(1)
ಈ ಜೀವನ ಪಯಣ ಮುಗಿದ ನಂತರ ನೀನೆಲ್ಲೋ ನಾನೆಲ್ಲೋ
ಈ ಜೀವ ಜೀವನವು ನಶ್ವರವೆಂದು ತಿಳಿದೂ ಕೂಡ
ಇದರ ಬಂಧನದಲ್ಲಿ ಸಿಲುಕುವ ನಾವೆಂತ ಮೂರ್ಖರು !
ಸಾವು ‘ನಮ್ಮ’ ಮನೆಯ ಬಾಗಿಲನ್ನು ಮಾತ್ರ ಎಂದಿಗೂ ತಟ್ಟುವುದಿಲ್ಲ
ಎಂಬ ಜಿಜ್ಞಾಸೆಯಲ್ಲಿ ಇರುವ ನಾವೆಂತಹ ಹುಂಬರು !
ಹೇ ತಂದೆ ಉಮಾಮಹೇಶ್ವರ ಇಂತಹ ಮೂಢರು ನಾವಯ್ಯಾ
(2)
ಭವ ಸಾಗರವನು ದಾಟಿಸಲು ನೀನಿರುವೆಯೆಂದು ತಿಳಿದೂ
ಮೋಹ ಪಾಶದಲಿ ಸಿಲುಕಿದ ನಾವು ನಿನ್ನ ಮೊರೆ ಹೋಗಲಿಲ್ಲ
ಪರೋಪಕಾರವನು ಮರೆತು ಸ್ವಾರ್ಥದಿಂದ ಕೂಡಿದ ಈ ಪ್ರಪಂಚದಲ್ಲಿ
ನಮ್ಮ ಅರಿವನ್ನೆ ಮರೆತು ಬದುಕಿದೆವಲ್ಲಾ
ಇದೆಂತಹ ಮೂಢರು ನಾವಯ್ಯ
ಹೇ ಉಮಾ ಮಹೇಶ್ವರ, ನಮ್ಮ ಮೇಲೆ ಇನ್ನಾದರೂ
ನಿನ್ನ ಕೃಪಾ ದೃಷ್ಟಿಯನು ಬೀರಯ್ಯ
(3)
ಒಡ ಹುಟ್ಟಿದವರು ದಾಯಾದಿಗಳು ಎಲ್ಲಿಯವರೆಗೆ ಬರುವರು?
ನಾವು ಮಾಡಿದ ಪಾಪಪುಣ್ಯಗಳೇ ಕೊನೆತನಕ ನಮ್ಮ ಜೊತೆಗಾರರು
ಇದ ತಿಳಿದೂ ತಿಳಿಯದಂತೆ ಇರುವ ನಾವೆಂತಹ ಅಜ್ಞಾನಿಗಳು
ಹೇ ಉಮಾಮಹೇಶ್ವರ ನಮಗೆ ಜ್ಞಾನದ ದೀವಿಗೆಯನು ತೋರಿ
ನಮ್ಮನು ಉದ್ಧರಿಸಯ್ಯ
(4)
ಕೆಲವು ಪುಣ್ಯಾತ್ಮರು ಪಾಳು ಬಿದ್ದ ನಿನ್ನ ಗುಡಿಯ ಕಟ್ಟಿ
ತಮ್ಮ ಜೀವನ ಪಾವನ ಮಾಡಿಕೊಳ್ಳುವರು
ಇನ್ನು ಕೆಲವರು ಆ ಗುಡಿಯಲ್ಲಿ ನೆಲೆಸಿದ ನಿನ್ನ ನೋಡಲೂ ಬಾರರು
ಮತ್ತೆ ಕೆಲವರು ಗುಡಿಯಲ್ಲಿರುವ ನಿನ್ನನ್ನೇ ದೋಚಲು ಬಯಸುವರು
ಇಂತಹ ಪಾಪ ಕೂಪದಲಿ ಬಿದ್ದಿರುವ ನಿನ್ನ ಮಕ್ಕಳಿಗೆ
ನೀನಲ್ಲದೆ ಇನ್ನಾರು ಗತಿಯಯ್ಯ
ಹೇ ಉಮಾಮಹೇಶ್ವರಾ ನಮ್ಮನು ಕಾಪಾಡಯ್ಯಾ
(5)
ನಾನು ನನ್ನದು ನನ್ನಿಂದಲೇ ಎಲ್ಲವೂ
ಎಂದು ತಿಳಿದು ಮೆರೆಯುತ್ತಿರುವ ಈ ಜನರಿಗೆ
ನಾನೆಂಬುದಿಲ್ಲ ನನದೆಂಬುದಿಲ್ಲ
ಎಲ್ಲವೂ ನಿನ್ನದೇ ನಿನ್ನಿಂದಲೇ ಈ ಜಗವೆಂಬ
ಸತ್ಯವನು ತೋರಿ ಈ ನಿನ್ನ ಮಕ್ಕಳಿಗೆ
ನಿನ್ನ ಗುಡಿಯ ದಾರಿ ತೋರಿ ಶರಣಾಗತರನು ಮಾಡಯ್ಯಾ
ಹೇ ಉಮಾಮಹೇಶ್ವರ ಈ ನಿನ್ನ ಮಕ್ಕಳ ಮೇಲೆ ದಯೆ ತೋರಿಸಯ್ಯಾ
(6)
ಒಬ್ಬನು ಈ ಸಮಾಜಕ್ಕೆ ನನ್ನ ಕೊಡುಗೆ ಏನೆಂದು ಯೋಚಿಸಿದರೆ
ಇನ್ನೊಬ್ಬ ಆತನ ಕಾಲನ್ನು ಹೇಗೆ ಕತ್ತರಿಸ ಬೇಕೆಂದು ಯೋಚಿಸುವನು
ಇವರಿಬ್ಬರೂ ನಿನ್ನ ಮಕ್ಕಳೇ ಆದರೂ ಇದೆಂತಹ ವಿಪರ್ಯಾಸವಯ್ಯ
ಹೇ ಉಮಾಮಹೇಶ್ವರ ಇದೆಂತಹ ನಿನ್ನ ಲೀಲೆಯಯ್ಯ
(7)
ಒಬ್ಬ ಕಾಣಿಕೆ ಹುಂಡಿಯನು ಹೇಗೆ ತುಂಬಿಸಲೆಂದು ಚಿಂತಿಸಿದರೆ
ಇನ್ನೊಬ್ಬ ಅದನ್ನು ದೋಚುವುದು ಹೇಗೆಂದು ಚಿಂತಿಸುವನು
ಇವರೀರ್ವರ ನಡುವೆ ಎಷ್ಟೊಂದು ವ್ಯತ್ಯಾಸ
ಹೇ ಉಮಾಮಹೇಶ್ವರ ಇದೆಂತಹ ನಿನ್ನ ಆಟವಯ್ಯ
ನಮ್ಮನ್ನು ಈ ಭವ ಸಾಗರದಿಂದ ಪಾರು ಮಾಡಿ
ನಮಗೆ ಮುಕ್ತಿ ಮಾರ್ಗವನ್ನು ತೊರಯ್ಯ
(8)
ಕೆಲವರು ನಿನ್ನ ಬಗೆ ಬಗೆಯ ಅಲಂಕಾರ ಮಾಡಿ ನೊಡಲಿಚ್ಛಿಸುವರು
ಇನ್ನು ಕೆಲವರು ದೇಹ ದಂಡನೆ ಮಾಡಿ ನಿನ್ನ ಕೃಪಾ ಕಟಾಕ್ಷವನು ಬಯಸುವರು
ಮತ್ತೆ ಕೆಲವರು ಮೌನವಾಗಿ ಯಾವ ಆಡಂಬರವಿಲ್ಲದ ಭಕ್ತಿಯಿಂದ
ನಿನ್ನ ಸೇರಲಿಚ್ಛಿಸುವರು
ಇದರಿಂದ ಸಂತುಷ್ಟನಾದ ನೀನು
ನಿನ್ನ ಮಕ್ಕಳಿಗೆ ಅವರವರ ಕರ್ಮಗಳಿಗನುಸಾರವಾಗಿ
ಫಲವನ್ನು ನೀಡಯ್ಯ
ಹೇ ಉಮಾಮಹೇಶ್ವರ ನಮ್ಮ ಮೇಲೆ ದಯೆ
ತೋರಿಸಯ್ಯಾ
II ಜೈ ಶ್ರೀ ಉಮಾಮಹೇಶ್ವರ Il
– ಶೋಭಾ ಎನ್ ಶಾಸ್ತ್ರಿ ಹೊಸಗುಂದ
6-1-2022