ಸಂಪ್ರದಾಯ

ಶ್ರದ್ಧೆ ಮತ್ತು ವೈಭವದಿಂದ ಗುಬ್ಬಲಾಳದ ವಜ್ರಮುನಿ ಸರ್ಕಲ್ ಬಳಿ ಕಟ್ಟಿದ ಭವ್ಯ ಮಂಟಪದಲ್ಲಿ ಸಾರ್ವಜನಿಕ ಗಣೇಶೋತ್ಸವ

14 ಸೆಪ್ಟೆಂಬರ್ 2024

ಜೆಸಿಎಚ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು (JCHRWA) ಪ್ರತಿ ವರ್ಷದಂತೆ ಸಾರ್ವಜನಿಕ ಗಣೇಶೋತ್ಸವವನ್ನು ಶ್ರದ್ಧೆ ಮತ್ತು ವೈಭವದಿಂದ ಗುಬ್ಬಲಾಳದ ವಜ್ರಮುನಿ ಸರ್ಕಲ್ ಬಳಿ ಕಟ್ಟಿದ ಭವ್ಯ ಮಂಟಪದಲ್ಲಿ ಆಯೋಜಿಸಿತ್ತು. ಅಧ್ಯಕ್ಷರಾದ ಸುನೀಲ್ ಪೊನ್ನಣ್ಣ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು, ಸ್ಥಳೀಯ ನಿವಾಸಿಗಳು, ವ್ಯಾಪಾರಸ್ಥರು ಸೇರಿಕೊಂಡು ಗಣೇಶನ ಪ್ರತಿಮೆ ಪ್ರತಿಷ್ಠಾಪಿಸಿ, ವಿದ್ಯುಕ್ತವಾಗಿ ಪೂಜಿಸಿದರು.

ನಿಕಟಪೂರ್ವ ಪಾಲಿಕೆ ಸದಸ್ಯರಾದ ಶ್ರೀ ಹನುಮಂತಯ್ಯನವರ ಉಪಸ್ಥಿತಿಯಲ್ಲಿ ಸಕಲರ ಶ್ರೇಯೋಭಿವೃದ್ಧಿಗಾಗಿ ನಡೆದ ಗಣಹೋಮದ ಬಳಿಕ ಸೇರಿದ ಎಲ್ಲ ಭಕ್ತಾದಿಗಳಿಗೂ   ಹಾಗೂ ಆರ್ಥಿಕವಾಗಿ ಹಿಂದುಳಿದ, ಸೌಲಭ್ಯವಂಚಿತರಿಗೆ ಆಹವಾಹನ್ ಫೌಂಡೇಶನ್ ನ ಶ್ರೀ ಬ್ರಿಜ್ ಕಿಶೊರ್  ಮಧ್ಯಾನ್ಹ ಮತ್ತು ರಜತಾದ್ರಿ ರಾಯಲ್ ಇವರ ವತಿಯಿಂದ ಸಂಜೆ ಭೊಜನ ಪ್ರಸಾದ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸುಮಾರು 35 ಕ್ಕೂ ಹೆಚ್ಚು ಕರ್ಮಚಾರಿಗಳ ಸೇವೆಗೆ ಧನ್ಯತಾ ಪೂರ್ವಕವಾಗಿ ಅಭಿನಂದಿಸಿ, ಹಬ್ಬದ ಉಡುಗೊರೆಗಳನ್ನು ವಿತರಿಸಲಾಯಿತು. ಈ ಹಬ್ಬದ ಅಂಗವಾಗಿ ಸಾಯಂಕಾಲ ಸ್ಥಳೀಯ ಪ್ರತಿಭೆಗಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸುಮಾ ನಾಗರಾಜ್ ಮತ್ತು ಬೃಂದಾ ರಮೇಶ್ ನಿರೂಪಿಸಿದ ಈ ಭಾಗದಲ್ಲಿ ಶಾರದ ಕಲಾ ಕುಟೀರ, ಸುನೂಪುರ ನೃತ್ಯಾಲಯ, ಸಂಗಮ ಕಲಾಕ್ಷೇತ್ರ, ಪ್ರಭಾತ್ ಅಕಾಡೆಮಿ, ಕಾವ್ಯ ಕೊಚಿಂಗ್ ನ ವಿದ್ಯಾರ್ಥಿಗಳು, ನಿರಂಜನ ಹೆಗಡೆ (ಕೊಳಲು), ಮುಂತಾದವರು ವಿವಿಧ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರನ್ನು ರಂಜಿಸಿದರು. ತದನಂತರ ದಿವ್ಯಾ ಆಲೂರ ಅವರ ದೇಸಿ ಬೀಟ್ಸ ತಂಡದಿಂದ ನುರಿತ ವೃತ್ತಿಪರ ಕಲಾವಿದರಾದ ಅಶ್ವಿನ್ ಶರ್ಮಾ, ದಿವ್ಯಾ ರಾಮಚಂದ್ರ, ಮಾನಸಾ ಹೊಳ್ಳ, ಸಂತೊಷ್ ದೇವ್, ಕಲಾಧರೆ ನೃತ್ಯ ತಂಡ ನಡೆಸಿಕೊಟ್ಟ ಹಾಡು, ನೃತ್ಯ ರೂಪಕಗಳು ಹಾಗೂ ಸುಧಾ ಬರಗೂರ ಅವರ ಹಾಸ್ಯದ ಮಾತುಗಳು ಈ ಸಂಭ್ರಮದ ಹಬ್ಬಕ್ಕೆ ವಿಶೇಷ ಕಳೆ ಕೊಟ್ಟಿತು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ಶಾಸಕರಾದ ಮಾನ್ಯ ಶ್ರೀ ಎಂ. ಕೃಷ್ಣಪ್ಪ ಅವರು ನೆರೆದ ಎಲ್ಲರಿಗೂ ಶುಭಾಷಯ ಕೋರಿ, ತುರಹಳ್ಳಿ-ಗುಬ್ಬಲಾಳದ ಪರಿಸರದ ಅಭಿವೃದ್ಧಿಗಾಗಿ ಯೋಜಿತ ವಿವಿಧ ಕಾಮಗಾರಿಗಳ ಬಗ್ಗೆ ತಿಳಿಸಿದರು. ದಿನದ ಕೊನೆಯಲ್ಲಿ, ಈ ಹಬ್ಬವು ಎಲ್ಲರನ್ನೂ ಒಗ್ಗೂಡಿಸಿ ಐಕ್ಯತೆಯನ್ನು ತರಲೆಂದು ಆಶಿಸುತ್ತಾ ಮಹಾಗಣಪತಿಯ ವಿಸರ್ಜನೆಯನ್ನು ಸುವ್ಯವಸ್ಥಿತ ಪರಿಸರ ಸ್ನೇಹಿ ಗಣೇಶ ವಿಸರ್ಜನಾ ವಾಹನದಲ್ಲಿ ನೆರವೇರಿಸಲಾಯಿತು.

 

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.