-ಜೀವೊತ್ತಮ ಎಚ್ ರಾವ್,ಮೈಸೂರು
ಭಗವಂತನ ಅವತಾರದ ಉದ್ದೇಶ ದುಷ್ಟರನ್ನು ಸಂಹಾರಮಾಡುವುದು ಶಿಷ್ಟರನ್ನು ರಕ್ಷಣೆಮಾಡುವುದು. ನಮ್ಮಲ್ಲಿರುವಂತಹ ಕೆಟ್ಟಗುಣಗಳನ್ನು ಅಳಿಸುವುದು ಹಾಗು ಒಳ್ಳೆಯಗುಣಗಳನ್ನು ದಯಪಾಲಿಸುವುದು. ಅನುಗ್ರಹದ ಮಳೆಗರೆದು ನಮ್ಮನ್ನು ಅಪೂರ್ಣಾವಸ್ತೆಯಿಂದ ಕ್ರಮವಾಗಿ ಪೂರ್ಣಾವಸ್ಥೆಗೆ ಕೊಂಡುಹೊಯ್ಯುವುದು. ವೇದಗಳ ಪ್ರಯೋಜನವೂ ಅದೇ ಆಗಿದೆ. ವೇದಗಳಿಗೆ ಭಾಷ್ಯವನ್ನು ಬರೆದ ಸಾಯಣಚಾರಯರು ವೇದಗಳ ಪ್ರಯೋಜನವನ್ನು ಹೇಳುವಾಗ ”ಇಷ್ಟಪ್ರಕಾರಕ ಅನಿಷ್ಟನಿವಾರಕ’” ಎಂಬ ಶಬ್ದಗಳನ್ನು ಬಳಸಿದ್ದಾರೆ. ಇಷ್ಟ ಅಂದರೆ ಬಯಕೆ ಎಂದಲ್ಲ ಒಳ್ಳೆಯದ್ದು ಎಂದು. ಅನಿಷ್ಟಎಂದರೆ ಬೇಡವಾದದ್ದು ಎಂದು. ನಮಗೆ ಬೇಕಾದದ್ದು ಯಾವುದು? ಬೇಡವಾದದ್ದು ಯಾವುದು? ಎಂದು ನಮಗೆ ತಿಳಿದಿರುವುದಿಲ್ಲ. ಅದನ್ನು ವಿಧಿಸುವುದೇ ವೇದಗಳು. ಸತ್ಯ, ಅಹಿಂಸೆ, ನಿಸ್ವಾರ್ಥ, ಶುಚಿ, ಸಂತೋಷ ಇಂದ್ರಿಯನಿಗ್ರಹ ಇತ್ಯಾದಿಗಳು ಇಷ್ಟಗಳು ಹಾಗು ಅಸತ್ಯ, ಹಿಂಸೆ, ದುಃಖ, ಸ್ವಾರ್ಥ, ಸ್ವೇಚ್ಚಾಚಾರ ಇತ್ಯಾದಿಗಳು ಅನಿಷ್ಟಗಳಾಗಿವೆ. ಅನಿಷ್ಟವೆಂದರೆ ಪಾಪ ,ವಿಶಾದ, ದುಃಖ, ಅಪಕಾರ ಎಂಬ ಅರ್ಥವನ್ನು ಕೋಶದಲ್ಲಿ ಹೇಳಿದ್ದಾರೆ. ಕೆಟ್ಟ ಹವ್ಯಾಸಗಳನ್ನು ಕೆಟ್ಟಮನೋಭಾವನೆಗಳನ್ನು,ಕೆಟ್ಟವಿಚಾರಗಳನ್ನು ಬಿಡುವುದು ಸುಲಭದ ಕೆಲಸವಲ್ಲ. ಅದಕ್ಕೆಂದು ಒಂದು ಆಂತರಿಕ ಯುದ್ಧವೇ ನಡೆಯಬೇಕಾಗುತ್ತದೆ.
ಧರ್ಮ ಅಧರ್ಮಗಳ ಮಧ್ಯೆ ಯದ್ಧವಾದರೆ ಯಾವುದು ಗೆಲ್ಲುತ್ತದೆ? ಸಜ್ಜನರ ಹಾಗು ದುರ್ಜನರನಡುವೆ ಸಂಘರ್ಷವಾದರೆ ಯಾರುಗೆಲ್ಲುತ್ತರೆ? ಎಂಬ ಪ್ರೆಶ್ನೆಗೆ ನರಸಿಂಹಾವಾತಾರದಲ್ಲಿ ಉತ್ತರವಿದೆ. ಪ್ರಹ್ಲಾದನು ಧರ್ಮ, ಭಕ್ತಿ, ಶಾಂತಿ, ಪ್ರೇಮ, ಸತ್ಯದ ಸಂಕೇತವಾದರೆ, ಹಿರಣ್ಯಕಶ್ಪುವು ಅಧರ್ಮ, ದೌರ್ಜನ್ಯ, ದಬ್ಬಾಳಿಕೆ, ಕ್ರೋಧ, ಅಹಂಕಾರದ ಸಂಕೇತವಾಗಿದ್ದಾನೆ.
ತಾಯಿ ಕಯಾದುವಿನ ಗರ್ಭದಲ್ಲಿರುವಗಲೇ ನಾರದಮುನಿಗಳು ಪ್ರಹ್ಲಾದನಿಗೆ ವಿಷ್ಣುವಿನ ಮಹಿಮೆಯನ್ನು ಭಕ್ತಿಯ ಗರಿಮೆಯನ್ನು ಉಪದೇಶಮಾಡುತ್ತಾರೆ. ಹಾಗಾಗಿ ಪ್ರಹ್ಲಾದನು ಜನ್ಮದಿಂದಲೇ ತನ್ನನ್ನು ತಾನು ಮಹಾವಿಷ್ಣುವಿಗೆ ಸಮರ್ಪಿಸಿಕೊಂಡು ವಿಷ್ಣುಭಕ್ತನಾಗುತ್ತಾನೆ. ಬ್ರಹ್ಮನಿಂದ ವಿಚಿತ್ರವರವನ್ನು ಪಡೆದ ಹಿರಣ್ಯಕಶ್ಪುವು ತಾನು ಅಮರನೆಂದು ಪಾಪಪುಣ್ಯಗಳ ಭಾವನೆಯಿಲ್ಲದೆ ಮನಸ್ಸಿಗೆ ಬಂದಹಾಗೆ ದೌರ್ಜನ್ಯವನ್ನು ಮಾಡುತ್ತಿರುತ್ತಾನೆ. ಹಿರಣ್ಯಕಶ್ಪುವು ವಿಷ್ಣುವಿನ ಬದ್ಧವೈರಿ. ಮಗನಾದ ಪ್ರಹ್ಲಾದನಲ್ಲಿ ವಿಷ್ಣುಭಕ್ತಿಯನ್ನು ಕಂಡು ಅವನನ್ನು ಚಿತ್ರ ವಿಚಿತ್ರವಾಗಿ ಹಿಂಸಿಸುತ್ತಾನೆ. ಸಾಮ, ದಾನ, ಬೇಧ, ದಂಡಗಳಾವೂ ನಡಯದೆ ಇದ್ದಾಗ ಅವನನ್ನು ಕೊಲ್ಲಲು ಆಜ್ಞೆಮಾಡುತ್ತಾನೆ. ಅದೂ ವಿಫಲವಾದಾಗ ತಾನೆ ಮಗನನ್ನು ಕೊಲ್ಲಲು ಮುಂದಾಗುತ್ತಾನೆ. ಅವನು ಗದಾಪ್ರಹಾರಮಾಡುವ ವೇಳೆಯಲ್ಲಿ ಪ್ರಹ್ಲಾದನು ವಿಷ್ಣುವನ್ನು ಭಜಿಸುತ್ತಾನೆ. ವಿಷ್ಣುವನ್ನೇ ಮೊದಲುಕೊಂದು ನಂತರ ನಿನ್ನನ್ನು ಕೊಲ್ಲುತ್ತೇನೆ ಎಲ್ಲಿದ್ದಾನೆ ನಿನ್ನ ವಿಷ್ಣು ತೋರಿಸು ಎಂದು ಕೇಳುತ್ತಾನೆ. ವಿಷ್ಣು ಎಂದರೆ ವ್ಯಾಪಕನಾದವನೆಂದು ಅರ್ಥ. ಇಡೀ ಪ್ರಪಂಚವನ್ನೇ ವ್ಯಾಪಿಸಿದ ವಿಷ್ಣು ಎಲ್ಲೆಲ್ಲೂ ಇದ್ದಾನೆ ಎಂದು ಪ್ರಹ್ಲಾದನು ಹೇಳುತ್ತಾನೆ. ಎಲ್ಲೆಲ್ಲೂ ಇದ್ದಾನೆಂದಮೇಲೆ ಎದುರಿಗಿದ್ದ ಈ ಕಂಬದಲ್ಲೂ ಇದ್ದಾನೆಯೆ ? ಎಂದು ಕೇಳಿದಾಗ, ಹೌದು ಎಲ್ಲಾಕಂಬಗಳಲ್ಲೂ ಇದ್ದಾನೆ ಎನ್ನುತ್ತಾನೆ ಪ್ರಹ್ಲಾದ . ಹಿರಣ್ಯಕಶ್ಪುವು ತನ್ನಬಲವಾದ ಹೊಡೆತಗಳಿಂದ ಕಂಬವನ್ನು ಛಿದ್ರಛಿದ್ರಮಾಡುತ್ತಾನೆ. ಆ ಕ್ಷಣದಲ್ಲಿಯೇ ಕಂಬದಿಂದ ಗರ್ಜಿಸುತ್ತಾ ನರಸಿಂಹರೂಪದಲ್ಲಿ ಅವತಾರವೆತ್ತಿದ ವಿಷ್ಣುವು ದುಷ್ಟನಾದ ಹಿರಣ್ಯಕಶ್ಪುವನ್ನುಕೊಂದು ಪ್ರಹ್ಲಾದನಿಗೆ ಅಭಯದ ಆಶಿರ್ವಾದವನ್ನು ನೀಡುತ್ತಾನೆ. ಅರ್ಧದೇಹ ಮನುಷ್ಯನಂತೆ ಮತ್ತು ಇನ್ನರ್ಧಭಾಗ ಸಿಂಹರೂಪದಲ್ಲಿರುವುದರಿಂದ ನರಸಿಂಹ ಎಂಬ ಹೆಸರು ಬಂದಿದೆ. ಇದು ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೆಯ ಅವತಾರ ವಾಗಿದೆ.
ನಾವುಯಾವ ರೂಪದಲ್ಲಿ ಭಗವಂತನನ್ನು ಕರೆಯುತ್ತೇವೆಯೋ ಅದೇರೂಪದಲ್ಲಿ ಭಗವಂತನು ಕಾಣಿಸಿಕೋಳ್ಳುತ್ತಾನೆ. ಮನುಷ್ಯನಲ್ಲದ ಪ್ರಾಣಿಯೂ ಅಲ್ಲದ ರೂಪದಲ್ಲಿ ಬರಲೆಂದು ಹಿರಣ್ಯಕಶ್ಪುವು ಪರೋಕ್ಷವಾಗಿ ವರವನ್ನು ಕೇಳಿದ್ದನು. ಅದಕ್ಕನುಗುಣವಾಗಿ ಭಗವಂತನು ನೃಸಿಂಹ ರೂಪದಲ್ಲಿ ಬಂದು ಅವನ್ನು ಈ ಸಂಸಾರದಿಂದ ದೂರಮಾಡಿದನು.
ಇಲ್ಲಿ ನಮ್ಮಲ್ಲಿರುವಂತಹ ಅನಿಷ್ಟ ಮನೋಭಾವನೆಗಳನ್ನೇ, ಕೆಟ್ಟ ವಿಚಾರಗಳನ್ನೇ ಹಿರಣ್ಯಕಶ್ಪುವೆಂದು ಹಾಗು ಸದ್ಗುಣಗಳನ್ನು ಪ್ರಹ್ಲಾದನೆಂದು ಹೇಳಲಾಗಿದೆ. ಭಗವಂತನು ಕೆಟ್ಟವಿಚಾರಗಳನ್ನು ದೂರ ಮಾಡುವವನಾಗಿದ್ದಾನೆ. ಭಗವಂತನ ನಾಮ ಸ್ಮರಣೆಯಿಂದ ಬೇಡದ್ದು ದೂರವಾಗಿ ಅವಶ್ಯವಾದದ್ದು ನಮ್ಮಮನದಲ್ಲಿ ಸ್ಥಿರವಾಗಿ ನಿಲ್ಲುತ್ತದೆ.
ಭಗವಂತನು ದೇಶ ಕಾಲ ಸಮಯವನ್ನು ಮೀರಿದವನಾಗಿದ್ದಾನೆ. ಅವನು ವರ್ಣಾಶ್ರಮಾದಿ ಜಾತಿ ಕುಲ ಗೋತ್ರಗಳನ್ನೂ ಮೀರಿದವನಾಗಿದ್ದಾನೆ. ನಿರತಿಶಯ ಆನಂದಸ್ವರೂಪದವಾಗಿದ್ದಾನೆ. ಶಂಕರಾಚಾರ್ಯರು ವಿವೇಕಚೂಡಾಮಣಿಯಲ್ಲಿ ”ಮೊಕ್ಷಸಾಧನ ಸಾಮಗ್ರಿಗಳಲ್ಲಿ ಭಕ್ತಿಯೇ ಹೆಚ್ಚಿನದ್ದಾಗಿದೆ, ಮನುಷ್ಯನು ತನ್ನನ್ನು ತಾನು ಅರಿಯುವ ಸಾಧನವಾಗಿದೆ” ಎಂದು ಹೇಳಿದ್ದಾರೆ. ಶುದ್ಧನಿರ್ಮಲಭಕ್ತಿಯೇ ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣವಾಗಿರುತ್ತದೆ. ರಾಕ್ಷಸಕುಲದಲ್ಲಿ ಹುಟ್ಟಿದರೂ ಪ್ರಹ್ಲಾದನು ಸತ್ಸಂಗದಿಂದ, ಭಕ್ತಿಯಿಂದ ಭಗವಂತನನ್ನು ಪಡೆದಿದ್ದಾನೆಂಬ ಆದರ್ಶವನ್ನುಈ ಪುರಾಣಕಥೆಯು ನಮಗೆ ತಿಳಿಸುತ್ತದೆ. ಸರ್ವವ್ಯಾಪಿಯಾದ ಪರಮಾತ್ಮನು ಭಕ್ತರನ್ನು ರಕ್ಷಿಸಲು ಎಂಥಹ ಸಂದರ್ಬದಲ್ಲಾದರೂ ಅವತರಿಸುತ್ತಾನೆಂದು ತಿಳಿಸುತ್ತದೆ. ನೃಸಿಂಹನನ್ನು ನೆನೆಯುವುದರಿಂದ ಪಾಪವೆಲ್ಲವೂ ಪರಿಹಾರವಾಗುತ್ತದೆ. ಮನಸ್ಸಿನ ಉದ್ವೇಗ ಚಂಚಲತೆಗಳು ನಿವಾರಣೆಯಾಗಿ ಶಾಂತತೆಯು ಉಂಟಾಗುತ್ತದೆ . ಭಗವಂತನ ಧ್ಯಾನದಿಂದ ಅನಿಷ್ಟವು ದೂರವಾಗಿ ಇಷ್ಟವು ಪ್ರಾಪ್ತವಾಗುತ್ತದೆ.
ಜೀವೊತ್ತಮ ಎಚ್ ರಾವ್,ಮೈಸೂರು