್ಯೆಯನ್ನು ತನ್ನ ಬಗಲಲ್ಲಿ ಬಚ್ಚಿಟ್ಟುಕೊಂಡು ಹೋಗಿ ತನ್ನ ದೇಶದಲ್ಲಿ ಬಿಚ್ಚಿಡುತ್ತಿದ್ದಾಳೆ ಎಂದರೆ ಬೆರಗಾಗುತ್ತದೆ ಅಲ್ಲವೆ?

ಹೌದು, ಬಲ್ಗೇರಿಯಾದ ಮೀನ ಎಂಬ ಈಕೆ ಕಳೆದ ನಾಲ್ಕಾರು ವರ್ಷಗಳಿಂದ ಭರತನಾಟ್ಯವನ್ನು ಉಗ್ರತಪಸ್ಸಿನಂತೆ ಸಾಧನೆ ಮಾಡುತ್ತಿದ್ದಾಳೆ! ಈಗಾಗಲೇ ವಿದ್ವತ್ ಹಂತ ತಲುಪಿದ್ದಾಳೆ! ಭಾರತಕ್ಕೆ ಸಾಮಾನ್ಯ ಪ್ರವಾಸಿಗಳಾಗಿ ಬಂದ ಮೀನ ಮನ ಭರತನಾಟ್ಯದೆಡೆಗೆ ಹೇಗೆ ವಾಲಿತು? ಹಾಗು ಆ ನಂತರದ ಬೆಳವಣಿಗೆ….ಈ ಬಗ್ಗೆ ಈ ಲೇಖಕ  “ಕನ್ನಡ ಟೈಮ್ಸ್” ಪತ್ರಿಕೆಗಾಗಿ ಸಂದರ್ಶನ ಮಾಡಿದಾಗ…..

೧-ಭರತನಾಟ್ಯದಲ್ಲಿ ನಿಮಗೆ ಆಸಕ್ತಿ ಬಂದದ್ದು ಹೇಗೆ? ಸ್ಪೂರ್ತಿ ಯಾರು?

ಒಂದೇ ಒಂದು ಚಿತ್ರ. ಆ ಚಿತ್ರದಲ್ಲಿ ಒಬ್ಬಳು ಸುಂದರಿ. ಯಾವುದೋ ಭಾವಭಂಗಿಯಲ್ಲಿ ನಿಂತಿದ್ದಳು. ಚಿತ್ರದ ಕೆಳಗೆ “ಭರತನಾಟ್ಯಂ” ಎಂದು ಬರೆದಿತ್ತು. ಹಾಗಂದರೇನು ಎಂದು ನನಗೆ ಗೊತ್ತಿರಲಿಲ್ಲ. ಆದರೆ ನಾನು ಆ ಚಿತ್ರವನ್ನು ತುಂಬಾ ಇಷ್ಟಪಟ್ಟೆ. ನನ್ನ ಮನವನ್ನು ಕಾಡಿದ್ದ ಆ ಚಿತ್ರದ ವಿಚಾರವಾಗಿ ಹುಡುಕಾಡಿದೆ. ಇದು ತುಂಬಾ ಹಿಂದೆ. ಆಗ ನಾನಿನ್ನೂ ಚಿಕ್ಕವಳಿದ್ದೆ. ಆಗ ಇಂಟರ್‌ನೆಟ್ ಮತ್ತಿತ್ತರ ವ್ಯವಸ್ಥೆಗಳಿರದ ಕಾರಣ ಆ ಚಿತ್ರದ ಕೆಳಗಡೆ ಬರೆದಿದ್ದ “ಭರತನಾಟ್ಯಂ” ಎಂಬುದರ ಬಗ್ಗೆ ಅರಿಯಲು ಹರಸಾಹಸ ಮಾಡಿದೆ. ಒನ್ ಫೈನ್ ಡೆ ಅದರ ಬಗ್ಗೆ ತಿಳಿದೆ. ಅಲ್ಲಿಂದ ನನ್ನ ಜೀವನವೇ ಬದಲಾಯಿತು. ಭಾರತದ ದೇವಾಲಯಗಳಲ್ಲಿ ಶಿಲ್ಪಿಗಳು ಕೆತ್ತಿದ ಭರತನಾಟ್ಯದ ಚಿತ್ರಗಳೇ ನನಗೆ ಸ್ಪೂರ್ತಿ. ನನ್ನ ಗುರುಗಳಾದ ಆಚಾರ್ಯಚೂಡಾಮಣಿ ಶ್ರೀಮತಿ ಅನಿತ ಗುಹ ನನಗೆ ದೊಡ್ಡ ಸ್ಪೂರ್ತಿ.

೨-ನೀವು ಭರತನಾಟ್ಯಕ್ಕೆ ಮೊದಲು ಬೇರೆ ಯಾವುದಾದರೂ ಶೈಲಿಯ ನರ್ತಕಿಯಾಗಿದ್ದಿರಾ?

ಅಫ್ ಕೋರ್ಸ್, ನಾನು ಮೊದಲಿನಿಂದಲೂ ಪಾಶ್ಚಾತ್ಯನೃತ್ಯ ಹಾಗು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ. ಬಾಲ್ಯದಲ್ಲಿ ಹಾಡುತ್ತಿದ್ದೆ,ನಾಟಕಗಳನ್ನು ಮಾಡುತ್ತಿದ್ದೆ. ಆದರೆ ಅದೇ ನನ್ನ ವೃತ್ತಿಯಾಗಿರಲಿಲ್ಲ. ಆದರೆ ಭರತನಾಟ್ಯದಿಂದ ಎಲ್ಲವೂ ಬದಲಾಯಿತು. ಇದೇ ಸರ್ವಸ್ವವಾಯಿತು.

೩-ಭರತನಾಟ್ಯದ ಗುರುಗಳು ನಿಮಗೆ ಎಲ್ಲಿ ಹೇಗೆ ಲಭ್ಯವಾದರು?

ಪ್ರತಿರಾತ್ರಿಯೂ ಮೇಧಾಹರಿ ಅವರ ಭರತನಾಟ್ಯದ  ವೀಡಿಯೋ ನೋಡಿ ಬೆರಗಾಗುತ್ತಿದ್ದೆ. ಅವರ ನರ್ತನದ ಸೊಬಗು,ವ್ಯಕ್ತವಾಗುತ್ತಿದ್ದ ಕರುಣಾರಸ,ಪ್ರಾರ್ಥಿಸುವಿಕೆ ಎಲ್ಲವನ್ನೂ ನೋಡಿ ಮರುಳಾದೆ. ಕೆಲವು ದಿನಗಳ ನನ್ನ ಹುಡುಕಾಟದ ನಂತರ ಮೆಧಾಹರಿ ಅವರ ಗುರುಗಳಾದ ಅನಿತಾ ಗುಹ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದೆ. ಅದೊಂದು ಪ್ರೇಮಕಥೆ. ಮೊದಲ ಬಾರಿ ನನ್ನ ಕಂಗಳಲ್ಲಿ ಆನಂದಭಾಷ್ಪ. ನಾನು ಯೂರೋಪ್ ಹಾಗು ಭಾರತದ ಪೂನ,ಕೇರಳದಲ್ಲಿ ಆ ಮೊದಲೇ ಬೇರೆಬೇರೆ ಶೈಲಿಯ ನೃತ್ಯಾಭ್ಯಾಸ ಮಾಡಿದ್ದೆ. ಆದರೂ ಈಗ ನಾಲ್ಕು ವರ್ಷಗಳ ಹಿಂದೆ ಭೇಟಿಯಾದ ಅನಿತ ಗುಹ ನನ್ನ ಜೀವನವನ್ನೇ ಸಂಪೂರ್ಣ ಪರಿವರ್ತಿಸಿದ ಮಹಾನ್ ಗುರು. ಈಗ ಪ್ರತಿವರ್ಷ ತಪ್ಪದೆ ಸಾಧನೆ ಮಾಡಲು ಚೆನ್ನೈಗೆ ಬರುತ್ತಿದ್ದೇನೆ. ನನಗೆ ಅವರ ಪಾಠ ತುಂಬಾ ಇಷ್ಟ. ನನ್ನ ಅವರ ಅಭಿರುಚಿ ಒಂದೇ. ನಾನು ಪ್ರೆಶ್ನೆ ಕೇಳುವ ಮೊದಲೇ ಅವರು ನನ್ನ ಪ್ರೆಶ್ನೆಗೆ ಉತ್ತರಿಸುತ್ತಾರೆ!

೪-ಭರತನಾಟ್ಯದ ಕಲಿಕೆ ಹೇಗನಿಸುತ್ತಿದೆ?

ಮೊದಮೊದಲು ಕಷ್ಟ ಅನಿಸ್ತಾ ಇತ್ತು. ಆಮೇಲೆ ಹೊಂದಿಕೊಂಡೆ. ಆರಂಭಿಕ ಪಾಠಗಳಾದ ನಂತರ ಕೆಲವು ಕಷ್ಟದ ಭಂಗಿಗಳು,ಕರಣಗಳನ್ನು ಕಲಿತೆ. ಈಗ ಅಭಿನಯದ ಕಡೆಯೂ ಹೆಚ್ಚು ಗಮನಕೊಡುತ್ತಿದ್ದೇನೆ.

ನನ್ನ ಗುರುಗಳು ಪಾಠ ಮಾಡುವಾಗ ಜ್ಯೂನಿಯರ್‌ನಿಂದ ಸೀನಿಯರ್‌ವರೆಗೆ ಎಲ್ಲ ಬ್ಯಾಚ್‌ನವರ ಜೊತೆಗೂ ನರ್ತಿಸುವಂತೆ ಹೇಳುತ್ತಾರೆ.ಪಂದನಲ್ಲೂರು ಶೈಲಿಯ ಆಳಕ್ಕೆ ನನ್ನನ್ನು ಇಳಿಸುತ್ತಿದ್ದಾರೆ. ಇದಕ್ಕೆ ತುಂಬಾ ಅಭ್ಯಾಸ ಬೇಕು.

೫-ಭರತನಾಟ್ಯ ನಿಮಗೆ ವೃತ್ತಿಯೋ,ಪ್ರವೃತ್ತಿಯೋ?

ಏಳು ವರ್ಷ ವಕೀಲಳಾಗಿದ್ದೆ. ಆದರೆ ಅದನ್ನು ಬಿಟ್ಟು ಈಗ ಭರತನಾಟ್ಯವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದೇನೆ.

೬-ಭರನಾಟ್ಯ ಪ್ರವೃತ್ತಿಯಾಗಿದ್ದು ಹೇಗೆ?

ನಾನು ದೊಡ್ಡವಳಾಗಿ ಬೆಳೆದ ನಂತರವೂ ಇನ್ನೊಂದು ದೇಶದ ಅತ್ಯಂತ ಕ್ಲಿಷ್ಟಕರವಾದ,ಅತ್ಯುನ್ನತವಾದ ನೃತ್ಯಪರಂಪರೆಯೊಂದನ್ನು ಕಲಿಯುತ್ತೇನೆಂದು ಕನಸುಮನಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೆ ಅದು ಸಾಧ್ಯವಾಯಿತು! ಅದರ ಬಗ್ಗೆ ಅಷ್ಟೊಂದು ಹುಚ್ಚು ಹಾಗು ಕಲಿಕೆಯಲ್ಲಿ ಅರ್ಪಣಾ ಮನೋಭಾವದಿಂದ ಅದು ಸಾಧ್ಯವಾಯಿತು. ಅದಕ್ಕೋಸ್ಕರ ವೃತ್ತಿಯನ್ನೇ ತ್ಯಾಗ ಮಾಡಿ ಬಂದಿದ್ದ ನನಗೆ ಆರಂಭದಲ್ಲಿ ಅನುಮಾನ,ಅಂಜಿಕೆ ಎಲ್ಲವೂ ಇತ್ತು. ನನ್ನ ಕನಸನ್ನು ನನಸಾಗಿ ಪರಿವರ್ತಿಸಲು ನನ್ನ ಪತಿ ಸಹಕರಿಸಿದರು.

ನನ್ನ ಗಂಡ ನನ್ನ ಕನಸಿನ ಹಿಂದೆ ಹೋಗಲು ಪ್ರೋತ್ಸಾಹಿಸಿದರು. ಬಹುಷಃ ಭಾರತೀಯ ನರ್ತಕಿಯರಷ್ಟು ಒಳ್ಳೆಯ ನರ್ತಕಿ ನೀನಗಲಿಕ್ಕೆ ಕಷ್ಟ ಆಗಬಹುದು, ಏಕೆಂದರೆ ಅವರೆಲ್ಲ ೩ ನೆ ವಯಸ್ಸಿಗೇ ನಾಟ್ಯ ಕಲಿಯಲು ಶುರು ಮಾಡಿರುತ್ತಾರೆ…ಆದರೆ ನೀನು ಖಂಡಿತ ಪ್ರಯತ್ನ ಮಾಡಬಹುದು ಎಂದು ಹೇಳಿದರು.  ಯಾಕೆಂದರೆ ಸೋಲು ಎನ್ನುವುದು ಪ್ರಯತ್ನ ಮಾಡದಿದ್ದಾಗ ಮಾತ್ರ ಸಾಧ್ಯ ಅಲ್ಲವೆ? ಅವರ ಮಾತಿನಂತೆ ನಾನು ನನ್ನ ವಕೀಲ ವೃತ್ತಿಗೆ ವಿದಾಯ ಹೇಳಿ ನಾಟ್ಯಶಾಸ್ತ್ರದ ಕಡೆಗೆ ಮನಸ್ಸಿಟ್ಟೆ.

ಕೆಲವೊಮ್ಮೆ ಭರತನಾಟ್ಯ ಕಲಾವಿದೆ ಆಗುವುದು ಕಷ್ಟ ಎಂದು ಅನ್ನಿಸಿದರೂ ನನ್ನ  ಆಯ್ಕೆ ತಪ್ಪು ಎಂದು ಯಾವತ್ತು ಅನ್ನಿಸಲಿಲ್ಲ. ಬಹುಷಃ ನಾನು ನನ್ನ ಜೀವನದ ದಾರಿಯನ್ನು ನಾನೇ ಕಂಡುಕೊಂಡೆ. ಈಗ ನನಗೆ ಖುಷಿಯಾಗುತ್ತಿದೆ.

೭-ನಿಮ್ಮ ಕಲಿಕೆಯ ಬಗ್ಗೆ ಕುಟುಂಬದಲ್ಲಿ ಹೇಗಿತ್ತು ಅಭಿಪ್ರಾಯ?

ಹಳೆಯ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವಳು ನಾನು. ವಿದೇಶಿ ಕಲೆಯೊಂದರಲ್ಲಿ ನನಗೆ ಉಂಟಾಗಿದ್ದ ಅತೀವ ಆಸಕ್ತಿಯನ್ನು ನೋಡಿ ಆರಂಭದಲ್ಲಿ ನಮ್ಮ  ಕುಟುಂಬದವರಿಗೆಲ್ಲಾ ಅತ್ಯಾಶ್ಚರ್ಯವಾಯಿತು. ಆದರೆ ಅವರಿಗೀಗ ನನ್ನ ಬಗ್ಗೆ ಹೆಮ್ಮೆ. ನನ್ನ ಇಷ್ಟವೇ ಅವರ ಇಷ್ಟ. “ಮೀನಾ…ಭಾರತೀಯ ನೃತ್ಯವನ್ನು ನೀನು ಹೇಗೆ ಕಲಿತೆ? ನಮಗಂತೂ ಉತ್ತರವೇ ಸಿಗುತ್ತಿಲ್ಲ. ಇದೇನಾದರೂ ಪುನರ್ಜನ್ಮವಾಗಿರಬಹುದೆ?” ಎಂದು ೮೫ ವರ್ಷದ ನನ್ನ ಅಜ್ಜಿ ನನ್ನೊಡನೆ ತಮಾಷೆ ಮಾಡುತ್ತಾ ನಗುತ್ತಾಳೆ!

೮-ಭಾರತ, ಭಾರತೀಯ ಸಂಸ್ಕೃತಿ ಹಾಗು ಭರತನಾಟ್ಯ ಇವುಗಳ ಬಗ್ಗೆ ನಿಮ್ಮ ಭಾವನೆ?

ಹನ್ನೆರಡು ವರ್ಷಗಳ ಹಿಂದೆ ಮೊದಲ ಸಲ ನಾನು ಭಾರತಕ್ಕೆ ಬಂದೆ. ಎಲ್ಲಾ ಪ್ರವಾಸಿಗರಂತೆ ದೆಹಲಿ,ಆಗ್ರಾ,ರಾಜಸ್ಥಾನ,ಗೋವಾ,ಮುಂಬೈ ಹೀಗೆ ಬೇರೆ ಬೇರೆ ಸ್ಥಳಗಳನ್ನು ವೀಕ್ಷಿಸಿದರೂ ದಕ್ಷಿಣಭಾರತ ನನಗೆ ಹೆಚ್ಚು ಪ್ರಿಯವಾಯ್ತು. ಅದರಲ್ಲೂ ತಮಿಳುನಾಡು,ಅಲ್ಲಿಯ ಉಷ್ಣತೆ,ದಕ್ಷಿಣಾದಿ ಸಂಗೀತ,ಭರತನಾಟ್ಯ ಎಲ್ಲವೂ ಹಿತವೆನಿಸಿತು. ರೇಷ್ಮೆ ಸೀರೆ ಧರಿಸಬೇಕೆನಿಸಿತು. ಜನಜಂಗುಳಿಯ ಚೆನ್ನೈ ರಸ್ತೆಗಳು,ಮರಗಳ ಮೇಲಿರುವ ಹಸಿರು ಗಿಣಿಗಳು,ಉಪಹಾರಕ್ಕೆಂದು ಕೊಡುವ ಪೊಂಗಲ್,ಇಡ್ಲಿ ಹಾಗು ಮಾವಿನ ಹಣ್ಣುಗಳು,ತೆಂಗಿನಕಾಯಿ ಎಲ್ಲಾ ನನಗೆ ಅಚ್ಚುಮೆಚ್ಚು. ಈಗ ಭಾರತಕ್ಕೆ ಬಂದರೆ ಸೀದಾ ಚೆನ್ನೈ ನಗರದಲ್ಲೇ ಇಳಿಯುತ್ತೇನೆ,ಉಳಿಯುತ್ತೇನೆ. ಸಮಯ ಸಿಕ್ಕರೆ ತಮಿಳುನಾಡಿನಾದ್ಯಂತ ಸಂಚರಿಸುತ್ತೇನೆ. ಇನ್ನೂ ಹತ್ತು ವರುಷಗಳಷ್ಟು ಕಾಲ ನೋಡಿದರೂ ಮುಗಿಯದಷ್ಟು ಇಲ್ಲಿ ಇದೆ.

ಭಾರತದ ಸಂಸ್ಕೃತಿ,ಆಧ್ಯಾತ್ಮಿಕತೆ ನನ್ನ ಮೇಲೆ ಗಾಢವಾಗಿ ಪರಿಣಾಮ ಬೀರಿದೆ. ಭರತನಾಟ್ಯ ಆಧ್ಯಾತ್ಮದ ಸಾಧನೆಗೆ ಒಂದು ಸೇತುವೆ ಎಂದುಕೊಂಡಿದ್ದೇನೆ. ನಿಮಗೆ ಗೊತ್ತಾ? ನಮ್ಮ ದೇಶದವರು ಭಾರತೀಯ ಸಂಸ್ಕೃತಿ,ಆಧ್ಯಾತ್ಮವನ್ನು ಹಾಡಿ ಹೊಗಳುತ್ತಾರೆ! ನಮ್ಮ ಜನಾಂಗ ಪ್ರಾಚೀನವಾದದ್ದು. ನಮ್ಮ ಬಲ್ಗೇರಿಯಾದ ಮೂಲಬೇರು ಏಷ್ಯಾದಲ್ಲೇ ಎಲ್ಲೋ ಇರಬಹುದೆನಿಸುತ್ತದೆ. ನಮಗೂ ನಿಮಗೂ ಎಷ್ಟೋ ಸಂಗತಿಗಳಲ್ಲಿ ಸಾಮ್ಯತೆ ಇದೆ.ನಮ್ಮ ಭಾಷೆಗೂ ನಿಮ್ಮ ಸಂಸ್ಕೃತಕ್ಕೂ ಹತ್ತಿರವಿದೆ. ವೇದ,ಚಕ್ರ,ಶ್ವೇತ ಇಂತಹ ಪದಗಳು ನಮ್ಮಲ್ಲಿಯೂ ಇದೆ. ಈಗ ನನ್ನ ಹೆಸರೇ ನೋಡಿ..”ಮೀನಾ” ಅಂತ. ಇದು ನಮ್ಮ ದೇಶದಲ್ಲಿ ಸರ್ವೇಸಾಮಾನ್ಯ ಹೆಸರು,ಅದು ಭಾರತದಲ್ಲೂ ಇದೆ! ನಾವು ಬಲ್ಗೇರಿಯಾದ ಜನ ಹಿಂದೆ ಭಾರತದಲ್ಲಿ ಜೀವಿಸಿದ್ದ ಆರ್ಯರ ಸಂತತಿಯವರೇ ಆಗಿರಬಹುದು ಅಲ್ಲವೆ?

ನನ್ನ ಪ್ರಕಾರ ಭಾರತದ ಶಾಸ್ತ್ರೀಯ ಕಲೆಗಳೆಲ್ಲವೂ ಅದ್ಭುತ. ಅದರಲ್ಲೂ ಭರತನಾಟ್ಯವನ್ನು ಶುದ್ಧಮನಸ್ಸಿನಿಂದ ಅಭ್ಯಾಸ ಮಾಡಿದರೆ ತನುಮನದ ಮೇಲಾಗುವ ಪರಿಣಾಮವೇ ಬೇರೆ. ಇದು ನನ್ನ ಸ್ವಾನುಭವ.

೯-ನಿಮ್ಮ ಸ್ವಂತ ಭರತನಾಟ್ಯ ಶಾಲೆ ಎಲ್ಲಿ ಎಂದು ಆರಂಭವಾಯಿತು?

೨೦೦೯ ರಲ್ಲಿ ಸೋಫಿಯಾ ಹಾಗು ಬಲ್ಗೇರಿಯಾದಲ್ಲಿ ನನ್ನ “ನಟರಾಜ” ಎಂಬ ಹೆಸರಿನ ಶಾಲೆ ಆರಂಭವಾಯಿತು.

ಸೋಫಿಯದಲ್ಲಿ ನನ್ನ ಮೊದಲನೆಯ ಭರತನಾಟ್ಯ  ತರಗತಿಯನ್ನು  ನಾನು ಸರಸ್ವತಿ ಪೂಜೆಯೊಂದಿಗೆ ಆರಂಭಿಸಿದೆ.

ಹಾಗೆಯೇ ಚಿದಂಬರಂನಲ್ಲಿ ನನ್ನ ಗುರುಗಳ ಅಶಿರ್ವದದೊಂದಿಗೆ ಪೂಜಾರಿಗಳು ಪೂಜೆ ನೆರವೇರಿಸಿದರು.

ಭಾರತದಲ್ಲಿ ಕಲಿತು ಯೂರೋಪಿನಲ್ಲಿ ಕಲಿಸುತ್ತಿದ್ದೇನೆ. ನನಗೆ ಇದೊಂದು ಸವಾಲಾಗಿದೆ. ಭರತನಾಟ್ಯವನ್ನು ಬೇರೆಬೇರೆ ಕೋನಗಳಿಂದ ಗ್ರಹಿಸಲು ನನಗೆ ಇದು ಸಹಕಾರಿಯಾಗಿದೆ.

೧೦-ನಿಮ್ಮ ನೃತ್ಯಶಾಲೆಗೆ ನಿಮ್ಮ ಗುರುಗಳ ಸಹಕಾರ ಹೇಗಿದೆ?

“ನಟರಾಜ” ನೃತ್ಯಶಾಲೆಯು ಖಡಾಖಂಡಿತವಾಗಿ ನನ್ನ ಗುರುಗಳ “ಭರತಾಂಜಲಿ” ಶಾಲೆಯ ಪರಂಪರೆಯನ್ನೇ ಶಿಸ್ತಾಗಿ ಪಾಲಿಸುತ್ತಿದೆ. ಅಷ್ಟಕ್ಕೂ ಇದು ಅದರದ್ದೇ ಬಲ್ಗೇರಿಯಾ ಬ್ರ್ಯಾಂಚ್ ಎನ್ನಬಹುದು. ಕೆಲವೊಮ್ಮೆ ನಾನು ಶಿಷ್ಯರೊಡನೆ ರಾಜಿಯಾಗುವುದಿಲ್ಲ. ಇದು ಅವರಿಗೆ ಕಷ್ಟವಾಗಬಹುದು. ಆದರೆ ಇದರ ಫಲಶೃತಿ ಮಾತ್ರ ಸಿಹಿಯಾಗಿರುತ್ತದೆ.

ನನ್ನ ಗುರುಗಳ ಪೂರ್ಣ ಆಶಿರ್ವಾದ ನನ್ನ ಮೇಲಿದೆ. ನಮ್ಮಿಬ್ಬರಿಗೂ ಲಕ್ಷ ಕಿಲೋಮೀಟರ್ ಅಂತರವಿರಬಹುದು. ಆದರೆ ನಮ್ಮಿಬ್ಬರ ಮನಸ್ಸುಗಳಿಗೆ ಅಂತರವಿಲ್ಲ. ಅದು ಒಂದರೊಳಗೊಂದು ವಿಲೀನವಾಗಿಯೇ ಇದೆ.

ನನ್ನ ಮುಂದಿರುವ ಒಂದೇ ಒಂದು ಕನಸೆಂದರೆ ನನ್ನ ಗುರುಗಳು ಹಾಗು ಅವರ ಶಿಷ್ಯಂದಿರನ್ನು ಒಮ್ಮೆ ಬಲ್ಗೇರಿಯಾಕ್ಕೆ ಆಹ್ವಾನಿಸಿ ನೃತ್ಯಕಾರ್ಯಕ್ರಮ ಏರ್ಪಡಿಸುವುದು.

೧೧-ನಿಮ್ಮ ನೃತ್ಯಶಾಲೆಯ ಬಗ್ಗೆ……

ನನ್ನ ಶಿಷ್ಯಂದಿರು ಕೆಲವೇ ಕೆಲವು ಮಂದಿಯಾದರೂ ಅವರು ಚೆನ್ನಾಗಿಯೇ ಸಾಧನೆ ಮಾಡುತ್ತಾರೆ. ವೇದಿಕೆಯಲ್ಲಿ ಪ್ರದರ್ಶನ ಮಾಡುವ ಆತುರ ಅವರಿಗಿಲ್ಲ. ನಟನಟಿಯರು,ವೈದ್ಯರು,ಪತ್ರಕರ್ತರು ಹೀಗೆ ಬೇರೆಬೇರೆ ವೃತ್ತಿಯಲ್ಲಿರುವವರೂ ಕೂಡ ನನ್ನ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅವರೆಲ್ಲ ಆಳವಾಗಿಯೇ ಸಾಧನೆ ಮಾಡುತ್ತಿದ್ದಾರೆ.

ಅವರೆಲ್ಲಾ ಭಾರತೀಯರಲ್ಲದ ಕಾರಣ ಶಾಸ್ತ್ರಪಾಠಗಳನ್ನು ಸ್ವಲ್ಪ ಹೆಚ್ಚಾಗಿಯೇ ಮಾಡಬೆಕಾಗುತ್ತದೆ. ಆದರೂ ಬೇಸರಿಸಿಕೊಳ್ಳದೆ ಅತ್ಯುತ್ಸಾಹದಿಂದ ಅಭ್ಯಾಸ ಮಾಡುತ್ತಿದ್ದಾರೆ.ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ.

೧೨-ಭರತನಾಟ್ಯದ ಪದವಿಯನ್ನೇನಾದರೂ ಪಡೆವ ಹಂಬಲ?

ಇಲ್ಲ.ಖಂಡಿತಾ ಇಲ್ಲ. ಆಗಲೇ ಕಾನೂನು ಪದವಿಯನ್ನು ಹೊಂದಿದ್ದೇನೆ. ಭಾರತನಾಟ್ಯ ನನ್ನ ಆಂತರ್ಯದ ಆಧ್ಯಾತ್ಮಸಾಧನೆಗೆ.

೧೩-ನಿಮ್ಮ ಗುರುಗಳ ಬಗ್ಗೆ….

ಅಪರೂಪದ ನರ್ತಕಿ…ಸಾಧಕಿ..ಅದ್ಭುತ ವ್ಯಕ್ತಿತ್ವ.ಸಹನಮಯಿ. ತನ್ನಲ್ಲಿರುವ ವಿದ್ಯೆಯನ್ನು ಅರ್ಹರಿಗೆ ಸಂಪೂರ್ಣಧಾರೆಯೆರೆಯಬೇಕೆಂಬ ಭಾವ. ಸ್ವಯಂ ವೇದಿಕೆ ಏರದೆ ಶಿಷ್ಯರಿಗಾಗಿ ತನ್ನದೆಲ್ಲವನ್ನೂ ಅರ್ಪಣೆ ಮಾಡಿದ್ದಾರೆ. ಇದು ನಿಜವಾದ ತ್ಯಾಗ. ನನ್ನ ಯಶಸ್ಸೆಲ್ಲವೂ ಅವರಿಗೇ ಅರ್ಪಿತ.

೧೪-ನೃತ್ಯಜೀವನದಲ್ಲಿ ಅವಿಸ್ಮರಣೀಯ ಘಟನೆ….

ಕ್ಷಣಕ್ಷಣವೂ ಕಲಿಕೆ…ಎಲ್ಲವೂ ಅವಿಸ್ಮರಣೀಯ…ಬಲ್ಗೇರಿಯಾದಲ್ಲಿ ನನ್ನ ಮೊದಲ ಭರತನಾಟ್ಯ ಪ್ರದರ್ಶನಕ್ಕೆ ಜನಸಾಗರ ಹರಿದುಬಂದಿತ್ತು. ಸಭಾಂಗಣದಲ್ಲಿ ಕಾಲಿಡಲೂ ಆಗದಂತೆ ಕಿಕ್ಕಿರಿದಿದ್ದ ಕಲಾರಸಿಕರು ಕಿವಿಗಡಚ್ಚುವಂತೆ ಕರತಾಡನ ಮಾಡುವಾಗ ಸಂತಸ ಹೇಳತೀರದು. ಕೆಲವರಿಗೆ ಸರಿಯಾಗಿ ನೋಡಲೂ ಆಗದೆ ಮತ್ತೆ ಇನ್ನೊಮ್ಮೆ ಪ್ರದರ್ಶನವನ್ನೇರ್ಪಡಿಸುವಂತಾಯಿತು! ನನ್ನ ಜೀವನ ಸಾರ್ಥಕವೆನಿಸಿತು.

೧೫-ನಿಮ್ಮ ಬಹಳಷ್ಟು ಭರತನಾಟ್ಯದ ಫೋಟೋಗಳು ದೇವಾಲಯಗಳಲ್ಲಿ ತೆಗೆಯಲ್ಪಟ್ಟಿವೆ…ಯಾವ ಕಾರಣಕ್ಕಾಗಿ?

ಭರತನಾಟ್ಯ ಹುಟ್ಟಿದ್ದೇ ದೇವಾಲಯಗಳಲ್ಲಿ. ಹಾಗಾಗಿ ನನ್ನ ಪ್ರಾಮಾಣಿಕ ಅಭಿಪ್ರಾಯವೇನೆಂದರೆ ಆಧುನಿಕ ವೇದಿಕೆಗಳಿಗಿಂತ  ಭರತನಾಟ್ಯ ದೇವಾಲಯಗಳಲ್ಲೇ  ಚೆಂದ.

೧೬-ನಿಮ್ಮ ಅರ್ಂಗೆಟ್ರಂ (ರಂಗಪ್ರವೇಶ) ಕಾರ್ಯಕ್ರಮ ಆಗಿದೆಯಾ?

ಇಲ್ಲ…ಇನ್ನೂ ಆಗಿಲ್ಲ..ಮುಂದೊಮ್ಮೆ ಆದಾಗ ನಿಮ್ಮನ್ನೆಲ್ಲಾ ಕರೆಯುತ್ತೇನೆ…ಬನ್ನಿ.

೧೭-ಎಷ್ಟು ದೇಶಗಳಲ್ಲಿ ನೃತ್ಯಕಾರ್ಯಕ್ರಮ ನೀಡಿದ್ದೀರಿ?

ಇಟಲಿ,ರಷ್ಯಾ,ಭಾರತ ಹಾಗು ನನ್ನ ದೇಶದಲ್ಲಿ. ಇನ್ನೂ ೨ ದೇಶಗಳಲ್ಲಿ ನನಗೆ ಅಹ್ವಾನ ನೀಡಿದ್ದಾರೆ. ಬರುವ ಸೆಪ್ಟೆಂಬರ್‌ನಲ್ಲಿ ಕಾರ್ಯಕ್ರಮ ನೀಡಲಿದ್ದೇನೆ.

೧೮-ಭರತನಾಟ್ಯದಲ್ಲಿ ನೀವು ಏನನ್ನು ಇಷ್ಟಪಡುತ್ತೀರಿ ?

ರಸ. ನಾನಿದನ್ನು ಎಲ್ಲ ಭಾರತೀಯ ಶಾಸ್ತ್ರೀಯ ನಾಟ್ಯ ನಮೂನೆಗಳಲ್ಲೂ ಇಷ್ಟಪಡುತ್ತೇನೆ.

ಆದರೆ ಭರತನಾಟ್ಯದಲ್ಲಿ ನಾನು ಪ್ರಾಚೀನ ನಾಟಕ ಮತ್ತು ದ್ರಾವಿಡರ ಸಂಸ್ಕೃತಿಯ ಮನಮೋಹಕ

ಸಮ್ಮಿಲನವನ್ನು ಇಷ್ಟಪಡುತ್ತೇನೆ. ಭರತನಾಟ್ಯದಲ್ಲಿ ನಾನು  ಕಥೆಗಳು, ಕವನಗಳು ಮತ್ತು ಅವುಗಳನ್ನು ವ್ಯಕ್ತಪಡಿಸುವ ಕರ್ನಾಟಕ ಸಂಗೀತ ಶೈಲಿ, ನೃತ್ಯದ ಸುಗಮತೆ ,ಸುಂದರವಾದ ಪೋಷಾಕು ಮತ್ತು ಆಭರಣಗಳನ್ನು  ತುಂಬಾ ಇಷ್ಟಪಡುತ್ತೇನೆ.

೧೯- ಏನಾದರೂ ಹೊಸಪ್ರಯೋಗ?

ಹೌದು…ನನ್ನ ವಿದ್ಯಾರ್ಥಿಗಳಿಗಾಗಿ ನೃತ್ಯಸಂಯೋಜನೆಯನ್ನು ನಾನೇ ಮಾಡುತ್ತಿದ್ದೇನೆ.

೨೦-ಭರತನಾಟ್ಯ ಶಾಲೆಯ ಸಹಪಾಠಿಗಳ ಬಗ್ಗೆ…..

ಎಲ್ಲರೂ ನನ್ನನ್ನು ಅತ್ಮೀಯವಾಗಿ ನೋಡಿಕೊಳ್ಳುತ್ತಿದ್ದಾರೆ. ಅಲ್ಲಿ ಜ್ಯೂನಿಯರ್,ಸೀನಿಯರ್ ಎಂಬ ಬೇಧವಿಲ್ಲ. ನಾವೆಲ್ಲರೂ ಪರಸ್ಪರ ಹಂಚಿಕೊಳ್ಳುತ್ತೇವೆ. ಸ್ಪರ್ಧಾಮನೋಭಾವವಂತೂ ನಮ್ಮಲ್ಲಿ ಇಲ್ಲವೇ ಇಲ್ಲ. ನಾನು ನನ್ನ ದೇಶಕ್ಕೆ ಮರಳಿದಾಗಲೂ ಅವರನ್ನೆಲ್ಲಾ ಮರೆಯಲು ನನ್ನಿಂದ ಆಗುವುದೇ ಇಲ್ಲ.

೨೧-ಭರತನಾಟ್ಯದ ಜೊತೆಗೆ ನಿಮ್ಮ ಇತರ ಹವ್ಯಾಸಗಳು…

ಪಟ್ಟಿ ದೊಡ್ಡದಿದೆ…..ಯೋಗ, ಪ್ರಾಚೀನ ಸಂಸ್ಕೃತಿ, ತತ್ವಶಾಸ್ತ್ರ, ಸಂಸ್ಕೃತದ ಅಧ್ಯಯನ, ಆಯುರ್ವೇದ,ಸಂಗೀತ, ಚಲನಚಿತ್ರ ವೀಕ್ಷಣೆ, ಛಾಯಾಗ್ರಹಣ, ಈಜು, ಐಸ್ ಸ್ಕೇಟಿಂಗ್, ಹಿಮದ ಮೇಲೆ ನಡೆಯುವುದು,ಪ್ಯಾರಾಚೂಟ್ ಜಂಪಿಂಗ್, ಸ್ಕುಬ ಡೈವಿಂಗ್…ಇತ್ಯಾದಿ.

೨೨-ಜೀವನದ ಬಗ್ಗೆ ನಿಮ್ಮ ಅಭಿಪ್ರಾಯ?

ಜೀವನವೇ ಒಂದು ನಾಟಕದಂತೆ. ನಾವು ನಮ್ಮ ಪಾತ್ರ ಚೆನ್ನಾಗಿ ನಿರ್ವಹಿಸಬೇಕಷ್ಟೆ.

ಜ್ಞಾನ ವಿನಿಯೋಗವೇ ಸುಖ ಸಂತೋಷ .

ಜೀವನ ಎಂಬುದು ಮನಸ್ಸಿನ ಒಂದು ಸ್ಥಿತಿ ಅಷ್ಟೆ.

೨೩-ನಿಮ್ಮ ಕಟ್ಟಕಡೆಯ ಗುರಿ ಏನು?

ಪರಮಪದಂ…ವೈಕುಂಠ…ಮೋಕ್ಷ…..!

ಸಂದರ್ಶನ -ಚಿನ್ಮಯ.ಎಮ್.ರಾವ್ ಹೊನಗೋಡು

‎Monday, ‎June ‎27, ‎2011

ಚಿತ್ರ ಕೃಪೆ- ಮೀನಾ.

*************

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.