-ಚಿನ್ಮಯ ಎಂ.ರಾವ್ ಹೊನಗೋಡು
ಹೊರಹಾಕುವುದು ಸಹಜ ಧರ್ಮ
ಹೊರೆ ಹೆಚ್ಚಾದಂತೆ ಹೊರಹೋಗುವುದೇ
ಸಹಜ ಧರ್ಮ
ಹೊರತಾಗಿಯೂ ಹೊರೆಹೊತ್ತರೆ
ಹರಸಾಹಸವನ್ನೇ ಹೆರಬೇಕಾಗುವುದು
ಅಸಹಜ ಕರ್ಮ
“ಹೊರಹಾಕುವುದು” ಏನಿದರ ಮರ್ಮ?
ಅಂತರಂಗದ ಅನಂತಚಿತ್ತಾರಗಳನ್ನು
ಹೊರಗೆಲ್ಲಾ ಹರಗಿಕೊಳ್ಳುವಾಗ
ಒರಗಿಕೊಳ್ಳಲೇಬೇಕು ನವರಸಗಳ
ನವನಾವೀನ್ಯಕ್ಕೆ…ಸರಸವಿರಸಗಳ
ಜೀವತಂತುವಿಗೆ…ಸಮರಸಗಳ
ಸಾಮಾನ್ಯಕ್ಕೆ…ರಸಭಂಗದ ಅಸಾಮಾನ್ಯಕ್ಕೆ…
ಅರಸಿಕತೆಯ ಸನ್ಮಾನಕ್ಕೆ…ಅವಮಾನಕ್ಕೆ…
ತಡೆಅಹಿಡಿಯಲಸದಳ…ಸರಳ..
ಸರಾಗವಾಗಿ ಸಾಗಿ ತಡೆಹಿಡಿಯದಂತೆ
ತಡೆಯದಂತೆ ತಡೆಯೇ ಇರದಂತೆ
ಹೊರಹೋಗುತ್ತಲೇ ಇರುವುದು
ಹೊರಹೋಗುವ ಸಹಜಧರ್ಮ !
ಹೊರಹಾಕಿದರೆ ಧರ್ಮ
ಧರ್ಮವೇ ಹೊರಹಾಕುವುದು
ಏನಿದರ ಮರ್ಮ?
ಹೊರ ಹಾಕಬೇಕೋ?
ಒಳಗೇ ಉಳಿಸಿಕೊಳ್ಳಬೇಕೊ?
ಉಳಿಸಿಕೊಂಡರೆ ಒಳ ಅಳಿವು
ಹೊರಹಾಕಿದರೆ ಹೊರ ಅಳಿವು
ಒಳಹೊರಗಣ ರಿಂಗಣದಲ್ಲೇ
ಕಳಚಿಕೊಳ್ಳದೇ ಕಳೆದುಹೋಗುವ
ಹೊರಹಾಕದಿರುವ ಸಹಜ ಅಧರ್ಮ !
ಒಂದೊಮ್ಮೆ ಹೊರಹಾಕದಿದ್ದರೂ
ಮುಂದೊಮ್ಮೆ ಹೊರಬರುವ
ಅಪಾಯ-ಉಪಾಯ-ಸಹಾಯ-ವ್ಯಯ
ವ್ಯರ್ಥ-ಅನರ್ಥ-ಅನ್ವರ್ಥ-ಸ್ವಾರ್ಥ
ಒಂದಿನಿತೂ ಹೊರಹೋಗಲಾರದೆಂದರೂ
ಒಂದಿನಿತು ಹೊರಬಂದುಬಿಡುವ
ಹೊರಬರುವ ಸಹಜ ಧರ್ಮ ಅಧರ್ಮ !
ಭಯ-ಅಭಯ-ಉಬಯ-ತನ್ಮಧ್ಯ ಅಸಾಧ್ಯ
ಆರ್ಥಿಕ-ಸಾಮಾಜಿಕ-ಸಾಂದರ್ಭಿಕ-ಅಧೋಮುಖ
ಹೊರಹಾಕುವ ಹೊರತಾಗುವ
ಹೊರಬರುವ ಹೊರಗಿಡುವ
ಹೊರಹೋಗುವ ಸಹಜ ಧರ್ಮಗಳಿಗೆ
ಗೊತ್ತು…ಕಾಲಕ್ಕೆ ತಕ್ಕಂತೆ
ಕಾಲಿಡುವ ಕಲೆ, ಕಾಲಕಳೆಯುವ ಕಲೆ
ಕೇವಲ ಮೋಡಿಮಾತ್ರದಿಂದಲೇ
ಸಮಾಜವನ್ನೇ ತನ್ನತ್ತ ಸೆಳೆದುಕೊಳ್ಳುವ
ಮಾತ್ರೆಯ ಬೆಲೆ !
ಹೊರಹಾಕುವ ಸಹಜಧರ್ಮದಲ್ಲೂ
ಕಂಡುಕೊಳ್ಳಲು ನೆಲೆ
ತನ್ನೆಡೆಗೇ ಮತ್ತೆ ಮತ್ತೆ ಬರಸೆಳೆದುಕೊಳ್ಳುವ ಸೆಲೆ
ಈ ನಡುವೆ ಹೀಗೆಯೇ ಕಾಲ ಕಳೆಯುವ ಕಲೆ
ಕಾಲಕಳೆದಂತೆ ಮಡಿದುಹೋಗುವ ಕಲೆ
ಮಾಯವಾಗಿ ಮರೆತು ಹೋಗುವಾಗಲೇ
ಹೊರಹೋಗುತ್ತಲೇ ಇರುತ್ತದೆ
ಹೊರಹೋಗುವ ಸಹಜಧರ್ಮ !
ಎಂದೆಂದೂ ನಿಗೂಢವೇ ಸರಿ
ಸರಿತಪ್ಪುಗಳ ಹೊರಹಾಕುವ ಸಹಜಧರ್ಮ !
-ಚಿನ್ಮಯ ಎಂ.ರಾವ್ ಹೊನಗೋಡು
12-5-2017