ಸಂಗೀತ ಸಮಯ

ಗಾನಯಾನದ ಭರವಸೆಯ ದನಿ ಮನೋಜ್ ಶರ್ಮಾ

ಬರಹ
ಸಂಧ್ಯಾ ಅಜಯ್ ಕುಮಾರ್

ಯಾವುದೇ ಕ್ಷೇತ್ರವಾಗಲೀ ತನ್ನನ್ನು ತಾನು ತೊಡಗಿಸಿಕೊಂಡರೆ ಮಾತ್ರ ಅದರಲ್ಲಿ ತಲ್ಲೀನತೆಯಿಂದ ಶ್ರದ್ಧೆಯಿಂದ ಕಲಿಕೆ ನಿರಂತರವಾಗಿದ್ದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನುವುದಕ್ಕೆ ಅನೇಕ ಉದಾಹರಣೆಗಳಿವೆ.ಅಂತೆಯೇ ಅನೇಕರ ನೆನಪು ನಮಗೆ ಕಾಡುತ್ತದೆ.ಅದರಲ್ಲಿಯೂ ಬಹುಮುಖ್ಯವಾಗಿ ಇವತ್ತಿನ ದಿನಮಾನಗಳಲ್ಲಿ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿರುವ ಕ್ಷೇತ್ರ ಎಂದರೆ “ಸಂಗೀತ”.ಹೀಗಿರುವಾಗ ತನ್ನ ಕಾರ್ಯ ಕ್ಷೇತ್ರಕ್ಕೆ ತನ್ನದೇ ಕಂಠಸಿರಿಯಿಂದ ಏನಾದರೂ ಕೊಡುಗೆ ನೀಡಬೇಕೆಂಬ ಮಹದಾಸೆ ಹೊತ್ತು ರಕ್ತಗತವಾಗಿ ಬಂದ ಸ ರಿ ಗ ಮ ಪ ದ ನಿ ಯನ್ನು ದೇಶವ್ಯಾಪಿ ಪಸರಿಸಬೇಕೆಂಬ ಹಂಬಲ ಹೊತ್ತ ಈ ಚಿಗುರು ಮೀಸೆಯ ತರುಣ,ಯುವಜನತೆಗೆ ಮಾದರಿ ಗಾಯಕ..ಮಾತ್ರವಲ್ಲ ಕಂಠದಾನಿ,ದನಿ ಬಳಕೆಯಲ್ಲೂ ನಿಸ್ಸೀಮ.

 

• ಮನೆ ಮನದಂಗಳದಲ್ಲಿ ಬಾಲ್ಯ…ಸಪ್ತಸ್ವರಗಳೇ ಅಕ್ಷರಮಾಲೆಯಾದಾಗ…

ತಂದೆ ಎಸ್.ಆರ್.ಶ್ರೀನಿವಾಸ್ ಸೀನಿಯರ್ ಅಡ್ವೋಕೇಟ್.ತಾಯಿ ಸಿ.ಎಸ್.ಲಕ್ಷ್ಮೀ. ಸಂಗೀತದಲ್ಲಿ ವಿದ್ವತ್‍ಗಳಿಸಿ ಮಗನಿಗೆ ಮೊದಲ ಗುರುವಾಗಿ ಮಗನ ಏಳಿಗೆಗೆ ಪ್ರೋತ್ಸಾಹದಾತೆ.ಇವರಿಬ್ಬರ ಏಕಮೇವ ಸುಪುತ್ರ ಇಷ್ಟೆಲ್ಲ ಪದಪುಂಜಗಳ ಹೊಗಳಿಕೆಗೆ ಭಾಜನ ಮನೋಜ್ ಶರ್ಮಾ.ಹುಟ್ಟು ಭದ್ರಾವತಿಯಲ್ಲಿ.ಬೆಳೆದದ್ದು ಹಾಸನದಲ್ಲಿ.ವಿದ್ಯಾಭ್ಯಾಸ ಆರಂಭ ಮನೆಯಲ್ಲಿ ಸಂಗೀತವಾದರೆ ಉಳಿದದ್ದು ಹಾಸನದಲ್ಲೇ.ತನ್ನ ನಾಲ್ಕನೇ ವಯಸ್ಸಿನಲ್ಲೇ ವೇದಿಕೆಯೇರಿ “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ” ಎಂದು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆರಾಧನಾ ಮಹೋತ್ಸವದ ನಿಮಿತ್ತ ಹಾಡಿ ರಂಜಿಸಿ ಬಹುಮಾನ ಗಳಿಸಿದ ಪೋರ,ಮತ್ತೆ ಅನೇಕ ವೇದಿಕೆಗಳನ್ನು ಹತ್ತುವ ಅವಕಾಶ ಕಲ್ಪಿಸಿಕೊಂಡದ್ದು ಮಾತ್ರ ಶ್ಲಾಘನೀಯ.ಶಾಲಾ ದಿನಗಳ ಹಾಡಿನ ಯಾವುದೇ ಕಾರ್ಯಕ್ರಮವಿರಲಿ ಅಥವಾ ಶಾಲೆಯಲ್ಲಿ ಮಾಡುವ ಸಮಾರಂಭವಿರಲಿ ಈತನ ಗಾನಸುಧೆ ಪಸರಿಸಲೇಬೇಕೆಂಬ ಹೆಬ್ಬಯಕೆ ಅಲ್ಲಿನ ಶಿಕ್ಷಕರದ್ದು.

ಹಾಡಿ ರಂಜಿಸಿ ತನ್ನ ಕ್ಷೇತ್ರದ ಬಾಗಿಲು ತಾನೇ ತೆರೆದ ಮನೋಜ್ ಮತ್ತಾವತ್ತೂ ಹಿಂದೆ ನೋಡಲಿಲ್ಲ.ನಿರಂತರ ಕಲಿಕೆ,ಗಾಯನ ಮುಂದುವರೆಸುತ್ತಾ ಪ್ರೌಢಾವಸ್ಥೆಯ ಹೊಸ್ತಿಲಲ್ಲಿ ಎತ್ತ ಸಾಗುವುದು ಮನಸ್ಸು ಎಂಬ ಹಲವು ಕನಸುಗಳಿಗೆ ಲಗಾಮು ಹಾಕಿ ಸಂಗೀತವೇ ನನ್ನುಸಿರು ಎಂದು ಶ್ರದ್ಧೆಯಿಂದ ಪಾಠವನ್ನು ಗುರುಗಳಾದ ವಿದ್ವಾನ್ ಸಾವಿತ್ರಿ ಮಂಜುನಾಥ್ ರವರಲ್ಲಿ ಕರ್ನಾಟಕ ಶಾಸ್ತ್ರೀಯ ಗಾಯನ ಹಾಗೂ ವಿದೂಷಿ ರೇಖಾ ಅಶೋಕ್,ಸುಗಮ ಸಂಗೀತವನ್ನು ವಿ.ಕೆ.ಆರ್ ವೆಂಕಟೇಶ್ ರವರಲ್ಲಿ ಅಭ್ಯಾಸ ಮಾಡಲಾರಂಭಿಸಿದ.ಹಾಗೇ ಸಾಗುತ್ತಿದ್ದ ಕನಸಿನ ಬದುಕಿಗೆ ಸಂಗೀತದ ಚಿಲುಮೆ ಚಿಮ್ಮಲು ಅನೇಕ ಸಹಪಾಠಿಗಳು ಕಾರಣ ಎನ್ನುವ ಮನೋಜ್,ಅವರ ಜೊತೆಗೂಡಿ ಅನೇಕ ಕಾರ್ಯಕ್ರಮಗಳ ಭೇಟಿಯತ್ತ ಆರಂಭಿಸಿದ.ಹಾದಿ ಸುಗಮವಾಗುತ್ತಾ ಸಾಗಿತಾದರೂ ತನ್ನನ್ನು ತಾನು ಗುರುತಿಸಿಕೊಳ್ಳುವಲ್ಲಿ ಹರಸಾಹಸ ಪಡಬೇಕಾಗದೇ ಮಂದಗತಿಯಿಂದ ಎಚ್ಚರಿಕೆಯಿಂದ ತನ್ನಲ್ಲಿ ಅಡಗಿದ್ದ ಕಲೆಗಾರಿಕೆಯನ್ನು ಹೋದಲ್ಲಿ ಪ್ರದರ್ಶಿಸಿ ತಾನೇ ತನ್ನ ಬದುಕನ್ನು ಹಸನಾಗಿಸಿ ತುಸು ಮನಸ್ಸನ್ನು ಅರಳಿಸಿಕೊಳ್ಳುತ್ತಿದ್ದ.

ಎಸ್.ಎಸ್.ಎಲ್.ಸಿ ಸಮಯ ಮಾತ್ರ ಓದಿನಲ್ಲೇ ಕಳೆಯಿತಾದರೂ ಮಧ್ಯೆ ಮಧ್ಯೆ ಗುನುಗುತ್ತಿದ್ದ ಹಾಡುಗಳು,ಹಾಕುತ್ತಿದ್ದ ತಾಳಗಳು ಕಂಚಿನಕಂಠದ ಗಾಯಕನಾಗಬೇಕೆಂಬ ಬಯಕೆಯನ್ನು ಮೆಲುಕುಹಾಕುವಂತೆ ಮಾಡುತ್ತಿತ್ತು. ಒಳ್ಳೆಯ ಅಂಕಗಳಿಕೆ ಮನೆಯಲ್ಲಿ ಖುಷಿ ತಂದು ಪಿ.ಯು. ವ್ಯಾಸಂಗಕ್ಕೆ ಬೆಂಗಳೂರಿಗೆ ಬರುವಂತೆ ಮಾಡಿತು.ಆದರೆ ಮನೋಜ್ ಗೆ ಒಲ್ಲದ ಮನಸ್ಸು.ಹಾಗೂ ಹೀಗೂ ಪಿ.ಯು.ಮುಗಿಸಿ ದ್ವಿತೀಯ ಪಿ.ಯು ಗೆ ಮತ್ತೆ ತನ್ನೂರನ್ನೇ ಬೆನ್ನು ಹತ್ತಿ ಅಲ್ಲಿ ಮೆಡಿಕಲ್ ಗೆ ಸೇರಿಕೊಂಡು ಇದೀಗ ಓದಿನ ಹಂತ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಸಾಗುವುದರ ಜೊತೆ ಜೊತೆಗೆ ಸಂಗೀತ ಕಲಿಕೆ ಹಾಗೂ ಅನೇಕ ವೇದಿಕೆಗಳ ಬೇಡಿಕೆ ಗಾಯಕನಾಗಿರುವುದರ ಮನೋಜ್,ಮಾತಿನಲ್ಲೂ ಪ್ರಳಯಾಂತಕ…

 

• ದನಿ ಬಳಕೆಯ ಪರಮಾವಧಿ…ವಿದೇಶದಲ್ಲೂ ಮಾತಿನ ಲಹರಿ…..

ಶ್ರೀ ಸ್ವಾಮಿ ನಾರಾಯಣ ಮಂದಿರ ಗುರುಕುಲದಲ್ಲೇ ಇವನ ಧ್ವನಿ ಹಾಗೂ ಉಚ್ಛಾರಣೆಯನ್ನು ಗಮನಿಸಿದ ಅನೇಕರು ಅಲ್ಲಿನ ಸಾಕ್ಷ್ಯಚಿತ್ರಗಳಿಗೆ ಇವನದ್ದೇ ಹಿನ್ನೆಲೆ ದನಿ ಇರಲೆಂದು ಮನೋಜ್ ಹತ್ತಿರವೇ ಧ್ವನಿ ನೀಡು ಎಂದು ಹೇಳಿದರು.ಮಾಡಲು ಸಿದ್ದ ಎಂದು ಇತರರ ಪ್ರೋತ್ಸಾಹ ಜೊತೆಗೆ ಉತ್ತೇಜನವನ್ನು ಗಳಿಸಿ ಇದೀಗ ಆತನ ದನಿ ಐ.ವಿ.ಆರ್.ಎಸ್ ನ ರೆಕಾರ್ಡಿಂಗ್ ಗೆ ಆಯ್ಕೆಯಾಗಿ ಸರಿಸುಮಾರು 38 ಭಾಷೆಗಳಲ್ಲಿ ಕೇಳಸಿಗುತ್ತದೆ.ಭಾಷೆ ಯಾವುದಾದರೇನು ಭಾವ ನವನವೀನ ಅನ್ನೋದಕ್ಕೆ ಮನೋಜ್ ಸೂಕ್ತ ಉದಾಹರಣೆ ಎನ್ನಬಹುದು.
ಇಷ್ಟಕ್ಕೇ ಸೀಮಿತವಾಗದ ಮನೋಜ್ ದನಿ ಇದೀಗ ರಷ್ಯಾ ಕಂಪನಿಗಳ ಅನೇಕ ಮಹತ್ವ ಕಾರ್ಯಗಳಿಗೆ ಧ್ವನಿಯಾಗುತ್ತಿದೆ.ಹೇಗೆ ಭಾಷೆಯ ಕಲಿಕೆ ಸಾಧ್ಯ ಅನ್ನೋ ಪ್ರಶ್ನೆಗೆ ಮನೋಜ್ ಹೇಳಿದ ಒಂದೇ ಮಾತೆಂದರೆ ಎಲ್ಲಾ ಭಾಷೆಗಳ ಸಾಲುಗಳನ್ನ ಕನ್ನಡದಲ್ಲೇ ಬರೆದು ಆ ಭಾಷೆಯ ಉಚ್ಛಾರಣೆಯನ್ನ ಅರ್ಥೈಸಿಕೊಂಡು ನಂತರ ಧ್ವನಿ ನೀಡುವಿಕೆಯ ಕಾರ್ಯ ಮುಂದುವರೆಯುತ್ತದೆ.ಸ್ವಲ್ಪ ಸಮಯ ತೆಗೆದುಕೊಂಡರೂ ಕನ್ನಡದಲ್ಲೇ ಪ್ರತಿಯೊಂದನ್ನೂ ಬರೆದು ಕಲಿಯುತ್ತೇನೆ ಎನ್ನುವ ಮನೋಜ್ ಮಾತಿನಲ್ಲಿ ಕನ್ನಡದ ಅಭಿಮಾನ ಸ್ಪಷ್ಟ ಉಚ್ಚಾರ ಲೀಲಾಜಾಲವಾಗಿ ಕೇಳಿಸುವ ಮಾತುಗಳು ಶ್ರೋತೃಗಳ ಮನಸೂರೆಗೊಳ್ಳುವುದರಲ್ಲಿ ಸಂಶಯವೇ ಇಲ್ಲ.

 

• ಅಂತರ್ಜಾಲದಲ್ಲಿ ಲೀಲಾಜಾಲವಾಗಿ ಗಾನಸುಧೆ…

ಇವತ್ತಿನ ಜಗತ್ತು ಅಂತರ್ಜಾಲದಲ್ಲೇ ಮುಳುಗಿರುವಂತದ್ದು.ಇಂಟರ್‍ನೆಟ್ ಇಲ್ಲದ ಮನೆ ಮನಸ್ಸುಗಳಿಲ್ಲ.ಹೀಗಿರುವಾಗ ಅಲ್ಲಿ ಕಂಗೊಳಿಸುವ ಶಾರ್ಟ್ ಮೂವೀಸ್‍ಗಳಲ್ಲಿನ ಅನೇಕ ನಟರಿಗೆ ಮನೋಜ್ ದನಿ ಕೇಳಸಿಗುತ್ತದೆ. ಅಷ್ಟೇ ಅಲ್ಲ ಫೇಸ್ ಬುಕ್ ನಲ್ಲಿ ಸ್ನೇಹಿತರಾಗೋದು ಸಹಜ..ಒಬ್ಬ ಗಾಯಕ ಅದರಲ್ಲಿಯೂ ಮನೋಜ್ ರಂಥಾ ಸ್ಪುರದ್ರೂಪಿ ಯುವಕ ಅನೇಕರ ಮೆಚ್ಚುಗೆಯ ಭರವಸೆಯ ದನಿ ಅಂದಾಗ ಹುಡುಕಿಕೊಂಡು ಫ್ರೆಂಡ್ಸ್ ಆಗುತ್ತಾರೆ.ಅಂತದ್ದರಲ್ಲಿ ತನ್ನದೇ ಫೇಸ್ ಬುಕ್ ಪೇಜ್ ಕ್ರಿಯೇಟ್ ಮಾಡಿರುವ ಮನೋಜ್ ಶರ್ಮಾ,ತನ್ನ ಖಾತೆಗೆ ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚಿನ ವೀಕ್ಷರಿದ್ದಾರೆಂದು ಹೆಮ್ಮೆಯಿಂದ ಹೇಳಿಕೊಂಡು ತನ್ನ ಕಾರ್ಯಕ್ರಮದ ವೀಡಿಯೋ ತುಣುಕುಗಳು ಮಾತ್ರವಲ್ಲ ಸಾಮಾಜಿಕ,ಪರಿಸರ ಕಾಳಜಿ,ಪ್ರಸ್ತುತ ಸ್ಥಿತಿಗತಿಗಳ ಕೆಲವು ಮಹತ್ವ ಹಾಗೂ ಮಾಹಿತಿ ಪೂರ್ಣ ಪೋಸ್ಟರ್ ಗಳನ್ನು ಅಪ್‍ಲೋಡ್ ಮಾಡುತ್ತೇನೆ..ಅನೇಕರು ಪ್ರಶಂಸಿಸುತ್ತಾರೆ ಎನ್ನುವ ಆ ಮಾತಿನಲ್ಲಿ ಮತ್ತಷ್ಟು ಭಾವ ಬಯಕೆಗಳ ಖನಿಜತೆ ತೋರುತ್ತಿತ್ತು.

 

 

• ಗೌರವ, ಪ್ರಶಸ್ತಿ ಮುಡಿಗೇರಿದ ಸಮಯ…ಆನಂದಮಯ..

ಇದಿಷ್ಟೂ ಮಾಹಿತಿಗಳು ದನಿಗೆ ಸಂಬಂಧಿಸಿದ್ದಾದರೆ ಗಾಯಕನಾಗಿ ಬಡ್ತಿ ಪಡೆದು ವೇದಿಕೆಗಳಲ್ಲಿ ರಂಜಿಸುವ ಮನೋಜ್ ಅನೇಕರ ಅಚ್ಚು ಮೆಚ್ಚಿನ ಕಂಠದೊಡೆಯ.ಎಸ್.ಪ್.ಬಿ, ಹಂಸಲೇಖಾ,ನಂದಿತಾ,ಕೆ.ಕಲ್ಯಾಣ್,ರಾಜೇಶ್ ಕೃಷ್ಣನ್ ಹೀಗೆ ಗಾನ ದಿಗ್ಗಜರ ಸಮಕ್ಷಮದಲ್ಲಿ ಹಾಡಿ ಶಹಭಾಸ್ ಗಿರಿ ಗಿಟ್ಟಿಸಿದ್ದಲ್ಲದೇ ಅವರುಗಳ ತಂಡದ ಜೊತೆಗೂ ಹಾಡಿ ರಂಜಿಸಿರುವ ಮನೋಜ್,ಮಾಮರವೆಲ್ಲೋ ಕೋಗಿಲೆಯೆಲ್ಲೋ ಸಾಲು ಹಾಡಿದರೆ ಸಾಕು ಚಪ್ಪಾಳೆಗಳ ಸದ್ದು ಕಿವಿಗಡಚುತ್ತದೆ.ಬೆಂಗಳೂರು ಗಣೇಶ ಉತ್ಸವ,ಲಕ್ಕುಂಡಿ ಉತ್ಸವ,ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಸೇರಿದಂತೆ ಶಾಲಾ ಕಾಲೇಜಿನಿಂದ ಈವರೆಗೂ ಒಟ್ಟು 700ಕ್ಕೂ ಹೆಚ್ಚು ಕಾರ್ಯಕ್ರಮಗಳು,200 ಕ್ಕೂ ಹೆಚ್ಚು ಮೆಡಲ್ಸ್‍ಗಳು,ಅನೇಕ ಸಂಘ ಸಂಸ್ಥೆಗಳ ಗೌರವ, ಹಾಗೂ ಮನೋಜ್‍ಗೆ ಸುಪ್ರದ ಕಲಾನಿಕೇತನ,ಗಾನ ಕುಸುಮ,ಸಂಗೀತೋಪಾಸನ ಪ್ರಶಸ್ತಿಗಳು ಸಂದಿದೆ. ಚಿರಯುವಕ ಮನೋಜ್,ವಿದೇಶಕ್ಕೂ ಹಾರಿ ಕನ್ನಡ ಗೀತೆಗಳನ್ನು ಹಾಡಿ ಅಲ್ಲಿನ ಜನತೆಗೆ ಕನ್ನಡ ಡಿಂಡಿಮ ಮೊಳಗಿಸಿದ್ದಾರೆ.

 

• ಹಿನ್ನೆಲೆ ಗಾಯಕನಾಗಿ ಮನೋಜ್ ಶರ್ಮಾ…

ಇಷ್ಟೆಲ್ಲಾ ವೇದಿಕೆಗಳಾಗಿದೆ ಅಂದಮೇಲೆ ಸಿನಿಮಾ ಕ್ಷೇತ್ರ ಇಂತಹವರಿಗೆ ಅವಕಾಶ ಕೊಡದೇ ಇರಲು ಸಾಧ್ಯವೇ?…ಅನೇಕ ಸಿನಿಮಾಗಳ ಟ್ರ್ಯಾಕ್ ಗಾಯಕನಾಗಿರುವ ಮನೋಜ್ ತೆರೆ ಕಾಣಬೇಕಾದ “ಮನೋರಥ” ಚಿತ್ರದ ಗೀತೆಯೊಂದಕ್ಕೆ ಹಾಡಿ ಹಿನ್ನೆಲೆ ಗಾಯಕನಾಗಿ ಬೆಳ್ಳಿತೆರೆಯಲ್ಲಿ ತನ್ನ ಹೆಸರನ್ನು ಅಚ್ಚಾಗಿಸಲು ಸಿದ್ಧನಾಗಿದ್ದಾನೆ.ಅಲ್ಲದೇ ಅನೇಕ ಸಿನಿಮಾ ಗೀತೆಗಳ ಅವಕಾಶಗಳು ಕೈಯಲ್ಲಿದ್ದು ತನ್ನ ಪೂರ್ವ ತಯಾರಿಯ ಜೊತೆ ಜೊತೆಗೆ ಧ್ವನಿಯತ್ತವೂ ಗಮನಹರಿಸಿ ಇಷ್ಟೆಲ್ಲ ಕಾರ್ಯಕ್ಷಮತೆಗೆ ನನ್ನ ಆತ್ಮೀಯ ಸ್ನೇಹಿತರು ಹಿತೈಷಿಗಳು ಮುಖ್ಯವಾಗಿ ಮನೆಯಲ್ಲಿ ಅಜ್ಜಿ ಅಪ್ಪ ಅಮ್ಮನ ಪ್ರೋತ್ಸಾಹವೇ ಕಾರಣ ಎನ್ನುತ್ತಾ ಸಂಗೀತ ಕ್ಷೇತ್ರದಲ್ಲಿ ಏನಾದರೂ ಮಹತ್ವದ ಸಾಧನೆ ಮಾಡಬೇಕೆನ್ನುವ ಮಹದಾಸೆ ಹೊತ್ತ ಮನೋಜ್ ತನ್ನ ಓದಿನಲ್ಲೂ ಅಷ್ಟೇ ಭಕ್ತಿ ಶ್ರದ್ಧೆ ಇಟ್ಟಿರುವುದು ನಿಜಕ್ಕೂ ಹೆಮ್ಮೆ ತರುತ್ತದೆ.
ಯುವಜನತೆಗೆ ಆದರ್ಶ ಯುವಕನಾಗಿ ಕಂಗೊಳಿಸಿ ಮನೋಜ್, ತನ್ನೆಲ್ಲಾ ಆಸೆ ಆಕಾಂಕ್ಷೆಗಳ ಈಡೇರಿಕೆಗೆ ಶ್ರಮಿಸಿ ನಾಡಿಗೆ ಗಾನಕ್ಷೇತ್ರಕ್ಕೆ ತನ್ನದೇ ಹೆಸರು,ಚಾಪು ಮೂಡಿಸಲಿ ಎನ್ನುವುದು ಎಲ್ಲರ ಆಶಯ.ಅಂತೆಯೇ ನಗುಮೊಗದ ಚಲುವನಿಗೆ ತನ್ನಾಸೆಗಳೆಲ್ಲಾ ಈಡೇರಲಿ ಎಂದು ಮನದುಂಬಿ ಹಾರೈಸೋಣ…

ಬರಹ
ಸಂಧ್ಯಾ ಅಜಯ್ ಕುಮಾರ್

Wednesday, ‎April ‎11, ‎2018

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.