ಪುಸ್ತಕ: ಪ್ರಾಚೀನ ಭಾರತವೆಂಬ ಅದ್ಭುತ
ಲೇಖಕರು: ಇಂಗ್ಲಿಶ್ ಮೂಲ: ಎ.ಎಲ್. ಬಾಶಮ್
ಕನ್ನಡಕ್ಕೆ : ಡಿ.ಆರ್. ಮಿರ್ಜಿ
ಪುಟಗಳು : ಸುಮಾರು 900 (ನೂರು ಚಿತ್ರಪುಟಗಳು ಮತ್ತು ಎರಡು ನಕ್ಷೆಗಳು ಸೇರಿ)
ಪ್ರಕಾಶಕರು: ಐಬಿಎಚ್ ಪ್ರಕಾಶನ, ಬೆಂಗಳೂರು
ಬೆಲೆ: ರೂ 700
“ಪ್ರಾಚೀನ ಭಾರತವೆಂಬ ಅದ್ಭುತ” ಕೃತಿ ಭಾರತ ಶಾಸ್ತ್ರಜ್ಞ (ಇಂಡಾಲಜಿಸ್ಟ್) ಎ.ಎಲ್. ಬಾಶಮ್ ಅವರ ಹೆಗ್ಗಳಿಕೆಯ ಕೃತಿಗಳಲ್ಲೊಂದು. ಈ ಕೃತಿ ಜಗತ್ತಿಗೆ ಪ್ರಾಚೀನ ಭಾರತವನ್ನು ಪಾಶ್ಚತ್ಯರಿಗೆ ತೆರೆದಿಡುವ ಪ್ರಯತ್ನ ಮಾಡಿದ ಕೃತಿ. ಜಗತ್ತಿನ 12 ಭಾಷೆಗಳಿಗೆ ಅನುವಾದಗೊಂಡಿರುವ ಇದು ಅನೇಕ ವರ್ಷಗಳ ಕಾಲ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿತ್ತು. ಈ ಕೃತಿಯನ್ನು ಡಿ.ಆರ್. ಮಿರ್ಜಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದಂತಹ ದೇಶದ ಪ್ರಾಚೀನ ಜನ ಜೀವನ ಸಂಸ್ಕೃತಿ ಇತಿಹಾಸವನ್ನು ಕಟ್ಟಿಕೊಡುವ ಈ ಕೃತಿ ಯಾವುದೇ ಭಾಷೆಗೆ ಒಂದು ಮಹತ್ವದ ಕೊಡುಗೆ. ಐಬಿಎಚ್ ಪ್ರಕಾಶನ ಇದನ್ನು ಮಾಡಿ ತಮ್ಮ ಉದ್ದೇಶ ಕೇವಲ ವ್ಯಾಪಾರವಲ್ಲ ಎಂದು ತೋರಿಸಿದ್ದಾರೆ.
ಇದು ಒಬ್ಬ ವಿದ್ವಾಂಸರಿಂದ ಸಾಮಾನ್ಯರಿಗಾಗಿ ಬರೆದ ಕೃತಿ. ಅದನ್ನು ಲೇಖಕಕರೇ ಹೇಳುತ್ತಾ, “ಹಾಗಾಗಿ, ಸಾಧ್ಯವಾದಷ್ಟೂ ಯಾವುದನ್ನೂ ಬಿಡದೆ ವಿವರಿಸಲು ಪ್ರಯತ್ನಿಸಿದ್ದೇನೆ… ಇದು “1947ರಲ್ಲಿ ಬ್ರಿಟಿಶ್ ಭಾರತದಿಂದ ಹೊರಹೊಮ್ಮಿದ ಈ ಮೂರು ರಾಷ್ಟ್ರಗಳು ಜಗತ್ತಿನ ಆಗುಹೋಗುಗಳಲ್ಲಿ ವಹಿಸುತ್ತಿರುವ ಪಾತ್ರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಪಾಶ್ಚಿಮಾತ್ಯ ಓದುಗರಿಗೆ ಭಾರತದ ನಾಗರಿಕತೆಯನ್ನು ಅರ್ಥೈಸಿ ಹೇಳುವುದು ಈ ಪುಸ್ತಕದ ಉದ್ದೇಶ”. ಈ ಅರ್ಥೈಸಿ ಹೇಳುವಿಕೆ ಕಬ್ಬಿಣದ ಕಡಲೆಯಂತಾಗದೆ ನವಿರಾಗಿ ಬೆಳಕುಚೆಲ್ಲುತ್ತಾ ಹೋಗುತ್ತದೆ. ಪುಸ್ತಕದ ನಡು ನಡುವೆ ಯುಕ್ತ ಚಿತ್ರಗಳಿವೆ. ಚಿತ್ರಗಳ ಪಟ್ಟಿಯನ್ನು ನೀಡಲಾಗಿದೆ. ಪುಸ್ತಕದ ಮಾತಾಡುವ ಪ್ರಾಚೀನ ಭಾರತದ ಎರಡು ನಕಾಶೆಯನ್ನು ನೀಡಲಾಗಿದೆ.
ಸುಮಾರು ಏಳುನೂರು ಪುಟಗಳಲ್ಲಿ ಹತ್ತು ಅಧ್ಯಾಯಗಳ ಚೌಕಟ್ಟಿನಲ್ಲಿ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಸರಳ ಭಾಷೆಯಲ್ಲಿ ಯಾವುದೇ ರಾಗದ್ವೇಷಕ್ಕೆ ಒಳಗಾಗದೆ ವಿವರಿಸುತ್ತಾ ಹೋಗುತ್ತಾರೆ ಬಾಶಮ್. ಇದರೊಂದಿಗೆ ನಾವು ಗಮನಿಸಬೇಕದ್ದು, ಪ್ರಾಚೀನ ಭಾರತ ಎಂದಾಗ, ಇಲ್ಲಿ ಪ್ರಾಚೀನ ಎಂದರೆ ಭಾರತಕ್ಕೆ ಮುಸಲ್ಮಾನರ ಆಗಮನಕ್ಕಿಂ ಮುಂಚಿನ ಕಾಲ ಎಂಬ ಕುತೂಹಲಕರ ಅರ್ಥವಿದೆ. ಆದರೆ, ಈ ಚೌಕಟ್ಟು ಯಾವುದೇ ದುರುದ್ದೇಶಪೂರಿತವಾದದ್ದಲ್ಲ. ಈ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ ಮಿಚಿಗನ್ ವಿಶ್ವವಿದ್ಯಾನಿಲಯದ ಥಾಮಸ್ ಆರ್. ಟ್ರಾಟ್ಮನ್ ಹೇಳುತ್ತಾರೆ “…ಬಾಶಮ್ ಅವರ ಮಟ್ಟಿಗೆ ಇದು `ಮುಸಲ್ಮಾನರ ಆಗಮನಕ್ಕೆ ಮುನ್ನಿನ ಭಾರತೀಯ ಉಪಖಂಡದ ಇತಿಹಾಸ ಮತ್ತು ಸಂಸ್ಕೃತಿಯ ಒಂದು ಸಮೀಕ್ಷೆ’ ಎನಿಸಿದೆ. ಬಾಶಮ್ ಅವರ ಮಟ್ಟಿಗೆ `ಮುಸಲ್ಮಾನರ ಆಗಮನ ಎಂದರೆ’ `ಪರ್ಶಿಯನ್ ಭಾಷೆಯ ಮೂಲಗಳ ಆಗಮನ’ವೆಂದೇ ಆರ್ಥ. ಅವರಿಗೆ ಪರ್ಶಿಯನ್ ಭಾಷೆ ಗೊತ್ತಿರಲಿಲ್ಲವಾದ್ದರಿಂದ ಆನಂತರದ ಅವಧಿಯ ಬಗ್ಗೆ ಅಧಿಕಾರಯುತವಾಗಿ ಮಾತಾಡಲು ತಾವು ಸಮರ್ಥರಲ್ಲವೆಂದು ಅವರು ಭಾವಿಸಿದರು. ಆದ್ದರಿಂದ ಇಲ್ಲಿ ಮುಸ್ಲಿಮ್ ವಿರೋಧಿ ಭಾವನೆಯ ಪ್ರಶ್ನೆ ಇಲ್ಲ. ಹಾಗಾಗಿ, ಅನುದ್ದಿಶ್ಯವಾಗಿಯೇ ಇದಕ್ಕೆ ಬೇರೆಯೇ ಆದಂತಹ ಒಂದು ಚೌಕಟ್ಟು ಒದಗಿ, ಪುಸ್ತಕಕ್ಕೆ ಮಹತ್ವ ಬರುತ್ತದೆ.
ಮುಂದುವರೆಯುತ್ತಾ ಟ್ರಾಟ್ಮನ್ ತಮ್ಮ ಮುನ್ನುಡಿಯಲ್ಲಿ ಬಾಶಮ್ ಅವರ ಪುಸ್ತಕದ ಅನೇಕ ಮುಖ್ಯವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಆ ಹಿಂದೆ ಬಂದಿದ್ದ ಭಾರತ ಕುರಿತಾದ ಇದ್ದ ಸ್ಥಾಪಿತ ಸಾಹಿತ್ಯದ ಗುಣಾವಗುಣಗಳನ್ನು ಕುರಿತು ಪ್ರಸ್ತಾಪಿಸುತ್ತಾರೆ. ಅದರಲ್ಲಿನ ಒಂದು ಕುತೂಹಲಕರ ವಿವರ ನೋಡಿ: “…ಸ್ಮಿತ್ ಅವರ ಭಾರತೀಯರ ಬಗೆಗಿನ ಅನೇಕ ಅವಹೇಳನಕಾರಿ ಮಾತುಗಳು ಮುಂದುವರೆದ ಬ್ರಿಟಿಶ್ ರಾಜ್ಯದ ಪ್ರಚಾರ ಮಾತ್ರವೆಂದು ಬಾಶಮ್ ತಿಳಿಯುವುದಿಲ್ಲ. ಭಾರತದ ಆಶೆ ಆಕಾಂಕ್ಷೆಗಳನ್ನು ಈ ರೀತಿ ನಿಷ್ಕಾರವಾಗಿ ಅವಮಾನಿಸುವುದು ಬಹುಶಃ ಮಿಲ್ ಮತ್ತು ಎಲ್ಫಿನ್ಸ್ಟನ್ ಅವರ ಕಾಲದಲ್ಲಿ ಯಾರ ಗಮನವನ್ನೂ ಸೆಳೆಯುತ್ತಿರಲಿಲ್ಲ. ಆದರೆ, ಸ್ಮಿಥ್ ಅವರ ಕಾಲದಲ್ಲಿ ಇದು ಬೇಕೆಂದೇ ಭಾರತೀಯ ಓದುಗರಲ್ಲಿ ಶತ್ರುತ್ವದ ಭಾವನೆಯನ್ನು ಕೆರಳಿಸಲೆಂದು ಬರೆದದ್ದೆನಿಸುತ್ತದೆಯಲ್ಲದೆ, ಈ ವಿಷಯದಲ್ಲಿ ಬರೆದವರ, ವಿಕೃತವೆನಿಸುವಷ್ಟು ಮೊಂಡಾದ ಸಂವೇದನಾಶೀಲತೆ, ಹಾಗೆಯೇ ಭದ್ರವಾಗಿ ಬೇರೂರಿದ ಭಯ, ಬಹುಶಃ ಅವ್ಯಕ್ತ, ಆದರೆ ಸುಪ್ತ, ಹೆಚ್ಚುಕಡಿಮೆ ಅಪರಾಧೀ ಭಾವವೂ ವ್ಯಕ್ತವಾಗುತ್ತದೆ”. ಇದು ಪ್ರಾಚೀನ ಭಾರತ ಕುರಿತ ಅಧ್ಯಯನಕ್ಕೆ ಪ್ರೇರಿಸುತ್ತದೆ.
ಭಾರತ ಮತ್ತು ಅದರ ಪ್ರಾಚೀನ ಸಂಸ್ಕೃತಿ”, “ಪ್ರಾಚೀನ ಭಾರತದ ವೈಭವ”, ಹರಪ್ಪಾ ಸಂಸ್ಕೃತಿ ಮತ್ತು ಆರ್ಯರು, ಇತಿಹಾಸ ಕಾಲ, ಪ್ರಾಚೀನ ಮತ್ತು ಮಧ್ಯಯುಗಗಳು ಹೀಗೆ ಆರಂಭಗೊಂಡು “ಪಾಶ್ಚಿಮಾತ್ಯ ಜಗತ್ತಿಗೆ ಭಾರತದ ಕೊಡುಗೆ” ಎಂಬಲ್ಲಿಗೆ ಅಂತ್ಯವಾಗುತ್ತದೆ. ಇದರಲ್ಲಿ ಈ ನಡುವೆ “ರಾಜ್ಯ: ರಾಜಕೀಯ ಜೀವನ ಮತ್ತು ಚಿಂತನೆ”, ಸಮಾಜ, ನಿತ್ಯ ಜೀವನ, ಧರ್ಮ, ಮತ – ಪಂಥಗಳು ಸಿದ್ಧಾಂತ, ಸಮಾಜಿಕ ಪದ್ಧತಿಗಳು, ಜೀವನದ ನಾಲ್ಕು ಆಶ್ರಮಗಳು, ಅಲ್ಲಿನ ಆಚರಣೆಗಳು ಹಾಗೂ ಆ ಆಚರಣೆಗಳ ಅರ್ಥ ಇವನ್ನು ಸಹ ಚರ್ಚಿಸಲಾಗಿದೆ. ಇಂದಿನ ಶತಮಾನದಲ್ಲಿ ಎಲ್ಲ ಜಾತಿ, ಧರ್ಮಗಳ ಚೌಕಟ್ಟು ಮೀರಿ ಮನುಷ್ಯ ಮಾನವನಾಗಿ ಬಾಳಲು ಯಾವುದೇ ಧರ್ಮ-ಜಾತಿಗಳ ಹಂಗು ಬೇಡ ಎಂಬ ವಿಚಾರವಾದದ ಎತ್ತರದಲ್ಲಿ ನಿಂತು, ಪ್ರಾಚೀನ ಯುಗದ ಆಚರಣೆಗಳನ್ನು ಅವಲೋಕಿಸಿದರೆ ಇಂದು ಆ ಆಚರಣೆಗಳು ಇಂದು ಎಷ್ಟರ ಮಟ್ಟಿಗೆ ಕಲುಷಿತಗೊಂಡಿವೆ ಎಂದು ವ್ಯಥೆಯಾಗುತ್ತವೆ. ಅನೇಕ ವ್ಯವಸ್ಥೆ ಕಟ್ಟುಪಾಡುಗಳು ಇಂದಿಗೂ ಮಾದರಿಯಾಗುವಂತಿವೆ. ಇವುಗಳ ಮರುಪರಿಶೀಲನೆಗೆ ಪುಸ್ತಕ ದಾರಿಯಾಗುತ್ತದೆ.
ಸಮಾಜ: ಮರ್ಣ, ಕುಟುಂಬ ಮತ್ತು ವ್ಯಕ್ತಿ ಎಂಬ ಅಧ್ಯಾಯದಲ್ಲಿ ಕೆಲವು ಗಮನ ಸೆಳೆಯುವ ಸಂಗತಿಗಳಿವೆ. ಉದಾಹರಣೆಗೆ ಸ್ಥಿತಿವಂರ ಕುಟುಂಬದಲ್ಲಿ ಸಾಮಾನ್ಯವಾದ ಬಾಲ್ಯವಿವಾಹಕ್ಕೆ ಧರ್ಮಶಾಸ್ತ್ರದಲ್ಲಿ ಎಲ್ಲಿಯೂ ಆಧಾರವಿಲ್ಲ. ಮತ್ತು ಮಧ್ಯೋತ್ತರ ಯುಗದವರೆಗೆ ಹುಡುಗಿಯರ ಬಾಲ್ಯವಿವಾಹ ಸಾಮಾನ್ಯವಾಗಿತ್ತೆ ಎನ್ನುವುದು ತುಂಬಾ ಸಂದೇಹಾಸ್ಪದ….ಕಾವ್ಯ ಮತ್ತು ಕತೆಗಳಲ್ಲಿಯ ನಾಯಕಿಯರು ಮದುವೆಯಾಗುವಾಗ ಪೂರ್ತಿ ಬೆಳೆದವರೆಂಬುದು ಸ್ವಯಂಸಿದ್ಧ. ಆ ಕಾಲದ ಶಿಲಾಲೇಖಗಳು ನಮಗೆ ಬಾಲ್ಯವಿವಾಹದ ಬಗ್ಗೆ ಯಾವುದೇ ಸೂಚನೆ ಕೊಡುವುದಿಲ್ಲ. ಪ್ರಾಚೀನ ವೈದ್ಯರು ಹದಿನಾರು ವರುಷ ಮೀರಿದ ತಾಯಂದಿರು ಅತ್ಯುತ್ತಮ ಮಕ್ಕಳನ್ನು ಹೆರುತ್ತಾರೆ ಎಂದು ಹೇಳುತ್ತಾರೆ (ಸುಶ್ರುತ ಸಂಹಿತೆ). ಮುಂದುವರೆದು ಬಾಲ್ಯವಿವಾಹದ ಬೆಳೆವಣಿಗೆಗೆ ಕಾರಣಗಳೇನೆಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ. ದಾಳಿಗಾರ ಮುಸ್ಲಿಮರ ಭಯ ತಮ್ಮ ಹೆಣ್ಣು ಮಕ್ಕಳನ್ನು ಸಣ್ಣ ವಯಸ್ಸಿನಲ್ಲೇ ಮದುವೆ ಮಾಡುವಂತೆ ತಂದೆತಾಯಿಗಳನ್ನು ಪ್ರೋತ್ಸಾಹಿಸಿತೆಂದು ಮತ್ತು ತಮ್ಮ ಹೆಂಡಂದಿರನ್ನು ಕಟ್ಟುನಿಟ್ಟಾಗಿ ಮನೆಯ ಒಳಗೇ ಕೂಡಿಹಾಕಲಾಗುತ್ತಿತ್ತೆಂದೂ ಕೆಲವರು ಸೂಚಿಸಿದ್ದಾರೆ. ಆದರೆ ಇವೆರೆಡೂ ಪದ್ಧತಿಗಳು ಮುಸ್ಲಿಮ್ಪೂರ್ವ ಕಾಲದಲ್ಲಿಯೂ ಇದ್ದುವು. ಹೀಗಾಗಿ ಇದೊಂದೇ ಕಾರಣವಾಗಿರಲಾರದು” ಎನ್ನುವ ಬಾಶಮ್ ಇದು ಧಾರ್ಮಿಕ ಒತ್ತಡದಿಂದ ಇರಬಹುದು ಎನ್ನುತ್ತಾರೆ. ಆಕತೆಯ ಕಾರಣ ನೀಡುತ್ತಾರೆ. ಹಾಗೆಯೇ, ಭಾರತೀಯ ಸಂಸ್ಕೃತಿಯಲ್ಲಿ ವಿಚ್ಛೇದನಕ್ಕೆ ಅವಕಾಶವಿತ್ತು ಎಂದೂ ಹೇಳುತ್ತ ಇದಕ್ಕೆ ಅರ್ಥಶಾಸ್ತ್ರದ ಆಧಾರ ನೀಡುತ್ತಾರೆ. ಇಲ್ಲಿನ ಪ್ರತಿ ಹೇಳಿಕೆಗೂ ಆಧಾರ ನೀಡಿರುವುದು ಒಂದು ಗುಣಾತ್ಮಕ ಅಂಶ.
ಪುಸ್ತಕದಲ್ಲಿನ ಪ್ರತಿ ಅಧ್ಯಾಯವೂ ರ್ದೀವಾಗಿದ್ದು, ಪ್ರತ್ಯೇಕ ಅಧ್ಯಯನಕ್ಕೆ ಯೋಗ್ಯವಾಗಿದೆ. ಧರ್ಮ, ಮತ – ಪಂಥಗಳು ಸಿದ್ಧಾಂತ ಎಂಬ ಅಧ್ಯಾಯ ಸಹಜವಾಗಿಯೇ ರ್ದೀವಾಗಿದ್ದು, ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ. ಇದನ್ನು ಒಂದು ಸಣ್ಣ ಲೇಖನದ ವ್ಯಾಪ್ತಿಯಲ್ಲಿ ಹಿಡಿಯುವುದು ಕಷ್ಟ ಸಾಧ್ಯ. ಭಾಷೆ ಸಾಹಿತ್ಯಕ್ಕೆ, ಕನ್ನಡ ಸಾಹಿತ್ಯ ಮತ್ತು ಅದರ ಪ್ರಾಚೀನತೆ ಇತ್ಯಾದಿಗಳ ಕುರಿತು ಇಲ್ಲಿ ಹೇಳಲಾಗಿರುವ ವಿಷಯಗಳ ಬಗ್ಗೆ ಚರ್ಚೆಯಾಗಬೇಕಾಗಿದೆ.
ಪುಸ್ತಕದ ಕೊನೆಯಲ್ಲಿ ಹತ್ತು ಅನುಬಂದಗಳನ್ನು ನೀಡಲಾಗಿದ್ದು ಅವುಗಳಲ್ಲಿ ವಿಶ್ವವಿಜ್ಞಾನ ಮತ್ತು ಭೂಗೋಲ, ಖಗೋಲ ಶಾಸ್ತ್ರ, ಪಂಚಾಂಗ, ಗಣಿತ, ಭೌತವಿಜ್ಞಾನ, ರಸಾಯನ ವಿಜ್ಞಾನ, ಶರೀರ ವಿಜ್ಞಾನ ಮತ್ತು ಔಷಧಿ, ಛಂದಸ್ಸು ಹೀಗೆ ಹತ್ತು ವಿಷಯಗಳ ಬಗ್ಗೆ ಅಂದು ಪ್ರಚಲಿತವಾಗಿದ್ದ ವಿಚಾರಗಳನನ್ನು ಹೇಳಲಾಗಿದೆ. ಇದೂ ಒಂದು ಈ ಪುಸ್ತಕದ ಮಹತ್ವದ ಅಂಶ. ಇಲ್ಲಿನ ಶರೀಕ ವಿಜ್ಞನ ಮತ್ತು ಔಷಧಿ ಭಾಗದಲ್ಲಿ ವೈದ್ಯರು ಇಂದು ಹಿಪೊಕ್ರೆಟಿಸ್ಅನ್ನು ನೆನಪಿಸುವಂತಹ ಪ್ರಮಾಣವನ್ನು ಅಂದಿನ ವೈದ್ಯರು ಮಾಡಬೇಕಾಗಿತ್ತೆಂದು ಹೇಳಲಾಗಿದೆ. ಇದರಲ್ಲಿ ವೃತ್ತಿಗೆ ಸಂಬಂಧಿಸಿದ ಅಂಶಗಳ ಜೊತೆಗೆ ವೃತ್ತಿಯ ಗೌಪ್ಯವನ್ನು ಹೇಳಿದೆ!
ಅಚ್ಚುಕಟ್ಟಾಗಿ ಅಧ್ಯಾಯ ಮತ್ತು ಉಪಯುಕ್ತ ಮಾಹಿತಿಗಳನ್ನು ಹೊಂದಿಸಲಾಗಿದೆ. ಪುಸ್ತಕದಲ್ಲಿ ಮುಸ್ಲಿಮ್ ಪೂರ್ವಭಾರತದ ಕಾಲಾನುಕ್ರಮಣಿಕೆ ನೀಡಿರುವುದು ಪುಸ್ತಕದ ಓದನ್ನು ಹೆಚ್ಚು ಗ್ರಾಹಿಯಾಗಿಸುತ್ತದೆ.
ಇನ್ನು ಅನುವಾದದ ಬಗ್ಗೆ ಹೇಳುವುದಾದರೆ ಅನುವಾದಕರು ಸಾಕಷ್ಟು ಯಶಸ್ವಿಯಾಗಿದ್ದಾರೆಂದೇ ಹೇಳಬೇಕು. ಇದು ಅನುವಾದವಾದರೂ ಅಧ್ಯಯನ ಬೇಡುವ ಕಾರ್ಯ. ಇದನ್ನು ಮಿರ್ಜಿಯವರು ಮಾಡಿದ್ದಾರೆಂಬುದು ತಿಳಿಯುತ್ತದೆ. ಆದರೂ ಕೆಲವು ಕಡೆ ಇದು ಇಂಗ್ಲಿಷ್ನಿಂದ ಅನುವಾದಿಸಿದ್ದು ಎಂಬುದು ಗೊತ್ತಾಗಿಬಿಡುತ್ತದೆ. ಪುಸ್ತದ ಶೀರ್ಷಿಕೆಯನ್ನು ಯಥಾವತ್ ಅನುವಾದ ಮಾಡುವುದರ ಬದಲಾಗಿ ಸೂಕ್ತ ಹೆಸರನ್ನು ನೀಡಬಹುದಾಗಿತ್ತು.
ಕೊನೆಯದಾಗಿ, ಪುಸ್ತಕದ ಮುದ್ರಣ, ಬೈಡಿಂಗ್ ಇತ್ಯಾದಿಗಳು. ಇದನ್ನು ಒಂದು ಕಲೆ ಎಂಬಂತೆ ಐಬಿಎಚ್ ಪ್ರಕಾಶನ ಮಾಡಿದೆ. ಇದು ಆ ಪ್ರಕಾಶನದ ಹೆಗ್ಗಳಿಕೆ ಕೂಡ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಡಾ ಹಾ ಮಾ ನಾಯಕರ ಪುಸ್ತಕ ಸಂಪ್ರತಿಯ ಅಚ್ಚುಕಟ್ಟಾದ ಪ್ರಕಟಣೆಯನ್ನು ಕನ್ನಡಿಗರು ಮರೆತಿಲ್ಲ. ಅಂತಹ ಮತ್ತೊಂದು ಕೆಲಸವನ್ನು ಐಬಿಎಚ್ ಮಾಡಿದೆ. ಒಂದು ಸುಂದರ ಪುಸ್ತಕವನ್ನು ಕೈಗೆತ್ತಿಕೊಳ್ಳುವುದು ಪುಸ್ತಕ ಪ್ರಿಯರಿಗೆ ಅತೀವ ಸಂತೋಷ ಕೊಡುವ ಕಾರ್ಯ. ಇದು ಅಂತಹ ಒಂದು ಪುಸ್ತಕ.
ಒಂದು ಒಳ್ಳೆಯ ಕೃತಿಯನ್ನು ಕನ್ನಡಿಗರ ಕೈಗಿತ್ತಿರುವ ಐಬಿಎಚ್ ಪ್ರಕಾಶನಕ್ಕೆ, ಅನುವಾದಕರಿಗೆ ಕನ್ನಡಿಗರ ಪ್ರೀತ್ಯಾದರಗಳು ಸಲ್ಲಬೇಕು.
ಕೆ.ಎಸ್. ನವೀನ್
ಕನ್ನಡ ಗಣಕ ಪರಿಷತ್ತು,
64/2, 1ನೇ ಮುಖ್ಯರಸ್ತೆ, ಮೂರನೇ ತಿರುವು,
ಚಾಮರಾಜಪೇಟೆ, ಬೆಂಗಳೂರು ಗ 560 018.
ದೂರವಾಣಿ: 94489 05214
21-4-2014