-ಚಿನ್ಮಯ ಎಂ.ರಾವ್
ಹೊನಗೋಡು
ಬರಿ ಮಾತು ಬರಿ ಮಾತು
ಏನು ಬಂತು ಗೆಳತಿ?
ಮನಸೋತು ಹೋಗಿರಲು
ಸೋಲಿನುಡುಗೊರೆಯ ಹೊತ್ತು
ಬರಿದಾಯ್ತು ಬರಿದಾಯ್ತು
ಕಾಲ ಕಳೆದಾಯ್ತು…!
ಬರಿ ಆಸೆ ಬರಿ ಭಾಷೆ
ಈ ಪರಿಯ ಪರಿಭಾಷೆ
ಪರಿತಪಿಸೊ ತಪಸಲ್ಲೆ
ಮುಗಿದೋಯ್ತು ಆಕಾಂಕ್ಷೆ
ನಿನ್ನಲ್ಲಿ ಮಾತ್ರ
ಪ್ರೀತಿಯನ್ನೇ ಮುಗಿಸಿಬಿಡುವ
ನೀಲನಕಾಶೆ ..?!
ಬರಿ ನಾಳೆ ಬರಿ ನಾಳೆ
ದಿನದಿನವು ಎನ್ನೋಳೆ
ನಿನ್ನೆಯದೆಲ್ಲ ಖಾಲಿ
ಉಳಿಸುವ ನೀ
ಎನ್ನೋಳೇ..? ಎನ್ನವಳೆ..
ನಿನಗೊಂದು ವರ
ಆ ಶಬ್ಧ “ನಾಳೆ”
ನಿಶ್ಶಬ್ಧ ನಾಳೆ !
ಬರಿ ಪದವು ಹುಸಿ ಮುದವು
ಸಿಗದಾಯ್ತು ಹದವು
ಆದರದ ಮಾತೆಲ್ಲ
ಆಧರಿಸಿ ಮರುಳಾಯ್ತು
ಎಲ್ಲ ಮರೆತೋಯ್ತು
ಏನು ಬಂತು ಗೆಳತಿ?
ಬರೀ ಹೊಂಗನಸಲೆ ನಿಂತು…
ಬರಿ ಬಂಧ ಏನ್ ಚೆಂದ
ಸಂಬಂಧವಿರದೆ
ಸಂಧಿಸುವ ಭರದಲ್ಲಿ
ಬಂಧಿಸುವುದು ತರವೇ?
ಬರಿ ಮೌನ ಒಳಿತು
ನೀ ನೋಡು ಕುಳಿತು
ಏನು ಬಂತು ಗೆಳತಿ
ಏನು ಬಂತು?
ಕಾಲ ಕಳೆದೋಯ್ತು
ನಿನ್ನ ಕಾಲ ಮೇಲಾಯ್ತು..
ಬರಿ ಯುಕ್ತಿ ಬರಿ ಸೂಕ್ತಿ
ನಿರ್ಲಿಪ್ತ ಭಾವ
ಬುದ್ಧಿ ಜೊತೆಯಲಿ ಬೆಸೆದು
ಭಾವಾಭಾವ…
ಬರಿ ಬುದ್ಧಿ ಬರಿ ಭಾವ
ಎರಡರತಿಯಾಚೆ
ಸಮತೂಕ ಸಮಭಾವ
ಸಾಮೀಪ್ಯ ಸೆಳೆವ..
ಮನಸಾರೆ ಕಳೆವ
ಬಾ.. ಎನ್ನೋಳೆ
ಮನಸಾರೆ ಕಳೆವ
-ಚಿನ್ಮಯ ಎಂ.ರಾವ್
ಹೊನಗೋಡು