ಡಾ.ಚಿನ್ಮಯ ಎಂ.ರಾವ್ ಸಮಗ್ರ ಕವನ ಸಂಕಲನ

ಕವಿತೆ-12 : ನಿಲ್ಲು ನಲ್ಲೆ ನನ್ನಲ್ಲೆ

ಡಾ.ಚಿನ್ಮಯ ಎಂ.ರಾವ್ ಸಮಗ್ರ ಕವನ ಸಂಕಲನ

ಸಮಗ್ರ ಕವನ ಸಂಕಲನ

– ಡಾ.ಚಿನ್ಮಯ ಎಂ.ರಾವ್

(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)

 

ನಿಲ್ಲು ನಲ್ಲೆ ಇಲ್ಲೆ ನಲ್ಲಲ್ಲೆ

ನಿಮಿಷ ಅರ್ಧವಾದರೂ;

ಒಲ್ಲೆ ಎಂದೇಕೆ ನಡೆವೆ?

ನನ್ನುಸಿರು ಅರ್ಥವಾದರೂ

ನಿನ್ನೊಲವಿನುಸಿರೆ ಬೇಕೆಂಬ

ಸ್ವಾರ್ಥ ನನ್ನಲ್ಲಿದ್ದರೂ

ಸಾರ್ಥ ನನ್ನದೀ ಪ್ರೇಮವು

ಸಾರ್ಥಕತೆಯ ತಾಣವು!

 

ಹೊಂಗನಸಿನ ಮೂಟೆ ಹೊತ್ತು;

ನನಸಿನೂರಿಗೆ ಓಡಿಹೆ;

ನಿನ್ನ ಭಾರ ನನಗೆ ಹಗುರ

ಸಾಗಿಸಲು ನಿನ್ನ ಬೇಡಿಹೆ

ಹೊತ್ತುಕೊಳಲು ನಿತ್ಯ ಕರೆವೆ

ಪ್ರಣಯ ಸಿದ್ಧಿಪಡೆಯಲು

ಪ್ರೀತಿಕೊಳಲ ಪ್ರೇಮನಾದ

ಕೇಳಿಯೂ ಹಿಂಜರಿವೆಯೇಕೆ?

ಹೂನಗೆಯನೂ ಹಡೆಯಲು!

 

ಇದು ವಿಲಾಪ ಇದು ಪ್ರಲಾಪ

ಹೃದಯತಾಪದ ಬಿಸಿಯು;

ಒಲವಿನೂಟವನುಣಿಸು ಬೇಗ

ಕಾಯುತಿಹುದೆನ್ನ ಹಸಿವು

ಹೋಗಲು ನಿನ್ನ ಅಂತರಾಳಕೆ

ಹಗಲಿರುಳಲು ಬಯಕೆಯು

ಬೆಸುಗೆ ಸಲುಗೆ ಸುಗ್ಗಿಯೆಂದು?

ನಾ ಕುಗ್ಗಿ ಬಗ್ಗೆ ಹೋಗಿಹೆ

 

ಬಿಡನು ಎನ್ನ ಚಿತ್ತಯೋನಿ

ಬೇಗನಾಗು ಒಲವದಾನಿ

ಬೇಗೆ ನೀಗು ನೀ ನಿಧಾನಿ

ನಾ-ನಲ್ಲ ಇನ್ನು ಸಮಾಧಾನಿ

 

ನಿಲ್ಲಲೊಲ್ಲೆ ಏಕೆ?! ನಿಲ್ಲು ನಲ್ಲೆ

ನಿಮಿಷ ಅರ್ಧವಾದರೂ;

ಒಲ್ಲೆ ಎಂದು ಗೆಲ್ಲ ಬೇಡ

ನನ್ನುಸಿರು ಅರ್ಥವಾದರೂ !

 

ಚಿನ್ಮಯ ಎಂ ರಾವ್

2005

*******************

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.