-ಚಿನ್ಮಯ ಎಂ.ರಾವ್ ಹೊನಗೋಡು
ನೀನು ಒಂದು ಹೆಜ್ಜೆ ಮುಂದಿಡಲು ಬಯಸಿದರೆ
ನಾನು ನಿನ್ನನ್ನು ಹತ್ತು ಹೆಜ್ಜೆ ಮುನ್ನಡೆಸುವೆ
ಅದೇ ನಾನು ಒಂದು ಹೆಜ್ಜೆ ಮುಂದಿಡಲು ಮುಂದಾದರೆ
ಅದೇ ನೀನು ನೂರು ಹೆಜ್ಜೆ ನನ್ನನ್ನು ಹಿಂದಾಗಿಸಲು
ಮುಂದಾಗುವೆಯಲ್ಲ..ಇದು ಯಾವ ಸೀಮೆಯ ನ್ಯಾಯ?
ನೀನು ಸಹಾಯವನ್ನು ಕೇಳಿದಾಗ
ನಾನು ಅಸಹಾಯಕನಾಗುವುದಿಲ್ಲ
ಅದೇ ನಾನು ಏನನ್ನೋ ಹೇಳುವಾಗ
ನನ್ನ ಭಾವನೆಗಳನ್ನು ಸಾವಕಾಶವಾಗಿ ಕೇಳುವಷ್ಟೂ
ನೀನು ನನಗೆ ಸಹಾಯ ಮಾಡುವುದಿಲ್ಲ
ಆಗ ನಾನು ನಿನಗೆ ಏನನ್ನು ಹೇಳಲೂ ಅಸಹಾಯಕ
ಸಹಾಯಕ್ಕೆ ಪ್ರತಿಯಾಗಿ ನಾಟಕೀಯವಾಗಿ
ಅಸಹಾಯಕತೆಯನ್ನು ಪ್ರದರ್ಶಿಸುವೆಯಲ್ಲ
ಇದು ಯಾವ ರೀತಿಯ ಅನ್ಯಾಯ?
ನಿನ್ನನ್ನು ಸಂಕಷ್ಟದಿಂದ ಬಿಡಿಸಲು ಬಿಡುಗಡೆಗೊಳಿಸಲು
ನನ್ನ ತನ ನನ್ನನ್ನು ಸುಮ್ಮನಿರಲು ಬಿಡುವುದಿಲ್ಲ
ಅದೇ ನೀನು ಬಿಡುಗಡೆಯಾಗಿ
ಸುಖದ ಬೀಡಿಗೆ ಬಂದ ನಂತರ
ನನ್ನೆಡೆ ತಿರುಗಿ ನೋಡಲೂ ಬಿಡುವೇ ಇಲ್ಲ ಎನ್ನುವೆಯಲ್ಲ..
ನೀನು ಬಿಡುವಿರದ ಮಹಾನ್ ವ್ಯಕ್ತಿಯಾದೆಯಲ್ಲಾ?
ಇದು ಯಾವ ಪರಿಯ ಧ್ಯೇಯ?
ಜೀವನಪೂರ್ತಿ ಕಂಡವರ ಸೇವೆಗಾಗಿ
ಬಿಡುವು ಮಾಡಿಕೊಳ್ಳುವುದೇ ನನ್ನ ಧ್ಯೇಯ?!
ನೀನು ನಕ್ಕಾಕ್ಷಣ ನಾನೂ ನಕ್ಕು ಬಿಡುವ
ನೀನು ಅತ್ತಾಕ್ಷಣ ನಾನೂ ಅತ್ತುಬಿಡುವ
ನಾನು ಮಹಾಮೂರ್ಖನೆಂದು
ನನಗೆ ತಡವಾಗಿ ಅರಿವಾಗಿದೆ
ನಾನು ಅತ್ತಾಕ್ಷಣ ನೀನು ನಗುವಾಗ
ನಾನು ನಗುವಾಗ ನೀನು
ನಾನು ಅಳುವಂತೆ
ಹೇಗೆ ಮಾಡಬಹುದೆಂದು ಆಲೋಚಿಸುವಾಗ
ನಿನ್ನ ಅಳುವನ್ನು ಅಳಿಸಿ ನಗುವನ್ನು ಬೆಳೆಸುವ ನನಗೆ
ಅಳುವನ್ನು ಉಳಿಸಿ
ನನ್ನಲ್ಲಿ ನಗುವನ್ನು ಬೆಳೆಯದಂತೆ ನೋಡಿಕೊಂಡು
ನಿನ್ನ ಬೇಳೆಯನ್ನು ಬೇಯಿಸಿಕೊಳ್ಳುವೆಯಲ್ಲ
ಇದು ಯಾವ ಮಟ್ಟದ ಹೇಯ?
ನಿನ್ನ ಕಾಲದಲ್ಲಿ ನಾನು ಕಾಲ ಕಸ
ಕಾಲ ಮುಂದೊಮ್ಮೆ ನಿನ್ನನ್ನೂ ಕಸವಾಗಿಸಬಹುದು
ಆದರೂ ನನ್ನ ಕಾಲುಗಳು
ನಿನ್ನನ್ನು ಕಸವೆಂದು ಭಾವಿಸಿ ತುಳಿಯುವುದಿಲ್ಲ
ಅದೇ ನಾನು ಆಗ ನಿನಗೆ
ಮಾಡುವ..ಮಾಡಬಹುದಾದ ಸಹಾಯ !
ಚಿನ್ಮಯ ಎಂ.ರಾವ್ ಹೊನಗೋಡು
Thursday, June 7, 2012
************