ಹೊತ್ತಿಗೆ ಹೊತ್ತು

ಕಲಾವಿದರ ಕಥಾನಕ

ಕನ್ನಡ ಚಲನಚಿತ್ರಗಳನ್ನು ಅಭ್ಯಾಸ ಮಾಡುವವರು ಸಂಗ್ರಹಿಸಬೇಕಾದ ವಿಶೇಷವಾದ ಪುಸ್ತಕ

ಜಿ.ಟಿ ಶ್ರೀಧರ ಶರ್ಮ
[email protected]

kalaavidara-kathaanakaಕಲಾವಿದರ ಕಥಾನಕ
ಲೇಖಕ : ಕಗ್ಗೆರೆ ಪ್ರಕಾಶ್
ಪುಟ : ೫೭೮ ಬೆಲೆ : ೩೫೦/-
ಪಂಚಮಿ ಪಬ್ಲಿಕೇಷನ್ಸ್
ದೂರವಾಣಿ : ೯೭೩೯೫೬೧೩೩೪ / ೯೭೪೦೦೬೯೧೨೩

ಕನ್ನಡ ಚಲನಚಿತ್ರಗಳನ್ನು ಅಭ್ಯಾಸ ಮಾಡುವವರು ಸಂಗ್ರಹಿಸಬೇಕಾದ ವಿಶೇಷವಾದ ಪುಸ್ತಕ ಅರವತ್ತು ಜನ ಕಲಾವಿದರ ಪರಿಚಯ ಒಂದೇ ಪುಸ್ತಕದಲ್ಲಿ ಸಿಗುತ್ತದೆ ಎಂದರೆ ಯಾರಿಗೆ ತಾನೇ ಆಸಕ್ತಿ ಮೂಡುವುದಿಲ್ಲ? ಇಂಥ ಕಲಾವಿದರು ಮತ್ತು ಸಿನೆಮಾ ಮಾಧ್ಯಮಕ್ಕೆ ಸಂಬಂಧಿಸಿದವರ, ಸಂದರ್ಶನಾಧಾರಿತ ಬರಹಗಳ ಪುಸ್ತಕವೇ ಕಲಾವಿದರ ಕಥಾನಕ. ಸುಮಾರು ಆರುನೂರು ಪುಟಗಳ ಕಗ್ಗೆರೆ ಪ್ರಕಾಶ್ ಅವರ ಈ ಪುಸ್ತಕವನ್ನು ಬೆಂಗಳೂರಿನ ಪಂಚಮಿ ಪ್ರಕಾಶನದವರು ಪ್ರಕಾಶಿಸಿರುತ್ತಾರೆ.

ಎಪ್ಪತ್ತೈದು ವರ್ಷಗಳ ಇತಿಹಾಸವಿರುವ ಕನ್ನಡ ಚಲನಚಿತ್ರೋದ್ಯಮದ ಕಲಾವಿದರನ್ನು ಹೀಗೆ ಒಂದೇ ಕಡೆ ಪರಿಚಯಿಸುವುದು ಒಂದು ದಾಖಲೆಯೇ ಸರಿ. ಈ ಪುಸ್ತಕದಲ್ಲಿ ಅಣ್ಣ ಸೀನನ ಸಂಗಡದಿಂದ ಬಣ್ಣದ ಬದುಕೇ ಶನಿತನಕ ವಿವಿಧ ಕಲಾವಿದರ ಜೀವನದ ಏಳು ಬೀಳುಗಳ, ಆತ್ಮಾವಲೋಕನಗಳ ಮಧುರ, ಸಿಹಿ-ಕಹಿ ನೆನಪುಗಳ ಬರಹಗಳಿವೆ. ಲೇಖಕರೇ ಹೇಳುವಂತೆ ಇಲ್ಲಿ ಬಹುತೇಕ ಕನ್ನಡ ಚಿತ್ರರಂಗದ ನಟ-ನಟಿಯರು….ಮುಕ್ತವಾಗಿ ಹಂಚಿಕೊಂಡಿದ್ದಾರೆ.

ರಂಗಭೂಮಿಯಿಂದಲೇ ಬದುಕಿನ ಪಾಠ ಕಲಿತ ಭಾರ್ಗವಿ ನಾರಾಯಣ್ ಅವರು ಶೂಟಿಂಗ್‌ಗೆಂದು ಹೊರಟರೆ, ಮೊಮ್ಮಕ್ಕಳು ಶಾಲೆಗೆ ಹೊರಟರೆ ಅಜ್ಜಿ ಅಜ್ಜಿ ಎಂದು ಕಾಲಿಗೆ ಬೀಳುವುದನ್ನು ಓದುವಾಗ ನಮಗೂ ಆನಂದವಾಗುತ್ತದೆ. ಪಕ್ವತೆಯ ಜೀವಿ, ಕಲಾವಿದ ಶಿವರಾಮಣ್ಣನ ಅಂತರಂಗ-ಬಹಿರಂಗವಾದ ಈ ಮಾತುಗಳು ಬಹುಶಃ ಸಾರ್ವಕಾಲಿಕ ಸತ್ಯ. ವಿಪರ್ಯಾಸವೆಂದರೆ, ಇಂದಿಗೂ ಮನುಕುಲವನ್ನು…..ಜಾತಿಬಲದಲ್ಲೆ ಗೆದ್ದು ಬರುತ್ತಾರೆ(ಪುಟ: ೪೦). ಒನಕೆ ಓಬವ್ವ ಜಯಂತಿ ಅವರ ವಯಸ್ಸಿನ ಗುಟ್ಟು ನೀವೇ ಓದಿ ಅನುಭವಿಸಿ(ಪುಟ: ೮೭-೮೮). ಶಂಕರ್ ನಾಗ್ ಬಗ್ಗೆ ರಮೇಶ್ ಭಟ್ ಅವರ ನುಡಿಗಳು ಮತ್ತು ಕೆ. ಎಸ್. ಅವರ ನೆನಪಿನ ಚಿತ್ರಗಳು ಮನನೀಯವಾಗಿವೆ. ಮಲೆನಾಡ ಮಡಿಲಿಂದ ಬಂದ, ಸಹಜಾಭಿನಯದ ನಟ ವಿಜಯಕಾಶಿ ಅವರ ಬದುಕನ್ನು ಹಸನುಗೊಳಿಸಿದ್ದು ಅವರೇ ಖರೀದಿಸಿದ ತೋಟವಂತೆ. (೨೬೨). ಲೋಕನಾಥ ಅವರು ಸಿದ್ದಲಿಂಗಯ್ಯ ನಿರ್ದೇಶನದ ಬೂತಯ್ಯನ ಮಗ ಅಯ್ಯ ಚಿತ್ರದಲ್ಲಿ ಉಪ್ಪಿನಕಾಯಿಯ ವಿಶೇಷ ಘಟನೆಯ ಪ್ರಸ್ತಾಪ ಅಂದಿನಂತೆ ಇಂದೂ ಸ್ವಾರಸ್ಯವಾಗಿದ್ದು ಮನತಟ್ಟುತ್ತದೆ. ಬೆಳ್ಳಿ ಬೆಳಕಲ್ಲರಳಿದ ಪದ್ಮ ಮತ್ತು ವೈಶಾಲಿ ಕಾಸರವಳ್ಳಿಯೇ ಮೊದಲಾದ ನಟಿಯರ ಜೀವನ ಕಥಾನಕಗಳನ್ನು ಓದುತ್ತ ಓದುತ್ತ ನಮ್ಮನ್ನೇ ನಾವು ಮರೆಯುವಷ್ಟು ಕಗ್ಗೆರೆಯವರ ಬರಹ ಜೀವಂತವಾಗಿದೆ, ಹೃದ್ಯವಾಗಿದೆ. ೬೦೦೦ ಹಾಡುಗಳ ಸರದಾರ ಶ್ರೀಮುರಳಿ ಹೀಗೂ ಇರಬಹುದೆ ಎಂದು ಆಶ್ಚರ್ಯಪಡುವಷ್ಟು ವಿಶೇಷವಾಗಿದೆ.

ಒಂದು ವಾರಪತ್ರಿಕೆಗಾಗಿ, ಅದರಲ್ಲಿಯೂ ಸಂದರ್ಶನಾಧಾರಿತ ಲೇಖನಗಳದ್ದರಿಂದ ಕೆಲವು ಪ್ರಶ್ನೆಗಳು ಅನೇಕ ಕಡೆ ಬಂದಿರುವುದು ಸಹಜ. ಆದರೂ ತುಂಬ ಮಾಹಿತಿಪೂರ್ಣ ಹಾಗೂ ನುರಿತ ಬರಹಗಳಾಗಿವೆ. ಕನ್ನಡ ಚಲನಚಿತ್ರಗಳನ್ನು ಅಭ್ಯಾಸ ಮಾಡುವವರು ಅವಶ್ಯವಾಗಿ ಸಂಗ್ರಹಿಸಿ ಮತ್ತೆ ಮತ್ತೆ ಅಭ್ಯಾಸ ಮಾಡಬೇಕಾದ ಒಂದು ಗಂಭೀರ ಕೃತಿಯಾಗಿದೆ.

6-8-2014
***********

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker