-ವಿಜಯ್.ಸಿ.ವಿ
” ಏಯ್, ಕೋಲು ತಗೊಂಡು ಓಡಿಸು, ಹೊಡಿಬೇಡ.”
” ಅಲ್ಲಿ ನೋಡು ಹಂಚಿನ ಮೇಲೆ.,ಮಕ್ಕಳನ್ನು ಒಳಗೆ ಕರೆದುಕೊಂಡು ಹೋಗಿ ಅತ್ತೆ”
ಹೃಷಿಕೇಶ, ಮಧುರಾ ಹೋಗ್ರೋ ಒಳಗೆ…..
ಧೋ..! ಅಂತ ಸುರಿತಾ ಇರೋ ಮಳೇಲಿ, ತಲೆ ಮೇಲೆ ಕೇವಲ ಒಂದು ಪ್ಲಾಸ್ಟಿಕ್ ಕವರ್ ಹಾಕಿ, ನೆಂದುಕೊಂಡು 14 ಕಿಮೀ ನಡೆದು ಬಂದಿದ್ದ ಅಶೋಕ. ತಿಂಡಿ ಇಲ್ಲದೇ ಹಪಹಪ ಹಸಿದಿದ್ದವನಿಗೆ ಕೊನೆಗೆ ಮಧ್ಯಾಹ್ನದ ಒಳ್ಳೆಯ ಊಟ ಸಿಕ್ಕಾಗ ಮನಸ್ಸು ತುಂಬದಿದ್ದರೂ ಹೊಟ್ಟೆಯಂತು ಗಡದ್ದಾಗಿ ತುಂಬಿತು. ನಂತರ ಮಠದ ಮಹಡಿಯ ಮೇಲೆ ಭೂತ-ಭವಿಷ್ಯತ್‍ನ ಆಲೋಚನೆಗಳನ್ನು ಅಪ್ಪಿಕೊಂಡು, ವರ್ತಮಾನವನ್ನು ಮರೆತು ಮಲಗಿದ್ದ ಅಶೋಕನಿಗೆ ಮೇಲಿನ ಮಾತುಗಳು ಕೇಳಿದಾಗ ಅರೆ ನಿದ್ರಾ ಅವಸ್ಥೆ.
ಆದ್ರು , “ಹಾವು” ಅಂದರೆ ಅವನಿಗೆ ಅದೇನೋ ಗೌರವ ಮಿಶ್ರಿತ ಭಯ. ಹಾಗಾಗಿ ತಕ್ಷಣ ಅವನ ಮನಸ್ಸು ಅತ್ತಕಡೆ ಇಣುಕಿತು.
8 ವರ್ಷದ ಹಿಂದೆ ನಡಿಗೋಡೆ ಶಿವರಾಮ ಭಟ್ಟರ ಹತ್ತಿರ ಜಾತಕ ತೋರಿಸಿದಾಗ ಅವರು,
“ಇವನಿಗೆ ನಾಗದೋಷ ಇದೆ. ಹಾಗಾಗಿ ಇವನಿಗೆ ವಿದ್ಯೆ ಅರ್ಧಕ್ಕೆ ನಿಲ್ಲುತ್ತದೆ ಮತ್ತು ಜೀವನದಲ್ಲಿ ಶ್ರೋಯೋಭಿವೃದ್ಧಿಗೆ ದೀರ್ಘ ಸಮಯ ತೆಗೆದುಕೊಳ್ಳುತ್ತದೆ” ಅಂದಾಗಿನಿಂದ ಹಾವು ಅಂದರೆ ಅಶೋಕನಿಗೆ ಭಯ.
ಪೂಜೆ, ಜಪ, ತಪಗಳೆಲ್ಲವನ್ನೂ ಮಾಡಿಸಿ ಮತ್ತೆ ಅದೇ ಜಾತಕ ಹಿಡಿದು ಹೋದಾಗ “ನಾಗಾರಾಧನೆಯಿಂದ ಜೀವನದಲ್ಲಿ ತುಂಬಾ ಯಶಸ್ಸು ಪಡೆಯುತ್ತಾನೆ” ಅಂತ ಎರಡನೇ ಬಾರಿ ಶಿವರಾಮ ಭಟ್ಟರ ಬಾಯಿಯಿಂದ ಹೊರಟ ನುಡಿಗಳನ್ನು ಕೇಳಿದಾಗಿನಿಂದ ಹಾವು ಎಂದರೆ ಅಶೋಕನಿಗೆ ಗೌರವ.
ಒಟ್ಟಿನಲ್ಲಿ ಕಚ್ಚಲಿಕ್ಕೆ ಬಂದ ಹಾವನ್ನು, ಕೈ ಮುಗಿದು ಅಶೋಕನ ತಲೆ ಮೇಲೆ ಕಾವಲಿಗೆ ನಿಲ್ಲಿಸಿ ಬಿಟ್ಟರು ಶಿವರಾಮ ಭಟ್ಟರು.
ಅಶೋಕ ಎಚ್ಚರಗೊಂಡ. ಅವನ ಮನಸ್ಸು ವಿಪರೀತ ಹೊಯ್ದಾಟದಲ್ಲಿತ್ತು. ಮನೆಗೆ ಹೋಗಲೆ.? ಇಲ್ಲೆ ಇದ್ದರೆ ನಾಳೆ ಹೇಗೆ.,? ಇಲ್ಲಿರುವವರು ನನ್ನನ್ನು ಏನಾದರೂ ‘ಹೋಗಿ ಸಾಕು, ನಿಮ್ಮ ಸೇವೆ’ ಎಂದು ಬಿಟ್ಟರೆ..? ಊರಿನಲ್ಲಿ ಅಮ್ಮ ಅಳುತ್ತಾ ಇರುತ್ತಾಳ..? ಅಪ್ಪ ಹುಡುಕ್ತಾ ಇರುತ್ತಾರ..? ಎಲ್ಲಾ ಪ್ರಶ್ನೆಗಳೂ ಒಮ್ಮೆಲೆ ಅಪ್ಪಳಿಸಿ. ಕೊರೆಯೋ ಚಳಿಯಲ್ಲೂ ಮೈ ಬಿಟ್ಟುಕೊಂಡು ಮಲಗಿದ್ದ ಅಶೋಕನಿಗೆ ಬೆವರು ತರಿಸಿ, ಹೊದ್ದ ತೆಳ್ಳನೆಯ ಶಲ್ಯವನ್ನು ಕೂಡ ತೆಗೆದು ಬಿಸಾಡುವಂತೆ ಮಾಡಿದವು.
ಎದ್ದು ನಿಂತ ಅಶೋಕ ತಾನು ಮಲಗಿದ್ದ ಮಹಡಿಯಿಂದ ಕೆಳಗೆ ನೋಡಿದ. ಹಾವು ಎಂದು ಕೂಗಿದವರೆಲ್ಲಾ ಆ ಮಠದ ವಿದ್ಯಾರ್ಥಿಗಳು ಎಂದು ಗೊತ್ತಾಯಿತು. ದೊಡ್ಡವರ್ಯಾರು ಅಲ್ಲಿ ಕಾಣಿಸಲಿಲ್ಲ. ಜುಟ್ಟು ಬಿಟ್ಟುಕೊಂಡ ಆ ಹುಡುಗರು, ಮಳೆಗಾಲದಲ್ಲಿ ಕೊರೆಯೋ ನೆಲೆದಮೇಲೆ ಕುಳಿತು ಸಂಸ್ಕøತ ಭಾಷೆಯ ಕೆಲವು ಗ್ರಂಥಗಳನ್ನು ಓದುತ್ತಿದ್ದರು.
ಅಶೋಕನಿಗೆ ತಾನು ಮಂತ್ರಗಳನ್ನು ಉರುಹೊಡೆದು ಒಪ್ಪಿಸಿದಾಗ ತನ್ನ ಗುರುಗಳು ನಾಲ್ಕಾಣೆ ಕೊಟ್ಟು ಪ್ರೋತ್ಸಾಹಿಸುತ್ತಿದ್ದುದು ನೆನಪಾಯಿತು. ಕೆಳಗಿಳಿದು ಹೋಗಿ ಆ ಹುಡುಗರ ಪೈಕಿ ಒಬ್ಬನಿಗೆ ” ನಿನ್ನ ಹೆಸರು ಏನು.? ಏನು ಓದುತ್ತಿದ್ದೀಯ..?ಯಾವ ಊರು?” ಎಂದ.
ಆ ಹುಡುಗ ಸಂಕೋಚದಿಂದ ” ಸಂಕರ್ಷಣ ಅಂತ, ಉಪನಿಷತ್ತು ಓದುತ್ತಾ ಇದ್ದೀನಿ,. ನಾಳೆ ಒಪ್ಪಿಸಬೇಕು, ನಮ್ಮೂರು ಬಾಗಲಕೋಟೆ” ಎಂದ.
“ಇದನ್ನು ಓದಿ ಮುಗಿಸಿ ಏನು ಕೆಲಸ ಮಾಡುತ್ತೀಯ.? ಈಗಾಗಲೇ ನಿನಗೆ 17 ವರ್ಷ ಇರಬೇಕು ಅಲ್ವಾ ?” ಎಂದು ಆಶ್ಚರ್ಯದಿಂದ ಅಶೋಕ ಕೇಳಿದ.
ಸಂಕರ್ಷಣ ಬಹಳ ಸಮಾಧಾನದಿಂದ ” ಹೌದು, ನನಗೆ 16 ತುಂಬಿದೆ, ಮುಂದೆ ಸಂಸ್ಖøತ ಅಧ್ಯಾಪಕನಾಗುತ್ತೇನೆ, ವಿದ್ಯಾಪೀಠದಲ್ಲಿ ಕೆಲಸಕ್ಕೆ ಸೇರುತ್ತೇನೆ. ವಿದೇಶಗಳಲ್ಲಿನ ಅನೇಕ ವಿಶ್ವವಿದ್ಯಾಲಯದಲ್ಲಿ ಅವಕಾಶಗಳಿವೆ,
ನಮ್ಮ ಆಚಾರ್ಯರು ಅಲ್ಲಿಗೆ ನಮ್ಮನ್ನು ಕಳಿಸುತ್ತಾರೆ ” ಎಂದ ತಕ್ಷಣ ಅಶೋಕನಿಗೆ ಆಳದ ಗುಂಡಿಯಿಂದ ಸರ್ರನೆ ಮೇಲಕ್ಕೆತ್ತಿದಂತಾಯಿತು.
ಕೇವಲ ಇಂಜಿನಿಯರಿಂಗ್ ಒಂದೇ ವಿದ್ಯಾಭ್ಯಾಸ, ಅದನ್ನು ಓದದವರು ಮೂರ್ಖರು, ವಿದೇಶಕ್ಕೆ ಹೋದರೆ ಮಾತ್ರ ಜೀವನ ಸಾರ್ಥಕ, ಸಾಫ್ಟವೇರ್ ಉದ್ಯಮವೊಂದೇ ಇಡೀ ಜಗತ್ತಿನಲ್ಲಿ ಅತ್ಯಂತ ಗೌರವಯುತ ಕೆಲಸ, ಉಳಿದ ಕೆಲಸದವರ ಜೀವನ ವ್ಯರ್ಥ ಎಂದು ಭಾವಿಸಿಕೊಂಡಿದ್ದ ಅಶೋಕನಿಗೆ ಗಾಬರಿಯಾಯಿತು.
ಜಿಲ್ಲೆಯಿಂದ 65 ಕಿಮೀ ದೂರದ, ತಾಲ್ಲೂಕ್ ಕೇಂದ್ರದಿಂದ 14 ಕಿಮೀ ಕಾಡಿನೊಳಗೆ ಕೇವಲ ಒಂದು ಮಠ ಹಾಗೂ 8 ಮನೆಗಳಿರುವ ಪುಟ್ಟ ಗ್ರಾಮದಲ್ಲಿನ, ಪಾಳು ಬಿದ್ದಂತಿರುವ 100 ವರ್ಷಗಳ ಮಠದಲ್ಲಿ ಕುಳಿತ ಜುಟ್ಟುಬಿಟ್ಟ ಈ ಯುವಕ, ವಿದೇಶದಲ್ಲಿನ ಉದ್ಯೋಗದ ಬಗ್ಗೆ ಮಾತನಾಡುವಷ್ಟು ತಿಳಿದುಕೊಂಡಿದ್ದಾನಲ್ಲ ಎಂದು ಅಶೋಕನ ಕಣ್ಣುಗಳು ಅರಳಿದವು.
ಅವನ ಒಣ ಪ್ರತಿಷ್ಠೆಯ ತಲೆಗಳು ಕಳಚಿಬಿದ್ದವು.
ಸಂಕರ್ಷಣನ ಜೊತೆಗೆ ಇನ್ನೂ 3 ಹುಡುಗರು ಆ ಮಠದಲ್ಲಿ ಸಂಸ್ಕøತ, ವೇದ, ತರ್ಕ, ಮತ್ತು ವ್ಯಾಕರಣಗಳನ್ನು ಅಭ್ಯಾಸಮಾಡಲು ಕಳೆದ 2 ವರ್ಷಗಳಿಂದ ತೊಡಗಿದ್ದರು. ಅವರ ಆಚಾರ್ಯರು ತಮ್ಮ ಸಂಸಾರದ ಸಮೇತ ಆ ಹಳ್ಳಿಯ ಮಠದಲ್ಲಿ ಪೂಜೆಮಾಡಿಕೊಂಡು, ಮಠದ ಹಿರಿಯ ಸ್ವಾಮಿಗಳ ತಪ್ಪಸಿನ ಸ್ಥಳವನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿಯನ್ನು ನಿರ್ವಹಿಸುತ್ತಾ, ಬೆಂಗಳೂರಿನ ಮಠದ ಮುಖ್ಯ ಕಛೇರಿಯೊಂದಿಗೆ ಸಂಪರ್ಕದಲ್ಲಿದ್ದರು. ಆ ಮಠದ ಹಾಲಿ ಸ್ವಾಮಿಗಳು ಚಾತುರ್ಮಾಸ್ಯಕ್ಕೆ ಈ ಹಳ್ಳಿಯ ಮಠಕ್ಕೆ ಬರುತ್ತಿದ್ದರು. ಹಿರಿಯ ಗುರುಗಳ ತಪಸ್ಸಿನ ಸ್ಥಳವನ್ನು ಸಾಕ್ಷಾತ್ ಗುರುಗಳೆಂದೆ ಎಲ್ಲರೂ ನಂಬಿದ್ದರು. ಅವರು ಕೂರುತ್ತಿದ್ದ ಮಣೆಯನ್ನು, ಜಪಕ್ಕೆ ಬಳಸುತ್ತಿದ್ದ ಜಪಮಣಿಯನ್ನು ಮಠದ ಮಧ್ಯದಲ್ಲಿ ಇರಿಸಿ, ಅದಕ್ಕೊಂದು ಚಿಕ್ಕ ಗುಡಿ ನಿರ್ಮಿಸಿ ಪೂಜೆ ನೆರವೇರಿಸುತಿದ್ದರು. ದಟ್ಟವಾದ ಕಾಡಿನಾಳದ ಹಸಿರು ತುಂಬಿದ ಪ್ರಕೃತಿ ಮತ್ತು ನಿಶ್ಯಬ್ದತೆಗಳೆರಡೂ ತಪಸ್ಸಿಗೆ ಹೇಳಿ ಮಾಡಿಸಿದ ವಾತಾವರಣವಾಗಿತ್ತು. ವರ್ಷದ ಇನ್ನುಳಿದ ದಿನಗಳಲ್ಲಿ ಈ ಕಾಡಿನೊಳಗಿನ ಮಠಕ್ಕೆ, ಆ ಊರಿನ ಮನೆಯವರೆ 15 ದಿನಕ್ಕೆ ಒಮ್ಮೆ ಮುಖಮಾಡುತ್ತಿದ್ದರು. ತುಂಗಾ ನದಿ ಮಳೆಗಾಲದಲ್ಲಿ ಮೈ ತುಂಬಿ ಹರಿದು ಹೊಲ ಗದ್ದೆಗಳಿಗೆ ನುಗ್ಗಿ ಮಠವನ್ನು ಸುತ್ತುವರಿದು ದ್ವೀಪವಾಗಿಸುತ್ತಿದ್ದಳು. ಆವಾಗ ಹಾಲಿಗಾಗಿ ಕಟ್ಟಿದ ಹಸುಗಳು, ಮಠದ ಮೇಲ್ವಿಚಾರಕರ ಸಂಸಾರ, ವಿದ್ಯಾರ್ಥಿಗಳೆಲ್ಲರೂ ಮಠದ ಒಳಗಡೆಯೇ ತಿಂಗಳುಗಟ್ಟಲೆ ಕಾಲಕಳೆಯ ಬೇಕಾಗಿತ್ತು.
ಅಲ್ಲಿನ ಊರಿನವರಿಗೆ, ಭಕ್ತರಿಗೆ ಮತ್ತು ಊರು ಬಿಟ್ಟು ಬೇರೆಡೆ ಇರುವವರುಗೆಲ್ಲರಿಗೂ ಈ ವಿಷಯ ಹೊಸದೇನಲ್ಲ, ಮತ್ತು ಅವರಿಗೆ ಇದರ ಬಗ್ಗೆ ಹೆದರಿಕೆಯೂ ಆಗುತ್ತಿರಲಿಲ್ಲ. ಅವರಿಗೆಲ್ಲಾ ಒಂದು ನಂಬಿಕೆಯಿತ್ತು ಹಾಗೂ ಅದು ಒಂದು ಶತಮಾನದಿಂದ ಹಾಗೆಯೇ ಸತ್ಯವಾಗಿ ನಡೆದುಬಂದಿತ್ತು ಕೂಡ.
ಅದೇನೆಂದರೆ “ಎಷ್ಟೇ ಭೋರ್ಗರೆವ ಮಳೆ ಸುರಿದರೂ, ತುಂಗೆ ಮಾತ್ರ ಮಠದ ಮೆಟ್ಟಿಲು ಹತ್ತುವುದಿಲ್ಲ”..
ಈ ವಿಷಯವನ್ನು ಅಶೋಕನಿಗೆ ಅವನ ಅಜ್ಜಿ ಚಿಕ್ಕಂದಿನಿಂದ ಹೇಳಿ ಹೇಳಿ, ಅವನ ಮನಸ್ಸಿನಲ್ಲಿಯೂ ಠಸ್ಸೆ ಒತ್ತಿದ್ದರು. ಹಾಗಾಗಿಯೇ ಮನೆ ಬಿಟ್ಟು ಓಡಿಬಂದಿದ್ದ ಅಶೋಕ ಈ ಮಠದಲ್ಲಿ ತಂಗಿದ್ದ. ಮಠದಲ್ಲಿ ಹಾವಿನ ವಿಷಯ ಕಿವಿಗೆ ಬೀಳುವಷ್ಟರಲ್ಲಿ ಅಶೋಕ ಮನೆ ಬಿಟ್ಟು ಓಡಿಬಂದು ಸರಿಯಾಗಿ 7 ಗಂಟೆ ಕಳೆದಿತ್ತು.
*******
” ಅಮ್ಮಾ, ನೀವೆಲ್ಲರೂ ಆಸೆ ಪಟ್ಟಂತೆ ನಾನು ನಿಮ್ಮ ಆಸೆಯನ್ನು ಪೂರೈಸಲಾಗಲಿಲ್ಲ. ಮಗ ಕುಲದ ಉದ್ಧಾರಕನೆಂದು ಹೇಳುತ್ತಾರೆ, ಆದರೆ ನಿಮ್ಮ ಕುಲದ ಮರ್ಯಾದೆಯನ್ನು ನಾಶ ಮಾಡಿದೆ. ನನಗೆ ನೀವು ಬಯಸಿದಂಥಹ ಒಳ್ಳೆಯ ಸಾಫ್ಟವೇರ್ ಕಂಪನಿಯ ನೌಕರಿಯನ್ನು ಸೇರಲು ಆಗಲಿಲ್ಲ. ಕ್ಷಮಿಸಿ,. ನಾನು ಹೇಡಿಯಂತೆ ಮನೆ ಬಿಟ್ಟು ಓಡಿಹೋದರು, ಮುಂದೊಂದು ದಿನ ನನ್ನ ತಂಗಿಯ ಮದುವೆ ಮಾಡಲು ಸಾಫ್ಟವೇರ್ ಉದ್ಯಮದಲ್ಲಿ ಕಷ್ಟಪಟ್ಟು ದುಡಿದು ನನ್ನದೇ ಸ್ವಂತ ದುಡಿಮೆಯ ದುಡ್ಡಿನಿಂದ ಮರಳಿ ಬರುತ್ತೇನೆ. ನನ್ನನ್ನು ಹುಡುಕಲು ಪ್ರಯತ್ನಿಸದಿರಿ..”
ನೋಡು ಈ ಪತ್ರ ಬರೆದಿಟ್ಟು ಹೋಗಿದ್ದಾನೆ. ಅಶೋಕನ ತಾಯಿ, ತನ್ನ ತಂಗಿಗೆ ಈ ಪತ್ರವನ್ನು ತೋರಿಸಿದರು.
“ಪರವಾಗಿಲ್ಲ ಕಣೇ ನಮ್ ಅಶೋಕು, ಒಳ್ಳೆಯ ಅಕ್ಷರಗಳನ್ನೇ ಬಳಸಿದ್ದಾನೆ, ಚೆನ್ನಾಗಿದೆ ಬರವಣಿಗೆ” ಎಂದು ಅಶೋಕನ ಚಿಕ್ಕಮ್ಮ ಶಾಂತಾ ಹೇಳಿದಾಗ ಅಲ್ಲಿ ಗಾಬರಿಯಿಂದ ನೆರೆದವರೆಲ್ಲಾ ಒಮ್ಮೆ ಶಾಂತಳನ್ನು ದುರುಗುಟ್ಟಿ ನೋಡಿದರು.
ಬೆಳಿಗ್ಗೆ ಎದ್ದು ಅಶೋಕ ಕಾಣಲಿಲ್ಲವೆಂದು ಮನೆಯವೆಲ್ಲರೂ, ಅಶೋಕನ ಎಲ್ಲಾ ಸ್ನೇಹಿತರ ಮನೆಗೆ ಫೋನ್ ಮಾಡಿ ವಿಚಾರಿಸಿದ್ದರು. ಕಡೆಗೆ ಮನೆ ಕೆಲಸದ ಹುಡುಗಿ, ಎಂದಿನಂತೆ ಅಶೋಕನ ಕಂಪ್ಯೂಟರ್ ಒರೆಸಲು ಹೋದಾಗ , ಟೇಬಲ್ ಮೇಲೆ ಈ ಪತ್ರ ಸಿಕ್ಕಿತ್ತು.
ಅಶೋಕನ ಅಪ್ಪನಿಗೆ ಮುಂದೇನು ಎಂಬ ಗೊಂದಲಕ್ಕಿಂತ, ಮಗನಿಲ್ಲ ಎಂಬ ಬೇಸರಕ್ಕಿಂತ ” ತನ್ನ ಮಗ ಹೊರಗಿನ ಪ್ರಪಂಚದ ಅರಿವೇ ಇಲ್ಲದೆ, ಬಾವಿಯೊಳಗಿನ ಕಪ್ಪೆಯಂತೆ ಬರೀ ಸಾಫ್ಟವೇರ್ ಉದ್ಯಮದ ಕೆಲಸವಿಲ್ಲವೆಂಬುದಕ್ಕೆ ಮನಸೋತು ಹೀಗೆ ಓಡಿ ಹೋದನಲ್ಲಾ” ಎಂದು ಮನದೊಳಗೆ ವಿಚಿತ್ರವಾದ ಅಪಹಾಸ್ಯ ಕಾಡುತ್ತಿತ್ತು.
ಎಂದಿನಂತೆ ಅಜ್ಜಿ, ಮತು ಅಮ್ಮ ಮಾತ್ರ ” ಇದ್ದ ಒಂದೇ ಗಂಡು ಕೂಸು, ಹೋಯಿತು. ಹೇಗೆ ಹುಡುಕುವುದು,? ಪೋಲಿಸರಿಗೆ ಹೇಳಿದರೆ ಮರ್ಯಾದೆ ಹೋಗುತ್ತದೆ, ಅಶೋಕ ಎಲ್ಲಿ? ಹೇಗೆ ಹುಡುಕುವುದು?” ಎಂದು ಚಿಂತಿಸಿ ಚಿಂತಿಸಿ ಅಳುತಿದ್ದರು.
ಅಶೋಕನ ಅಜ್ಜಿ ಸುಮಾರು 80 ವರ್ಷಗಳ ಹಿಂದೆಯೇ ಕಾಡಿನೊಳಗಿನ ಮಠದ ಹತ್ತಿರದ ಕುತ್ತೂರಿನಿಂದ ವಲಸೆ ಬಂದವರು.
ಹಾಗಾಗಿಯೂ, ಅವನು ಆ ” ಕಾಡಿನ ಮಠ ” ಕ್ಕೆ ಹೋಗಿರಬಹುದು ಎಂಬ ಸಣ್ಣ ಊಹೆ ಯಾರಿಗೂ ಬರಲಿಲ್ಲ.
ಸ್ವತಃ ಅಶೋಕನಿಗೂ ಕೂಡ ತಾನು ಅಲ್ಲಿಗೆ ಹೋಗುತ್ತೇನೆಂದು ತಿಳಿದಿರಲಿಲ್ಲ.
ಅವನು ಮನೆ ಬಿಟ್ಟು, ಬಸ್ ಹತ್ತಲು ಹೋಗುವ ಮುನ್ನ ರಾಯರ ಮಠದ ಪಕ್ಕದ ಪೆಟ್ಟಿ ಅಂಗಡಿಯಲ್ಲಿ ನಿಂತು, ರೂಢಿಸಿಕೊಂಡಿದ್ದ ಸಿಗರೇಟ್ ಚಟಕ್ಕೆ ಜಾರಿ, ಒಂದು ದಮ್ಮು ಎಳೆದಾಗಲೇ ” ಕಾಡಿನ ಮಠಕ್ಕೆ ನಡೀ..” ಎಂದು ಮನಸ್ಸು ಆಜ್ಞೆ ಮಾಡಿತ್ತು.
ತನ್ನ ಮನಸ್ಸೇ ಸಮಾಜವೆಂದು ದ್ವಿಪಾತ್ರ ಅಭಿನಯ ಮಾಡಿ, ತನ್ನನ್ನು ಅಧೋಗತಿಗೆ ತಳ್ಳುತ್ತಿದೆ ಎಂದು ತಿಳಿದು ಎದ್ದೇಳುವಷ್ಟರಲ್ಲಿ ಅಶೋಕ ತ್ರಿಶಂಕುಪುರಕ್ಕೆ ಬಂದು ನಿಂತಿದ್ದ. ಇಲ್ಲಿಂದ ಕಾಡಿನ ಮಠಕ್ಕೆ 14 ಕಿಮೀ ನಡೆದುಕೊಂಡೇ ಹೋಗಬೇಕಾಗಿತ್ತು. ಹಿಂದೆ ತ್ರಿಶಂಕುವಿನ ಕಥೆ ಸಂಭವಿಸಿದ ಜಾಗವೆಂದು ಪುರಾಣದ ಇತಿಹಾಸ ಈ ಜಾಗವನ್ನು ತಿಳಿಸಿದ್ದರಿಂದ , ಜನರು ಇದಕ್ಕೆ ಅದೇ ಹೆಸರನ್ನೇ ನಾಮಕರಣ ಮಾಡಿದ್ದರು. ಮಳೆಗಾಲದಲ್ಲಿ ಮೈ ತುಂಬಿ ಹರಿಯುವ ತುಂಗೆ ಮೇಲೆದ್ದರೆ, ಈ ಹಳ್ಳಿಗೆ ಜನಸಂಪರ್ಕ ತುಂಡಾಗಿ, ಯಾರೇ ಇಲ್ಲಿಗೆ ಬಂದಿದ್ದರೂ, ಅವರು ಕೂಡ ತ್ರಿಶಂಕುವೇ ಆಗುತ್ತಿದ್ದರು.
******
ಮಠದ ಸುತ್ತಮುತ್ತ ಓಡಾಡಿಕೊಂಡು, ದನದ ಕೊಟ್ಟಿಗೆಗೆ ಹೋದ ಅಶೋಕನೆದುರು ಮಕ್ಕಳನ್ನು ಎತ್ತುಕೊಂಡು ಹಸುವಿಗೆ ಹುಲ್ಲಿ ಹಾಕುತ್ತಾ ನಿಂತ ಹೆಂಗಸು ” ನೀವು ಎಲ್ಲಿಯವರು.? ಗುರುಗಳ ಸೇವೆ ಮಾಡಲು ಇಲ್ಲಿಗೆ ಬಂದಿರಾ? ಎಷ್ಟು ದಿವಸ ಸೇವ ಮಾಡ್ತೀರಿ..?” ಎಂದು ಕುತೂಹಲ ಬಗೆ ಹರಿಸಿಕೊಳ್ಳಲು ಜಡಿ ಮಳೆಯ ನಡುವೆಯೇ ಪ್ರಶ್ನೆಗಳ ಸುರುಮಳೆ ಗೈದರು.
ಮನಸ್ಸಿನ ಹೆದರಿಕೆ, ಸಂಕಟ, ಮುಂದೇನೆಂಬ ಗೊಂದಲಗಳೆಲ್ಲವನ್ನು ಗಂಟಲಿನ ನೋವಿದ್ರೂ ಕೂಡ ಉಗುಳು ನುಂಗುವಂತೆ ನುಂಗಿಕೊಂಡ ಅಶೋಕ ” ನಮ್ಮ ಊರು ಮಂಗಳೂರು, ನಾನು ಪೋಸ್ಟ್ ಆಫೀಸ್‍ನಲ್ಲಿ ಕೆಲಸಮಾಡೋದು., ಸೇವೆ ಮಾಡಿ ಆಶೀರ್ವಾದ ಪಡೆಯಲು ಬಂದೆ. , ಎಷ್ಡು ದಿವಸ ಅಂತ ಗೊತ್ತಿಲ್ಲ” ಅಂದುಬಿಟ್ಟ.
ತಕ್ಷಣ ಆ ಹೆಂಗಸು ” ಮತ್ತೆ ಬೆಳಿಗ್ಗೆ ಸೇವೆಯ ಸಂಕಲ್ಪ ಮಾಡುವಾಗ ಎಷ್ಟು ದಿವಸ ಅಂತ ಹೇಳಲಿಲ್ಲವೇ..?” ಅಂದಳು.
ಅಶೋಕ ಮಾತನಾಡದೇ ಬರೀ ಹಲ್ಲು ಕಿರಿದು ನಿಂತ. ಸಂಜೆಯಾಯ್ತು ಗುರುಗಳ ಆರತಿಗೆ ತಯಾರಿ ಮಾಡಬೇಕು, ನಾನು ಬರುತ್ತೇನೆ ಎಂದು ಆ ಹೆಂಗಸು ಹೊರಟಳು.
ಆಗ ಅಶೋಕ “ನದಿಯ ಕಡೆಗೆ ಹೋಗಿ ಬರಲೇ..?” ಎಂದ.
ಗಾಬರಿಯಿಂದ ಹೆಂಗಸು ಕೈ ಹಿಡಿದೆಳೆದು ” ಯದ್ವಾತದ್ವಾ ಮಳೆಯಿಂದ ತುಂಗೆ ಉಕ್ಕಿ ಹರಿಯುತ್ತಿದ್ದಾಳೆ, ಕಾಲು ಜಾರಿದರೆ ಜೀವಕ್ಕೆ ಆಪತ್ತು, ನಿಮಗೇಕೆ ಜೀವ ಬಿಡುವ ಸಾಹಸ, ಹೋಗಿ ಒಳಗೆ” ಎಂದು ಗದರಿಸಿದಳು.
ಹೆದರಿಕೆಯ ಮೇಲೊಂದು ಹೆದರಿಕೆ ಎಂಬಂತೆ ಆ ಹೆಂಗಸಿನ ಕಾಳಜಿಯ ಕಣ್ಣುಗಳ
ಕೋಪಕ್ಕೆ ಹೆದರಿದ ಅಶೋಕ ಮಠದೊಳಗೆ ಓಡಿದ.
*******
ಕತ್ತಲು ಕವಿಯಲು ಆರಂಭವಾಯಿತು. ಗುರುಪೀಠಕ್ಕೆ ಸಲ್ಲಿಸುವ ಸಂಜೆಯ ಆರತಿಗೆ ಆಚಾರ್ಯರು ಸಿದ್ಧಮಾಡಿಕೊಂಡು ಜಪಕ್ಕೆ ಕುಳಿತರು. ತಮ್ಮ ಮಗ ಹೃಷಿಕೇಶನನ್ನು ಹತ್ತಿರ ಕರೆದು ಒಂದು ಚೀಟಿ ನೀಡಿದರು. ಆ ಮಗು ಚೀಟಿಯನ್ನು ತೆಗೆದುಕೊಂಡು ಹೋಗಿ ಸಂಕರ್ಷಣನಿಗೆ ಕೊಟ್ಟಿತು. ಅವನೊಂದಿಗೆ ಮಠದ ಎಲ್ಲಾ ವಿದ್ಯಾರ್ಥಿಗಳು ಜೋರಾಗಿ ಅದನ್ನು ಓದಿದರು
“ನಿಮ್ಮ ಮನಸ್ಸು ತುಂಬಾ ಯೋಚಿಸುತ್ತಿದೆ. ನಿಮ್ಮ ನಿರ್ಧಾರ, ಸಂಕಲ್ಪಗಳು ಏನೆಂದು ನಾನು ಅರಿಯೆ. ಆದರೆ ನೀವು ಬಾಳಿ ಬದುಕಬೇಕಾದವರು, ಜೀವನವನ್ನು ಇನ್ನೂ ಈಗೀಗ ಕಂಡುಕೊಂಡಿದ್ದೀರಿ. ಸರಿಯಾದ ಮನಸ್ಥಿತಿ ಕಾಯ್ದುಕೊಳ್ಳಿ. ಪ್ರಪಂಚ ತುಂಬಾನೇ ವಿಶಾಲವಾಗಿದೆ. ನಿಮ್ಮ ಭವಿಷ್ಯ, ನಿಮ್ಮ ಜೀವನವನ್ನು ಕಳೆದು ಹೋದ ಘಟನೆಯ ಮೇಲೆ ನಿಲ್ಲಲು ಬಿಡಬೇಡಿ, ಬದಲಾಗಿ ಪ್ರತಿ ಕ್ಷಣವೂ ನಮಗೆ ತಿದ್ದಿಕೊಂಡು ಬದುಕಲು ಸಿಗುವ ಅವಕಾಶಗಳೆಂಬ ಭದ್ರ ಬುನಾದಿಯ ಮೇಲೆ ನಿಲ್ಲಿಸಿ. ನನಗೆ ಕೈ ಮುಗಿಯಿರಿ, ಪೂಜೆ ಮಾಡಿ ಎಂದು ನಾನು ನಿಮ್ಮನ್ನು ಎಂದಿಗೂ ಕೇಳುವುದಿಲ್ಲ, ಹಾಗೆ ಮಾಡಲು ಆಜ್ಞೆಯನ್ನು ಮಾಡಿಲ್ಲ. ನಿಮ್ಮ ಜೀವನದ ಗುರಿಯನ್ನು ನಿರ್ಧರಿಸಿ, ಸಾಧಿಸಿ, ನಂತರ ನನ್ನ ಬಳಿ ಬಂದು ನಿಂತರೆ ಸಾಕು. ಅದೊಂದೇ ನೀವು ನನಗೆ ನೀಡಬಹುದಾದ ಮಹೋನ್ನತ ಕಾಣಿಕೆ. ಜೀವನದಲ್ಲಿ ಯಶಸ್ಸಿನ ಗುಟ್ಟು ಇರುವುದು ‘ಹಿಡಿಯುವುದರಲ್ಲಿ ಅಲ್ಲ, ಬಿಡುವುದರಲ್ಲಿ’. ನೀವು ಹಿಡಿದುಕೊಂಡು ಓಡಿದಷ್ಟು ಬಿಗಿಯಾಗುತ್ತದೆ, ಬಿಟ್ಟು ಶರಣಾಗಿ, ಸಡಿಲಾಗುತ್ತದೆ. ಬಾಳು ಬೆಳಕಾಗುತ್ತದೆ”.
ಇವಿಷ್ಟನ್ನು ಓದಿ ಮುಗಿಸಿದ ವಿದ್ಯಾರ್ಥಿಗಳು, ಕೈ ಮುಗಿದು ನಿಂತರು, ಆರತಿ ಮುಗಿಸಿದ ಆಚಾರ್ಯರು ಅಶೋಕನೆದುರು ಆರತಿ ತಟ್ಟೆಯನ್ನು ಹಿಡಿದರು. ಅಶೋಕನ ಕಣ್ಣುಗಳು ಅತ್ತು, ಅತ್ತು ನೀರುತುಂಬಿ ಕೆಂಪಾಗಿದ್ದವು. ಆದರೆ ಮುಖದಲ್ಲಿ ದುಃಖದ ಬದಲು, ಆನಂದದ ಕಳೆ ತುಂಬಿತ್ತು. ಆರತಿಯನ್ನು ಅಶೋಕ ಪಡೆಯಲಿಲ್ಲ, ಬದಲಿಗೆ ತನ್ನ ಹೃದಯದ ಮೇಲೆ ಕೈ ಇಟ್ಟುಕೊಂಡು, ಆಚಾರ್ಯರ ಪಕ್ಕದಿಂದ ಎದುರಿಗಿದ್ದ ಗುರುಗಳ ಜಪದ ಮಂದಿರದ ಬಾಗಿಲ ಬಳಿ ಹೋಗಿ ನಿಂತ. ಹೃದಯ ಮೇಲಿಂದ ಕೈಯನ್ನು ಮುಷ್ಠಿ ಮಾಡಿ, ಹಣೆಗೆ ಮುಟ್ಟಿಸಿ, ಗುರುಗಳ ಮಂದಿರದ ಕಡೆಗೆ ಎಸೆಯುವಂತೆ ಎಸೆದ. ಹಿಂತಿರುಗಿ ಅಚಾರ್ಯರ ಬಳಿ ಬಂದ ತಕ್ಷಣ ನಗುತ್ತಾ ಆಚಾರ್ಯರು ” ಮನೆಗೆ ಕರೆ ಮಾಡುತ್ತೀರಾ..? ದೂರವಾಣಿ ಆ ಮೂಲೆಯಲ್ಲಿದೆ ಎಂದರು”.
*******
“ಅಮ್ಮಾ,…..ಅಮ್ಮಾ…….” ಅಶೋಕನಿಗೆ ಮಾತೇ ಬರುತ್ತಿಲ್ಲ, ಬರೀ ಅಳು.
ಆ ಕಡೆಯಿಂದ ಅವನ ತಂದೆ ” ಹೂಂ..ಎಲ್ಲಿದ್ದೀಯೋ ಅಶೋಕ.? ಹೇಳು ಈಗಲೇ ಬಂದು ಕರೆದುಕೊಂಡು ಬರುತ್ತೇನೆ. ದಯಮಾಡಿ ಹೇಳು.,” ಅನ್ನುವಷ್ಟರಲ್ಲಿ
ಅವನ ಅಮ್ಮ ” ಮಗು, ನನ್ನ ಮೇಲೆ ನಿನಗೆ ಪ್ರೀತಿ ಇದ್ದರೆ ಎಲ್ಲಿದ್ದರೂ ಸರಿ ಹೊರಟು ಬಾ, ಅಷ್ಟೇ…”
ಆಚಾರ್ಯರು ಹಿಂದೆ ಬಂದು ನಿಂತದ್ದನ್ನು ಗಮನಿಸಿದ ಅಶೋಕ, ವಿದ್ಯಾರ್ಥಿಗಳೆಲ್ಲರೂ ತನ್ನನ್ನೇ ನೋಡುತ್ತಿರುವುದನ್ನು ತಿಳಿದು ಕಣ್ಣೀರು ಒರೆಸಿಕೊಂಡು, ಸಣ್ಣ ದನಿಯಲ್ಲಿ ” ಅಮ್ಮಾ, ಕಾಡಿನ ಮಠದಲ್ಲಿದ್ದೇನೆ, ಆದರೆ ಈಗಲೇ ಹೊರಟು ಬರುತ್ತೇನೆ, ನನ್ನಿಂದ ಇಲ್ಲಿ ಇರಲು ಆಗುತ್ತಿಲ್ಲ ” ಎಂದ.
” ಇಷ್ಟು ಹೊತ್ತಿಗೆ ಅಲ್ಲಿಂದ ತ್ರಿಶಂಕುಪುರಕ್ಕೆ ಹೇಗೆ ಬರುತ್ತೀಯ,.? ಬಂದರೂ ಕೂಡ ಅಲ್ಲಿಂದ ನಮ್ಮ್ ಊರಿಗೆ ಬರಲು ಯಾವ ಬಸ್ಸು ಸಿಗುತ್ತದೆ..? ಬೇಡ., ಅಲ್ಲೇ ಇರು, ನಾವೇ ಕಾರು ಮಾಡಿಕೊಂಡು ಈಗಲೇ ಬರುತ್ತೇವೆ” ಎಂದು ತಾಯಿ ಕರುಳು ನುಡಿಯಿತು.
ಅಶೋಕ ” ಹೂಂ..” ಅಂದ.
ತಕ್ಷಣ ಆಚಾರ್ಯರು ಫೋನ್ ಪಡೆದುಕೊಂಡು ” ಅಮ್ಮಾ , ನಿಮ್ಮ ಮಗನನ್ನು ನಿಮ್ಮ ಊರಿನ ಬಸ್ಸು ಹತ್ತಿಸುವ ಜವಾಬ್ದಾರಿ ನನ್ನದು,. ಹೆದರಬೇಡಿ ಇಲ್ಲಿಂದ ನನ್ನ ಬೈಕ್‍ನಲ್ಲಿ ಅಶೋಕನನ್ನು ಕರದುಕೊಂಡು ಹೋಗಿ ತ್ರಿಶಂಕುಪುರದಿಂದ ಬಸ್ಸು ಹತ್ತಿಸುತ್ತೇನೆ. ನೀವು ಧೈರ್ಯವಾಗಿರಿ., ನಿಮ್ಮ ಮಗ ಈಗ ಬೆಳೆದಿದ್ದಾನೆ, ಅವನು ಇನ್ನು ಮುಂದೆ ಎಂದಿಗೂ ತಪ್ಪು ನಿರ್ಧಾರದ ದಾರಿ ತುಳಿಯಲ್ಲ” ಎಂದರು.
ತಾಯಿ ಕರುಳು ಸ್ವಲ್ಪ ಸುಧಾರಿಸಿಕೊಂಡು ” ಆಯಿತು, ಆಚಾರ್ಯರೆ..ಆ ಗುರುಗಳ ಚಿತ್ತ” ಎಂದಿತು.
*******
ಅಂಜಿಕೆ, ಹೇಸಿಗೆ , ನಾಚಿಕೆ, ಜೊತೆಗೆ ಭಯ ಇವೆಲ್ಲವುಗಳನ್ನು ಕೆಸರಿನಂತೆ ಎರಚಿಕೊಂಡಿದ್ದೇನೆಂದು ಭಾರವಾದ ಮನಸ್ಸನ್ನು ಹೊತ್ತುಕೊಂಡು ಮನೆಯ ಹೊಸ್ತಿಲು ತುಳಿದ ಅಶೋಕನನ್ನು ಮನೆಯವರೆಲ್ಲರೂ ತುಂಬಾ ಪ್ರೀತಿಯಿಂದ ಬರಮಾಡಿಕೊಂಡರು. ಆಗ ಸಮಯ 8 ಗಂಟೆಯಾಗಿತ್ತು. ಅಮ್ಮ ಮಗನನ್ನು ಬಿಗಿದಪ್ಪಿ ಮುದ್ದಾಡಿ, ಅಜ್ಜಿಯ ಬಳಿ ಬಿಟ್ಟು ಅಡಿಗೆ ಮನೆಗೆ ಊಟ ತರಲು ಹೋದರು. ಏನಾದರೂ ಹೇಳಿದರೆ ಮತ್ತೆ ಎಲ್ಲಿ ತಪ್ಪಾಗುತ್ತದೆಯೋ ಎಂಬ ಹೆದರಿಕೆಯಿಂದ ಅಶೋಕನ ತಂದೆ ಅವನ ಹಿಂದೆಯೇ ಏನೂ ಮಾತಾಡದೇ ಓಡಾಡುತ್ತಿದ್ದರು. ಅಮ್ಮನೇ ಖುದ್ದಾಗಿ ಅಶೋಕನ ಬಾಯಿಗೆ ತುತ್ತಿಟ್ಟು ಊಟಮಾಡಿಸಿದರು. ತಂದೆ ದೂರವಾಣಿ ಕರೆಮಾಡಿ ಮಠದ ಆಚಾರ್ಯರಿಗೆ ಧನ್ಯವಾದಗಳನ್ನು ಹೇಳಿದರು.ಇಷ್ಟೆಲ್ಲಾ ಆದರೂ ಅಶೋಕ ಏನ್ನನ್ನೂ ಮಾತನಾಡಿರಲಿಲ್ಲ.
ಅಜ್ಜಿ, ಅಮ್ಮ, ಅಪ್ಪ ಎಲ್ಲರೂ ಅಶೋಕನನ್ನು ಮನೆಯ ದೇವರ ಕೋಣೆಯ ಮುಂದೆ ನಿಲ್ಲಿಸಿ ತುಪ್ಪದ ದೀಪ ಹಚ್ಚಲು ಕೈಗೆ ದೀಪದ ಬತ್ತಿ ನೀಡಿದರು.
ಅಶೋಕ ದೀಪದ ಬತ್ತಿಯನ್ನು ಕೆಳಗೆ ಇಟ್ಟ,.
ಅಮ್ಮ ಮತ್ತು ಅಜ್ಜಿಗೆ ಗಾಬರಿಯಾಯಿತು. ಮಗನಿಗೆ ಏನಾದರೂ ಮೆಟ್ಟಿಕೊಂಡಿದೆಯೇ ಎಂಬ ಸಂಶಯ ಹಾಗೆಯೇ ಮನದಲ್ಲಿ ಹರಿದುಹೋಯಿತು. ನಡಿಗೋಡು ಶಿವರಾಮ ಭಟ್ಟರು, ತಾಯಿತ, ಜಾತಕ ಎಲ್ಲವೂ ಮತ್ತೆ ಮನವನ್ನು ಹೊಕ್ಕವು.
ಅಶೋಕ ಮಾತ್ರ ಈಗಲೂ ಮೌನಿಯಾಗಿ , ಶಾಂತವಾಗಿ ಎದ್ದು ನಿಂತು ತನ್ನ ಎದೆಯ ಮೇಲೆ ಕೈ ಇಟ್ಟು, ಮುಷ್ಠಿಕಟ್ಟಿ ದೇವರೆಡೆಗೆ ಏನ್ನನ್ನೋ ಎಸೆಯುವಂತೆ ಕೈ ಸನ್ನೆ ಮಾಡಿ., ನಕ್ಕ.
ನಂತರ ತನ್ನ ಶರ್ಟ್ ಜೇಬಿನಿಂದ ಒಂದು ತುಂಡು ಹಾಳೆ ತೆಗೆದು ಹಸನ್ಮುಖದಿಂದ ತನ್ನ ತಂದೆಯ ಕೈಗೆ ಇಟ್ಟ. ಅಮ್ಮ ಹಾಗೂ ಅಜ್ಜಿ ಇಣುಕಿ ನೋಡಿ, ಅದನ್ನು ತೆಗೆದು ಓದಲು ಕಣ್ಣು ಸನ್ನೆ ಮಾಡಿದರು.
ಅಶೋಕ ಹೊರನಡೆದ ಮೇಲೆ ಅವನ ತಂದೆ ಆ ಹಾಳೆಯನ್ನು ತೆರೆದು ನೋಡಿದು ಅದರಲ್ಲಿ ಏನು ಬರೆದಿರಲಿಲ್ಲ.
ತಮ್ಮ ಕೂಸಿಗೆ ಏನೋ ಮೆಟ್ಟಿದೆ ಎಂದು ಅಜ್ಜಿ ಮತ್ತು ಅಮ್ಮ ಶಿವರಾಮ ಭಟ್ಟರ ದೂರವಾಣಿ ನಂಬರ್ ಹುಡುಕಲು ಓಡಿದರು.
ಅಶೋಕನ ತಂದೆ ದೇವರಿಗೆ ಕೈ ಮುಗಿದು, ತುಪ್ಪದ ದೀಪ ಹಚ್ಚಿ, ಹಗೆ ಬಂದು ಅಶೋಕನ ಹೆಗಲ ಮೇಲೆ ಕೈ ಹಾಕಿ ಅವನ ಪಕ್ಕ ನಗುತ್ತಾ ಕುಳಿತರು.
(ಜೀವನದಲ್ಲಿ ತನ್ನನ್ನು ತಿದ್ದಿಕೊಂಡು ಬದಲಾಗಲು ಒದಗಿದ ಈ ಅವಕಾಶವನ್ನು ಬಳಸಿಕೊಳ್ಳಲು
ಅಶೋಕ ದೃಢ ಸಂಕಲ್ಪಗೈದಿದ್ದ.
ಹಳೆಯ ಎಲ್ಲಾ ಭೂತಕಾಲದ ಘಟನೆಗಳನ್ನು, ಅನಿಸಿಕೆ, ಅನುಭವಗಳನ್ನು ಅಳಿಸಿ, ತನ್ನ ಮನಸ್ಸನ್ನು ಶುಭ್ರ, ನಿಷ್ಕಳಂಕವನ್ನಾಗಿಸಿದ್ದ.
ಜೀವನವನ್ನು ಪುನಃ ಆರಂಭಿಸಿ, ತಾನೇ ಹೊಸದಾಗಿ ಬರೆಯಲು ಹಾಳೆಯನ್ನು ಖಾಲಿಮಾಡಿದ್ದ.
ಆ ಖಾಲಿ ಹಾಳೆ ಅದನ್ನು ಸಾರುತ್ತಿತ್ತು.)
ವಿಜಯ್.ಸಿ.ವಿ
ರೇಡಿಯೋ ಸಿದ್ಧಾರ್ಥ
ಕಾರ್ಯಕ್ರಮ ಸಹಾಯಕರು
ಎಸ್.ಎಸ್.ಐ.ಟಿ ಆವರಣ, ಮರಳೂರು
ತುಮಕೂರು-572105
+91-9448914866