ಸಂಪ್ರದಾಯ

ದೀಪಾವಳಿಯನ್ನು ಏಕೆ ಆಚರಿಸಬೇಕು ?

m-ganapathi-kanugoduಎಂ. ಗಣಪತಿ. ಕಾನುಗೋಡು

ಬಲಿ ಒಬ್ಬ ಶಕ್ತಿಶಾಲಿ ದಾನವ. ಅಮೃತದಿಂದ ವಂಚಿತರಾದ ದಾನವರು ದೇವತೆಗಳ ಮೇಲೆ ಯುದ್ಧವನ್ನು ಸಾರಿ ಸೋತರು. ಅವರಲ್ಲಿ ಮುಖ್ಯನಾದ ಬಲಿಯನ್ನು ಸೋಲಿಸುವುದು ಸುಲಭದ ಮಾತಾಗಿರಲಿಲ್ಲ. ಅಂತೂ ಇಂದ್ರನು ಅವನನ್ನು ಸಂಹರಿಸಿದ. ಆದರೆ ಅವನ ಗುರುಗಳಾದ ಶುಕ್ರಾಚಾರ್ಯರು ಅವನನ್ನು ಮೃತ ಸಂಜೀವಿನಿ ವಿದ್ಯೆಯಿಂದ ಬದುಕಿಸಿದರು. ಇದಾದ ನಂತರ ಬಲಿಯು ವಿಶ್ವಜಿತ್ತೆಂಬ ಮಹಾಯಾಗವನ್ನು ಮಾಡಿ ಅಗ್ನಿದೇವನಿಂದ ರಥಾಶ್ವಧ್ವಜಗಳನ್ನು, ತನ್ನ ಪಿತಾಮಹನಾದ ಪ್ರಹ್ಲಾದನಿಂದ ಮಹಾಧನುಸ್ಸನ್ನು, ಅಕ್ಷಯ ಬತ್ತಳಿಕೆಯನ್ನೂ ಪಡೆದ. ಹೀಗೆ ಆ ಯಾಗದಿಂದ ಅತ್ಯುಗ್ರ ಶಕ್ತಿಯನ್ನು ಸಂಪಾದಿಸಿದ. ಇಂತಹ ಶಕ್ತಿಯಿಂದ ಇಂದ್ರಾದಿ ದೇವತೆಗಳನ್ನು ಹೀನಾಯವಾಗಿ ಸೋಲಿಸಿ ಸ್ವರ್ಗರಾಜ್ಯವನ್ನು ವಶಪಡಿಸಿಕೊಂಡ. ತಾನೇ ಇಂದ್ರಪದವಿಯನ್ನು ಹೊಂದಿ ಬಲೀಂದ್ರನಾದ. ತ್ರಿಲೋಕಾಧಿಪತಿಯಾದ.

vishnuvarmaಇದರಿಂದ ಆತಂಕಕ್ಕೆ ಸಿಕ್ಕಿದ ದೇವತೆಗಳು ವಿಷ್ಣುವನ್ನು ಪ್ರಾರ್ಥಿಸಿ ಬಲಿಯನ್ನು ಕೊಲ್ಲಲು ಕೇಳಿಕೊಂಡರು. ಆಗ ಶ್ರೀ ಹರಿಯು ಅವರ ಅರಿಕೆಯನ್ನು ನೀಗಿಸಲು ಕಶ್ಯಪ ಮತ್ತು ಅದಿತಿಯ ಪುತ್ರನಾಗಿ ಜನಿಸಿದ. ತೀರಾ ಚಿಕ್ಕದಾದ ಆಕೃತಿಯನ್ನು ಹೊಂದಿದ್ದರಿಂದ ಅವನಿಗೆ ವಾಮನ ಎಂಬ ಹೆಸರು ಬಂತು. ವಿಷ್ಣುವಿನ ಹತ್ತು ಅವತಾರಗಳಲ್ಲಿ ವಾಮನಾವತಾರವು ಐದನೆಯದು.

ಬಲೀಂದ್ರನು ಅಶ್ವಮೇಧಯಾಗವನ್ನು ಮಾಡುತ್ತಿದ್ದ. ಆಗ ಅಲ್ಲಿಗೆ ವಾಮನನು ಬಾಲವಟುವಾಗಿ ಬಂದ. ಬಾಲವಟುವಾದ ವಾಮನ ಅದ್ಭುತ ತೇಜಸ್ಸನ್ನು ಕಂಡು ಬಲಿಯು ಬೆರಗಾದ. ಆ ಸಂತೋಷದಲ್ಲಿ ಬಲಿಯು ನಿನಗೆ ಯಾವ ವರ ಬೇಕೋ ಕೇಳು ಎಂದು ವಾಮನನಿಗೆ ಹೇಳಿದ. ವಾಮನನು ತನ್ನನ್ನು ವಧಿಸಲಿಕ್ಕಾಗಿ ಅವತರಿಸಿ ಬಂದ ವಿಷ್ಣು ಎಂದು ಅವನಿಗೆ ಗೊತ್ತಾಗಲಿಲ್ಲ. ಅದಕ್ಕೆ ವಾಮನನು “ಬಲಿಚಕ್ರವರ್ತಿ, ನನಗೆ ಹೆಚ್ಚೇನೂ ಬೇಡ. ನನ್ನ ಅಳತೆಯಲ್ಲಿ ಮೂರು ಹೆಜ್ಜೆ ಭೂಮಿ ಕೊಟ್ಟರೆ ಸಾಕು” ಎಂದ. ಅದಕ್ಕೆ ಬಲಿಯು ಒಪ್ಪಿದ ಕೂಡಲೇ ನೋಡು ನೋಡುತ್ತಿದ್ದಂತೆ ವಾಮನನು ತ್ರಿವಿಕ್ರಮನಾಗಿ ಬೆಳೆದ. ಆಕಾಶ ಭೂಮಿಗಳು ಒಂದಾದುವು. ಒಂದು ಪಾದದಿಂದ ತ್ರಿವಿಕ್ರಮನು ಇಡೀ ಭೂಮಂಡಲವನ್ನು ಅಳೆದ. ಇನ್ನೊಂದು ಪಾದವನ್ನು ಗಗನಕ್ಕೆ ಚಾಚಿದಾಗ ಅದು ಇಡೀ ಆಕಾಶವನ್ನೇ ವ್ಯಾಪಿಸಿತು. ಅಲ್ಲದೆ ಹೀಗೆ ಗಗನಕ್ಕೆ ಪಾದವನ್ನು ಚಾಚಿದಾಗ ತ್ರಿವಿಕ್ರಮನ ಎಡಗಾಲಿನ ಹೆಬ್ಬೆರಳಿನ ಉಗುರಿನ ತುದಿ ತಾಗಿ ಬ್ರಹ್ಮಾಂಡದ ಕಟಾಹದ ತುದಿ ತೂತಾಗಿ ನೀರು ಸೊರಹತ್ತಿತು. ಈ ವಿಷ್ಣು ಪಾದೋದಕವೇ ಗಂಗೆ. ಇದಕ್ಕೆ ದೇವಗಂಗೆ ಎಂದೂ ಕರೆಯುತ್ತಾರೆ. ತ್ರಿವಿಕ್ರಮನಾದ ಶ್ರೀ ಹರಿಯು ಮತ್ತೊಂದು ಪಾದವನ್ನು ಬಲಿಯ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ಅಟ್ಟಿದ.

ಹೀಗೆ ಮೂರನೆಯ ಪಾದವನ್ನು ತ್ರಿವಿಕ್ರಮನು ಬಲಿಯ ಮೇಲಿಟ್ಟಾಗ ಬಲಿಯ ಪಿತಾಮಹನಾದ ಪ್ರಹ್ಲಾದನು ಪ್ರಕಟಗೊಂಡು ಬಲಿಯನ್ನು ರಕ್ಷಿಸುವಂತೆ ಪ್ರಾರ್ಥಿಸಿದ. ಆಗ ಶ್ರೀ ಹರಿಯು “ಪಾತಾಳದಲ್ಲಿರುವ ಬಲಿಯ ಅರಮನೆಯನ್ನು ನಾನು ನನ್ನ ಅಂಶದಿಂದ ಯಾವಾಗಲೂ ಕಾಯುತ್ತಾ ಇರುತ್ತೇನೆ. ಅವನಿಗೆ ಒಂದು ಕಲ್ಪ ಪ್ರಮಾಣದ ಆಯುಷ್ಯವನ್ನು ಕೊಟ್ಟಿದ್ದೇನೆ. ಅದುವರೆಗೆ ಸುತಲ ಲೋಕದಲ್ಲಿ ಮುನ್ನೂರು ಮಂದಿ ಸುಂದರಿಯರೊಡನೆ ಭೋಗಿಸುವಂತಾಗಲಿ. ಅಲ್ಲದೆ ಮುಂದಿನ ಸಾವರ್ಣಿಕ ಮನ್ವಂತರದಲ್ಲಿ ಮತ್ತೆ ಇಂದ್ರನಾಗುತ್ತಾನೆ. ಪ್ರತಿ ವರ್ಷ ಬಲಿಯು ಭೂಮಿಗೆ ಬರುತ್ತಾನೆ. ಆಗ ಭೂಮಿಯಲ್ಲಿ ಇರುವ ಜನರು ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಆಚರಿಸುತ್ತಾರೆ. ಎಂಬುದಾಗಿ ಪ್ರಹ್ಲಾದನ ಪ್ರಾರ್ಥನೆಯಂತೆ ಬಳಿಗೆ ಅನುಗ್ರಹಿಸಿದನು. ಅಲ್ಲದೆ ‘ ವೇದ ಓದದ ಬ್ರಾಹ್ಮಣನಿಗೆ ಕೊಟ್ಟ ದಾನಗಳ ಮತ್ತು ವಿಶ್ವಾಸವಿಲ್ಲದವನು ಮಾಡಿದ ಯಜ್ಞ ಯಾಗಾದಿಗಳ ಫಲವು ಕೊಟ್ಟವನಿಗೆ, ಮಾಡಿದವನಿಗೆ ಲಭಿಸದೆ ನಿನಗೆ ಲಭಿಸುತ್ತದೆ ‘ ಎಂದು ವರವನ್ನು ಕೊಟ್ಟನು.

ಈ ಪ್ರಕಾರ ಬಲಿಯು ಪ್ರತಿ ವರ್ಷ ಬಲಿ ಪಾಡ್ಯಮಿಯಂದು ಭೂಮಿಗೆ ಬರುತ್ತಾನೆ. ಅದನ್ನೇ ನಾವು ಬಲಿಯಿಂದರನನ್ನು ತರುವ ಪದ್ಧತಿಯನ್ನು ಆಚರಿಸುತ್ತೇವೆ. ಈ ಕಾರಣಕ್ಕಾಗಿ ದೀಪಾವಳಿಯ ಮೂರು ದಿನಗಳು ದೀಪಗಳನ್ನು ಹಚ್ಚಿ ಸಂಭ್ರಮಿಸುವ ಪದ್ಧತಿ ಬಂದಿದೆ. ಬಲಿಯು ಕೊಟ್ಟ ದಾನದಂತೆ ತ್ರಿವಿಕ್ರಮನು ಆಕಾಶಕ್ಕೆ ತನ್ನ ಪಾದವನ್ನಿಟ್ಟು ಅಳೆಯುವಾಗ ಅವನ ಹೆಬ್ಬೆರಳ ಉಗುರು ತುದಿ ತಾಗಿ ಬ್ರಹ್ಮಾಂಡದ ಭಿತ್ತಿಯಲ್ಲಿ ರಂಧ್ರವಾಗಿ ದೇವಗಂಗೆ ಹೊರಬಂದಿದ್ದರಿಂದ ಆ ಗಂಗೆಯನ್ನು ತುಂಬುವ ಪದ್ಧತಿಯೂ ಈ ಸಂದರ್ಭದಲ್ಲಿ ನಡೆಯುತ್ತದೆ. ಇವೇ ಗಂಗೆಯನ್ನು ತುಂಬುವುದು. ಬಲಿಇಂದ್ರನನ್ನು ತರುವುದು ಮತ್ತು ದೀಪಗಳನ್ನು ಹಚ್ಚುವುದು ಈ ಪದ್ಧತಿಗಳಿಗೆ ಕಾರಣ.

ನರಕ ಚತುರ್ದಶಿಯ [ ದೀಪಾವಳಿಯ ] ದಿನ ರಾತ್ರಿಯ ಕಾಲದಲ್ಲಿ [ ಸಂಜೆಯ ಕಾಲದಲ್ಲಿ ? ] ಮೈಗೆ ಎಣ್ಣೆಯನ್ನು ಸವರಿಕೊಂಡು ಅಭ್ಯಂಜನವನ್ನು ಮಾಡಬೇಕು. ಆ ದಿನ ತೈಲದಲ್ಲಿ ಲಕ್ಷ್ಮಿಯೂ, ಜಾಲದಲ್ಲಿ ದೇವಗಂಗೆಯೂ, ಉಪಸ್ಥಿತರಿರುತ್ತಾರೆ. ಇದರಿಂದ ನರಕವೂ ಪ್ರಾಪ್ತವಾಗುವುದಿಲ್ಲ. ಮರುದಿನ [ ಅಮಾವಾಸ್ಯೆ ] ಸಂಜೆ ಪ್ರದೋಷ ಕಾಲದಲ್ಲಿ ಲಕ್ಷ್ಮಿಯನ್ನು ಪೂಜಿಸಬೇಕು. ಹಸುವಿನ ಕೊಟ್ಟಿಗೆಯಲ್ಲಿ ದೀಪವನ್ನು ಹಚ್ಚಿಡುವುದನ್ನು ಮರೆಯಬಾರದು. ಏಕೆಂದರೆ ಆ ದಿನ ಲಕ್ಷ್ಮಿಯು ಅಲ್ಲಿ ಇರುತ್ತಾಳೆ. ನಂತರ ಪ್ರತಿಪದೆಯ ದಿನ ಬಲಿ ಪೂಜೆಯನ್ನು ಮಾಡಬೇಕು. ಆ ದಿನ ಯಾರು ಬಲಿ ಪೂಜೆಯನ್ನು ಮಾಡುವುದಿಲ್ಲವೋ ಅವರ ಪುಣ್ಯವೆಲ್ಲಾ ಬಲಿಗೆ ಸೇರುತ್ತದೆ.
ತಾರೀಖು : 29 – 10 – 2016 . ದೀಪಾವಳಿಯ ಮುನ್ನಾ ದಿನ.

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.