ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ ಅಭಿನಯದ, ಆರ್ ಚಂದ್ರು ನಿರ್ದೇಶಿಸಿರುವ, ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ”ದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ
“ಕಬ್ಜ” ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಬಿಡುಗಡೆಯಾದ ಕ್ಷಣದಿಂದಲೇ ಟೀಸರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ವೀಕ್ಷಣೆಯಲ್ಲಿ ದಾಖಲೆ ನಿರ್ಮಿಸುತ್ತಿದೆ.
ಉಪೇಂದ್ರ ಸರ್ ಮುಂದೆ ನಿಂತು ಮಾತನಾಡುವುದಕ್ಕೆ ಭಯ ಆಗತ್ತೆ. ಅಂತಹ ಅದ್ಭುತ ನಟ ಅವರು. ಖ್ಯಾತ ನಟಿ ಶ್ರೀಯಾ ಶರಣ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆರ್ ಚಂದ್ರು ಮತ್ತು ತಂಡದ ಅದ್ಭುತ ಕೆಲಸ ಟೀಸರ್ ನಲ್ಲಿ ಕಾಣುತ್ತಿದೆ. “ಕಬ್ಜ” ಭರ್ಜರಿ ಯಶಸ್ಸು ಕಾಣಲಿ ಎಂದು ರಾಣಾ ದಗ್ಗುಬಾಟಿ ಹಾರೈಸಿದರು.
ನನಗೆ ಆರ್ ಚಂದ್ರು ಅವರು ಕಥೆ ಹೇಳಲು ಬಂದಾಗ, ಕಥೆ ಕೇಳಿ, ನಿಜವಾಗಿಯೂ ಈ ರೀತಿ ಮಾಡಲು ಆಗುವುದಾ? ಅಂತಾ ಕೇಳಿದ್ದೆ. ಚಿತ್ರೀಕರಣ ನಡೆಯುತ್ತಿರುವಾಗ ಚಂದ್ರು ಅವರ ಕಾರ್ಯ ವೈಖರಿ ನೋಡಿ ಆಶ್ಚರ್ಯವಾಯಿತು. ಈಗಂತೂ ಟೀಸರ್ ನೋಡಿ ಬಹಳ ಸಂತೋಷವಾಗಿದೆ. ಚಿತ್ರ ಬಿಡುಗಡೆಗೆ ನಾನು ಕಾತುರದಿಂದ ಕಾಯುತ್ತಿದ್ದೇನೆ. ಹೆಚ್ಚಿನ ಕ್ರೆಡಿಟ್ ಚಂದ್ರು ಅವರಿಗೆ ಸೇರಬೇಕು. ಶ್ರೀಯಾ ಅವರು ಅಭಿನಯ ಕೂಡ ಚೆನ್ನಾಗಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ರಾಣಾ ಅವರಿಗೆ ಧನ್ಯವಾದ ಎಂದರು ರಿಯಲ್ ಸ್ಟಾರ್ ಉಪೇಂದ್ರ.
ಈ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ನನಗೆ ಖುಷಿಯಾಗಿದೆ. ಅದರಲ್ಲೂ ಸೂಪರ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿಸಿರುವುದು ಹೆಚ್ಚಿನ ಸಂತೋಷ ತಂದಿದೆ. ತುಂಬಾ ಸಹೃದಯಿ, ಸರಳವ್ಯಕ್ತಿ ಅವರು. ಚಂದ್ರು ಸರ್ ಅವರ ನಿರ್ದೇಶನದ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನನ್ನ ಪಾತ್ರ ಕೂಡ ತುಂಬಾ ಚೆನ್ನಾಗಿದೆ ಎಂದ ನಾಯಕಿ ಶ್ರೀಯಾ ಶರಣ್, ಟೀಸರ್ ಬಿಡುಗಡೆ ಮಾಡಿದ ರಾಣಾ ಅವರಿಗೆ ಧನ್ಯವಾದ ತಿಳಿಸಿದರು.
“ಕಬ್ಜ” ನನ್ನ ಕನಸು. ಈ ಹಿಂದೆ “ತಾಜ್ ಮಹಲ್”, ” ಚಾರ್ ಮಿನಾರ್”, “ಮೈಲಾರಿ” ನಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದೇನೆ. ಆದರೆ ಇದು ಬೇರೆಯದೆ ತರಹದ ಸಿನಿಮಾ. “ಕಬ್ಜ” ಚಿತ್ರ ಉತ್ತಮವಾಗಿ ಮೂಡಿಬಂದಿದೆ ಅಂದರೆ ಅದು ನನ್ನೊಬ್ಬನಿಂದ ಅಲ್ಲ. ಇಡೀ ತಂಡದಿಂದ. ಅದರಲ್ಲೂ ಉಪೇಂದ್ರ ಸರ್ ಅವರ ಸಹಕಾರ ಅಪಾರ. ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರನ್ನು ನೆನಪಿಸಿಕೊಳ್ಳಬೇಕು. ನಾನು ಈ ರೀತಿಯ ಪಾತ್ರವಿದೆ ಅಂತ ಹೇಳಿದೆ. ಅವರು ಒಪ್ಪಿಕೊಂಡು ಅಭಿನಯಿಸಿದ್ದಾರೆ. ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಶ್ರೀಯಾ ಶರಣ್ ಅವರು ಈ ಚಿತ್ರದಲ್ಲಿ ಅಭಿನಯಿಸಿರುವುದು ಹೆಚ್ಚಿನ ಖುಷಿ ತಂದಿದೆ. ಟೀಸರ್ ಬಿಡುಗಡೆ ಮಾಡಿಕೊಡಲು ಕೇಳಿದಾಗ ಒಪ್ಪಿ ಬಂದು ಟೀಸರ್ ಬಿಡುಗಡೆ ಮಾಡಿಕೊಟ್ಟಿರುವುದಕ್ಕೆ ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ ಅವರಿಗೆ ಹಾಗೂ ಇಂದಿನ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಅತಿಥಿಗಳಿಗೆ
ತುಂಬು ಹೃದಯದ ಧನ್ಯವಾದ. ನಮ್ಮ”ಕಬ್ಜ” ಚಿತ್ರ ಏಳು ಭಾಷೆಗಳ ಚಿತ್ರವಲ್ಲ. ಒಟ್ಟು ಒಂಭತ್ತು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆ ಸೇರಿದಂತೆ ಅನೇಕ ವಿಷಯಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು.
ಕಲಾ ನಿರ್ದೇಶಕ ಶಿವಕುಮಾರ್, ಛಾಯಾಗ್ರಾಹಕ ಎ ಜೆ ಶೆಟ್ಟಿ ಸೇರಿದಂತೆ ಚಿತ್ರತಂಡದ ಸದಸ್ಯರು “ಕಬ್ಜ” ದ ಬಗ್ಗೆ ಮಾತನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಚಿತ್ರಕ್ಕೆ ಶುಭ ಕೋರಿದರು.