ಶಿವಮೊಗ್ಗ : ಕಳೆದ ನಾಲ್ಕು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಮಾಡುವ ಮೂಲಕ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಶ್ರೀಮಂತಗೊಳಿಸಿದ ಇಲ್ಲಿಗೆ ಸಮೀಪದ ಹೊಸಹಳ್ಳಿಯ ಸಂಗೀತ ವಿದ್ವಾನ್ ಅನಂತ ಅವಧಾನಿ ಅವರ ಹೆಸರನ್ನು ಯುವ ಸಂಗೀತ ನಿರ್ದೇಶಕ ಡಾ.ಚಿನ್ಮಯ ಎಂ.ರಾವ್ ಅವರು ರಾಷ್ಟ್ರದ ಅತ್ಯುನ್ನತ ‘ಪದ್ಮಶ್ರೀ’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು ಇಂತಹ ಪ್ರಶಸ್ತಿಗಳು ಕೇವಲ ಮಹಾನಗರಗಳಲ್ಲಿ ಹೆಸರು ಮಾಡಿದ ಸಾಧಕರಿಗೆ ಮಾತ್ರ ನೀಡುವುದರ ಬದಲು ಗ್ರಾಮೀಣ ಭಾಗದಲ್ಲಿ ಎಲೆಮರೆಕಾಯಾಗಿ ಹಲವು ದಶಕಗಳಿಂದ ಸಾಧನೆ ಮಾಡಿದವರಿಗೂ ನೀಡುವಂತಾಗಬೇಕು ಎಂದಿದ್ದಾರೆ. 72ರ ಇಳಿವಯಸ್ಸಿನಲ್ಲಿಯೂ ಇಪ್ಪತ್ತೆರಡು ವರ್ಷದ ತರುಣನಂತೆ ಸದಾ ಕ್ರಿಯಾಶೀಲ ಸಂಗೀತ ಗುರುಗಳಾದ ಇವರು ಇಂದಿಗೂ ಹೊಸಹಳ್ಳಿಯಿಂದ ಶಿವಮೊಗ್ಗ ನಗರಕ್ಕೆ ಪ್ರತಿನಿತ್ಯ ಆಗಮಿಸಿ ಅತ್ಯಂತ ಶ್ರದ್ಧೆಯಿಂದ ಸಾವಿರಾರು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ. ಇವರು ನೂರಾರು ಸಂಗೀತ ವಿದ್ವಾಂಸರನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ನೀಡಿದ್ದಲ್ಲದೆ ಅವರೆಲ್ಲಾ ಸಂಗೀತ ಶಿಕ್ಷಣ ಸಂಸ್ಥೆಗಳನ್ನು ತೆರೆದುಕೊಂಡು ದೇಶದ ನಾನಾ ಭಾಗಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಮಾಡುವ ಮೂಲಕ ಸಂಗೀತ ಪರಂಪರೆಯನ್ನು ಶ್ರೀಮಂತ ಗೊಳಿಸುತ್ತಿದ್ದಾರೆ. ಸಂಗೀತ ತಪೋನಿಧಿಯಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಅನಂತ ಅವಧಾನಿ ಖಂಡಿತವಾಗಿಯೂ ಪದ್ಮಶ್ರೀ ಪ್ರಶಸ್ತಿಗೆ ಸೂಕ್ತವಾದ ವ್ಯಕ್ತಿ ಎಂದು ನಾಮನಿರ್ದೇಶನ ಮಾಡಿರುವ ಡಾ.ಚಿನ್ಮಯ ಎಂ.ರಾವ್ ತಿಳಿಸಿದ್ದಾರೆ.
ಜಾಲತಾಣದ ಮೂಲಕ ಜನಸಾಮಾನ್ಯರೂ ಇಂತಹ ಅತ್ಯುನ್ನತ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಗೆ ಡಾ.ಚಿನ್ಮಯ ಎಂ.ರಾವ್ ಧನ್ಯವಾದ ಅರ್ಪಿಸಿದ್ದಾರೆ. ಪದ್ಮ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡುವ ಜಾಲತಾಣದಲ್ಲಿನ ನ್ಯೂನತೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
FINAL LINK OF NOMINATION