– ಡಾ.ಚಿನ್ಮಯ ಎಂ.ರಾವ್
(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)
ಕಟ್ಟುವೆ ನಾನೊಂದು ಪ್ರೇಮಮಂದಿರವ
ನೊಂದು ಬೆಂದು ಹೋದ ಪ್ರೇಮಿಗಳಿಗೆ
ಬಂಧುವಾಗಲು, ಬಂದು ಹೋಗಲು
ಸುಂದರ ಪ್ರೇಮದೇವಿಯ ಪ್ರತಿಷ್ಠಾಪಿಸುವೆ,
ನಾನೇ ಅರ್ಚಕ, ಪ್ರೇಮಾನುಷ್ಠಾನಮಾಡುವೆ
ಸದಾ ನಾನವಳ ದಾಸ –
-ವಾಳಾದಿ ಪುಷ್ಪರಾಶಿಗಳಿಂದಲಂಕರಿಸಿ
ಸೌಂದರ್ಯ ಆಸ್ವಾದಿಸುವೆ, ಆ
ಲಹರಿಯನ್ನು ಸರ್ವತ್ರ ಪಸರಿಸುವೆ
ಗುಡಿಯ ಬಾಗಿಲು ಹಾಕಲಾರೆ
ದಾಸರು ಯಾವಾಗಲೂ
ದಾಸರ ಪದ ಹಾಡಬಹುದು
ದಾಸದಾಸಾನುದಾಸರು ಸದಾ ಹೊಸದಾದ
ಪ್ರೇಮಗೀತೆಯನ್ನು ಕಟ್ಟಬಹುದು,
ಅವುಗಳಿಗೆ ಸೀದಾ ಮಾನ್ಯತೆ ಕೊಡಲಾಗುವುದು
ಪ್ರೇಮದೇವಿ ಪಾಪಪ್ರಜ್ಞೆಕೊಡಲಾರಳು
ಪ್ರೇಮಿಸುವುದು ಪುಣ್ಯದ ಕೆಲಸವಲ್ಲವೇ?
ಪ್ರೇಮಿಗಳು ಪಾಪಿಗಳಲ್ಲ, ಅಪರಾಧಿಗಳೂ ಅಲ್ಲ
ಜಗಕಾನಂದ ಕೊಡಬಲ್ಲರು
ದ್ವೇಷಾಗ್ನಿಗೆ ನೀರ್‌ಚೆಲ್ಲುವ ನೀರೆಯರು
ಭೂದೇವಿ ಇಂದು ಸುಂದರಳಾಗಿದ್ದರೆ
ಅದು ಪ್ರೇಮಿಗಳಿಂದ ಮಾತ್ರ !
ಕಟ್ಟುವೆ ನಾನೊಂದು ಪ್ರೇಮಮಂದಿರವ
ವಿಶ್ವಪ್ರೇಮಮಂದಿರವ
ಚಿನ್ಮಯ ಎಂ ರಾವ್
2005
*******************