ಧಾರವಾಡ : ರಾಜ್ಯಾದ್ಯಂತ ಪೊಲೀಸ್ ಸಾಹಿತಿ ಎಂದೇ ಖ್ಯಾತರಾಗಿರುವ ಹುಬ್ಬಳ್ಳಿಯಲ್ಲಿ ಪೊಲೀಸ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ಸೋಮು ರೆಡ್ಡಿಯವರೇ ಈ ತಲಾಷ್ ಕೃತಿ ಕರ್ತೃ. ದಿನಾಂಕ 16-12-2018 ರಂದು ಕ್ರಾಂತಿ ಪ್ರಕಾಶನ ಆಯೋಜಿಸಿದ ಅಕ್ಷರೋತ್ಸವ ಎಂಬ ಕಾರ್ಯಕ್ರಮದಲ್ಲಿ ಧಾರಾವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ತಲಾಷ್ ಕೃತಿ ಬಿಡುಗಡೆಯಾಗಲಿದ್ದು, ಖ್ಯಾತ ಸಾಹಿತಿಗಳಾದ ಡಾ. ಅಮರೇಶ ನುಗಡೋಣಿಯವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಡಾ. ರಾಘವೇಂದ್ರ ಪಾಟೀಲರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಾ. ಬಸು ಬೇವಿನಗಿಡದ, ಗದಿಗೆಯ್ಯ ಹಿರೇಮಠ, ಪ್ರಜ್ಞಾ ಮತ್ತಿಹಳ್ಳಿ ರವರು ಉಪಸ್ಥಿತರಲಿದ್ದು, ಡಾ. ಸಿದ್ರಾಮ್ ಕಾರಣಿಕರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸೋಮು ರೆಡ್ಡಿಯವರು ತಮ್ಮ ಬಿಡುವಿನ ವೇಳೆಯಲ್ಲೇ ಕಥೆ, ಕಾದಂಬರಿ, ನಾಟಕ, ಪ್ರಬಂಧ, ಲೇಖನಗಳನ್ನು ಬರೆಯುವ ಮೂಲಕ ಓದುಗರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೇ ಪುಸ್ತಕ ಹಬ್ಬ, ಸಾಹಿತ್ಯ-ಸಂಕ್ರಾಂತಿ, ಕನ್ನಡ ಸಾಹಿತ್ಯದ ಓದು ಅಭಿಯಾನ, ರಾಷ್ಟ್ರೀಯ ಯುವ ದಿನಾಚರಣೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಓರ್ವ ಉತ್ತಮ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದಾರೆ. ಜೊತೆಗೆ ನೂರಕ್ಕೂ ಹೆಚ್ಚು ಅಗತ್ಯ ಸಂಧರ್ಬಗಳಲ್ಲಿ ಸಾರ್ವಜನಿಕ ಹಾಗೂ ಪೊಲೀಸ್ರಿಂದ ರಕ್ತದಾನ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಹೀಗಾಗಿ ಇವರಿಗೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಸನ್ಮಾನಿಸಿಲಾಗಿದೆ. ಮೇಲಾಗಿ ಹಲವಾರು ಸಾರ್ವಜನಿಕ ಸಂಘ-ಸಂಸ್ಥೆಗಳಿಂದ ಹಲವು ಸಾಮಾಜಿಕ ಮತ್ತು ಸಾಹಿತ್ಯಕ ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡೇಗೇರಿಸಿಕೊಂಡಿದ್ದಾರೆ. ಅಭಿನೇತ್ರಿ, ನೋಟದಾಗ ನಗೆಯಾ ಮೀಟಿ, ತಲಾಷ್ ಇವರ ಪ್ರಕಟಿತ ಕೃತಿಗಳಾಗಿವೆ. ಕಂದೀಲು, ದೇವರ ನಾಯಿ ಕಾದಂಬರಿಗಳು ಮುದ್ರಣ ಹಂತದಲ್ಲಿವೆ.