ಕವಿಸಮಯ

ಅರ್ಧವಾಗಿಸದೆ ಪೂರ್ಣವಾಗಿಸಬಹುದು

– ಡಾ.ಚಿನ್ಮಯ ಎಂ. ರಾವ್ ಹೊನಗೋಡು

ಕ್ರಮಿಸಬಹುದು, ಬಹುದೂರ
ಕ್ರಮಿಸಬಹುದು
ವಿರಾಮವೇ ಇಲ್ಲದಂತೆ
ವಿರಾಜಮಾನವಾಗಿ ವಿಹರಿಸಬಹುದು

ಶ್ರಮಿಸಬಹುದು, ಶ್ರಮವನ್ನೇ
ಸುಖವಾಗಿಸಿ ಸುಖಿಸಬಹುದು
ಸರಸಕ್ಕೆ ರಸವನ್ನು ಸೇರಿಸಿ
ಸರಾಗವಾಗಿ ನೋವನ್ನೆಲ್ಲಾ
ಸರಿಸಬಹುದು

ನೋವಬಹುದು, ನೋವಲ್ಲೇ
ನಲಿವಿನ ನರ್ತನ ಮರೆಸಬಹುದು
ಮೇಲೆ ಕೆಳಗಾದ, ಕೆಳಗೆ ಮೇಲಾದ
ಮೆಲುಕನ್ನು ಹಾಕುತ್ತಲೇ
ಸಾಗಬಹುದು

ಸಾಗುತ್ತಲೇ ಇರಬಹುದು
ಸಾಕುಸಾಕೆನ್ನಿಸದಂತೆ
ಬೇಕುಬೇಕೆನ್ನುವಂತೆ
ಬೇಕೇ ಬೇಕೆನ್ನುವಂತೆ
ಕನವಸಿರುತ್ತಾ ಕೇಕೆ ಹಾಕುತ್ತಾ
ಸಂಭ್ರಮಿಸುತ್ತಾ, ಸುತ್ತ ಜಗತ್ತಿನ
ಸುಡುಗಾಡನ್ನೇ ಸುತ್ತಿಡುತ್ತಾ
ಉನ್ಮಾದದ ಉತ್ತುಂಗದಲ್ಲಿ
ಉನ್ನತಿಯನ್ನು ಉಳಿಸಿಕೊಳ್ಳಬಹುದು

ಬೆಳೆಸಿಕೊಳ್ಳಬಹುದು,
ಬೆಳೆಸುತ್ತ ಬಳಸುತ್ತ
ಮೇಳೈಸಿಕೊಳ್ಳಬಹುದು
ತಾಳಕ್ಕೂ ತಂತಿಗೂ ಕೂಡಿಕೆ ಮಾಡಿಸಿ
ಮನದ ತನುವು ಮಿಡಿವವರೆಗೂ
ಮೀಟುತ್ತಲೇ ಇರಬಹುದು
ಸುನಾದದಲ್ಲೇ ಸದಾನಂದದ
ಸನ್ನಿಧಿಯನ್ನು ಸಂಧಿಸಬಹುದು

ಹಿಂದು ಮುಂದಿನ ಹಿನ್ನಡೆ ಮುನ್ನಡೆಗಳನ್ನೇ
ಪರಮಾನಂದವಾಗಿಸಿ
ಅತ್ತಿತ್ತ ಚಲಿಸುತ್ತ ಲೌಕಿಕದಲ್ಲೇ
ಲೋಕವನ್ನು ಮರೆತು
ಸಲೀಸಾಗಿ ಸಮಾಧಿಸ್ಥಿತಿಯಲ್ಲಿ
ವಿರಾಜಮಾನವಾಗಿ ವಿಹರಿಸಬಹುದು

ಕ್ರಮಿಸಬಹುದು, ನಿರಾತಂಕವಾಗಿ
ಇಂತಹ ಸಕ್ರಮವನ್ನೂ
ಅಕ್ರಮವೆನ್ನುವ ಮಂದಿಗಳನ್ನು
ಆಕ್ರಮಿಸುತ್ತ
ಕ್ರಮಿಸುತ್ತಲೇ ಇರಬಹುದು…

ನಮ್ಮಿಬ್ಬರ ಇರುವಿಕೆಯ ಅರಿವನ್ನು
“ಅರ್ಧ”ವಾಗಿಸದೆ ಪೂರ್ಣವಾಗಿಸಬಹುದು
ಅರ್ಥಪೂರ್ಣವಾಗಿಸಬಹುದು
ನೈತಿಕತೆಯ ಅಡಿಯಲ್ಲೇ
ಅಂದವಾದ ಗಡಿಯನ್ನು ರೂಪಿಸಬಹುದು
ಬಾಹ್ಯದಿಂದ ಆರಂಭವಾಗುವ
ಬಾಹುಬಂಧನವನ್ನು ಎಂದೆಂದೂ
ಬಂಧನವಾಗಿಸಿಕೊಳ್ಳದೇ
ಬಹಿರಂಗದಲ್ಲೂ ಅಂತರಂಗದಲ್ಲೂ
ಹೊಂದಿಸಿಕೊಳ್ಳಬಹುದು
ಅಂತಹದ್ದೊಂದು ಅಂತರಂಗದ
ಆತ್ಮಸಮ್ಮಿಲನಕ್ಕೆ
ಕಾಲ”ಕೂಡಿ”ಬರಬಹುದು

– ಡಾ.ಚಿನ್ಮಯ ಎಂ. ರಾವ್ ಹೊನಗೋಡು
‎February ‎5, ‎2021

 

Related Articles

Back to top button

Adblock Detected

Kindly unblock this website.