ಕಿರುತೆರೆ

ಕಳಸದ ಕಲಾವಿದನ ಸೆಳೆಯುವ ಅಭಿನಯ

-ಚಿನ್ಮಯ.ಎಂ.ರಾವ್,ಹೊನಗೋಡು

ಸರಿಸುಮಾರು ೨೩ ವರ್ಷಗಳ ಹಿಂದೆ ನಡೆದ ಘಟನೆ ಇದು. ಚಿಕ್ಕಮಂಗಳೂರು ಜಿಲ್ಲೆಯ ಕಳಸ ಎಂಬ ಊರು. ಆ ಊರಿನ ಗೆಳೆಯರೆಲ್ಲಾ ಸೇರಿ ಆ ವರ್ಷದ ದುರ್ಗಾ ಪೆಂಡಾಲ್‌ನಲ್ಲಿ ನಡೆಯುವ ನಾಟಕದಲ್ಲಿ ನೀವು ಅಭಿನುಸಲೇಬೇಕೆಂದು ಇವರನ್ನು ದುಂಬಾಲು ಬಿದ್ದರು. ಸರಿ..ಒತ್ತಡಕ್ಕೆ ಮಣಿದ ಇವರು ದ್ವಂದ್ವಾರ್ಥದ ಪದಗಳನ್ನೆಲ್ಲಾ ಕಿತ್ತು ಹಾಕಿ ಸಂಭಾಷಣೆಯನ್ನು ಸುಂದರಗೊಳಿಸಿ ತಾವೇ ನಿರ್ದೇಶನ ಮಾಡಿ ಅಭಿನುಸಿದರು. ಪ್ರದರ್ಶನ ಯಶಸ್ವಿಯೂ ಆತು. ಅಂದು ಇವರನ್ನು ಕೈಹಿಡಿದು ರಂಗಭೂಮಿಗೆ ಕರೆತಂದ ಕಲಾದೇವಿ ಇಂದಿಗೂ ಕೈ ಬಿಡಲಿಲ್ಲ. ಅಂದು ಅಭಿನಂದನೆಯ ಸುರಿಮಳೆಯಾತೆಂದು ಇಂದಿಗೂ ಇವರು ನೆನೆಯುತ್ತಾರೆ. ಇಂದಿನ ಈ ಅಭಿನಯಕ್ಕೆ ಅಂದಿನ ಆಕಸ್ಮಿಕ ರಂಗಪ್ರವೇಶವೇ ಅಡಿಪಾಯ.ಅಂದು ಇಂದು ಮುಂದೆಂದಿನ ಅಭಿನಯಕ್ಕೆ ಅನ್ನಪೂರ್ಣೆ,ತಾಯಿ ಹಾಗು ಸದ್ಗುರುವಿನ ಅನುಗ್ರಹವೇ ಕಾರಣ ಎನ್ನುವ ಅವರ ಪ್ರತಿಯೊಂದು ಮಾತಿನಲ್ಲೂ…ಕೇವಲ ಮಾತಿನಲ್ಲಿ ಮಾತ್ರವಲ್ಲ ಆತ್ಮಪೂರ್ವಕವಾಗಿ ಅಂತರಾಳದಿಂದ ಸಹಜ ಆಧ್ಯಾತ್ಮಿಕತೆಯ ಭಾವದ ಕಿರಣವೊಂದು ನಮ್ಮೆಡೆ ಇಣುಕುತ್ತದೆ. ತೆರೆಯ ಮೇಲೂ ಕೂಡ ಇವರಿಗೆ ಅಂತದೇ ಅಂತಃಕರಣವಿರುವ ವ್ಯಕ್ತಿಯ ಪಾತ್ರ ಸಿಗುತ್ತಿದೆ ಎಂಬುದೇ ಆಶ್ಚರ್ಯ.

RAAJGOPAL-2ಜವಾಬ್ದಾರಿಯುತ ತಂದೆಯ ಪಾತ್ರಗಳನ್ನು ಮಾಡಿ ಸಮಾಜದಲ್ಲಿ ಮಾದರಿ ತಂದೆಯಾಗುತ್ತಿದ್ದಾರೆ. ಅಭಿನಯದಲ್ಲಿ ಮುಂದೆ ಮುಂದೆ ಸಾಗುತ್ತಾ ನಟನೆಯಲ್ಲೂ ಮಾದರಿಯಾಗುತ್ತಿದ್ದಾರೆ. ಕಲೆಯಲ್ಲಿ ಹೊಂದಬಹುದಾದ ಆನಂದ ಆತ್ಮತೃಪ್ತಿ ಹಣದಲ್ಲಿ ಸಿಗುವುದಿಲ್ಲ ಎಂಬ ಸತ್ಯವನ್ನರಿತು ಹುಟ್ಟು ಶ್ರೀಮಂತಿಕೆಯನ್ನು ಬಿಟ್ಟು ಕಲಾಜೀವನದತ್ತ ಮುಖಮಾಡಿ ಕಲಾವಿದರಾಗಿದ್ದಾರೆ. ಇವರು ಯಾರು ಬಲ್ಲಿರೇನು?
ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಪ್ರೀತಿಂಯಿಂದ” ಧಾರವಾಹಿಯಲ್ಲಿ ನೀಲ-ಪಚ್ಚೆ ಎಂಬ ಹೆಣ್ಣುಮಕ್ಕಳನ್ನು ತನ್ನೆರಡು ಕಣ್ಣುಗಳಂತೆ ಕಾಪಾಡುತ್ತಿರುವ ಅಪ್ಪಯ್ಯ-ಮಾವಯ್ಯ ಕೃಷ್ಣಪ್ರಸಾದ್…ಕಳಸದ ಜಿ.ರಾಜಗೋಪಾಲ್ ಜೋಶಿ.

Related Articles

ಹದಿನೈದು ವರುಷಗಳ ಹಿಂದೆ ಐ.ಟಿ.ಐ ಆನಂದ್ ನಿರ್ದೇಶನದ ನಾಲ್ಕು ಟೆಲಿಚಿತ್ರಗಳಲ್ಲಿ ಅಭಿನಯಿಸಿದ್ದೇ ಮೊದಲ ಅನುಭವ. ನಂತರ ಹಿಂದಿರುಗಿ ನೋಡದ ಇವರು ಕಲಾಪ್ರಪಂಚದ ಆಜೀವ ಸದಸ್ಯತ್ವ ಪಡೆದೇ ಬಿಟ್ಟರು. ನಟನೆ ಜೀವನದ ಅವಿಭಾಜ್ಯ ಅಂಗವಾಯಿತು.

ಇನ್ನು ಇಂತಹ ಸಜ್ಜನ ಸರಳ ವ್ಯಕ್ತಿಗಳನ್ನೇ ಹುಡುಕುವ ನಿರ್ದೇಶಕ ಅಶೋಕ್ ಕಶ್ಯಪ್ ಇವರನ್ನು ಸುಮ್ಮನೆ ಬಿಡುವರೆ? ಕನ್ನಡದ ಬಾನಂಗಳಕ್ಕೆ ಹೊಸಹೊಸ ತಾರೆಗಳನ್ನು ತಂದುಬಿಡುವ ಅಶೋಕ್ ಇವರನ್ನೂ ತಾರಾಸಮೂಹಕ್ಕೆ ಸೇರಿಸಿದ್ದಾರೆ. ಆದರ್ಶವ್ಯಕ್ತಿಗೆ ಆದರ್ಶವ್ಯಕ್ತಿಯ ಪಾತ್ರಗಳನ್ನೇ ತಮ್ಮ ಧಾರವಾಹಿಗಳಲ್ಲಿ ನೀಡುತ್ತಾ ಬಂದಿದ್ದಾರೆ. “ಸೀತೆಯಿಂದ” ಕಿರುತೆರೆಗೆ ಪಾದಾರ್ಪಣೆ ಮಾಡಿದ ಇವರು, “ನಂದಗೋಕುಲ”ದಲ್ಲಿ ಮಕ್ಕಳಿಗೆ ಶಿಸ್ತಿನ ಪಾಠ ಹೇಳುವ ತಂದೆ. ಅಪ್ಪನನ್ನು ಕಳೆದುಕೊಂಡ ಎಷ್ಟೊಂದು ಮಂದಿಗೆ ಅಪ್ಪಾಜಿಯ ನೆನಪಿನ ಬುತ್ತಿಯನ್ನು ಮತ್ತೆ ಕಟ್ಟಿಕೊಟ್ಟಿದ್ದಾರೆ.

“ಹೆಳವನ ಕಟ್ಟೆ ಗಿರಿಯಮ್ಮ”ನ ತಂದೆಯಾಗಿ ಮಿಂಚಿದ್ದಾರೆ. ಮಾಯವಾಗದೇ ಮತ್ತೀಗ ಪ್ರತ್ಯಕ್ಷರಾಗಿದ್ದಾರೆ. ಅದೂ ಅಪ್ಪಯ್ಯನಾಗಿ ಪ್ರೀತಿಯಿಂದ ಧಾರವಾಹಿಯಲ್ಲಿ. ಅಪ್ಪನೆಂದರೆ ಹೇಗಿರಬೇಕೆಂದು ಸಾರುತ್ತಿದ್ದಾರೆ. ತನ್ನ ಪಾತ್ರಗಳ ಮೂಲಕ ಸಮಾಜಕ್ಕೆ ಸದಾ ಒಳ್ಳೆಯ ಸಂದೇಶವನ್ನು ನೀಡುತ್ತಿರಬೇಕೆನ್ನುವ ಜೋಶಿ “ಮಾಂಗಲ್ಯ”ಧಾರವಾಹಿಯಲ್ಲಿ ನೆಗೆಟಿವ್ ಪಾತ್ರವೊಂದನ್ನು ಅನಿವಾರ್ಯವಾಗಿ ಮಾಡಿ ವ್ಯಥೆಪಟ್ಟು ಕೂಡಲೆ ಅದರಿಂದ ಹೊರಬಂದಿದ್ದಾರೆ. ಹಾಗಾದರೆ ನೆಗೆಟಿವ್ ಪಾತ್ರಗಳನ್ನು ಯಾರಾದರೂ ಮಾಡಲೇಬೆಕಲ್ಲವೆ? ಅದೂ ಒಂದು ಸವಾಲಲ್ಲವೆ?ಎಂಬ ಪ್ರೆಶ್ನೆಗೆ ಥಟ್ಟನೆ ಉತ್ತರಿಸುವ ಜೋಶಿ,ಹೌದು ಒಬ್ಬ ಕಲಾವಿದ ಎಲ್ಲಾ ರೀತಿಯ ಪಾತ್ರಗಳನ್ನು ಸವಾಲಾಗಿ ಸ್ವೀಕರಿಸಿ ಮಾಡಬೇಕು,ಹಾಗಾಗಿ ನಾನೂ ನೆಗೆಟಿವ್ ರೋಲ್ ಅನ್ನೂ ಮಾಡಬಲ್ಲೆ ಎಂಬುದನ್ನು ಒಮ್ಮೆ ತೋರಿಸಿದ್ದೇನೆ. ಆದರೆ ಅದನ್ನೇ ಮತ್ತೆ ಮತ್ತೆ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ. ಮೂಲತಃ ನನ್ನ ಸ್ವಭಾವಕ್ಕೂ ಅಂತಹ ಪಾತ್ರಗಳಿಗೂ ಹೊಂದಿಕೆ ಬರುವುದಿಲ್ಲ.ಒಬ್ಬ ಕಲಾವಿದನಿಗೆ ತನ್ನ ಸ್ವಭಾವಕ್ಕೆ ಸರಿಹೊಂದುವ ಪಾತ್ರ ಸಿಕ್ಕಾಗ ಪರಕಾಯಪ್ರವೇಶದ ಅಗತ್ಯವೇ ಇರುವುದಿಲ್ಲ, ಪರಪಾತ್ರಪ್ರವೇಶ ಸಾಕಷ್ಟೇ ಎನ್ನುತ್ತಾರೆ. ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡುವುದಕ್ಕಿಂತ ಒಳ್ಳೆಯದನ್ನೇ ಮಾಡಿ ಸರಿದಾರಿಗೆ ತರುವ ಪ್ರಯತ್ನ ಭಾರತೀಶ್ ನಿರ್ದೇಶನದ ಹೆಳವನ ಕಟ್ಟೆ ಗಿರಿಯಮ್ಮದಲ್ಲಿದೆ. ಅದು ಸಮಾಜಕ್ಕೆ ಆರೋಗ್ಯಕರ ಚಿಂತನೆಯನ್ನೂ ನೀಡುತ್ತದೆ ಎನ್ನುವ ಜೋಶಿ ಅವರ ಪ್ರತಿ ಮಾತಿನಲ್ಲೂ ದಾರ್ಶನಿಕತೆ ಎದ್ದು ಕಾಣುತ್ತದೆ.

“ನಂದಗೋಕುಲ”ದಲ್ಲಿ ತಮ್ಮನ್ನು ಹೆಚ್ಚು ಮಾಗಿಸಿಕೊಂಡಿದ್ದ ಜೋಶಿ ಆ ಧಾರವಾಹಿಯ ಸೆಟ್‌ನಲ್ಲಿ ವಿನಯ ಪ್ರಸಾದ್ ಮಾರ್ಗದರ್ಶನ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ದೃಶ್ಯವೊಂದರ ಚಿತ್ರೀಕರಣದಲ್ಲಿ ನಾನು ಮಾತ್ರ ಚೆನ್ನಾಗಿ ನಟಿಸಬೇಕೆಂದುಕೊಳ್ಳದೆ ನಾವು..ನಾವೆಲ್ಲಾ ಚೆನ್ನಾಗಿ ನಟಿಸಬೇಕೆಂದುಕೊಂಡರೆ ಫಲಿತಾಂಶ ಅತ್ಯುತ್ತಮವಾಗಿರುತ್ತದೆ ಎನ್ನುವುದು ಜೋಶಿ ಅವರ ಅಭಿಪ್ರಾಯ.

RAAJGOPAL-1ಪ್ರೀತಿಯಿಂದ ಧಾರವಾಹಿಯನ್ನು ನಿರ್ಮಿಸಿ ನಿರ್ದೇಶಿಸುವ ಕನಸು ಹೊತ್ತಿದ್ದ ಅಶೋಕ್ ಕಶ್ಯಪ್ ಅದೊಂದು ದಿನ ಇವರನ್ನು ಕರೆದು, “ಕರ್ನಾಟಕದಲ್ಲಿ ಈ ಪಾತ್ರವನ್ನು ಡಾ.ರಾಜ್‌ಕುಮಾರ್ ಅವರಂತೆ ಮಾಡಿಕೊಡುವ ವ್ಯಕ್ತಿಗಾಗಿ ಹುಡುಕಾಟದಲ್ಲಿದ್ದೇನೆ..ನೀವೇ ಏಕೆ ಈ ಪಾತ್ರವನ್ನು ಮಾಡಬಾರದು?” ಎಂದಾಗ ತಾನು ಇಷ್ಟು ಕಾಲ ಅಭಿನಯಿಸಿದ್ದು ಸಾರ್ಥಕವಾಯಿತೆಂದು ಅನಿಸಿತಂತೆ ಜೋಶಿ ಅವರಿಗೆ. ಆದರೆ ರಾಜಣ್ಣನನ್ನು ನೆನಪಿಸಿಕೊಂಡು ಸ್ಪೂರ್ತಿಯಿದ ಆ ಮಟ್ಟದಲ್ಲಿ ಅಭಿನಯಿಸುವ ಪ್ರಯತ್ನ ಮಾಡುತ್ತಿದ್ದೇನೆ, ತಾನಿನ್ನೂ ಶೂನ್ಯ, ಕಲಿಯುವುದು ಬೆಟ್ಟದ್ಟದೆ ಎನ್ನುವಾಗ ಜೋಶಿ ಅವರ ನಮ್ರತೆ ಅನುಕರಣೀಯ ಎನಿಸುತ್ತದೆ.

ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಶಿ ಅವರ ಪ್ರೀತಿಯ ಕಿರಿಯ ತಮ್ಮ ರಾಜಗೋಪಾಲ ಜೋಶಿ ಅವರಿಗೆ ಧಾರ್ಮಿಕತೆ ಎಂಬುದು ಜನ್ಮತಃ ಬಂದಿದೆ. ಪ್ರವೃತ್ತಿಯಾಗಿದ್ದ ನಟನೆಯೇ ಈಗ ವೃತ್ತಿಯಾಗಿದೆ. ಈ ವೃತ್ತಿಯಿಂದ ನಿವೃತ್ತರಾಗದೆ ಚಿರಕಾಲ ಪ್ರೇಕ್ಷಕರ ಮನದಲ್ಲಿ ನೆಲೆಸಲಿ ಎಂಬುದೇ ಕೋಟ್ಯಾಂತರ ಕನ್ನಡಿಗರ ಆಶಯ.

-ಲೇಖನ-ಚಿನ್ಮಯ.ಎಂ.ರಾವ್,ಹೊನಗೋಡು [೪-೪-೨೦೧೧]

 

Back to top button

Adblock Detected

Please consider supporting us by disabling your ad blocker