ಸಂದರ್ಶನಸಾಹಿತ್ಯ

ಕುಂಟಿಕಾನಮಠದ ಕನ್ನಡ ಕೋವಿದ ಬಾಲಕೃಷ್ಣ ಭಟ್

1-BALAKRISHNA BHAT KUNTIKANAMATA-INTERVIEW (2)-ಚಿನ್ಮಯ.ಎಂ.ರಾವ್ ಹೊನಗೋಡು

ದ್ರಾವಿಡ ಭಾಷೆಗಳಲ್ಲೇ ಕನ್ನಡಕ್ಕೊಂದು ವಿಶಿಷ್ಟ ಸ್ಥಾನಮಾನವಿದೆ. ಅದು ಅಹುದೆನ್ನುವಂತೆ ಎಲ್ಲರ ಕೋಲಾಹಲದ ಆಚೆಯೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ. ಹಾಗಂತ ಕನ್ನಡಿಗರಾದ ನಾವು ಅಷ್ಟಕ್ಕೇ ತೃಪ್ತಿಗೊಂಡು ನಿದ್ದೆ ಮಾಡಿ ಆಂಗ್ಲಭಾಷೆಯಲ್ಲಿ ಮೇಲೇಳುತ್ತಿದ್ದರೆ “ಶಾಸ್ತ್ರೀಯ ಸ್ಥಾನಮಾನ” ಲಭಿಸಿ ಏನು ಪ್ರಯೋಜನ? ನಿಜಕ್ಕೂ ಕನ್ನಡಕ್ಕಾಗಿ ನಮ್ಮ ಮನ ಮಿಡಿಯುತ್ತಿದೆಯಾ? ತುಡಿಯುತ್ತಿದೆಯಾ? ಕನ್ನಡಕ್ಕಾಗಿ ದುಡಿಯುತ್ತಿದೆಯಾ? ಇಂತಹ ಪ್ರೆಶ್ನೆಗಳಿಂದ ನಾವು ಆಗಾಗ ಆತ್ಮಾವಲೋಕನ ಮಾಡಿಕೊಂಡರೆ ಒಳಿತೆನಿಸುತ್ತದೆ. ಶಾಸ್ತ್ರೀಯ ಸ್ಥಾನಮಾನ ನಮ್ಮ ಜವಾಬ್ದಾರಿಯನ್ನು ಇನ್ನೂ ಸಾವಿರ ಪಟ್ಟು ಹೆಚ್ಚಿಸಿದೆಯೆಂದರೆ ತಪ್ಪಲ್ಲ. ಕನ್ನಡದ ಜಾಗೃತಿಗಾಗಿ ಅದೆಷ್ಟೋ ದಶಕಗಳಿಂದ ನಾವು ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಅಂತೆಯೇ ಇದು ಇಲ್ಲಿ ಮಾತ್ರ ಸೀಮಿತವಾಗದೆ ಸಾಗರದಾಚೆಯ ಅಮೇರಿಕನ್ನಡಿಗರೂ ನಾವಿಕ ವತಿಯಿಂದ ವಿಶ್ವಕನ್ನಡ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ವರುಷವೇ ಬೆಳಗಾವಿಯಲ್ಲೊಂದು ವಿಶ್ವಕನ್ನಡ ಸಮ್ಮೇಳನವನ್ನೂ ನಾವು ನಡೆಸಿದ್ದೇವೆ. ಕಳೆದ ಅಕ್ಟೋಬರ್ ೨೨ ಹಾಗು ೨೩ ರಂದು ಲಂಡನ್ ಮಹಾನಗರದಲ್ಲಿ ಕೂಡ ಕುಮಾರ್ ಹಾಗು ರೂಪಾ ಅಯ್ಯರ್ ನೇತೃತ್ವದಲ್ಲಿ ಸಂಗಮ ಸಂಸ್ಥೆಯ ವತಿಯಿಂದ ವಿಶ್ವ ಕನ್ನಡ ಸಮ್ಮೇಳನವೊಂದನ್ನು ಯಶಸ್ವಿಯಾಗಿ ನಡೆಸಲಾಯಿತು.

ಆದರೆ ಪ್ರಸಿದ್ಧವ್ಯಕ್ತಿಗಳನ್ನು ಮಾತ್ರ ವಿಜೃಂಭಿಸುವ ನಾವು ಕನ್ನಡದ ಸೇವಕರಾಗಿ ತಮ್ಮ ಇಡೀ ಜೀವನವನ್ನು ಸವೆಸಿದವರನ್ನು…ಕಾಡಕುಸುಮಗಳನ್ನು ಮುಖ್ಯಭೂಮಿಕೆಗೆ ತರುವುದೇ ಇಲ್ಲ. ಕಾಸರಗೋಡು ಸಮೀಪದ ಕುಂಟಿಕಾನಮಠದ ಬಾಲಕೃಷ್ಣ ಭಟ್ ತಮ್ಮ ಜೀವನಪರ್ಯಂತ ಕನ್ನಡ ನುಡಿಸೇವೆ ಮಾಡಿದ ಗಡಿನಾಡಿನ ಹಿರಿಯ ಜೀವ. ಅವರೊಡನೆ ಮಾಡಿದ ವಿಚಾರ-ವಿನಿಮಯ ನಿಮಗಾಗಿ..

1-BALAKRISHNA BHAT KUNTIKANAMATA-INTERVIEW (15)ಅಳಿದು ಹೋಗುತ್ತಿರುವ ಭಾಷೆಗೆ ನನ್ನದೊಂದು ಅಳಿಲು ಸೇವೆಯಷ್ಟೆ :

ಗಡಿನಾಡು ಕಾಸರಗೋಡಿನ ಹಿರಿಯ ಕನ್ನಡಿಗ ಬಾಲಕೃಷ್ಣ ಭಟ್-ಸಂದರ್ಶನ

*ಸಾಹಿತ್ಯ ಸಮ್ಮೇಳನಗಳು ಕನ್ನಡದ ಬೆಳವಣಿಗೆಗೆ ಎಷ್ಟು ಸಹಕಾರಿ ಎಂದು ನಿಮ್ಮ ಅಭಿಪ್ರಾಯ?

ದಿಟವಾಗಿಯೂ ಸಹಕಾರಿ. ಸಮ್ಮೇಳನಗಳು ಕನ್ನಡ ಪ್ರಜ್ನೆಯನ್ನು ಬೆಳೆಸುತ್ತದೆ. ಕನ್ನಡದ ವಾತಾವರಣವನ್ನು ಅರಳಿಸುತ್ತದೆ. ಆದ್ದರಿಂದ ಸಮ್ಮೇಳನಗಳು ಅತ್ಯಗತ್ಯ.

*ಕನ್ನಡದ ಹಿರಿಮೆ ಗರಿಮೆಗಳ ಬಗ್ಗೆ ಗಡಿನಾಡಿನಲ್ಲಿದ್ದು ನಿಮ್ಮ ಅನುಭವವೇನು?

ಗಡಿನಾಡಿನಲ್ಲಿದ್ದರೂ ಕೂಡ ನಾವು ಕನ್ನಡಿಗರೇ ಆಗಿ ಕನ್ನಡಾಭಿಮಾನಿಗಳಾಗಿದ್ದೇವೆ. ಆದರೆ ಕನ್ನಡದ ಕೆಲಸಗಳನ್ನು ಸಕ್ರಿಯವಾಗಿ ಮಾಡುವಂತಹ ವಾತಾವರಣ ಇನ್ನೂ ಸೃಷ್ಟಿಯಾಗಲಿಲ್ಲ. ಏಕೆಂದರೆ ನಾನಾ ರೀತಿಯ ಸಮಸ್ಯೆ ಸರ್ಕಾರದಿಂದಲೂ ಬರುತ್ತದೆ. ನೋಡಿ ಸರ್ಕಾರದ ಆದೇಶವಿದ್ದರೂ ಕೂಡ ಅಧಿಕಾರಿಗಳು ಅದಕ್ಕೆ ಸ್ಪಂದಿಸುತ್ತಿಲ್ಲ. ಕಾಸರಗೋಡಿನಲ್ಲಿ ಎಲ್ಲಾ ವ್ಯವಹಾರಗಳನ್ನೂ ಕನ್ನಡದಲ್ಲಿಯೇ ಮಾಡಬೇಕೆಂದು ಇದೆ. ಆದರೆ ಇಲಾಖೆಗಳಲ್ಲಿ ಯಾವುದೇ ಸೂಚನೆಗಳೂ ಮಲಯಾಳಮ್‌ನಲ್ಲಿ ಹೊರತು ಕನ್ನಡದಲ್ಲಿ ಕಾಣಸಿಗುವುದಿಲ್ಲ. ಈ ವರುಷವಂತೂ ಎಲ್ಲಾ ಶಾಲೆಗಳಲ್ಲೂ ವಿದ್ಯಾರ್ಥಿಗಳು ಮಲಯಾಳಮ್ ಅನ್ನು ಖಡ್ಡಾಯವಾಗಿ ಕಲಿಯಬೇಕೆಂಬ ಆದೇಶವನ್ನೂ ಹೊರಡಿಸಿದ್ದಾರೆಂದು ಕೇಳಿದ್ದೇನೆ. ಹಂತ ಹಂತವಾಗಿ ಕನ್ನಡವನ್ನು ಹಿಮ್ಮೆಟ್ಟಿಸಿ ನಾಶ ಮಾಡುವುದೇ ಇದರ ಹಿಂದಿರುವ ಉದ್ದೇಶ. ಆದ್ದರಿಂದ ಗಡಿ ನಾಡಿನ ಕನ್ನಡಿಗರು ಕನ್ನಡವನ್ನು ಉಳಿಸಿಕೊಳ್ಳುವುದು ಒಂದು ದೊಡ್ಡ ಸವಾಲೇ ಆಗಿದೆ.

1-BALAKRISHNA BHAT KUNTIKANAMATA-INTERVIEW (7)* ಹಾಗಾದರೆ ಇದಕ್ಕೆ ಪರಿಹಾರವೇನು?
ಎಲ್ಲಾ ಭಾಷಣದಲ್ಲಿ ಮಾತ್ರ.ಈಗ ಕಾಸರಗೋಡನ್ನೇ ಗಮನಿಸಿ. ವರ್ಷದಿಂದ ವರ್ಷಕ್ಕೆ ಕನ್ನಡದ ಶಕ್ತಿ ಕುಂದಿ ಕುಂದಿ ಕುಂದಿ ಅಳಿವಿನ ಅಂಚಿನಲ್ಲಿದೆ. ನಾವು ಸುಮ್ಮನೆ ಹೇಳಬಹುದಷ್ಟೆ ಹೊರತು ಇಲ್ಲಿ ಗಡಿನಾಡಿನ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ಆಗುತ್ತಿಲ್ಲ.

* ನಿಮ್ಮಿಂದ ಈ ವಿಚಾರಕ್ಕೆ ಏನಾದರೂ ಪ್ರಯತ್ನ ನಡೆದಿದೆಯ?
ನನ್ನ ಪ್ರಯತ್ನ ಅದಕ್ಕೆ ಸಾಲುವುದಿಲ್ಲ. ಸಾಮಾಜಿಕವಾಗಿ ಅಥವ ರಾಜಕೀಯವಾಗಿ ನಾನು ಪ್ರಬಲನಲ್ಲ.

* ಕನ್ನಡದ ಪ್ರಗತಿ ಹೇಗಿರಬೇಕು?
ಕನ್ನಡ ಸಾಹಿತ್ಯ ಅಭಿವೃದ್ಧಿಯಾಗಬೇಕೆಂದರೆ ಕನ್ನಡಿಗರಲ್ಲಿ ಬರೀ ಅಭಿಮಾನವಿದ್ದರೆ ಸಾಲದು. ಕ್ರೀಯಾಶೀಲರಾಗಿ ಕೆಲಸ ಮಾಡುವಂತಹ ಪ್ರವೃತ್ತಿಯನ್ನೂ ಬೆಳೆಸಿಕೊಳ್ಳಬೇಕು.
ಸರಿಯಾಗಿ ಭಾಷಾಜ್ನಾನ ಮತ್ತು ಸಾಹಿತ್ಯಜ್ನಾನ ಬೋಧಿಸುವಂತಹ ವಿದ್ಯಾಭ್ಯಾಸ ಅಗತ್ಯ. ಇಂದು ನಾವು ಅಂತಹ ಪರಿಸ್ಥಿಯನ್ನು ಕಾಣುತ್ತಿಲ್ಲ. ನಮ್ಮ ಕನ್ನಡ ನಾಡಿನಲ್ಲಿ ಕನ್ನಡದ ಕಾವ್ಯಗಳನ್ನು ಓದಿ ಅರ್ಥ ಹೇಳಬಲ್ಲಂತಹ ಅಥವ ಓದಿ ಅರ್ಥ ಮಾಡಿಕೊಳ್ಳುವಂತಹವರು ಎಷ್ಟು ಜನ ಇದ್ದಾರೆ?

1-BALAKRISHNA BHAT KUNTIKANAMATA-INTERVIEW (11)* ಕನ್ನಡ ಅವನತ್ತಿಯತ್ತ ಸಾಗಿದೆಯಾ? ನಿಮ್ಮ ಅಭಿಪ್ರಾಯವೇನು?
ಕನ್ನಡದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದರೂ ಕೂಡ ಕನ್ನಡದ ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಸಾಕಷ್ಟು ಬೆಳವಣಿಗೆಯಾಗಿಲ್ಲ. ಭಾಷಾಜ್ನಾನವನ್ನು ಬೆಳೆಸುವಂತಹ ವಿದ್ಯಾಭ್ಯಾಸ ಆಗಬೇಕು. ವಿಶ್ವವಿದ್ಯಾಲಯಗಳಲ್ಲಿ ಈ ದಿನ ಕನ್ನಡವನ್ನು ಪ್ರಧಾನ ವಿಷಯವನ್ನಾಗಿ ಅಭ್ಯಾಸ ಮಾಡಿ ಪದವಿಗಳಿಸಿದವರೂ ಕೂಡ ಪದವಿಯನ್ನು ಗಳಿಸಿ ಬಂದ ಮೇಲೆ ಆಳವಾಗಿ ಅಧ್ಯಯನ ಮುಂದುವರಿಸುತ್ತಾರಾ? ಈಗ ಪ್ರೌಢಶಾಲೆಯಿಂದ ಪದವಿಯವರೆಗೂ ಕನ್ನಡವಿದೆ. ಆದರೆ ಅದನ್ನು ಆಳವಾಗಿ ಅಧ್ಯಯನ ಮಾಡುವ ಮಾರ್ಗ ಇದೆಯ? ಅದನ್ನು ಪ್ರತಿಯೊಬ್ಬ ಕನ್ನಡಿಗನೂ ಆತ್ಮಾವಲೋಕನ ಮಾಡಿಕೊಂಡು ಸಾಹಿತ್ಯವನ್ನು ತಿಳಿಯಬೇಕು. ನಮ್ಮ ಕಾಲದಲ್ಲಿ ಈ ಪ್ರ್ಯಾಂತದಲ್ಲಿ ೩ ಕಾಲೇಜುಗಳು ಕನ್ನಡವನ್ನು ಕಲಿಸುವ ದೊಡ್ಡ ಸಂಸ್ಥೆಗಳಿದ್ದವು. ಈಗ? ಕಾರ್ಕಳ, ಉಡುಪಿ ಮತ್ತು ಕಾಸರಗೋಡು ಈ ಮೂರೂ ಕಡೆಗಳಲ್ಲಿ ಕನ್ನಡ ಶಿರೋಮಣಿ ಅಥವ ವಿದ್ವಾನ್ ಪಡೆಯುವ ವ್ಯವಸ್ಥೆ ಆಗ ಇತ್ತು. ಅಲ್ಲಿ ಆಗ ಕೆಲವು ವಿದ್ಯಾರ್ಥಿಗಳಾದರು ಕಲಿಯುತ್ತಿದ್ದರು. ಅದೆಲ್ಲಾ ಈಗ ಗತವೈಭವ. ಈಗ ಅಂತಹ ವಾತಾವರಣವೇ ಕಾಣುವುದಿಲ್ಲ ! ಆದ್ದರಿಂದ ಪ್ರಾಚೀನ ಕಾವ್ಯಗಳೆಲ್ಲಾ ಮೂಲೆ ಗುಂಪಾಗಿ ಬಿಸಾಡಿದ ಹಾಗಾಗಿದೆ. ಕುವೆಂಪು ಅವರ ರಾಮಾಯಣ ದರ್ಶನಮ್ ಈ ಶತಮಾನದಲ್ಲಿ ರಚಿತವಾದದ್ದೆಂದು ನಾವು ಸಂತೋಷ ಪಡುತ್ತೇವೆ. ನಮ್ಮ ಕನ್ನಡದಲ್ಲೇ ಅದು ಪ್ರಕಟವಾಗಿದೆ. ಸರಕಾರ ಕೂಡ ಅದನ್ನು ಮನೆಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಆದರೆ ನಾನು ಘಂಟಾಘೋಷವಾಗಿ ಹೇಳುತ್ತೇನೆ…ರಾಮಾಯಣದರ್ಶನಮ್ ಅನ್ನು ಓದಿ ಅರ್ಥ ಮಾಡಿಕೊಳ್ಳುವವರು ನಮ್ಮಲ್ಲಿ ಎಷ್ಟು ಜನ ಇದ್ದಾರೆ ಹೇಳಿ? ಮನೆಯಲ್ಲಿಟ್ಟು ಪೂಜೆ ಮಾಡಿದರೆ ಏನು ಪ್ರಯೋಜನ?

1-BALAKRISHNA BHAT KUNTIKANAMATA-INTERVIEW (10)*ಕನ್ನಡ ನಾಡು-ಜನ ಬದಲಾಗುತ್ತಾರೆಂದು ನಿರೀಕ್ಷಿಸುತ್ತೀರಾ?

ಎಲ್ಲಾ ಸಮಸ್ಯೆಗಳಿಗೂ ಕಾಲವೇ ಉತ್ತರ. ಅಭಿವೃದ್ಧಿಯ ಮಾರ್ಗ ಮುಂದೊಮ್ಮೆ ತನ್ನಷ್ಟಕ್ಕೆ ತಾನೇ ಒದಗಿ ಬರುತ್ತದೆ. ಈಗ ನೋಡಿ ಅಣ್ಣ ಹಾಜಾರೆ ಎಂಬ ವ್ಯಕ್ತಿಯೊಬ್ಬ ಮುಂದೆ ಬಂದು ಭ್ರಷ್ಟಾಚಾರದ ವಿರುದ್ಧವಾಗಿ ಈ ಪರಿಯಲ್ಲಿ ಹೋರಾಟ ಮಾಡುತ್ತಾರೆಂದು ಹತ್ತು ವರ್ಷಗಳ ಹಿಂದೆ ನಮಗೆ ಕಲ್ಪನೆ ಬಂದಿತ್ತಾ? ಇಲ್ಲ. ಹಾಗಾಗಿ ಕನ್ನಡದ ಅಭಿವೃದ್ಧಿ ಇನ್ನು ಮುಂದೆ ಆಗುವುದೇ ಇಲ್ಲ ಎಂದು ನಾವು ನಿರಾಶಾವಾದಿಗಳಾಗುವುದೂ ಬೇಡ. ಆಗಬೇಕು…ಆಗುತ್ತದೆ ಎಂದು ಆಶಾವಾದಿಗಳಾಗಿ ನಿರೀಕ್ಷಿಸೋಣ.

* ಅರ್ಥಪ್ರಧಾನವಾದ ವ್ಯವಸ್ಥೆಯಲ್ಲಿ ಸಾಹಿತ್ಯ-ಭಾಷೆ ಸೊರಗುತ್ತಿದೆಯೇ?
ಹೌದು. ಕನ್ನಡವನ್ನು ಅಭ್ಯಾಸ ಮಾಡುವ ಜನ ಕಡಿಮೆ ಆಗಲು ಕಾರಣವೇನು? ಕನ್ನಡವನ್ನೇ ಕಲಿತವರಿಗೆ ಉದ್ಯೋಗದಲ್ಲಿ ಪ್ರಾಧಾನ್ಯತೆ ಇಲ್ಲ. ಆಗ ಎಲ್ಲರೂ ಆರ್ಥಿಕವಾಗಿ ಬಲಿಷ್ಟರಾಗಲು ಯೋಚನೆ ಮಾಡುತ್ತಾರೆ. ಅದು ಸಹಜ ಕೂಡ. ಜನ ತಂತ್ರಜ್ನಾನದ ಪದವಿಯನ್ನೇ ಮುಗಿಬಿದ್ದು ಗಳಿಸಲು ಕಾರಣವೇನು? ಜೀವನಕ್ಕೆ ಆಧಾರವಾಗುತ್ತದೆ ಎಂದು ತಾನೆ? ಬದುಕಲು ಸಾಧ್ಯವಾಗದ ವಿದ್ಯೆಯನ್ನು ಪಡೆದು ಪ್ರಯೋಜನವೇನು? ಎಂದು ಜನ ಆಲೋಚನೆ ಮಾಡುತ್ತಾರೆ. ಈಗ ಕನ್ನಡದಲ್ಲಿ ವಿದ್ವತ್ ಪದವಿ ಗಳಿಸಿದ ವ್ಯಕ್ತಿಗೆ ನಾವೆಷ್ಟು ಪ್ರೋತ್ಸಾಹ ಕೊಟ್ಟಿದ್ದೇವೆ ನಮ್ಮ ನಾಡಿನಲ್ಲಿ ಎಂದು ಒಮ್ಮೆ ಯೋಚನೆ ಮಾಡಿ. ನಾವು ಅಂಥವರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿಲ್ಲ. ಹೆಚ್ಚೆಂದರೆ ಪ್ರೌಢ ಶಾಲೆಯಲ್ಲಿ ಅಧ್ಯಾಪಕ ಆಗಬಹುದು ಆತ. ಅಷ್ಟೆ ತಾನೆ? ಅದರಿಂದ ಆರ್ಥಿಕವಾಗಿ ಉಪಯೋಗ ಗಣನೀಯ ಪ್ರಮಾಣದಲ್ಲಿ ಆಗದಿರುವ ಕಾರಣ ಅದನ್ನು ಕಲಿಯುವವರು ಕಡಿಮೆ. ಆರ್ಥಿಕವಾಗಿ ಜನರಿಗೆ ಅನುಕೂಲ ಆಗದೇ ಇರುವಂತಹ ವಿದ್ಯಾಭ್ಯಾಸ ಹೆಚ್ಚು ಪ್ರಚಾರಕ್ಕೆ ಬರುವುದಿಲ್ಲ. ಪ್ರಚಲಿತವಾಗುವುದಿಲ್ಲ. ಅದು ಹೆಚ್ಚು ಆಕರ್ಷಣೀಯವಾಗುವುದಿಲ್ಲ. ಈಗ ಭಾಷಾಜ್ನಾನವನ್ನೇ ಬೋಧಿಸುವಂತಹ ಒಬ್ಬ ವ್ಯಕ್ತಿಗೆ ನಮ್ಮಲ್ಲಿ ಯಾವ ರೀತಿಯ ಸ್ಥಾನಮನ ಲಭಿಸಿದೆ? ಹಾಗಂತ ಎಲ್ಲಾ ರೀತಿಯ ವಿದ್ಯಾಭ್ಯಾಸವೂ ಬೇಕು. ಆದರೆ ಪ್ರತಿಯೊಂದು ಕ್ಷೇತ್ರದಲ್ಲಿರವವರಿಗೂ ಕೂಡ ಸಮರ್ಥವಾಗಿ ಬದುಕುವಂತಹ ಅನೂಕೂಲವನ್ನು ಸರ್ಕಾರ ಮಾಡಿಕೊಡಬೇಕು. ಹಾಗೆ ಮಾಡದಿದ್ದಲ್ಲಿ ಹೆಚ್ಚು ಲಾಭ ಎಲ್ಲಿದೆಯೋ ಅತ್ತ ಮಾತ್ರ ಜನ ಹೋಗುತ್ತಾರೆ. ಅಭಿಮಾನ ಹೊಟ್ಟೆ ತುಂಬಿಸುವುದಿಲ್ಲ. ಬರೀ ಜ್ನಾನವನ್ನು ನೆಚ್ಚಿಕೊಂಡು ಜೀವನ ಮಾಡಲೂ ಆಗುವುದಿಲ್ಲ. ಗೋಪಾಲ ಕೃಷ್ಣ ಅಡಿಗರು ಒಂದು ಕವಿತೆಯಲ್ಲಿ ಈ ಹಿಂದೆಯೇ ಹೇಳಿದ್ದರು, ಜನರ ಜೀವನಕ್ಕೆ ಕೇಂದ್ರ ಯಾವುದು? ಹೊಟ್ಟೆ. ಹೊಟ್ಟೆಯೇ ಕೇಂದ್ರವಾಗಿದೆ ಜನರ ಜೀವಿತಕ್ಕೆ-ಇದು ಸತ್ಯ ವಾಸ್ತವ ಅಲ್ಲವೆ? ಹೊಟ್ಟೆಗೂ ಹಿಟ್ಟಿಲ್ಲದವನು ಎಷ್ಟು ದೊಡ್ಡ ವಿದ್ವಾಂಸನಾದರೂ ಪ್ರಯೋಜನವಿಲ್ಲ.
ಮಹಾಭಾರತದಲ್ಲಿ ದ್ರೋಣಾಚಾರ್ಯರು ದೊಡ್ಡ ಶಸ್ತ್ರವಿದ್ಯಾ ಪ್ರವೀಣರಾಗಿದ್ದರು. ಆದರೆ ಅವರ ವಿದ್ಯೆಗೆ ಬೆಲೆ ಬಂದದ್ದು ಯಾವಾಗ? ಕೌರವ ಪಾಂಡವರು ಅಲ್ಲಿ ಬಂದ ಮೇಲೆ. ಮೊದಲು ಅಶ್ವತ್ಥಾಮ ಹುಟ್ಟುವ ಕಾಲದಲ್ಲಿ ಅವರ ಪರಿಸ್ಥಿತಿ ಹೇಗಿತ್ತು? ಒಂದು ಲೋಟ ಹಾಲನ್ನೂ ಕೊಡಲು ಯೋಗ್ಯತೆಯಿಲ್ಲದೆ ಅಕ್ಕಿಯ ಹಿಟ್ಟನ್ನು ಹಾಲೆಂದು ಕೊಡುತ್ತಿದ್ದಾರಂತೆ ಅವರು! ಇದು ಮಹಾಭಾರತದಲ್ಲಿದೆ. ಹಾಗಿದ್ದರೆ ಏನು ಇದರ ಅರ್ಥ? ಜೀವನೋಪಾಯಕ್ಕೆ ಸಂಗ್ರಹ ಮಾಡುವುದಕ್ಕೆ ಸಾಧ್ಯವಿರದಂತಹ ವಿದ್ಯೆಯಿಂದ ಪ್ರಯೋಜನ ಆಗುವುದಾ? ಆಗುವುದಿಲ್ಲ. ದ್ರೋಣರಿಗೆ ಕೂಡಾ ಆಗಲಿಲ್ಲ. ಆಮೇಲೆ ಅವರು ಹಸ್ತಿನಾಪುರಕ್ಕೆ ಬಂದ ಮೇಲೆ ಕಥೆ ಬದಲಾಯಿತು ಬಿಡಿ. ಏಕೆ ಹೇಳಿದೆ ಈ ಮಾತು? ಎಷ್ಟು ವಿದ್ಯೆ ಇದ್ದರೂ,ಶಕ್ತಿಯಿದ್ದರೂ, ಸಾಮರ್ಥ್ಯವಿದ್ದರೂ ಕೂಡ ಅದಕ್ಕೆ ಅವಕಾಶ ಸಿಗದಿದ್ದರೆ ಯಾವ ಪ್ರಯೋಜನ? ಅದೇ ಆಗಿದೆ ಈವತ್ತು.

1-BALAKRISHNA BHAT KUNTIKANAMATA-INTERVIEW (9)ಬಾಲಕೃಷ್ಣ ಭಟ್ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ…

ಜನನ-ಮನನ

ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ಕುಂಟಿಕಾನಮಠವೆಂಬ ಪ್ರಾಚೀನ ದೇವಾಲವಿದೆ. ಈ ದೇವಾಲಯದ ಅನುವಂಶಿಕ ಆಡಳಿತದಾರರು ಹಾಗು ಆರಾಧಕರು ಕುಂಟಿಕಾನಮಠದ ಮನೆಯವರು. ಕುಂಟಿಕಾನ ಮಠದ ಮನೆಯಲ್ಲಿ ೨೭-೦೧-೧೯೪೦ ರಂದು ದಿವಂಗತ ಸುಬ್ರಾಯ ಭಟ್ಟ ಮತ್ತು ಲಕ್ಷ್ಮಿ ಅಮ್ಮನವರ ಮಗನಾಗಿ ಬಾಲಕೃಷ್ಣ ಭಟ್ ಜನಿಸಿದರು. ಪ್ರಾಕೃತಿಕವಾಗಿ ಸುಂದರವಾದ ಧಾರ್ಮಿಕ ವಾತಾವರಣವಿರುವ ಸ್ಥಳದಲ್ಲಿ ಬೆಳೆದರು.

ಬಾಲ್ಯನಡೆ-ನುಡಿ

ಪೆರಡಾಲದ ನೀರ್ಚಾಲು ಎಂಬಲ್ಲಿರುವ ಮಹಾಜನ ಸಂಸ್ಕೃತ ಕಾಲೇಜು ಹೆಸರಾಂತ ವಿದ್ಯಾಸಂಸ್ಥೆ. ಸಾಹಿತ್ಯ ದಿಗ್ಗಜರೆಂದೆನಿಸಿದ ಮಹೋಪಾಧ್ಯಾಯರಿಂದ ತುಂಬಿ ತುಳುಕುತ್ತಿದ್ದ ಮಹಾನ್ ಸಂಸ್ಥೆ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ಸೌಭಾಗ್ಯ ಬಾಲಕೃಷ್ಣ ಅವರಿಗೆ ಒದಗಿ ಬಂತು. ಪ್ರಾಥಮಿಕ,ಮಾಧ್ಯಮಿಕ,ಪ್ರೌಢ ವಿದ್ಯಾಭ್ಯಾಸ ಪಡೆದು ೧೯೬೨ ರಲ್ಲಿ ಕನ್ನಡ ವಿದ್ವಾನ್ ಪದವಿಯನ್ನು ಉತ್ತಮ ಶ್ರೇಣಿಯಲ್ಲಿ ಪಡೆದರು.
ಕನ್ನಡ, ಆಂಗ್ಲ, ಸಂಸ್ಕೃತ, ಹಿಂದಿ, ತುಳು, ಮಲೆಯಾಳಂ ಭಾಷೆಗಳ ಪರಿಚಯ ಪಡೆದ ಬಾಲಕೃಷ್ಣ ಭಟ್ ಆಗಲೇ ಬಹುಭಾಷಾ ಪಂಡಿತರಾದರು.

ವೃತ್ತಿಜೀವನ-ಕನ್ನಡ ತಪೋವನ

ಕನ್ನಡ ವಿದ್ವಾನ್ ಪದವಿ ಪಡೆದ ಬಳಿಕ ೩ ವರ್ಷಗಳ ಕಾಲ ಕಾಸರಗೋಡಿನಲ್ಲಿ, ಒಂದು ವರ್ಷ ಮುಂಬೈನಲ್ಲಿ ಆ ಬಳಿಕ ೩೨ ವರ್ಷ ಬೆಂಗಳೂರಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೧೯೯೮ರಲ್ಲಿ ನಿವೃತ್ತರಾದರು. ಉತ್ತಮ ಬೋಧಕರಾಗಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಅಧ್ಯಾಪಕರೆನಿಸಿದವರು. ಈಗ ನಿವೃತ್ತರಾಗಿ ಹುಟ್ಟೂರಿನಲ್ಲಿ ನೆಲೆಸಿದ್ದಾರೆ.

ಸಂಸಾರ ಸಾರ

ಪತ್ನಿ, ಎರಡು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು, ಎರಡು ಗಂಡು ಮಕ್ಕಳು, ಸೊಸೆ ಇರುವ ತುಂಬು ಸಂಸಾರದ ಸುಖವನ್ನು ಅನುಭವಿಸುವ ಭಾಗ್ಯವಂತರಾಗಿ ಸಂತೃಪ್ತರಾಗಿದ್ದಾರೆ. ಸರಳ ಸ್ವಭಾವದ ಸ್ನೇಹಜೀವಿಯಾದ, ಉತ್ಸಾಹಿಯಾದ, ಸಹೃದಯ ವ್ಯಕ್ತಿಯಾದ, ಬಾಲಕೃಷ್ಣ ಅವರಿಗೆ
ಅಪಾರವಾದ ಸ್ನೇಹಿತರ ವರ್ಗವಿದೆ. ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ಉತ್ಸಾಹಿಯಾಗಿ ನೆಮ್ಮದಿಯಿಂದ ಕರ್ತವ್ಯಶೀಲರಾಗಿದ್ದಾರೆ.

ಕನ್ನಡ ಕಲಾವಿದ- ಪ್ರತಿಭೆ ವಿವಿಧ

ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯ ಕಲೆಗಳಲ್ಲಿ ವಿಶೇಷ ಆಸಕ್ತಿಯಿತ್ತು. ನುರಿತ ಅಧ್ಯಾಪಕರ ಮಾರ್ಗದರ್ಶನದಿಂದ ಭಾಷಣಕಾರರಾಗಿ ರೂಪುಗೊಂಡು ವಾಗ್ಮಿ ಎಂದೆನಿಸಿದರು. ನಾಟಕಗಳಲ್ಲಿ ಹಲವು ಬಗೆಯ ಪಾತ್ರಗಳಲ್ಲಿ ಅಭಿನಯಿಸಲು ಅವಕಾಶಪಡೆದರು. ಕನ್ನಡ, ಸಂಸ್ಕೃತ, ತುಳು ನಾಟಕಗಳಲ್ಲೂ ಅಭಿನಯಿಸಿದ್ದಾರೆ. ವಿದ್ವಾನ್ ಪದವಿ ಪಡೆಯುವ ಕಾಲಕ್ಕೆ ನಟರಾಗಿ ನಾಟಕಕಾರರಾಗಿ, ಕಥೆಗಾರರಾಗಿ, ಕವಿಯಾಗಿ, ಪ್ರವಚನಕಾರರಾಗಿ, ಯಕ್ಷಗಾನ ಅರ್ಥಧಾರಿಗಳಾಗಿ ರೂಪುಗೊಂಡರು. ಪಾತ್ರಗಳಿಗೆ ಜೀವ ತುಂಬುವಲ್ಲಿ ನಿಷ್ಣಾತರಾದರು. ಪುರಾಣವಾಚನ ವ್ಯಾಖ್ಯಾನಗಳಲ್ಲೂ
ಪ್ರವೀಣರಾದರು. ಭಾವಪೂರ್ಣ ನಿರೂಪಣೆಯೂ ಇವರಿಗೆ ಕರಗತವಾಯಿತು.

ಸಾಮಾಜಿಕ, ಚಾರಿತ್ರಿಕ ಪೌರಾಣಿಕ ನಾಟಕಗಳಲ್ಲಿ ಉಂಡಾಡಿ ಗುಂಡ ನಾಟಕದ ಗುಂಡ, ಯಾರ ಹೆಂಡ್ತಿ ನಾಟಕದ ಮೂರ್ತಿ, ರಾಮ ಪಟ್ಟಾಭಿಷೇಕದ ಭರತ, ಸಂಸ್ಕೃತ ನಾಟಕ ಶಾಕುಂತಲದಲ್ಲಿ ಸರ್ವದಮನ, ವೇಣಿ ಸಂಹಾರದ ಭೀಮ, ಮಧ್ಯಮ ವ್ಯಾಯೋಗದ ಘಟೋತ್ಕಚನಾಗಿ ಇವರು ನಿರ್ವಹಿಸಿದ ಪಾತ್ರಗಳು ಅವಿಸ್ಮರಣೀಯ. ಹಾಗೆಯೇ ಯಕ್ಷಗಾನ ತಾಳಮದ್ದಳೆಗಳಲ್ಲಿ ಕೃಷ್ಣನಾಗಿ, ರಾಮನಾಗಿ, ಕೌರವೇಶ್ವರನಾಗಿ, ಸುಧನ್ವನಾಗಿ, ಕರ್ಣನಾಗಿ, ವಾಲಿಯಾಗಿ, ರಾವಣನಾಗಿ, ಭೀಷ್ಮನಾಗಿ, ಇಂದ್ರಜಿತುವಾಗಿ, ಅತಿಕಾಯನಾಗಿ, ಲಕ್ಷ್ಮಣನಾಗಿ, ಅಂಬೆಯಾಗಿ, ದಾಕ್ಷಾಯಿಣಿಯಾಗಿ, ದ್ರೌಪದಿಯಾಗಿ ಯಾವುದೇ ಕಥೆಗಳಲ್ಲಿ ಯಾವುದೇ ಪಾತ್ರಗಳನ್ನು ವಹಿಸಿ ವಿಜೃಂಭಿಸಬಲ್ಲವರು. ಸಾಹಿತ್ಯ ಕಲೆಗಳ ಆರಾಧಕರಾಗಿ ನಾಡು ನುಡಿಗಳ ಸೇವೆ ಮಾಡಿದವರು.

ದೇಶ ವಿದೇಶ ಸುತ್ತಿದರು-ಕೋಶ ಓದಿದರು

ದೇಶ ಸುತ್ತು ಕೋಶ ಓದು ಎಂಬಂತೆ ಭಾರತದ ಹಲವು ಪ್ರದೇಶಗಳನ್ನು ಸಂದರ್ಶಿಸಿ ವಿಪುಲವಾದ ಜ್ನಾನವನ್ನು ಪಡೆದಿದ್ದಾರೆ.

೨೦೦೬ರಲ್ಲಿ ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಹರೈನ್‌ಗೆ ನಾಲ್ಕು ದಿವಸಗಳ ಕಾಲ ಹೋಗಿ ಕನ್ನಡ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದರು.

೨೦೦೮ರಲ್ಲಿ ಇಂಗ್ಲೆಂಡ್‌ಗೆ ಹೋಗಿ ಮಗ ಮತ್ತು ಸೊಸೆಯರ ಜೊತೆ ಇರುವ ಅವಕಾಶವಾಯಿತು. ಎರಡುವರೆ ತಿಂಗಳುಗಳ ಕಾಲ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಅನೇಕ ಅನಿವಾಸಿ ಭಾರತೀಯರನ್ನೂ, ಕನ್ನಡಿಗರನ್ನೂ ಭೇಟಿಯಾದರು. ಕನ್ನಡ ಸಂಘಗಳೊಂದಿಗೆ ಸಂಪರ್ಕ ಹೊಂದಿದರು. ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಪ್ರಕಟವಾದ ಕೃತಿಗಳು,ಕವನ ಸಂಕಲನಗಳು
೧-ಸುಪ್ರಭಾತ ೨-ಅಮೃತಧಾರೆ ೩-ಸ್ಮರಣೆ

ಭಾಮಿನಿ ಷಟ್ಪದಿ ಕಾವ್ಯ
೧-ಸುಮಾರು ಎಂಟುನೂರು ಭಾಮಿನಿ ಪದ್ಯಗಳಿರುವ “ಶಿವಲೀಲಾ ವಿನೋದಂ”

ನಾಟಕಗಳು

೧-ಧನಪಿಶಾಚಿ ೨-ಭಲೇ ಹುಡುಗಾಟ ೩-ಸ್ವಪ್ನ ಸೌಭಾಗ್ಯ ೪-ಕಣ್ಣು ನಾಲಿಗೆ ಮನವು

ಗದ್ಯ ಕಾವ್ಯಗಳು

೧-ಗಿರಿಜಾ ಕಲ್ಯಾಣ ೨-ಕುಮಾರ ವಿಜಯ ೩-ಶ್ರೀ ದೇವೀ ಮಹಾತ್ಮೆ ೪-ಶ್ರೀ ಕೃಷ್ಣ ಕಥಾಮಂಜರಿ (೫ ಸಂಪುಟ)
೫-ಶ್ರೀ ರಾಮ ಕಥಾಮಂಜರಿ (೨ ಸಂಪುಟ)
ಇದಲ್ಲದೆ ಅನೇಕ ಕವನಗಳು, ಲೇಖನಗಳು, ಕಥೆಗಳು, ಕಾದಂಬರಿಗಳು ಪ್ರಕಟಣೆಗೆ ಸಿದ್ಧವಾಗಿವೆ.

ಕನ್ನಡಿಗರ ಅಭಿಮಾನದಿಂದ ಈಗಾಗಲೇ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಹಾಗು ಸನ್ಮಾನಗಳು ಭಟ್ಟರಿಗೆ ಲಭಿಸಿದೆ. ಬಹರೈನ್‌ನ ಕನ್ನಡ ಸಂಘ ಅಂತರಾಷ್ಟ್ರೀಯ “ವಿಶ್ವಮಾನ್ಯ” ಪ್ರಶಸ್ತಿಯನ್ನು ೨೦೦೬ರಲ್ಲಿ ನೀಡಿ ಗೊರವಿಸಿದೆ.

-ಚಿನ್ಮಯ.ಎಂ.ರಾವ್ ಹೊನಗೋಡು

2-10-2011

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.