ಸಾಹಿತ್ಯಹೊತ್ತಿಗೆ ಹೊತ್ತು

ಮಾನವ ಹೃದಯದ ವೈಜ್ಞಾನಿಕ ಕತೆಗಳು

Guptagaminiಪುಸ್ತಕ: ಗುಪ್ತಗಾಮಿನಿ (ವೈಜ್ಞಾನಿಕ ಕಥೆಗಳ ಸಂಗ್ರಹ)

ಲೇಖಕರು: ಶ್ರೀಮತಿ ಸವಿತಾ ಶ್ರೀನಿವಾಸ್
ಪುಟಗಳು: ೪+೧೧೨
ಬೆಲೆ: ರೂ ೭೫
ಪ್ರಕಾಶಕರು: ಐಬಿಎಚ್ ಪ್ರಕಾಶನ, ಬೆಂಗಳೂರು

ಮಾನವ ಹೃದಯದ ವೈಜ್ಞಾನಿಕ ಕತೆಗಳು

ಗುಪ್ತಗಾಮಿನಿ ಕತೆಗಾರ್ತಿ ಸವಿತಾ ಶ್ರೀನಿವಾಸ್ ಅವರ ವೈಜ್ಞಾನಿಕ ಕತೆಗಳ ಸಂಗ್ರಹ. ಎರಡು ಕಾದಂಬರಿಗಳೂ ಸೇರಿದಂತೆ ಅನೇಕ ಕಥಾಸಂಕಲನಗಳನ್ನು, ಪ್ರವಾಸ ಸಾಹಿತ್ಯವನ್ನು ಸೃಷ್ಟಿಸಿರುವ ಲೇಖಕಿಯ ವೈಜ್ಞಾನಿಕ ಕತೆಗಳ ಸಂಗ್ರಹ ಈ ಕೃತಿ.

ಇದರಲ್ಲಿ ಒಟ್ಟು ಒಂಬತ್ತು ಕತೆಗಳಿವೆ. ತುಂಬ ದೊಡ್ಡದೂ ಅಲ್ಲದ ಸಣ್ಣದೂ ಅಲ್ಲದ ಈ ಕತೆಗಳು ತಮ್ಮದೇ ಆದ ಕುತೂಹಲವನ್ನು ಉಳಿಸಿಕೊಂಡು ಓದಿಸಿಕೊಳ್ಳುತ್ತವೆ. ಇಲ್ಲಿ ಅಂದರೆ ವೈಜ್ಞಾನಿಕ ಕತೆಗಳ ಸಂದರ್ಭದಲ್ಲಿ – ಬಹಳ ಮುಖ್ಯವಾದ ಅಂಶವೆಂದರೆ, ಕತೆಗಳು ಕೊನೆಯಾಗುವುದು ಯಾವುದೋ ಹೊಸ ವೈಜ್ಞಾನಿಕ ಕ್ರಾಂತಿಯಲ್ಲಲ್ಲ, ಅಥವಾ ಯಾವುದೋ ಮಾಂತ್ರಿಕ ಸ್ಪರ್ಷದಲ್ಲಿ ಅಲ್ಲ, ಆದರೆ ಮಾನವೀಯತೆಯ ಒಡಲಲ್ಲಿ! ಇದೊಂದು ಅದ್ಭುತ ಜೀವತ್ಪ್ರೀತಿಯ ಪ್ರಯೋಗ.

ವೈಜ್ಞಾನಿಕ ಕತೆಗಳು ಅನೇಕ ಹೊಸ ಆವಿಷ್ಕಾರಗಳಿಗೆ ಕಾರಣವಾಗಿರುವುದನ್ನು ಇತಿಹಾಸ ದಾಖಲಿಸಿದೆ. ಮಾನವ ಸಾಧಿಸಲಾಗದ ಅನೇಕ ಉಪಕರಣಗಳನ್ನು ವ್ಯವಸ್ಥಗಳನ್ನು ವೈಜ್ಞಾನಿಕ ಕತೆಗಳಲ್ಲಿ ನೋಡುತ್ತೇವೆ. ಅವು ಉಂಟು ಮಾಡುವ ಪರಿಣಾಮಗಳಿಗೆ ಆಶ್ಚರ್ಯಪಡುತ್ತೇವೆ. ಇಲ್ಲಿ ಅಂತಹ ಆವಿಷ್ಕಾರಗಳು ಇದ್ದರೂ ಅವು ಮುಖ್ಯವಾಗುವುದಿಲ್ಲ. ಆವಿಷ್ಕಾರಗಳು ಆಗುತ್ತವೆ. ಮಾನವನ ಬುದ್ಧಿಗೆ ಮಂಕುಕವಿಯುವಂತಹ, ಅನೇಕ ಹೊಸ ಉಪಕರಣಗಳು, ಇವುಗಳು ಉಂಟುಮಾಡುವ ಹೊಸ ವ್ಯವಸ್ಥೆ ಎಲ್ಲವೂ ಉಸಿರು ಬಿಗಿಹಿಡಿದು ಓದುವಂತೆ ಮಾಡುತ್ತದೆ ಆದರೆ, ಕೊನೆಗೆ ಸಮಸ್ಯೆ ಪರಿಹಾರವಾಗುವುದು ಮಾತ್ರ ಮಾನವ ಪ್ರೀತಿ, ಶಾಂತಿ, ಸಹಬಾಳ್ವೆ, ಹಸಿರು ಎಂಬಲ್ಲಿ. ಆ ಸಂದೇಶವನ್ನೂ ಇಲ್ಲಿನ ಕತೆಗಳು ನೀಡುತ್ತವೆ. ಲೇಖಕಿಯ ಈ ನಿಲುವು ಮೆಚ್ಚತಕ್ಕದ್ದು.

ಇಂದು ರಾತ್ರಿಪಾಳಿ ಎಂಬುದು ಹಗಲು ಕೆಲಸ ಮಾಡುವಷ್ಟೇ ಸಾಮಾನ್ಯವಾಗಿದೆ. ಇದರಿಂದ ಕೆಲಸಮಾಡುವವರ ಮೇಲಾಗುವ ಮಾನಸಿಕ ಹಾಗೂ ದೈಹಿಕ ಪರಿಣಾಮಗಳು ಅಸಂಖ್ಯ. ಇದೇ ವಿಷಯ ಇಲ್ಲಿನ ಒಂದು ಕತೆಯ ಕೇಂದ್ರ ಬಿಂದು. ಗಂಡ ಹೆಂಡತಿ ಇಬ್ಬರೂ ರಾತ್ರಿಯ ಪಾಳಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಯಾರೊಬ್ಬರೂ ಊಹಿಸಬಹುದಾದ ಆದರೆ, ಅನಿವಾರ್‍ಯವಾದ ತಲ್ಲಣಗಳು ಇಲ್ಲೂ ಇವೆ. ಆದರೆ, ಇಲ್ಲಿನ ವೈಜ್ಞಾನಿಕತೆ ಎಂದರೆ ಆ ದಂಪತಿಗಳಿಗೆ ಮಾನವ ದೇಹದ ಜೈವಿಕ ಗಡಿಯಾರವನ್ನು ಬದಲಿಸಿ ರಾತ್ರಿಯನ್ನು ಹಗಲು, ಹಗಲನ್ನು ರಾತ್ರಿ ಎನ್ನುವಂತೆ ಅನುಭವಕ್ಕೆ ತರುವ ಕ್ಲಿನಿಕ್ ಲಭ್ಯವಿರುತ್ತದೆ! ಇಲ್ಲಿನ ಚಿಕಿತ್ಸೆಯ ವಿಧಾನವನ್ನು ವಿವರಿಸಲಾಗಿದೆ. ಆದರೆ, ಇತರ ಕತೆಗಳಲ್ಲಾದಂತೆ ನಿಸರ್ಗಸತ್ಯವೇ ಗೆದ್ದು, ರಾತ್ರಿಯ ಪಾಳಿ ರದ್ದಾಗುತ್ತದೆ. ಲೇಖಕಿ ಇಂತಹ “ಸಹಜತೆಯೆಡೆಗೆ…”ಯನ್ನು ವೈಜ್ಞಾನಿಕ ಕತೆ ಎಂಬುದು ತರುವ ಜೋಶ್‌ನ ಮನೋಭಾವದಲ್ಲೆ ತರುತ್ತಾರೆ.
ಇದರಲ್ಲಿನ ಮತ್ತೊಂದು “ಮಿನುಗಲೇ ಮಿಂಚುಳ್ಳಿ” ಒಂದು ಹೃದ್ಯ ಶೃಂಗಾರ ಸಾಧ್ಯತೆಯನ್ನು ಮನದ ಮೃದುಭಾವನೆಗಳ ಜೊತೆ ಸೇರಿಸಿ ವೈಜ್ಞಾನಿಕ ಕಲ್ಪನೆಗಳನ್ನು ಬೆಸೆದ ಕತೆ. ಒಂದೊಡೆ ಬಿಜಿಎಲ್ ಸ್ವಾಮಿಯವರು ಪ್ರಸ್ತಾಪಿಸಿರುವ ದೋಹದ ಪ್ರಕರಣವನ್ನು ನೆನಪಿಸುವ ಇದು ಕನ್ನಡದ ಕಥಾಸಾಹಿತ್ಯದಲ್ಲಿ ಒಂದು ಹೊಸ ಸಾಧ್ಯತೆಯನ್ನು ತೋರಿಸಿದೆ. ಈ ಕತೆಯ ಕಥಾನಾಯಕರು ಮಗುವಿಗಾಗಿ ಭ್ರೂಣದ ಬ್ಯಾಂಕಿಗೆ ಮೊರೆಹೋಗುತ್ತಾರೆ ಮತ್ತು ತಮ್ಮಿಬ್ಬರ ಒಳ್ಳೆಯಗುಣಗಳನ್ನು ಮಗುಹೊಂದುವಂತೆ ಡಿಎನ್‌ಎ ಕಸಿ ಮಾಡಿಸಿರುತ್ತಾರೆ. ಕತೆಯ ಮತ್ತೊಬ್ಬ “ನಾಯಕ” ಒಂದು ಮಿಂಚುಳ್ಳಿ ಸಸ್ಯ! ಇದು ತಾಗಿದಾಗ ಬೇರೆ ಗಿಡದಲ್ಲಿ ಹೂರಳುತ್ತದೆ! ಮುಂದೆ ಈ ಗಿಡದ ಬಗ್ಗೆ ಸಂಶೋಧನೆ ನಡೆಸಿ ಅದು ಮತ್ತೊಂದು ಗಿಡಕ್ಕೆತಾಗಿದಾಗ ಸ್ಪರ್ಶಸಂವೇದನೆಯಿಂದ ಸ್ತ್ರೀಯನ್ನು ಗುರುತಿಸಿ ನೇರವಾಗಿ ಅದರ ಪರಾಗ ನಳಿಕೆ ಇತರ ಗಿಡಗಳ ದ್ವಿಲಿಂಗ ಪುಷ್ಪಗಳಲ್ಲಿನ ಸ್ತ್ರೀ ಅಂಡಾಣುವಿನೆಡೆ ಬೆಳೆದು ಫಲೋತ್ಪತ್ತಿ ಮಾಡುತ್ತಿತ್ತು” ಎಂಬುದನ್ನು ಕಂಡುಹಿಡಿಯುತ್ತಾಳೆ ಕಥಾನಾಯಕಿ. ಈ ಸಂಶೋಧನೆಯನ್ನು ಎಳೆಎಳೆಯಾಗಿ ವಿವರಿಸುವ ಕತೆ ಕೊನೆಗೆ ನಿಸರ್ಗ ಇಷ್ಟು ಕ್ರಿಯಾಶೀಲವಾಗಿರುವಾಗ ತಾವು ಮಾತ್ರ ಕೃತಕತೆಯೆಡೆ ಹೆಜ್ಜೆಹಾಕುತ್ತಾ ಪ್ರಕೃತಿಗೆ ವಿರುದ್ಧವಾಗಿ ಸಾಗುತ್ತಿಲ್ಲವಷ್ಟೇ ಎಂದು ಯೋಚಿಸುವಲ್ಲಿಗೆ ಕತೆ ಮುಗಿಯುತ್ತದೆ. ಹೀಗೆ ಪ್ರಕೃತಿಗೆ ಅಭಿಮುಖವಾಗಿ ಸಾಗುವುದು ಇಲ್ಲಿನ ಪ್ರತಿಕತೆಯ ವೈಶಿಷ್ಟ್ಯ.

ಚಿಟ್ಟೆಗಳ ರೂಪಾಂತರಣ, ಅವುಗಳ ಬೃಹತ್‌ಗಾತ್ರದ ಪ್ರಭೇದವನ್ನು ಸೃಷ್ಟಿಸುವ ಪ್ರಯತ್ನದ ಸುತ್ತ ಒಂದು ಮನೋಜ್ಞ ಕತೆಯಿದೆ. ಇದರಲ್ಲಿ ಪುಸ್ತಕದ ಮಧ್ಯೆ ಹಿಡಿದಿಟ್ಟ ಚಿಟ್ಟೆ ಪುಟಮಗುಚಿದಂತೆ ಹಾರಿ ಹೋಗುವ ಕಲ್ಪನೆಯಿದೆ! ಸಂಗೀತವನ್ನು ಚಿಕಿತ್ಸೆಗೆ ಎಂದು ಬಳಸುವ ಒಂದು ಕತೆಯಿದೆ. ಪುಸ್ತಕಕ್ಕೆ ಹೆಸರು ನೀಡಿರುವ ಕತೆ “ಗುಪ್ತಗಾಮಿನಿ” ಒಂದು ತಂತ್ರಾಂಶ (ಸಾಫ್ಟ್‌ವೇರ್!). ಕಂಪ್ಯೂಟರ್ ವೈರಸ್‌ನ ಹಾವಳಿ ಈ ಕತೆಯ ಹೂರಣ. ಯುದ್ಧ ಮತ್ತು ಅದರ ಪರಿಣಾಮಗಳು, ಶಾಂತಿಗಾಗಿ ಹಪಹಪಿ, ಉನ್ನತ ತಂತ್ರಜ್ಞಾನ ಈ ವಿಷಯಗಳ ಸುತ್ತಲೇ ಸುತ್ತುವ ಕೆಲವು ಕತೆಗಳಿವೆ. ಅವುಗಳ ಒಟ್ಟಾರೆ ಆಶಯ ಶಾಂತಿ!

ಬೆನ್ನುಡಿಯಲ್ಲಿ ಹಿರಿಯ ವಿಜ್ಞಾನ ಲೇಖಕರಾದ ಶ್ರೀ ಟಿ ಆರ್ ಅನಂತರಾಮು, “.. ‘ಗುಪ್ತಗಾಮಿನಿ’ ಸಂಕಲನದ ಒಂಬತ್ತು ಕಥೆಗಳಲ್ಲೂ ಲೇಖಕಿ ಸವಿತಾ ಶ್ರೀನಿವಾಸ್ ಹೊಸ ಪ್ರಯೋಗಗಳನ್ನು ಮಾಡುತ್ತ, ಪರೀಕ್ಷೆಗಳಲ್ಲಿ ಗೆಲ್ಲುತ್ತಲೇ ಓದುಗರಿಗೆ ಭಿನ್ನಲೋಕದಲ್ಲಿ ಸಂಭ್ರಮಿಸಲು ಒಂದಷ್ಟು ಹೊಸ ತಿನಿಸುಗಳನ್ನು ಕೊಡುತ್ತಾರೆ” ಎಂದಿದ್ದಾರೆ.

ಕನ್ನಡ ಕಥಾಲೋಕ ಸ್ವಾಗತಿಸಬೇಕಾದಂತಹ ಪುಸ್ತಕ. ವಿಜ್ಞಾನ ಜಗತ್ತು ತನ್ನ ಪರಿಭಾಷೆಯಲ್ಲಿ ಎಂದೋ ಬದಲಿಸಿರುವ ಸಸ್ತನಿ ಇತ್ಯಾದಿ ಪದಗಳ ಬಳಕೆ ಇಲ್ಲಾಗಿದೆ. ಅಲ್ಲೊಂದು ಇಲ್ಲೊಂದು ಅಚ್ಚಿನ ದೋಷಗಳು ಕಣ್ಣಿಗೆ ಬೀಳುತ್ತವೆ. ಆಸನಗ್ರಸ್ತ ಎಂಬ ಪದಪ್ರಯೋಗವಿದೆ. ಆದರೆ, ಐಬಿಎಚ್ ಹೆಸರಾಗಿರುವ ತನ್ನ ಸುಂದರ ಮುದ್ರಣ, ಅಚ್ಚುಕಟ್ಟಾದ ಬೈಂಡಿಗ್, ರಕ್ಷಾಪುಟದ ವಿನ್ಯಾಸ ಮನೆಸೆಳೆಯುತ್ತದೆ. ಇಂತಹ ಪುಸ್ತಕವನ್ನು ಹೊರತಂದ ಐಬಿಎಚ್ ಪ್ರಕಾಶನವನ್ನು ಜನರು ಪ್ರೋತ್ಸಾಹಿಸಬೇಕು.

ಕೆ.ಎಸ್. ನವೀನ್
೫/೧, ಶ್ಯಾನುಭೋಗ ನಂಜುಂಡಪ್ಪ ಗಲ್ಲಿ,
ಉಪ್ಪಾರಹಳ್ಳಿ, ಚಿಕ್ಕಮಾವಳ್ಳಿ ಅಂಚೆ,
ಬೆಂಗಳೂರು ೫೬೦ ೦೦೪.
ದೂರವಾಣಿ: ೯೪೪೮೯೦೫೨೧೪
[email protected]
ದಿನಾಂಕ ೨೦-೦೩-೨೦೧೪

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.