ಕವಿಸಮಯ

ಪ್ರಶ್ನೋತ್ತರ

-ಚಿನ್ಮಯ ಎಂ.ರಾವ್ ಹೊನಗೋಡು

ಜೀವನ ಪ್ರಶ್ನೋತ್ತರಗಳ ಸರಮಾಲೆ
ಹುಟ್ಟುವ ಮುನ್ನ ಪ್ರಶ್ನೆ
ಹುಟ್ಟೇ ಉತ್ತರ
ಹುಟ್ಟಿನ ನಂತರ ಏಳುವ ಪ್ರಶ್ನೆಗಳಿಗೆ
ಸಾವಿನ ತನಕ ಉತ್ತರ
ಸಾವೇ ಉತ್ತರ !

ನಡುವೆ ಕೋಟಿ ಕೋಟಿ ಪ್ರಶ್ನೆಗಳು
ಉತ್ತರಿಸುವ ಉತ್ತರಿಸದ ಪ್ರಶ್ನೆಗಳು
ಉತ್ತರದ ಹತ್ತಿರ ತತ್ತರಿಸುವ ಪ್ರಶ್ನೆಗಳು
ಜೀವಂತವಾಗಿ ಉಳಿಯುವ ಪ್ರಶ್ನೆಗಳು
ಜೀವನವನ್ನೇ ಅಳಿಸುವ ಉತ್ತರಗಳು
ಆಳುವ ಪ್ರಶ್ನೆಗಳು
ಆಳುದ್ದದ ಉತ್ತರಗಳು
ಪ್ರಶ್ನೆಗಳಿಗೆ ಸಂಬಂಧವಿರದ ಉತ್ತರಗಳು
ಪ್ರಶ್ನೋತ್ತರಗಳ ಸಂಬಂಧಗಳನ್ನೇ ಪ್ರಶ್ನಿಸುವ
ಪ್ರಶ್ನೆಗಳು ಉತ್ತರಗಳು
ಪ್ರಶ್ನೆಗಳಿಂದ ಬಂಧಗೊಳಿಸಿ
ಉತ್ತರಗಳಿಂದ ವಿಮುಕ್ತಿಗೊಳಿಸುವ
ಪ್ರಶ್ನಾತೀತ ಉತ್ತರಗಳು

ಉತ್ತರಗಳ ಬಂಧನವನ್ನು ಕಳಚಿ
ಪ್ರಶ್ನೆಗಳಲ್ಲೇ ಮುಕ್ತಿ ಕಾಣುವ
ನಿರುತ್ತರ ಪ್ರಶ್ನೆಗಳು
ಪ್ರಶ್ನೆಯ ಅಸ್ತಿತ್ವವನ್ನೇ
ಅಲುಗಾಡಿಸುವ ಪ್ರಶ್ನೆಗಳು
ಪ್ರಶ್ನೆಗಳ ಬುಡವನ್ನೇ
ಬುಡಮೇಲು ಮಾಡುವ
ಪ್ರೆಶ್ನೆಗಳು ಏಳುವ ಮುನ್ನವೇ
ಆಕ್ರಮಿಸಿಕೊಳ್ಳುವ
ಆಕ್ರಮಣಕಾರಿ ಉತ್ತರಗಳು
ಅಕ್ರಮ/ಸಕ್ರಮ ಪ್ರಶ್ನೆಗಳಿಗೆ
ಸಕ್ರಮ/ಅಕ್ರಮ ಉತ್ತರಗಳು

ಅನುಕ್ರಮವಾಗಿ ಬಂದೊದಗುವ
ಪ್ರಶ್ನೆಗಳಿಗೆ
ಹಿಂದುಮುಂದಾಗಿ
ಆವರಿಸಿಕೊಳ್ಳುವ ಉತ್ತರಗಳು
ಹೌಹಾರಿಸುವ ಕಿಡಿಕಾರುವ
ಪ್ರಶ್ನೆಗಳಿಗೆ
ಹಾರಿಕೆಯ ಉತ್ತರಗಳು
ಪ್ರಶ್ನೆಗಳಿಂದ ಅವಲೋಕನಕ್ಕೆ
ದಾರಿ ಮಾಡಿಕೊಡುವ ಉತ್ತರಗಳು
ದಿಕ್ಕುದೆಸೆಯಿಲ್ಲದ ಆತ್ಮಾವಲೋಕನಕ್ಕೆ
ದಾರಿ ತೋರುವ ಪ್ರಶ್ನೆಗಳು

ಹೀಗೆ ಕಡೆವರೆಗೂ ಕಡೆ ಕಾಣದ
ಪ್ರಶ್ನೋತ್ತರಗಳು
ಕಡೆಗಾಣಿಸಲಾಗದ ಅನಿವಾರ್ಯತೆಗಳು
ಅಂತೂ ಅಂತಿಮವಾಗಿ
ಈ ಜೀವನವೆಂಬುದು ಯಕ್ಷಪ್ರಶ್ನೆಯೇ….
ಸಾವೆಂಬುದು ಹಾರಿಕೆಯ ನಿರುತ್ತರ !

ಹುಟ್ಟು ಸಾವಿನ ಪ್ರಶ್ನೆಗಳಿಗೆ
ಸಾವೆಂಬುದೇ ಇಲ್ಲ
ಬದುಕುವುದೂ ಇಲ್ಲ !
ಸಾವು ಬದುಕಿನ ನಡುವೆ ಹೋರಾಟ
ಪ್ರಶ್ನೋತ್ತರಗಳ ಬಡಿದಾಟ
ಇಲ್ಲಿ ಹುಟ್ಟು-ಬದುಕು-ಸಾವು
ಕಡೆಗೂ ಪ್ರಶ್ನೆಯಾಗಿಯೇ
ಉಳಿದಿದೆ !
ಉತ್ತರಿಸುವಿರಾ?!

-ಚಿನ್ಮಯ ಎಂ.ರಾವ್ ಹೊನಗೋಡು

Back to top button

Adblock Detected

Please consider supporting us by disabling your ad blocker