ಕಥಾಕಣಜಸಾಹಿತ್ಯ

ನಿಗೂಢ ಯಾನ – ೨

Deepak Koradi– ದೀಪಕ್ ಕೋರಡಿ

ಬೆಳಿಗ್ಗೆ ಎದ್ದು ಹಿಂದಿನ ದಿನ ಓದಿದ್ದನ್ನೆಲ್ಲ ಒಮ್ಮೆ ರೆವೈಸ್ ಮಾಡಿ, ಸ್ನಾನ ಮುಗಿಸಿ, ದೇವರನ್ನು ಅಂಗಲಾಚಿ-ಪುಸಲಾಯಿಸಿದ ನಂತರ ಮನೆಯಿಂದ ಶಾಲೆಗೆ ಹೊರಟಿದ್ದೆ. ಅಪ್ಪಾಜಿ ಉಪಯೋಗಿಸುತ್ತಿದ್ದ ಹಳೆಯ ಸೈಕಲ್ಲು, ಹತ್ತಿರದ ಪ್ರಾರ್ಥಮಿಕ ಶಾಲೆ ಮುಗಿಸಿ ೪ ಕಿ.ಮಿ. ದೂರದಲ್ಲಿದ್ದ ಪ್ರೌಢಶಾಲೆಗೆ ಹೊರಟ ನನಗೆ ‘ಉಡುಗೊರೆ”ಯಾಗಿ ಸಿಕ್ಕಿತ್ತು. ೩ ವರ್ಷಗಳ ಹಿಂದೆ ಪಕ್ಕದ ಮನೆಯವರ ಲೇಡೀಸ್ ಸೈಕಲ್ಲಿನಲ್ಲಿ ‘ವಾಲ್ ಪೆಡಲ್’ ಹೊಡೆದು ಸೈಕಲ್ ಕಲಿತ ನನಗೆ ಬಂಪರಿ ಇರುವ ಈ ದೊಡ್ಡ ಸೈಕಲ್ಲನ್ನು ಹತ್ತುವಾಗ ಹಲವು ಬಾರಿ ಕಾಲು ಸಿಕ್ಕಿಹಾಕಿಕೊಳ್ಳುತ್ತಿತ್ತು. ಆದರೆ ಅದು ೮ನೇ ತರಗತಿಯಲ್ಲಿ ಎಂಬ ಮಂಪರು ನೆನಪು. ನಾನೀಗ ೧೦ನೇ ಕ್ಲಾಸ್. ಅಂದರೆ ‘ಎಸ್.ಎಸ್.ಎಲ್.ಸಿ’. ಇವತ್ತು ಎಸ್.ಎಸ್.ಎಲ್.ಸಿ.ಯ ಕೊನೆಯ ಪರೀಕ್ಷೆ. ಅದರಲ್ಲೂ ನನಗೆ ಕ್ಲಿಷ್ಟವಾದ ವಿಜ್ಞಾನ. ಹಿಸ್ಟರಿಯಾಗಿದ್ದರೆ ಕತೆ ಬರೆಯುವ ನನಗೆ ಸುಲಭ. ಲೆಕ್ಕದಲ್ಲಿ ಪಕ್ಕ ಆಗಿರುವ ತಂದೆಯ ಪ್ರಭಾವದಿಂದ ಗಣಿತ ಕೂಡ ಸಲೀಸು. ಆದರೆ ಕಲ್ಪನೆಗೂ ನಿಲುಕದ ಈ ವಿಜ್ಞಾನ ಮಾತ್ರ ಹಬ್ಬದೂಟದಲ್ಲಿ ಹಾಗಲಕಾಯಿ ಪಲ್ಯ ಇದ್ದಂತೆ. ಪಾಸಾಗಲು ಬೇಕಾದಷ್ಟು ಓದಿಕೊಂಡು ಬಂದಿದ್ದೆ. ಎದುರಿಗೆ, ಅಕ್ಕ-ಪಕ್ಕದಲ್ಲಿ ಕೂತವರು ಅಶ್ವಿನಿ ದೇವತೆಗಳಂತೆ ಅನಿಸುತ್ತಿದ್ದರು. ನನಗೆ ಬೀಕಾದ ಉತ್ತರವನ್ನು ತೋರಿಸಿ ಅಸ್ತು ಎನ್ನುವರು ಎಂದು ನಂಬಿ ಕೂತೆ.

ನನ್ನ ‘ಕರ್ಮ’ಕ್ಕೆ ಅವತ್ತು ನಮ್ಮನ್ನು ಕಾವಲು ಕಾಯಲು ಬಂದವರು ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು. ಇವರು ತುಂಬಾ ಸ್ಟ್ರಿಕ್ಟು ಅಂತ ಕೇಳಿದ್ದೆ. ಇವರನ್ನೆಲ್ಲೋ ನೋಡಿದ ನೆನಪು. ಎಲ್ಲಿ ಎಂದು ಗೊತ್ತಾಗುತ್ತಿಲ್ಲ. ಇದಕ್ಕೀಗ ಸಮಯ ವ್ಯರ್ಥ ಮಾಡುವುದು ಬೇಡವೆಂದು ಪ್ರಶ್ನೆ ಪತ್ರಿಕೆ ನೋಡಿದೆ. ಅಂತರಿಕ್ಷದಲ್ಲಿ ಅಲೆದಾಡುವ ಬಂಡೆಯೊಂದು ತೂರಿ ಬಂದು ತಲೆಯ ಮೇಲೆ ಬಿದ್ದಂತಾಯಿತು. ಅಲ್ಲಿರುವುದನ್ನೆಲ್ಲ ಎಲ್ಲೋ ಓದಿದ ನೆನಪು ಈ ಪ್ರಶ್ನೆಗಳಿಗೆ ಉತ್ತರವನ್ನೂ ನಾನು ಬಲ್ಲೆ. ಆದರೆ ಏಕೋ ನೆನಪಾಗುತ್ತಿಲ್ಲ. ಆಚೀಚೆ ನೋಡಿದೆ. ಉಳಿದವರೆಲ್ಲ ಕ್ಯಾಲ್ಕುಲೇಟರ್ ಗಳನ್ನು ಹಿಡಿದು ಏನೋ ಲೆಕ್ಕಗಳನ್ನು ಮಾಡುತ್ತಿದ್ದರು. ಒಮ್ಮೆ ದಿಗಿಲಾಯಿತು. ಅರೇ!! ನಾನು ಕ್ಯಾಲ್ಕುಲೇಟರ್ ತಂದಿಲ್ಲ. ಏನು ಮಾಡುವುದು. ಅಷ್ಟಕ್ಕೂ ಈ ಪರೀಕ್ಷೆಯಲ್ಲಿ ಲೆಕ್ಕ ಮಾಡುವುದೇನಿದೆ. ಗಾಭರಿಗೊಂಡು ಕಿಟಕಿಯ ಬಳಿ ನೋಡಿದೆ. ನಮ್ಮ ಪ್ರಾರ್ಥಮಿಕ ಶಾಲೆಯ ಬಳಿ ಖಾರದ-ಕಿತ್ತಲೆ (ಕಿತ್ತಲೆ ಹಣ್ಣನ್ನು ಮಧ್ಯಕ್ಕೆ ಕತ್ತರಿಸಿ ಇಭ್ಭಾಗಮಾಡಿ ಉಪ್ಪು-ಖಾರದಪುಡಿಯ ಮಿಶ್ರಣವನ್ನು ಅದರಲ್ಲಿ ತುಂಬಿಸುವುದಕ್ಕೆ ಖಾರದ-ಕಿತ್ತಲೆ ಎನ್ನುತ್ತಾರೆ) ಮಾರುತ್ತಿದ್ದ ಜೋಸೇಫ಼ಜ್ಜ ನನಗೆ ಬೇಕಾದ ಉತ್ತರಗಳನ್ನು ನನ್ನದೇ ಹ್ಯಾಂಡ್ ರೈಟಿಂಗಿನಲ್ಲಿ ಬರೆದಿಟ್ಟ ಕಾಗದವನ್ನು ಹಿಡಿದು ನಿಂತಿದ್ದರು. ಆಶ್ಚರ್ಯವಾಗಿ ನಾನು ಕಿಟಕಿಯ ಬಳಿ ನೋಡುತ್ತಿರುವುದನ್ನು ಗಮನಿಸಿ ಹತ್ತಿರ ಬಂದು ಗದರಿದರು ಪ್ರಾಂಶುಪಾಲರು. ಒಮ್ಮೆ ಬೆಚ್ಚಿ ಬಿದ್ದೆ. ‘ಪೇಪರ್ ನೋಡಿ ಬರಿ. ಕಿಟಕಿ ನೋಡಲ್ಲ’ ಎಂದುಸುರಿ ಹೋದರು. ಅವರೆಲ್ಲಿ ಜೋಸೇಫ಼ಜ್ಜನನ್ನು ನೋಡಿ ನನ್ನನ್ನು ಹೊರಗೆ ಕಳಿಸುವರೋ ಎಂದು ಹೆದರಿದ್ದೆ. ಆದರೆ ಅವರು ನನ್ನ ಬಳಿ ಬರುವುದರೊಳಗೆ ಜೋಸೇಫ಼ಜ್ಜ ಅಲ್ಲಿರಲಿಲ್ಲ. ಅವರು ಅತ್ತ ಹೋದ ಮೇಲೆ ಮತ್ತೆ ಕಿಟಕಿಯ ಬಳಿ ನೋಡಿದೆ. ಅದೇ ಕಾಗದವನ್ನು ಹಿಡಿದು ಹಲ್ಲು ಗಿಂಜಿಕೊಂಡು ನಿಂತಿದ್ದರು ಜೋಸೇಫ಼ಜ್ಜ. ನನಗೊಂದೂ ತಿಳಿಯಲಿಲ್ಲ. ಹೇಗೆ ಜೋಸೇಫ಼ಜ್ಜ ನಾನು ಬರೆದ ಹಾಳೆಯನ್ನು ತಂದು ನನಗೆ ತೋರಿಸಲು ಸಾಧ್ಯ!!! ಜಾಸ್ತಿ ಸಮಯ ವ್ಯರ್ಥ ಮಾಡುವುದು ಬೇದವೆಂದು ಯೋಚಿಸಿ ಪ್ರಾಂಶುಪಾಲರ ಕಣ್ಣು ತಪ್ಪಿಸಿ ಜೋಸೇಫ಼ಜ್ಜ ಹಿಡಿದಿದ್ದ ಪೇಪರಿನಲ್ಲಿರುವ ಉತ್ತರವನ್ನು ಯತಾವತ್ತಾಗಿ ನನ್ನ ಉತ್ತರ ಪತ್ರಿಕೆಯಲ್ಲಿ ಇಳಿಸುವುದರಲ್ಲಿ ಯಶಸ್ವಿ ಆದೆ. ಅಬ್ಬಾ!! ಅಂತೂ ಪಾಸಗಬಹುದೆಂಬ ವಿಶ್ವಾಸ ಮೂಡಿತು.

ಹೊರಗೆ ಬಂದು ಜೋಸೇಫ಼ಜ್ಜನಿಗೆ ಧನ್ಯವಾದಗಳನ್ನು ತಿಳಿಸಲು ಹೊರಟೆ. ಅಷ್ಟರಲ್ಲಿ ಉಳಿದ ನನ್ನ ಸ್ನೇಹಿತರೂ ನನ್ನೊಡನೆ ತರಗತಿಯಿಂದ ಹೊರಬಂದರು. ಒಮ್ಮೆ ಚಕಿತನಾದೆ. ಅರೇ!! ಇವರೆಲ್ಲ ನನ್ನ ಎಂಜಿನಿಯರಿಂಗ್ ಗೆಳೆಯರು. ಇವರು ಹೇಗೆ ನನ್ನ ಎಸ್.ಎಸ್.ಎಲ್.ಸಿ.ಯಲ್ಲಿ ಸಿಗಲು ಸಾಧ್ಯ. ಒಮ್ಮೆ ನನ್ನ ಮನಸ್ಸನ್ನು ರೆವಿಂಡ್ ಮಾಡಿದೆ. ನಿಧಾನವಾಗಿ ನಡೆದದ್ದನ್ನು ನೆನೆಸಿಕೊಂಡಾಗ ಅರಿವಾಯಿತು ನಾನು ಬರೆಯಲು ಬಂದದ್ದು ನನ್ನ ಕೊನೆಯ ವರ್ಷದ ಎಂಜಿನೀಯರಿಂಗ್ ಪರೀಕ್ಷೆಯನ್ನು, ಎಸ್.ಎಸ್.ಎಲ್.ಸಿ.ಯದ್ದಲ್ಲ; ಹಾಗಾಗಿ ಅಲ್ಲಿ ಬಂದವರು ನಮ್ಮ ಕಾಲೇಜಿನ ಪ್ರಾಂಶುಪಾಲರು ಎಂದು. ಒಮ್ಮೆ ದಿಗಿಲಾದೆ. ಅಯ್ಯೋ ದೇವ್ರೆ!! ಎಂಜಿನೀಯರಿಂಗ್ ಪರೀಕ್ಷೆಯಲ್ಲಿ ಎಸ್.ಎಸ್.ಎಲ್.ಸಿ. ಉತ್ತರಗಳನ್ನು ಬರೆದೆನಲ್ಲ. ಇನ್ನೇನು ನನ್ನ ಗತಿಯೆಂದು ಒಮ್ಮೆ ದಿಗ್ಭ್ರಮೆಯಾಯಿತು. ಏನೂ ಅರ್ಥವಾಗಲಿಲ್ಲ. ಖಾರದ-ಕಿತ್ತಲೆ ಬುಟ್ಟಿಯನ್ನು ಹೊತ್ತು ಹೊರಟಿದ್ದ ಜೋಸೇಫ಼ಜ್ಜನ ಬಳಿ ಓಡಿದೆ. ಇವರ್ಯಾಕೆ ಮತ್ತು ಹೇಗೆ ನಾ ಬರೆದ ಹಾಳೆಯನ್ನು ತಂದರು ಎಂದು ಪ್ರಶ್ನಿಸಲು ಮುಂದಾದೆ. ಒಂದೆರಡು ಬಾರಿ ಅವರ ಹೆಸರನ್ನು ಕರೆದೆ. ಅವರು ತಿರುಗಲಿಲ್ಲ. ಅವರನ್ನು ಮುಟ್ಟಲು ಹೋದೆ ಅವರನ್ನು ಮುಟ್ಟಲಾಗುತ್ತಿಲ್ಲ. ಅವರ ಹೆಗಲ ಬಳಿ ಕೈ ಹೋಗುವುದು ಆದರೆ ತಾಗುತ್ತಿಲ್ಲ. ತಕ್ಷಣವೇ ಒಂದು ವಾರದ ಹಿಂದೆ ಗೆಳೆಯನೊಬ್ಬ ‘ನಮ್ಮ ಶಾಲೆಯ ಹತ್ತಿರ ಖಾರದ-ಕಿತ್ತಲೆ ಮಾರುತ್ತಿದ್ದ ಜೋಸೇಫ಼ಜ್ಜ ತೀರಿ ಹೋದ್ರಂತೆ’ ಎಂದು ಹೇಳಿದ್ದು ನೆನಪಾಯಿತು. ಒಮ್ಮೆ ತಲೆ ತಿರುಗಿದಂತಾಗಿ ಹೋಯಿತು. ಮೈಯ್ಯೆಲ್ಲ ಒಮ್ಮೆ ಕಂಪಿಸಿ ಕಣ್ಣು ಬಿಟ್ಟಾಗ ಅರಿವಾಗಿದ್ದು ನಾನು ಪದವಿಯನ್ನು ೫ ವರ್ಷಗಳ ಹಿಂದೆಯೇ ಮುಗಿಸಿ ಈಗ ಉದ್ಯೋಗ ಮಾಡುತ್ತಿರುವೆ ಎಂದು. ನಿಟ್ಟುಸಿರು ಬಿಟ್ಟು ಹಾಸಿಗೆಯಿಂದೆದ್ದು ಹೋಗಿ ಮುಖವನ್ನು ತೊಳೆದು ನನ್ನ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡೆ.

– ದೀಪಕ್ ಕೋರಡಿ

10-4-2012

Back to top button