– ಶಾರದಾ ಕಾರಂತ್
ರಂಗದಲಿ ತನ್ನ ಭಾವವನ್ನರಿಯದೆ
ನಡೆಸಲು ಸಾಧ್ಯವೇ
ರಂಗಪರಿಕ್ರಮಣ||
ಕೆಲವೊಮ್ಮೆ ಸಾಗರದ ರಕ್ಕಸ ಅಲೆಗಳಂತೆ
ಕೆಲವೊಮ್ಮೆ ಶಿಖರದ ಉತ್ತುಂಗದಲ್ಲಿರುವಂತೆ||
ಮಳೆ ಸುರಿಸಿದ ಹಗುರಾದ ಮುಗಿಲಿನಂತೆ
ಗಾಂಭೀರ್ಯ ನಡೆಯ ಮೃಗರಾಜನಂತೆ||
ಮಮತೆಯ ವಾತ್ಸಲ್ಯಭರಿತವಾದ
ಅಕ್ಕರೆಯಂತೆ
ಭರತನ ಭ್ರಾತೃಪ್ರೇಮದ ಕುರುಹಿನಂತೆ||
ರಾಧಾಕೃಷ್ಣರ ಅತಿಶಯ ಪ್ರೇಮದಂತೆ
ರಾವಣನ ದರ್ಪದ ಅಧಿಪತ್ಯದಂತೆ||
ಈ ಎಲ್ಲಾ ಭಾವಗಳ ಅಂತರಂಗದಲಿ ಮೂಡಿಸುತ
ನಡೆಸುವನು ಮಾನವನು
ರಂಗಪರಿಕ್ರಮಣ||
ರಂಗುರಂಗಿನ ಬಾಳಿನ ವೇದಿಕೆಯಲಿ
ನಿಲ್ಲದು ಈತನ ಪರಿಭ್ರಮಣ||
ಒಳಗೇ ಅಡಗಿದೆ ವೇಷಭೂಷಣ
ಹೊರಗೆ ತೋರಿಸನು “ಅಂತ”ರಂಗ ಪಯಣ||
******