-ಚಿನ್ಮಯ ಎಂ.ರಾವ್ ಹೊನಗೋಡು
ಬರವಣಿಗೆ ಎಂಬುದೂ ಒಂದು ಕಲೆ. ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೋ ಒಂದು ಪದವಿಯನ್ನು ಪಡೆದಾಕ್ಷಣ ಮಾತ್ರವೇ ಅಂಥವರು ಲೇಖಕರಾಗಬಹುದೆಂಬುದು ಸತ್ಯಕ್ಕೆ ದೂರವಾದ ಮಾತು. ಹಿರಿಯ ಸಾಹಿತಿಗಳ ಸಾಹಿತ್ಯಸಾಧನೆಯ ಸರಕುಗಳನ್ನೇ ಉರುಹೊಡೆದುಕೊಂಡು ಅಂಥಹ ಸಾಹಿತ್ಯ ಇನ್ನೆಂದೂ ಹೊರಹೊಮ್ಮುವುದಿಲ್ಲ ಎಂದು ಯುವಸಾಹಿತಿಗಳನ್ನು ಮೂದಲಿಸುವವರೂ ನಮ್ಮಲ್ಲಿ ಕಡಿಮೆಯೇನಿಲ್ಲ. ಅನ್ಯರ ಸಾಹಿತ್ಯಗಳನ್ನು ಋಣಾತ್ಮಕವಾಗಿಯೇ ವಿಮರ್ಶಿಸುತ್ತಾ ತಾವು ಮಾತ್ರ ಕೃತಿರಚನೆಗಳಲ್ಲಿ ಶೂನ್ಯ ಎಂಬುದನ್ನು ಸಾಬೀತುಪಡಿಸಿದವರ ದೊಡ್ಡ ಪಡೆಯೇ ಈ ನಾಡಿನಲ್ಲಿದೆ. ಹಾಗೆಂದು ಅಂಥವರ ಮಾತುಗಳಿಗೆ ಕಿವಿಗೊಡದೆ ತಮ್ಮ ತಮ್ಮ ಕೈಗಳಿಗೆ ಲೇಖನವನ್ನು ಕೊಟ್ಟು ತಮಗನಿಸಿದ್ದನ್ನೂ ತೋಚಿದ್ದನ್ನೂ ಗೀಚಿ ಲೇಖಕರಾದವರೂ ಈ ನಾಡಿನಲ್ಲಿದ್ದಾರೆ ಎಂಬುದು ಆಶಾದಾಯಕ ಸಂಗತಿ. ತಾನು ಸಾಹಿತಿಯಾಗಿ ಗುರುತುಸಿಕೊಳ್ಳಬೇಕೆಂಬ ಏಕೈಕ ಅಪೇಕ್ಷೆಯಿಂದ ಒತ್ತಾಯಪೂರ್ವಕವಾಗಿ ಬರೆಯುವುದಕ್ಕೂ ನಿರಪೇಕ್ಷೆಯಿಂದ ತಾನೇ ತಾನಾಗಿ ಭಾವಾಭಿವ್ಯಕ್ತಿಯ ಸಾಧನವಾಗಿ ಹುಟ್ಟುವ ಸಹಜ ಸಾಹಿತ್ಯಕ್ಕೂ ಬಹಳ ವ್ಯತ್ಯಾಸವಿದೆ. ಅಂತರಂಗದಲ್ಲಿ ಅದುಮಿಟ್ಟ ಅನಂತ ಭಾವನೆಗಳ ಅನಾವರಣಕ್ಕೊಂದು ತಾಣವೇ ಸಾಹಿತ್ಯಲೋಕ….ಅದುವೇ ಸಾರಸ್ವತಲೋಕ. ಇಲ್ಲಿ ಬಡವ ಬಲ್ಲಿದ ಮೇಲು ಕೀಳೆಂಬ ಯಾವ ಅಳತೆಗೂ ಅತೀತವಾಗಿ ಸಾಹಿತ್ಯಸರಸ್ವತಿ ತನ್ನಲ್ಲಿ ಭಕ್ತಿ-ಶ್ರದ್ಧೆ ಇಟ್ಟವರನ್ನು ಅನುಗ್ರಹಿಸಿ ಯಥಾನುಶಕ್ತಿ ಅಕ್ಷರಗಳನ್ನು ಭಾವಸಹಿತವಾಗಿ ದಯಪಾಲಿಸುತ್ತಾಳೆ. ಹಾಗೆ ಶಾರದೆಯ ಅನುಗ್ರಹಕ್ಕೊಳಪಟ್ಟವರೇ ಧನ್ಯರು…ಈ ಜಗದಲಿ ಮಾನ್ಯರು. ಅಂತೆಯೇ ಬರೆದ ನೂರಾರು ಕಥೆ-ಕವಿತೆಗಳನ್ನು ಲೋಕಕ್ಕೆ ಬಿತ್ತರಿಸದೆ ಸಂಕೋಚದಿಂದ ಮನೆಯ ಕಪಾಟಿನಲ್ಲೇ ಭದ್ರವಾಗಿಟ್ಟವರು ಅದೆಷ್ಟೋ ಮಂದಿ. ಅಂತಹ ಕೃತಿಗಳು ಹೊರಜಗತ್ತಿಗೆ ಬಂದು ಒಂದಷ್ಟು ಓದುಗರು ಲೇಖಕರನ್ನು ಪ್ರೋತ್ಸಾಹಿಸಿದರೂ ಸಾಕು, ಲೇಖಕರ ಉತ್ಸಾಹ ಪುಟಿದೆದ್ದು ಮತ್ತೆ ಪುಟಪುಟಗಳನ್ನು ತುಂಬಿಸುತ್ತಾ ಹಲವಾರು ಕೃತಿ ರಚನೆಗಿಳಿಯುತ್ತಾರೆ. ಹಾಗೆಯೇ ಇತ್ತೀಚೆಗಷ್ಟೇ ಬೆಳಕಿಗೆ ಬರುತ್ತಿರುವ ಯುವಲೇಖಕಿಯರಲ್ಲಿ ಸೀತಾ ಎಮ್.ಹೆಗಡೆ ಕೂಡ ಒಬ್ಬರು. ಇಷ್ಟು ವರ್ಷಗಳ ಕಾಲ ವನಸುಮವಾಗಿದ್ದ ಈ ಲೇಖಕಿ ಇತ್ತೀಚೆಗಿನ ದಿನಗಳಲ್ಲಿ ಭರವಸೆಯ ಭವಿಷ್ಯದ ಲೇಖಕಿ ಎಂಬ ಬಗ್ಗೆ ಮುನ್ಸೂಚನೆ ನೀಡುತ್ತಿದ್ದಾರೆ. ಕಳೆದ ವರ್ಷ ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಪ್ರಕಟವಾದ ಅವರ ಹಲವಾರು ಕಥೆ, ಕವನ ಹಾಗು ವೈಚಾರಿಕ ಲೇಖನೆಗಳೇ ಇದಕ್ಕೆ ಸಾಕ್ಷಿ. ಸೀತಾ ಮಂಜುನಾಥ ಹೆಗಡೆ ಅವರ ಕಿರುಪರಿಚಯ ನಿಮಗಾಗಿ….
ಆತ್ಮತೃಪ್ತಿಗಾಗಿ ಸಾಹಿತ್ಯದ ದಾರಿ-ಗ್ರಾಮೀಣ ಮಹಿಳೆಯರಿಗಂತೂ ಮಾದರಿ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗಂಜೀಸರ ಎಂಬುದು ಈ ನಾಡಿನ ಕುಗ್ರಾಮಗಳಲ್ಲೊಂದು. ಅಲ್ಲಿ ತುಂಬು ಕುಟುಂಬದಲ್ಲಿ ಕೃಷಿಕ ಮಂಜುನಾಥ ಹೆಗಡೆಯವರ ಧರ್ಮಪತ್ನಿಯಾಗಿರುವ ಸೀತಾ ಹೆಗಡೆ ಮೂರು ಮಕ್ಕಳ ತಾಯಿ. ಪತಿಯೊಡನೆ ಮನೆಗೆಲಸ ಮಾತ್ರವಲ್ಲದೆ ಹೊಲಗದ್ದೆ ತೋಟಗಳಲ್ಲೂ ಶ್ರಮಜೀವಿಯಾಗಿ ಕೆಲಸ ಮಾಡುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಬರವಣಿಗೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯಲೋಕದ ಹಲವು ಹಿರಿಯರ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿಕೊಂಡಿರುವ ಸೀತಾ ಹೆಗಡೆಯವರು ತಮ್ಮ ಬರವಣಿಗೆಯಲ್ಲಿ ಮಾತ್ರ ಅದ್ಯಾವುದರ ಛಾಯೆಯನ್ನೂ ತೋರದೆ ಕೃತಿ ರಚನೆಯಲ್ಲಿ ಸ್ವಂತಿಕೆಯನ್ನು ಮೆರೆದಿದ್ದಾರೆ. ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯ ಬದುಕು, ಬವಣೆ, ಸ್ಥಾನಮಾನ ಇವೆಲ್ಲವುಗಳನ್ನು ತಮ್ಮದೇ ಶೈಲಿಯಲ್ಲಿ ಸಾಹಿತ್ಯದ ಮೂಲಕ ತೆರೆದಿಡುವ ಸೀತಾ ಹೆಗಡೆ ಗೃಹಸ್ಥಾಶ್ರಾಮದಲ್ಲಿ ಗೃಹಿಣಿಯೊಬ್ಬಳು ಹೇಗಿರಬೇಕೆಂಬುದಕ್ಕೆ ಮಾದರಿಯಾಗಿದ್ದಾರೆ. ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸಲು ಸಂಸ್ಕಾರವಂತರನ್ನಾಗಿಸಲು ಸಾಧಕರನ್ನಾಗಿಸಲು ಸ್ವತಹಾ ತಾನೇ ಸಾಧಕಿಯಾಗುವುದರ ಮೂಲಕ ಮಾರ್ಗದರ್ಶನ ಮಾಡಬೇಕೆಂಬ ಪಣತೊಟ್ಟಿದ್ದಾರೆ.
ಹೆಣ್ಣು ಹಳ್ಳಿಯ ಮನೆಯೊಂದನ್ನು ಸೇರಿದರೆ ಮೂಲೆಗುಂಪಾಗುತ್ತಾಳೆ, ಅವಳಿಗೆ ನಗರದ ಮಹಿಳೆಯರಂತೆ ಬೆಳೆಯಲು ಅವಕಾಶಗಳೇ ಇಲ್ಲ ಎಂದು ಆಕಾಶವೇ ತಲೆ ಮೇಲೆ ಕಳಚಿ ಬಿದ್ದವರಂತೆ ಮಾತನಾಡುವವರ ಮಾತಿಗೆ ತಡೆಯೊಡ್ಡುವ ಇವರು ವ್ಯಕ್ತಿ ಎಲ್ಲಿದ್ದರೂ ಹೇಗೆ ಕ್ರಿಯಾತ್ಮಕವಾಗಿರಬೇಕು ಎಂಬುದರ ಕುರಿತು ಸ್ಪಷ್ಟವಾದ ವಾದವನ್ನು ಮಂಡಿಸುತ್ತಾರೆ.
ಸೀತಾ ಹೆಗಡೆಯವ ಇತ್ತೀಚೆಗಿನ ಪ್ರಕಟಿತ “ಈ ಕುಚೇಲನ ಗುಡಿಸಲಿಗೆ…” ಸಾಹಿತ್ಯವಲಯದಲ್ಲಿ ಬಹಳ ಚರ್ಚೆಗೊಳಪಟ್ಟಿದೆ. ಅದರ ಕೆಲವು ಸಾಲುಗಳು ಈ ಲೇಖಕಿಯ ಪ್ರತಿಭೆಯನ್ನು ಪರಿಚಯಿಸುತ್ತದೆ.
ಸಾಕ್ಷಾತ್ ವಾಗ್ದೇವಿಯೇ ನಾಲಿಗೆಯ ಮೇಲೆ ನರ್ತಿಸಿ/ ಆಡುವ ಮಾತುಗಳು ಉದುರುವ ಮುತ್ತಾಗಿ/ ಮೂರಕ್ಕೆ ನೂರಾಗಿ ನೂರಕ್ಕೆ ಸಾವಿರವಾಗಿ/ ವಾಗ್ಝರಿಯನ್ನೇ ಹರಿಸುವ ಆ ವೇದನಿಧಿಯನ್ನ/ಒಮ್ಮೆಯಾದರೂ ಕರೆಸಬೇಕು ಸಾಹಿತ್ಯದ ಗಂಧವೇ ಇರದ/ಈ ಕುಚೇಲನ ಗುಡಿಸಲಿಗೆ…
ಮೇರುಮೇರುವಾಗಿ ನೆಲೆನಿಂತು/ ಮಾತುಗಳ ಮಳೆಸುರಿಸಿ ಚುಂಬಕದಂತೆ/ ನಿನ್ನತ್ತ ಸೆಳೆದುಕೊಳ್ಳುವ, ಸಾಹಿತ್ಯದ ಹುಚ್ಚುಹೊಳೆಯಲ್ಲಿ/ತೇಲಿಸುವ ನಾವಿಕನು ನೀನು ಅದಕ್ಕೇ/ಒಮ್ಮೆಯಾದರೂ ಕರೆಸಬೇಕು ನಿನ್ನನ್ನ /ಈ ಕುಚೇಲನ ಗುಡಿಸಲಿಗೆ
ಸಂಪತ್ತು ವೈಭವಗಳಲ್ಲಿ ಬಡವನೇನಲ್ಲ/ ವಿದ್ಯೆಯ ಅಧ್ಯಯನ, ಜ್ಞಾನ ಕಾವ್ಯ ಕೌಶಲಗಳಲ್ಲಿ/ ನನ್ನಂಥ ಕುಚೇಲ ಬೇರೊಬ್ಬನಿಲ್ಲ/ ಕಾವ್ಯ ಕನ್ನಡಿಯಲ್ಲಿ ಪ್ರಪಂಚದ ಪ್ರತಿಬಿಂಬ/ ಮೂಡಿಸುವ ಗಾರುಡಿಗನನ್ನು ಕಡಲ ವೈಶಾಲ್ಯದ/ ವಾರಿಧಿಯನ್ನ ಪರಿಪೂರ್ಣ ಜ್ಞಾನನಿಧಿಯನ್ನು / ಕಣ್ತುಂಬ ನೋಡುವ ವಾಂಛೆಗೆ ತೃಪ್ತಿ ನೀಡಲು/ ನಿನ್ನ ಕೃಪೆಗೆ ಪಾತ್ರನಾಗಲು ಒಮ್ಮೆಯಾದರೂ/ ಕರೆಸಬೇಕು ನಿನ್ನನ್ನು ಈ ಕುಚೇಲನ ಗುಡಿಸಲಿಗೆ/
ಹೀಗೆ ಓದುತ್ತಾ ಸಾಗಿದಾಗ ಈ ಕವಯಿತ್ರಿ ಸ್ವಾನುಭವಕ್ಕೊಳಪಟ್ಟು ಬರೆಯುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಇದೇ ಅಂಶ ಅವರ ಕೆಲವು ಪ್ರಕಟಿತ ಕಥೆಗಳಲ್ಲಿಯೂ ಗೋಚರವಾಗುತ್ತದೆ. ತನ್ನ ಭಾವಜಗತ್ತನ್ನು ಜಗತ್ತಿಗೆ ಬಿತ್ತರಿಸುವಾಗ ಈ ಲೇಖಕಿ ಎಲ್ಲೂ ಸೋಲುವುದಿಲ್ಲ ಎಂಬುದು ಕಥೆಯಾಗಲಿ ಕವನವಾಗಲಿ ನಿರೂಪಣೆಯಲ್ಲಿ ನಮಗೆ ಗೊತ್ತಾಗುತ್ತದೆ.
ತಮ್ಮ ಕೃತಿಗಳ ಓರೆಕೋರೆಗಳನ್ನು ಸುಪ್ರಸಿದ್ಧ ಸಾಹಿತಿ ಜಯಂತ ಕಾಯ್ಕಿಣಿಯವರೊಂದಿಗೆ ಚರ್ಚಿಸಿರುವ ಸೀತಾ ಹೆಗಡೆ ತಮ್ಮ ಹೊಸ ರಚನೆಗಳಲ್ಲಿ ಅವರ ಸಲಹೆಗಳನ್ನು ಗಣನೀಯ ಪ್ರಮಾಣದಲ್ಲಿ ಅಳವಡಿಸಿಕೊಂಡು ಗೆದ್ದಿದ್ದಾರೆ. ಅವರಿಂದಲೇ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಪ್ರಖ್ಯಾತ ಬಾನ್ಸುರಿ ವಾದಕ ವೆಂಕಟೇಶ್ ಗೋಡ್ಕಿಂಡಿ ಸೀತಾ ಹೆಗಡೆಯವರ ಕವನಗಳಲ್ಲಿನ ಹೊಚ್ಚಹೊಸ ಕಲ್ಪನೆಗಳನ್ನು ಗುರುತಿಸಿ ಕೊಂಡಾಡಿದ್ದಲ್ಲದೆ ಮುಂದಿನ ಕವಿತೆಗಳಲ್ಲಿ ನವ್ಯಶೈಲಿಯಷ್ಟೇ ಗೇಯತೆಗೂ ಪ್ರಾಧಾನ್ಯತೆಯನ್ನು ನೀಡಿದರೆ ತಮಗೂ ರಾಗ ಸಂಯೋಜಿಸಿ ಹಾಡಲು ಅನುಕೂಲವಾಗುತ್ತದೆ ಎಂದು ಅವರಲ್ಲಿ ಕೇಳಿಕೊಂಡಿದ್ದಾರೆ. ಹಿಂದುಸ್ಥಾನಿ ಗಾಯಕಿ ವಾಣಿ ಹರ್ಡೀಕರ್ ಇವರ ಹಲವಾರು ಕವಿತೆಗಳಿಗೆ ರಾಗಸಂಯೋಜಿಸಿ ವೇದಿಕೆಗಳಲ್ಲಿ ಹಾಡಿದ್ದಾರೆ. ಇಷ್ಟಲ್ಲದೆ ಸೀತಾ ಅವರ ಕೆಲವು ಭಾವಗೀತೆಗಳನ್ನು ತಾಲೂಕು ಹಾಗು ಜಿಲ್ಲಾಮಟ್ಟದ ಪ್ರತಿಭಾಕಾರಂಜಿಗಳಲ್ಲಿ ಹಾಡಿ ವಿದ್ಯಾರ್ಥಿಗಳು ಬಹುಮಾನಗಳನ್ನೂ ಗಳಿಸಿದ್ದಾರೆ. ತನ್ನ ಇತಿಮಿತಿ ಹಾಗು ವ್ಯಾಪ್ತಿಯನ್ನರಿತು ಅಷ್ಟರೊಳಗೇ ಬೇಕಾದಷ್ಟು ಕಥೆಕವಿತೆಗಳನ್ನು ಬರೆಯುತ್ತಿರುವ ಸೀತಾ ಹೆಗಡೆ ವಿಶೇಷವಾಗಿ ಗ್ರಾಮೀಣ ಮಹಿಳೆಯರು ಅವಕಾಶ ವಂಚಿತರು ಎಂದು ತಮ್ಮಷ್ಟಕ್ಕೇ ತಾವೇ ತಪ್ಪಾಗಿ ತಿಳಿದುಕೊಂಡು ಏನನ್ನೂ ಸಾಧಿಸದೆ ಸುಮ್ಮನೆ ಕಾಲಹರಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಗ್ರಾಮೀಣ ಮಹಿಳೆಯರೂ ಹೇಗೆ ಕ್ರಿಯಾಶೀಲರಾಗಿ ಜೀವನವನ್ನು ಹೇಗೆ ಸಾರ್ಥಕಪಡಿಸಿಕೊಳ್ಳಬೇಕೆಂಬುದಕ್ಕೆ ಮಾದರಿಯಾಗಿದ್ದಾರೆ. ಆತ್ಮತೃಪ್ತಿಗಾಗಿ ಆರಂಭವಾಗಿರುವ ಅವರ ಸಾಹಿತ್ಯಸೇವೆ ಹೀಗೆಯೇ ಮುಂದುವರೆಯಲಿ…ಆ ಮೂಲಕವಾಗಿ ಸೀತಾ ಹೆಗಡೆ ಸಾರಸ್ವತಲೋಕದಲ್ಲಿ ಕೀರ್ತಿವಂತರಾಗಲಿ ಎಂದು ನಾವೆಲ್ಲಾ ಆಶಿಸೋಣ.
-ಚಿನ್ಮಯ ಎಂ.ರಾವ್ ಹೊನಗೋಡು
23-5-2011