ಸಂಗೀತ ಕಲಾವಿದ ಚಿನ್ಮಯ ಎಂ.ರಾವ್ ಅವರ ಸಂದರ್ಶನ
ಸಂದರ್ಶಕರು : ಸಂಧ್ಯಾ ಶಶಿಧರ್, ಆಲ್ಪೈನ್ ಪಬ್ಲಿಕ್ ಸ್ಕೂಲ್ ಶಿಕ್ಷಕಿ
ಸಂಧ್ಯಾ : ನಮಸ್ಕಾರ ಚಿನ್ಮಯ್ ಸರ್,
ಚಿನ್ಮಯ : ನಮಸ್ಕಾರ, ಸಂಧ್ಯಾ ಅವರೇ ಹೇಳಿ,
ಸಂಧ್ಯಾ : ಸರ್, ನೀವು ನಮ್ಮ ಸ್ಕೂಲಿನ ಮ್ಯುಸಿಕ್ ಸಾರ್ ಎಂಬುದು ನಮಗೆಲ್ಲಾ ಗೊತ್ತೇ ಇದೆ, ಆದರೆ ಅದಕ್ಕೂ ಮಿಗಿಲಾಗಿ ನಿಮ್ಮಲ್ಲಿ ಅಡಗಿರುವ ಅಗಾಧ ಸಂಗೀತ ವಿದ್ವತ್ತನ್ನು ಕಂಡು ನಿಮ್ಮನ್ನು ನಾನು ಸಂದರ್ಶನ ಮಾಡಿ ಸಾಕಷ್ಟು ವಿಷಯಗಳನ್ನು ದಾಖಲಿಸಬೇಕೆಂದುಕೊಂಡಿದ್ದೇನೆ.
ನಾನು ಪ್ರಸ್ತುತ ಬಿ.ಎಡ್ ಮಾಡುತ್ತಿರುವ ಕಾರಣ ಪ್ರಖ್ಯಾತ ಕಲಾವಿದರೊಬ್ಬರನ್ನು ಸಂದರ್ಶಿಸಿ ಪ್ರಸ್ತುತ ಪಡಿಸುವ ಅವಶ್ಯಕತೆ ಇರುವುದರಿಂದ ನಮ್ಮ ಅತ್ಯಂತ ಸಮೀಪದಲ್ಲೇ ನಮ್ಮ ನಡುವೆ ದಿನನಿತ್ಯ ಒಡನಾಡುವ ನಿಮ್ಮನ್ನೇ ಸಂದರ್ಶನ ಮಾಡುತ್ತಿದ್ದೇನೆ. ಇಂತಹ ಸದವಕಾಶ ಪಡೆದಿರುವ ನನಗೆ ಸಂತೋಷವಾಗುತ್ತಿದೆ.
ಚಿನ್ಮಯ : ನನಗೂ ತುಂಬಾ ಸಂತೋಷವಾಗುತ್ತಿದೆ. ಕೇಳಿ….
ಸಂಧ್ಯಾ : ಸರ್, ನಿಮ್ಮ ಊರು ಯಾವುದು? ನಿಮ್ಮ ತಂದೆ ತಾಯಿಯ ಬಗ್ಗೆ ಹೇಳಿ…
ಚಿನ್ಮಯ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊನಗೋಡು ಎಂಬ ಕೇವಲ ಎರಡೇ ಎರಡು ಮನೆಗಳಿರುವ ಕುಗ್ರಾಮ ನಮ್ಮದು. ನಮ್ಮ ತಂದೆ ತಾಯಿ ಕೃಷಿಕರು. ಅಡಿಕೆ, ತೆಂಗು, ಬಾಳೆ ಹಾಗೂ ಸುಮಾರು ನೂರಕ್ಕು ಹೆಚ್ಚು ಬಗೆಯ ಔಷಧೀಯ ಗಿಡಗಳನ್ನು ಬೆಳೆಸಿದ್ದಾರೆ. ಸಂಪೂರ್ಣ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.
ಸಂಧ್ಯಾ : ಸರ್, ನಿಮಗೆ ಸಂಗೀತದಲ್ಲಿ ಆಸಕ್ತಿ ಹುಟ್ಟಲು ಯಾರು ಕಾರಣ? ನಿಮ್ಮ ಕುಟುಂಬದಲ್ಲಿ ಯಾರಾದರೂ ಸಂಗೀತಗಾರರು ಇದ್ದಿದ್ದರಾ?
ಚಿನ್ಮಯ : ನಮ್ಮ ಕುಟುಂಬದಲ್ಲಿ ಯಾರೊಬ್ಬರೂ ಸಂಗೀತಗಾರರಲ್ಲ. ಆದರೂ ಅದರಲ್ಲಿ ನನಗೆ ಆಸಕ್ತಿ ಮೂಡಿ ಸಾಧನೆಗೆ ಇಳಿಯುವಂತೆ ಮಾಡಿತು ಎಂಬುದೇ ನನಗೆ ಆಶ್ಚರ್ಯ ! ನಮ್ಮೂರಿನಲ್ಲಿ ಕೇವಲ ಎರಡೇ ಮನೆಗಳಿದ್ದ ಕಾರಣ ಬೇರೆಯವರ ಜೊತೆ ಬೆರೆತು ಹರಟೆ ಹೊಡೆಯಲಿಕ್ಕೆ ಆಗುತ್ತಿರಲಿಲ್ಲ. ರೇಡಿಯೋ ಹಾಗೂ ಟೇಪ್ ರೆಕಾರ್ಡರಿನಲ್ಲಿ ಬಗೆ ಬಗೆಯ ಹಾಡುಗಳನ್ನು ಕೇಳುತ್ತಲೇ ನನ್ನ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೆ. ತಾಲೂಕು ಕೇಂದ್ರ ಸಾಗರಕ್ಕೆ ಶಾಲೆಗೆ ಹೋಗುವಾಗ ಅಲ್ಲೇ ಶ್ರೀಮತಿ ಎಂಬುವವರಿಂದ ಶಾಸ್ತ್ರೀಯ ಸಂಗೀತದ ಜ್ಯೂನಿಯರ್ ವಿಭಾಗವನ್ನು ಕಲಿತೆ. ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಸಂಗೀತದ ಸ್ಪರ್ಧೆಗಳಲ್ಲಿ ನಿರಂತರವಾಗಿ ಮೊದಲ ಬಹುಮಾನ ಪಡೆಯುವಾಗಲೆಲ್ಲಾ ಸಂಗೀತದ ಬಗ್ಗೆ ನನ್ನ ಆಸಕ್ತಿ, ಪ್ರೀತಿ ಹೆಚ್ಚಾಗುತ್ತಲೇ ಹೋಯಿತು.
ಮುಂದೆ ಪ್ರೌಢಶಾಲೆಯನ್ನು ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ಓದುವಾಗ ಅದು ಆರ್.ಎಸ್.ಎಸ್ ಶಾಲೆಯಾದ ಕಾರಣ ಸಂಘದ ಶಾಖೆಗಳಲ್ಲಿ ಹಾಗೂ ಶಾಲೆಯ ಪ್ರಾರ್ಥನೆಯಲ್ಲೆಲ್ಲಾ ನಾನೇ ಹಾಡು ಹೇಳಿಕೊಡುವಂತಾಯಿತು. ಇದು ನನ್ನ ಸಂಗೀತದ ಆಸಕ್ತಿಗೆ ಮತ್ತಷ್ಟು ಉತ್ತೇಜಿಸುವಂತಾಯಿತು.
ಹೀಗೆ ಸಾಗರದಲ್ಲಿ ಒಂದರಿಂದ ಏಳನೆಯ ತರಗತಿ ಹಾಗೂ ಚನ್ನೇನಹಳ್ಳಿಯಲ್ಲಿ ಎಂಟರಿಂದ ಹತ್ತನೆಯ ತರಗತಿ, ನನ್ನ ಶೈಕ್ಷಣಿಕ ಜೀವನದ ಮೊದಲ ಹತ್ತು ವರ್ಷಗಳೂ ಆರ್.ಎಸ್.ಎಸ್ ಶಾಲೆಯಲ್ಲೇ ಕಳೆಯುವಂತಾಗಿ ನನ್ನಲ್ಲೊಂದು ಶಿಸ್ತು, ಸಂಸ್ಕಾರ ಹಾಗೂ ಸಾಧಿಸಬೇಕೆಂಬ ಛಲ ಇವೆಲ್ಲಾ ಮೈಗೂಡಿ ಅದು ಸಂಗೀತದ ಹಾದಿಯಲ್ಲಿ ಸಾಧನೆ ಮಾಡಲು ನನಗೆ ಸಹಕರಿಸಿತು.
ಮುಂದೆ ನಾನು ಸಂಗೀತ ಸಾಧನೆ ಮಾಡುವಾಗ ಪದ್ಮಭೂಷಣ ವಿದ್ವಾನ್ ಕೆ.ಜೆ ಯೇಸುದಾಸ್ ಅವರ ಶಾಸ್ತ್ರೀಯ ಸಂಗೀತ ಕಛೇರಿ ಕರ್ನಾಟಕದಲ್ಲಿ ಎಲಿದ್ದರೂ ಬಿಡದೇ ಹೋಗಿ ಕೇಳುತ್ತಿದ್ದೆ. ಅವರ ಸಂಗೀತ ಹಾಗೂ ಅವರ ಮೇರು ವ್ಯಕ್ತಿತ್ವ ನನ್ನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಈ ಬಗ್ಗೆ ಮೂರು ಕಂತಿನಲ್ಲಿ ದೊಡ್ಡ ಲೇಖನವನ್ನೇ ಬರೆದಿದ್ದೇನೆ. ಅದು ಪತ್ರಿಕೆಗಳಲ್ಲಿಯೂ ಪ್ರಕಟವಾಯಿತು. ಅದನ್ನು ತಾವು ಓದಬಹುದು.
http://kannadatimes.com/k-j-yesudas-article-by-chinmaya-rao-part-1/
http://kannadatimes.com/k-j-yesudas-article-by-chinmaya-rao-part-2/
http://kannadatimes.com/k-j-yesudas-article-by-chinmaya-rao-part-3/
ಸಂಧ್ಯಾ : ನಿಮಗೆ ಸಂಗೀತ ಕಲಿಸಿದ ಗುರುಗಳ ಬಗ್ಗೆ ಸ್ವಲ್ಪ ತಿಳಿಸಿಕೊಡಿ.
ಚಿನ್ಮಯ : ಹಲವು ಹಂತಗಳಲ್ಲಿ, ಹಲವು ಸ್ಥಳಗಳಲ್ಲಿ, ಹಲವು ಗುರುಗಳಿಂದ ನಾನು ಸಂಗೀತಾಭ್ಯಾಸ ಮಾಡುವಂತಾಯಿತು.
ಸಾಗರದ ಶ್ರೀಮತಿ ಅವರಿಂದ ದಕ್ಷಿಣಾದಿ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಜ್ಯೂನಿಯರ್ ಹಂತ ಮುಗಿಸಿ ಶಿವಮೊಗ್ಗದಲ್ಲಿ ಬಿ.ಬಿ.ಎಂ ಅಭ್ಯಾಸ ಮಾಡುವಾಗ ವಿದ್ವಾನ್ ಹೆಚ್.ಎಸ್ ನಾಗರಾಜ್ ಅವರಲ್ಲಿ ಸೀನಿಯರ್ ವಿಭಾಗದ ಸಂಗೀತವನ್ನು ಅಭ್ಯಾಸ ಮಾಡಿ ಉತ್ತೀರ್ಣನಾದೆ. ಮುಂದೆ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಬಿ.ಎ ಪದವಿಯನ್ನು ಪಡೆದರೂ ನನ್ನ ಒಲವು ಮಾತ್ರ ಸಂಗೀತದೆಡೆಗೇ ಇತ್ತು. ತತ್ಪರಿಣಾಮವಾಗಿ ಮೈಸೂರಿನ ವಿದ್ವಾನ್ ಆರ್.ಎಸ್ ನಂದಕುಮಾರ್ ಹಾಗು ಬೆಂಗಳೂರಿನ ವಿದ್ವಾನ್ ಕೆ.ಜಿ ರಾಮಸ್ವಾಮಿ ಅವರ ಬಳಿ ಸಂಗೀತದ ಸಾಧನೆಯನ್ನು ಮುಂದುವರಿಸಿದೆ. ಮುಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣದ ಮುಖೇನ ಮಾಸ್ಟರ್ ಆಫ್ ಮ್ಯೂಸಿಕ್ ಅಭ್ಯಾಸ ಮಾಡುವಾಗ ವಿದ್ವಾನ್ ಹೊಸಳ್ಳಿ ಅನಂತ ಅವಧಾನಿಗಳು ನನ್ನ ಗುರುಗಳು. ಈ ಎಲ್ಲರೂ ನನ್ನ ಸಂಗೀತವನ್ನು ರೂಪಿಸಿದ ಮಹಾನ್ ಚೇತನಗಳು. ಅವರೆಲ್ಲರನ್ನೂ ನಾನು ಸದಾ ಸ್ಮರಿಸುತ್ತೇನೆ, ಪೂಜಿಸುತ್ತೇನೆ. ಸಂಗೀತ ವಿದ್ಯೆಯೆಂಬ ಮಹಾಸಾಗರದಲ್ಲಿ ನಾನಿನ್ನೂ ಸಾಧಿಸಿದ್ದು ಬೊಗಸೆ ಮಾತ್ರದಷ್ಟು. ಸಾಧಿಸಬೇಕಾದದ್ದಿದೆ ಬಹಳಷ್ಟು. ಇದು ಕೇವಲ ಸಣ್ಣ ಆರಂಭವಷ್ಟೇ. ಹಾಗಾಗಿ ನೀವು ಸಂದರ್ಶನದ ಆರಂಭದಲ್ಲಿ ಬಳಸಿದ “ಪ್ರಖ್ಯಾತ” ಎಂಬ ಪದ ನನಗೆ ಅನ್ವಯವಾಗುವುದಿಲ್ಲ. ನಾನು ಈಗಷ್ಟೇ ಅತ್ಯಲ್ಪ ಸಾಧಿಸಿರುವ ಅತ್ಯಂತ ಸಾಮಾನ್ಯ ವ್ಯಕ್ತಿ. ಕಲಾವಿದನೇನಲ್ಲ. ನನ್ನ ಆತ್ಮ ಸಂತೃಪ್ತಿಗಾಗಿ ಸಾಧನೆಯ ಮಾರ್ಗದಲ್ಲಿದ್ದೇನೆ ಅಷ್ಟೇ. ಸಂಗೀತವೆಂಬುದು ನನಗೆ ಇಹ ಪರ ಎರಡಕ್ಕೂ.
ಸಂಧ್ಯಾ : ಇಲ್ಲಿಯವರೆಗೆ ನೀವು ತುಂಬಾ ಸಾಂಗ್ಸ್ ಕಂಪೋಸ್ ಮಾಡಿರುವಿರಿ, ಅದರಲ್ಲಿ ನಿಮ್ಮ ಬೆಸ್ಟ್ ಯಾವುದು?
ಚಿನ್ಮಯ : ನಾನು ಕಂಪೋಸ್ ಮಾಡಿರುವ ಎಲ್ಲಾ ಹಾಡುಗಳೂ ನನಗೆ ಇಷ್ಟ. ಏಕೆಂದರೆ ನಾನು ಎಲ್ಲಾ ಹಾಡುಗಳನ್ನು ಇಷ್ಟಪಟ್ಟು ಕಂಪೋಸ್ ಮಾಡಿದ್ದೇನೆ. ನಾನು ಮೊದಲಸಲ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಮ್ ಅವರಿಗೆ ಸಂಗೀತ ನಿರ್ದೇಶನ ಮಾಡಿದ “ಪೊರೆಯೋ ಗಜಮುಖನೆ ಕರುಣಾ ಮೂರುತಿಯೇ” ಎಂಬ ನಾಟ ರಾಗದಲ್ಲಿ ಸಂಯೋಜಿಸಿದ ಗೀತೆ ನನಗೆ ಬಹಳ ಇಷ್ಟ.
ಅಂತೆಯೇ ನನ್ನ ಪ್ರಪ್ರಥಮ ಚಲನಚಿತ್ರ ಸಂಗೀತ ನಿರ್ದೇಶನದ ಗೀತೆ “ನೀ ನನ್ನ ಸನಿಹಕೆ ಬಾರೆ…” ಉದಿತ್ ನಾರಾಯಣ್ ಅವರು ಮುಂಬೈನ ಧ್ವನಿಮುದ್ರಣ ಕೇಂದ್ರದಲ್ಲಿ ಬಹಳ ಇಷ್ಟ ಪಟ್ಟು ಆಸ್ವಾದಿಸಿ ಹಾಡಿದ್ದರು. ಅದೂ ಕೂಡ ಮರೆಯಲಾಗದಂತಹ ಅನುಭವ. ಅದೆಷ್ಟರ ಮಟ್ಟಿಗೆ ಉದಿತ್ ನಾರಾಯಣ್ ಆ ಗೀತೆಯನ್ನು ಇಷ್ಟಪಟ್ಟಿ ಹಾಡಿದ್ದರೆಂದರೆ ಅದನ್ನು ನೀವೇ ಯೂಟೂಬಿನಲ್ಲಿ ನೋಡಬಹುದು.
ಈ ಎರಡಕ್ಕಿಂತ ನನ್ನನ್ನು ಹೆಚ್ಚು ಕಾಡುವ ಹಾಡು ನನ್ನ ಸಂಗೀತ ಸಾಹಿತ್ಯದ ದೇಶ್ ರಾಗದ “ಶಾರದೆ ಕರುಣೆಯ ತೋರೆ, ಅರಿವಿನ ಧಾರೆ ಹರಿಸೇ, ಹರಸುತ ನೀ ಬಾರೆ..” ಎಂಬ ಹಾಡು. ಇದನ್ನು ಖ್ಯಾತ ಗಾಯಕಿ ಎಂ.ಡಿ ಪಲ್ಲವಿ ಅವರಿಗಾಗಿಯೇ ಮಾಡಿ ಅವರಿಂದ ಹಾಡಿಸಿದ್ದೆ. ಮುಂದೆ ಈ-ಟಿವಿಯ ರಾಗರಂಜಿನಿ ಎಂಬ ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ಬಾನ್ಸುರಿ ವಾದಕ ಪ್ರವೀಣ್ ಗೋಡ್ಕಿಂಡಿ ಅವರು ಇದೇ ಹಾಡನ್ನು ಮೆಚ್ಚಿಕೊಂಡು ವಿಶ್ಲೇಷಿಸಿ ಮತ್ತೊಬ್ಬ ಖ್ಯಾತ ಗಾಯಕಿ ಅರ್ಚನಾ ಉಡುಪ ಅವರಿಂದ ಹಾಡಿಸಿದ್ದರು.
ಯೂಟೂಬಿನಲ್ಲಿ ನೀವಿದನ್ನು ನೋಡಬಹುದು.
ಸಂಧ್ಯಾ : ನೀವೇ ಸಾಹಿತ್ಯವನ್ನು ಬರೆದು ಸಂಗೀತ ನೀಡುವುದರಿಂದ ಆಗುವ ಉಪಯೋಗವೇನು?
ಚಿನ್ಮಯ : ನೋಡಿ, ಸಂಗೀತ ಹಾಗೂ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಬಿಟ್ಟು ಇನ್ನೊಂದಿರುವುದಿಲ್ಲ. ಸಂಗೀತಗಾರನ ಒಳಗಿರುವ ಸಾಹಿತ್ಯ ಹಾಗೂ ಸಾಹಿತಿ ಅಥವಾ ಕವಿಯ ಒಳಗಿರುವ ಸಂಗೀತ ಎರಡೂ ಬೆರೆತರೆ ಉಂಟಾಗುವ ಭಾವತೀವ್ರತೆಯೇ ಬೇರೆ. ಒಮ್ಮೊಮ್ಮೆ ರಾಗ ಸಂಯೋಜನೆ ಮಾಡುವಾಗಲೇ ಸಂಗೀತಗಾರನೊಳಗಿರುವ ಸಾಹಿತ್ಯ ಸುಮ್ಮನಿರದೆ ತನೇ ತಾನಾಗಿ ಪುಟಿದೆದ್ದು ಹೊರಹೊಮ್ಮುತ್ತದೆ. ಅದನ್ನು ತಡೆಯಲಾಗುವುದಿಲ್ಲ. ಒಮ್ಮೊಮ್ಮೆ ಬರೆದ ಕವನವೊಂದಕ್ಕೆ ತಾನೇ ತಾನಾಗಿ ಸಹಜವಾಗಿ ರಾಗ ಹೊರಹೊಮ್ಮುತ್ತದೆ. ಇದನ್ನೂ ತಡೆಯಲಾಗುವುದಿಲ್ಲ. ಇದೇ ಪ್ರಕೃತಿ. ಇದೇ ಸಹಜತೆ. ಇದೇ ಸಹಜವಾಗಿ ಹೊರಹೊಮ್ಮುವ ಸೌಂದರ್ಯ !
ಸಂಧ್ಯಾ : ಕಳೆದ ಡಿಸೆಂಬರ್‌ನಲ್ಲಿ ಆಲ್ಪೈನ್ ಪಬ್ಲಿಕ್ ಸ್ಕೂಲಿನ ವಾರ್ಷಿಕೋತ್ಸವದಲ್ಲಿ ೨೦೫ ವಿದ್ಯಾರ್ಥಿಗಳಿಂದ ಏಕಕಂಠದಲ್ಲಿ “ಜೊಗದ ಸಿರಿ ಬೆಳಕಿನಲ್ಲಿ” ಗೀತೆಯನ್ನು ಹಾಡಿಸಿ ಹೊಸ ದಾಖಲೆಯೊಂದನ್ನು ನಿರ್ಮಿಸಿದಿರಿ, ಅದರ ಬಗ್ಗೆ ನಿಮ್ಮ ಅನಿಸಿಕೆ…?
ಚಿನ್ಮಯ : ಕಳೆದ ವರ್ಷ ಎರಡು ಹಾಗೂ ಮೂರನೆಯ ತರಗತಿಯ ೬೦ ವಿದ್ಯಾರ್ಥಿಗಳಿಂದ ಡಾ.ನಾ.ಡಿಸೋಜ ಸಾಹಿತ್ಯದ ನನ್ನ ಸಂಗೀತದ “ಎಲ್ಲ ಬನ್ನಿ ತೋಟಕೆ ಮಳೆಯು ನಿಂತಿದೆ..” ಎಂಬ ಗೀತೆಯನ್ನು ವಾದ್ಯಸಂಗೀತದ ಜೊತೆ ಹಾಡಿಸಿದ್ದೆ. ಈ ವರ್ಷ ಇನ್ನೊಂದು ಹೆಜ್ಜೆ ಮುಂದೆ ಸಾಗಿ ಒಂದರಿಂದ ಮೂರನೆಯ ತರಗತಿಯ ೧೬೦ ಮಕ್ಕಳಿಂದ ನನ್ನ ಸಂಗೀತ-ಸಾಹಿತ್ಯದ “ನೋಡ ಬನ್ನಿ ಎಂಥ ಚೆಂದ ನಮ್ಮ ನಾಡೂ ಕನ್ನಡ, ಕಾವೇರಿ ಹುಟ್ಟಿದಂಥ ನಮ್ಮ ನಾಡು ಕನ್ನಡ ” ಎಂಬ ಕಾವೇರಿ ವಿಚಾರಕ್ಕೆ ಸಂಬಂಧಿಸಿದ ಗೀತೆಯನ್ನು ಹಾಡಿಸಿದೆ. ಇದಕ್ಕೆ ಹಿರಿಯ ಕವಿ ಡಾ. ದೊಡ್ಡರಂಗೇಗೌಡರು ಮುಖ್ಯ ಅತಿಥಿಯಾಗಿ ಸಾಕ್ಷಿಯಾಗಿ ಶುಭ ಹಾರೈಸಿದರು. ಇವೆರಡಕ್ಕೂ ನನಗೆ ಪ್ರೋತ್ಸಾಹಿಸಿ ಹುರಿದುಂಬಿಸಿದ್ದು ೧, ೨ ಹಾಗೂ ೩ ನೆಯ ತರಗತಿಯ ಕೋಆರ್ಡಿನೇಟರ್ ಕವಿತಾ ದೀಪಕ್ ಪರ್ವತಿಕರ್ ಎಂಬ ಆಲ್ಪೈನ್ ಪಬ್ಲಿಕ್ ಶಾಲೆಯ ಹಿರಿಯ ಶಿಕ್ಷಕಿ.
೧೬೦ ಮಕ್ಕಳನ್ನು ಸೇರಿಸಿ ಅಭ್ಯಾಸ ಮಾಡಿಸುತ್ತಿರುವುದನ್ನು ಗಮನಿಸಿದ ೪,೫ ಹಾಗೂ ೬ನೆಯ ತರಗತಿಯ ಕೊಆರ್ಡಿನೇಟರ್ ಅನಿತ ಕಾಳಿಭಟ್ ಎಂಬ ಶಿಕ್ಷಕಿ ನನ್ನ ಸಾಮರ್ಥ್ಯಕ್ಕೆ ಮತ್ತೊಂದು ಸವಾಲನ್ನು ಮುಂದಿಟ್ಟರು. ಅದೂ ಕೇವಲ ಒಂದು ವಾರಗಳ ಮುಂಚಿತವಾಗಿ. ೪,೫ ಹಾಗೂ ೬ನೆಯ ತರಗತಿಯ ಎಲ್ಲಾ ಮಕ್ಕಳೂ ಹಾಡುವಂತೆ ಒಂದು ಹಾಡನ್ನು ಅಭ್ಯಾಸ ಮಾಡಿಸಿ ಎಂದು ನನ್ನನ್ನು ಹುರಿದುಂಬಿಸಿದರು. ಹಿರಿಯ ಕವಿ ಪ್ರೊಫೆಸರ್ ಕೆ.ಎಸ್ ನಿಸ್ಸಾರ್ ಅಹಮದ್ ಅವರ ಸುಪ್ರಸಿದ್ಧ “ಜೋಗದ ಸಿರಿ ಬೆಳಕಿನಲ್ಲಿ ಗೀತೆಯನ್ನು ವಾದ್ಯಸಂಗೀತದ ಜೊತೆ ಸೇರಿಸಿ ಪ್ರತೀ ತರಗತಿಯ ಮಕ್ಕಳನ್ನು ಪ್ರತ್ಯೇಕವಾಗಿ ಕರೆಸಿಕೊಂಡು ಪ್ರತಿದಿನ ಅಭ್ಯಾಸ ಮಾಡಿಸಿದೆ. ಹಾಗಾಗಿ ಮೂರೂ ತರಗತಿಯ ೨೦೫ ವಿದ್ಯಾರ್ಥಿಗಳೂ ಹಾಡುವಾಗ ಎಲ್ಲೂ ತಪ್ಪಿಲ್ಲದಂತೆ ವಾದ್ಯ ಸಂಗೀತಕ್ಕೆ ಹಾಡ ತೊಡಗಿದರು. ಆದರೆ ವೇದಿಕೆಯಲ್ಲಿ ಈ ಎಲ್ಲಾ ಮಕ್ಕಳೂ ಎಲ್ಲಾ ಪ್ರೇಕ್ಷಕರಿಗೂ ಕಾಣುವಂತೆ ಮಾಡುವುದೇ ಹರಸಾಹಸದ ಕೆಲಸವಾಗಿತ್ತು. ಅದನ್ನು ಆಲ್ಪೈನ್ ಶಾಲೆಯ ಸಿಬ್ಬಂದಿ ವರ್ಗ ವ್ಯವಸ್ಥಿತವಾಗಿ ಮಾಡಿತು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಒಂದೂ ತಪ್ಪಿಲ್ಲದಂತೆ ಭಾವಪೂರ್ಣವಾಗಿ ಹಾಡಿದರು. ಈ ಕ್ರೆಡಿಟ್ ಸಲಬೇಕಾದದ್ದು ನನಗಲ್ಲ, ಶಾಲೆಯ ಪ್ರಾಂಶುಪಾಲಕಿ ಜಯಲಕ್ಷ್ಮೀ ಶಾಸ್ತ್ರಿ ಅವರಿಗೆ, ನನ್ನ ಸಾಮಾರ್ಥ್ಯವನ್ನು ನನಗೇ ತೋರ್ಪಡಿಸಿದ ನನಗೆ ಸವಾಲನ್ನು ನೀಡಿ ಗೆಲ್ಲುವಂತೆ ಮಾಡಿದ ೪,೫ ಹಾಗೂ ೬ನೆಯ ತರಗತಿಯ ಆಕಾಡೆಮಿಕ್ ಕೊಆರ್ಡಿನೇಟರ್ ಶಿಕ್ಷಕಿ ಅನಿತ ಕಾಳಿಭಟ್ ಅವರಿಗೆ ಹಾಗೂ ಇಂಪಾಗಿ ಹಾಡಿದ ೨೦೫ ವಿದ್ಯಾರ್ಥಿಗಳಿಗೆ, ಇಡೀ ಆಲ್ಪೈನ್ ಶಾಲೆಯ ಬಳಗಕ್ಕೆ.
ಸಂಧ್ಯಾ : ಸರ್, ನಿಮ್ಮ ಮುಂದಿನ ಗುರಿ?
ಚಿನ್ಮಯ : ನನ್ನ ಹಿಂದಿನ, ಇಂದಿನ ಹಾಗೂ ಮುಂದಿನ ಗುರಿ ಒಂದೇ, ಅದು ಸಂಗೀತ ಸಾಧನೆಯೆಂಬ ನಿರಂತರ ತಪಸ್ಸು. “ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ”ಯನ್ನು ಕಳೆದ ವರ್ಷ ಸಂಸ್ಥಾಪಿಸಿದ್ದೇನೆ. ಇದರ ಅಡಿಯಲ್ಲಿ ಶಾಸ್ತ್ರೀಯ ಸಂಗೀತವನ್ನು ನಾನೂ ನಿರಂತರವಾಗಿ ಸಾಧನೆ ಮಾಡುತ್ತಾ ನನ್ನ ವಿದ್ಯಾರ್ಥಿಗಳನ್ನೂ ಅದೇ ದಾರಿಯಲ್ಲಿ ಕೊಂಡೊಯ್ಯುತ್ತಾ ಸಮೃದ್ದ ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾಯಕ ನನ್ನದು. ಈಗಾಗಲೇ ಸುಮಾರು ೧೫೦ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಂಗೀತ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವತಹ ನಾನೇ ಅವರೆಲ್ಲರಿಗೆ ಸಂಗೀತ ಪಾಠವನ್ನು ಮಾಡುತ್ತಿದ್ದೇನೆ. ಶಿಷ್ಯರನ್ನು ತಯಾರು ಮಾಡುವ ಖುಷಿಯೇ ಬೇರೆ. ಅವರಿಗೆ ಪಾಠ ಮಾಡುತ್ತಾ ಮಾಡುತ್ತಾ ನಾವೂ ಪರಿಪೂರ್ಣತೆಯತ್ತ ಸಾಗಬಹುದು.
ಸಂಧ್ಯಾ : ಸರ್, ಸಂಗೀತದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ನಿಮ್ಮ ಅನಿಸಿಕೆ..?
ಸಂಗೀತವನ್ನು ಇನ್ನೂ ಕಲಿಯುವ ಹಂತದಲ್ಲಿರುವಾಗಲೇ ಕೀರ್ತಿ ಪಡೆಯುವ ಹುಚ್ಚು ಇಂದಿನ ಸಾಕಷ್ಟು ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ಕಾಣುತ್ತಿದೆ. ಇದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ. ರಿಯಾಲಿಟಿ ಶೋಗಳು ಜನರ ದಾರಿ ತಪ್ಪಿಸುತ್ತಿವೆ. ಇದರ ಭವಿಷ್ಯದ ಪರಿಣಾಮದ ಅರಿವಿಲ್ಲದ ಮುಗ್ಧ ಮಕ್ಕಳು ಶಾಸ್ತ್ರೀಯ ಸಂಗೀತವನ್ನು ಆಳವಾಗಿ ಸಾಧನೆ ಮಾಡುವ ಬದಲು ತಾತ್ಕಾಲಿಕ ಕೀರ್ತಿಯನ್ನು ಪಡೆಯುವಲ್ಲಿಯೇ ಮಗ್ನರಾಗಿರುತ್ತಾರೆ. ಸಂಗೀತವನ್ನು ನಿರಂತರ ಸಾಧನೆಯ ಮೂಲಕ ಸಿದ್ಧಿಸಿಕೊಳ್ಳುತ್ತಾ ಹೋದರೆ ಕೀರ್ತಿ ತಾನೇ ತಾನಾಗಿ ಸಹಜವಾಗಿ ಬರುತ್ತದೆ. ಹೀಗೆ ಸಹಜವಾಗಿ ಬಂದೊದಗುವ ಕೀರ್ತಿ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಇನ್ನೂ ಕಾಯಾಗಿರುವ ಹಣ್ಣನ್ನು ಗುದ್ದಿ ಹಣ್ಣು ಮಾಡಿದರೆ ಕಾಯಿ ಹಣ್ಣಾಗುವ ಬದಲು ಸವಿರುಚಿಯನ್ನು ಕಳೆದುಕೊಂಡು ಕೊಳೆತು ಹೋಗುತ್ತದೆಯಷ್ಟೇ.
೧೭-೨-೨೦೧೭
*******************