-ಚಿನ್ಮಯ ಎಂ. ರಾವ್ ಹೊನಗೋಡು
ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ ಎನ್ನುವ ಮಾತುಗಳು ಅತ್ತಿಂದಿತ್ತ ಹರಿದಾಡುತ್ತಿದ್ದರೂ ಬಿಡುಗಡೆಯಾಗುವ ಹೊಸ ಚಿತ್ರಗಳಿಗೇನು ಬರವಿಲ್ಲ. ಬರುತ್ತಿರುವ ಚಿತ್ರಗಳಿಗೆ ಥಿಯೇಟರ್ ಬರ ಅಷ್ಟೆ. ಒಂದೆರಡು ವಾರ ಓಡಿ ಸ್ಯಾಟಿಲೈಟ್ ರೈಟ್ಸ್‌ಗಳಿಂದ ಒಂದಷ್ಟು ಹಣ ಬಂದರೂ ಸಾಕು…ಸಣ್ಣ ಪುಟ್ಟ ಚಿತ್ರಗಳ ನಿರ್ಮಾಪಕರು ಸೇಫ್. ಪರಭಾಷಾ ಚಿತ್ರಗಳಿಗೆ ಹೋಲಿಸಿದರೆ ಕನ್ನಡದ್ದು ಸೀಮಿತ ಮಾರ್ಕೆಟ್ ಎನ್ನಬಹುದು. ಇಂತಹ ಪರಿಸ್ಥಿತಿಯಲ್ಲಿ ಮತಿಯಿಟ್ಟು ಇತಿಮಿತಿಯಿಂದ ಖರ್ಚು ಮಾಡಿದವನೇ ಇಲ್ಲಿ ಜಾಣ. ಇತಿಮಿತಿಯಿಂದ ಖರ್ಚು ಮಾಡುವುದೆಂದರೆ ಹೇಗೆ? ಗುಣಮಟ್ಟ ಕಳಪೆಯಾದರೆ?…ಅಗುವುದಿಲ್ಲ…ಅದಕ್ಕೊಂದು ಉಪಾಯ ಹುಡುಕಿದ್ದಾರೆ ಈ ಯುವ ನಿರ್ದೇಶಕ ಉಮೇಶ್. ಕನ್ನಡದ ಮಟ್ಟಿಗೆ ಇವರದ್ದು ಹೊಸ ಪ್ರಯೋಗ. ಯಾರೀತ ಉಮೇಶ್? ಯಾವ ಪ್ರಯೋಗ ಎನ್ನುವಿರಾ? ಬನ್ನಿ ಈ ಬಗ್ಗೆ ಒಂದಷ್ಟು ಮಾಹಿತಿ ಪಡೆಯೋಣ.
ಉಮೇಶ್ ಕಿರುಪರಿಚಯ….
ಅನಂತನಾಗ್-ಲಕ್ಷ್ಮಿ ಜೋಡಿಯ ಸೆಂಟಿಮೆಂಟಲ್ ಚಿತ್ರಗಳನ್ನು ನೋಡಿ ಭಾವುಕನಾಗುತ್ತಿದ್ದ ಉಮೇಶ್ ತಾನೂ ಒಬ್ಬ ನಟನಾಗಬೇಕೆಂದು ಹಟ ಹಿಡಿದಿದ್ದ. ಕಾಲೇಜ್ ಕ್ಯಾಂಪಸ್‌ನಲ್ಲಿ ಕಂಡ ಕನಸು ಟೈಮ್ ಪಾಸ್ ಆಯಿತೆ ವಿನಃ ಟೈಮ್ ಮುಂದೆ ಪಾಸ್ ಆದರೂ ಕಂಡ ಕನಸುಗಳು ಪಾಸ್ ಆಗದೆ ಫೇಲ್ ಆದವು. ಮೈಕ್ರೋ ಬಯಾಲಜಿ ಓದಿ ಕಂಪೆನಿಯೊಂದರಲ್ಲಿ ಏಳು ವರ್ಷ ಕೆಲಸ ಮಾಡಿದರು. ಆದರೂ ಅಲ್ಲೊಂದು ಇಲ್ಲೊಂದು ಚಿಕ್ಕಪುಟ್ಟ ಪಾತ್ರ ಮಾಡುತ್ತಾ ಆಸೆ ಪೂರೈಸಿಕೊಂಡಿದ್ದ ಉಮೇಶ್‌ಗೆ ಕ್ರಮೇಣ ನಿರ್ದೇಶಕನಾಗಬೇಕೆಂಬ ಹೊಸ ಆಸೆ ಚಿಗುರೊಡೆಯಿತು!
ಅದೇ ಹೊತ್ತಿಗೆ ಸರಿಯಾಗಿ ಬೇರೊಂದು ಕಂಪೆನಿಗೆ ಸೇರೋಣವೆಂದು ಹಳೆ ಆಫೀಸ್‌ಗೆ ಗುಡ್ ಬೈ ಹೇಳಿ ಬಂದ ಉಮೇಶ ಕೆಲಸಕ್ಕೆ ಅರ್ಜಿ ಹಾಕುವುದರ ಬದಲು ನಿರ್ದೇಶಕನಾಗಲು ಮುತುವರ್ಜಿ ವಹಿಸಿದರು. ಆನಿಮೇಶನ್,ಎಡಿಟಿಂಗ್ ಕೋರ್ಸ್‌ಗಳನ್ನು ಮಾಡಿಕೊಂಡರು. ಜೊಸೆಮನ್ ಅವರ ಶಿಕ್ಷಣ ಸಂಸ್ಥೆಯಲ್ಲಿ ಚಲನ ಚಿತ್ರ ನಿರ್ದೇಶನವನ್ನು ಕಲಿತರು. ಜೊಸೆಮನ್ ನಿರ್ದೇಶನದ “ದಾದಾಗಿರಿಯ ದಿನಗಳು” ಚಿತ್ರದಲ್ಲಿ ಅವರ ಜೊತೆಯಿದ್ದು ಮೇಕಿಂಗ್‌ನ ಎಲ್ಲಾ ಮಜಲುಗಳನ್ನು ಗಮನಿಸಿದರು. “ಪಯಣ” ಮುಂತಾದ ಚಿತ್ರಗಳಲ್ಲಿ ಸಹಾಯಕರಾಗಿ ಅನುಭವ ಪಡೆಯುತ್ತಾ ಪಯಣ ಮುಂದುವರಿಸಿದರು. ನಿರ್ದೇಶಕನಾಗಬೇಕೆಂದು ಗಾಂಧಿನಗರದಲ್ಲಿ ಅಡ್ಡಾಡ್ಡುತ್ತಾ ಕಥೆ ಹೇಳುವ ಕಾರ್ಯಕ್ರಮಕ್ಕೆ ಚಾಲನೆಕೊಟ್ಟರು! ಒಳ್ಳೆಯ ಚಿತ್ರಮಾಡುವ ತಮ್ಮ ಉದ್ದೇಶವನ್ನು ಕವನದಲ್ಲಿ ಬರೆದು ಮುದ್ರಿಸಿ ಅದರ ಸಾವಿರಾರು ಪ್ರತಿಗಳನ್ನು ಗಾಂಧಿನಗರದ ತುಂಬಾ ಹಂಚಿದರು. ನಿರ್ಮಾಪಕರಿಂದ ಬರೀ ಭರವಸೆ…ಈಡೇರಲಿಲ್ಲ ಇವರ ಆಸೆ. ಆಗ..
ಉಮೆಶ್‌ಗೆ ಕೂಡಿ ಬಂತು “ಯೋಗ”
ತಾನೊಂದು ಚಿತ್ರ ಮಾಡಬೇಕೆಂದು ನಾಲ್ಕಾರು ಸ್ನೇಹಿತರಿಗೆ ಹಂಚಿಕೊಂಡರು. ಅವರು ಹತ್ತಾರು ಸ್ನೇಹಿತರಿಗೆ ಹಂಚಿಕೊಂಡ ಪರಿಣಾಮ ನಲವತ್ತು ಜನರ ಒಂದು ತಂಡವಾಯಿತು. ಪ್ರತೀವಾರ ಇವರೆಲ್ಲಾ ಒಮ್ಮೆ ಬೈಟಕ್ ಮಾಡಿ ಮುಂದಿನ ಕಾರ್ಯತಂತ್ರವನ್ನು ರೂಪಿಸಲು ಶುರು ಮಾಡಿದರು. ಉಮೇಶ್ ಅವರ ಪ್ರಯತ್ನಕ್ಕೆ ಇವರೆಲ್ಲ ಜೊತೆ ಸೇರಿ ಹೊಸ ರೂಪ ಕೊಟ್ಟರು. ಚಿತ್ರಕ್ಕೆ ಹೇಗೆ ಪ್ರಚಾರ ಕೊಟ್ಟು ಗೆಲ್ಲಿಸಬೇಕೆನ್ನುವವರೆಗೂ ಯೋಜನೆ ರೂಪಿಸಿದರು.
ಎರಡು ವರ್ಷಗಳ ಹಿಂದೆಯೇ ಉಮೇಶ್ ಮಾಡಿಟ್ಟಿದ್ದ ಚಿತ್ರಕಥೆಗೆ ಹೊಸ ತಂತ್ರಜ್ನಾನಕ್ಕನುಗುಣವಾಗಿ ಚಿತ್ರೀಕರಿಸಲು ನವೀಕರಣಗೊಳಿಸಲಾಯಿತು. ಅದರ ಪರಿಣಾಮವಾಗಿ ಸಸ್ಪೆನ್ಸ್ ಕಮ್ ಹಾರಾರ್ ಚಿತ್ರಕ್ಕೆ ಕಳೆದ ನಾಲ್ಕು ತಿಂಗಳಿಂದ ಕಷ್ಟಪಟ್ಟು ಅದ್ಭುತವಾದ ಸ್ಕ್ರಿಪ್ಟ್ ಒಂದನ್ನು ಫೈನಲ್ ಮಾಡಿದರು. ಒಂದೇ ಹಂತದಲ್ಲಿ ಕೇವಲ ೯ ದಿನಗಳಲ್ಲಿ ಶ್ಯೂಟಿಂಗ್ ಮುಗಿಸುವ ಈ ಚಿತ್ರಕ್ಕೆ ಮಲೆನಾಡ ಕಾಡ ನಡುವೆ ಬಂಗಲೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀರೋ-ಹೀರೊಇನ್ ಸಮೇತ ಎಲ್ಲಾ ೧೨ ಪಾತ್ರಧಾರಿಗಳು ಹಾಗು ತಂತ್ರಜ್ನರು ಈ ಹೊಸತಂಡದ ಉತ್ಸಾಹವನ್ನು ನೋಡಿ ಉಚಿತವಾಗಿ ಕೆಲಸ ಮಾಡಲು ಒಪ್ಪಿದ್ದಾರೆ! ಚಿತ್ರ ಬಿಡುಗಡೆಯಾದ ನಂತರ ಲಾಭ ಅಥವಾ ನಷ್ಟದಲ್ಲಿ ಎಲ್ಲರದ್ದೂ ಸಮಪಾಲು.
ಇಂದು ಎರಡು ಜನ ನಿರ್ಮಾಪಕರು ಸೇರುವುದೇ ಕಷ್ಟ. ಅಂತದರಲ್ಲಿ ೪೦ ಜನ… (ಈಗ ಇನ್ನೂ ಈ ಜನ ಸಂಖ್ಯೆ ಏರುತ್ತಿದೆ !)ಹನಿಹನಿಗೂಡಿದರೆ ಹಳ್ಳ ಎಂಬಂತೆ ಸಣ್ಣ ಸಣ್ಣ ಮೊತ್ತ ಸೇರಿಸಿ ಉದಾತ್ತವಾದ ಕಲ್ಪನೆಯೊಂದಕ್ಕೆ ಜೀವ ಕೊಡುತ್ತಿದ್ದಾರೆ ಎಂದರೆ ಇದೇ ಒಂದು ಸಾಧನೆ ಅಲ್ಲವೆ? ಇನ್ನೂ ಹೆಸರಿಡದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದರೆ ಆಶ್ಚರ್ಯವಿಲ್ಲ.
ಸಣ್ಣ ಬಜೆಟ್‌ನ ಈ ಚಿತ್ರದ ಗೆಲುವು-ಸೋಲು ಬೇರೆ ವಿಚಾರ. ಆದರೆ ಈ ತಂಡ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಪ್ರಯೋಗ,ಹೊಸ ಪ್ರಯತ್ನವೊಂದಕ್ಕೆ ನಾಂದಿ ಹಾಡಿದೆ. ಒಮ್ಮೆ…ಹ್ಯಾಟ್ಸ್ ಆಫ್ ಹೇಳೋಣ ಅಲ್ಲವೆ?
ಅಂದ ಹಾಗೆ “ಅಗಮ್ಯ” ಎಂಬ ಹೆಸರಿನ ಈ ಚಿತ್ರದ ಚಿತ್ರೀಕರಣ ಈಗ ಭರದಿಂದ ಸಾಗುತ್ತಿದೆ.
-ಚಿನ್ಮಯ ಎಂ. ರಾವ್ ಹೊನಗೋಡು
3-8-2011