ವ್ಯಕ್ತಿ ಪರಿಚಯ

ಪುರುಷೋತ್ತಮ ಕಾರಂತರ ಅದ್ಭುತ ವರ್ಣಚಿತ್ರ, ರೇಖಾಚಿತ್ರಗಳು ಜಗದ್ವಿಖ್ಯಾತ !

ಇಂತಹ ಕಲಾ ಆರಾಧಕರಿಗೆ ದೊಡ್ಡ ನಮನ

ಶಾರದಾ ಕಾರಂತ್
೨೦-೫-೨೦೨೦

ಪ್ರಕೃತಿಯ ಸೌಂದರ್ಯವನ್ನು ಇಮ್ಮಡಿಸುವ ಹಸಿರು ವನ ಪ್ರಶಾಂತತೆಯಿಂದ ನಿರ್ಮಲ ಮನಸ್ಸಿಗೆ ಕೊಂಡೊಯ್ಯುವ ವಾತಾವರಣ ಇಂತಹ ಪರಿಸರದಲ್ಲಿ ದಕ್ಷಿಣಕನ್ನಡ ಮಂಗಳೂರಿನಲ್ಲಿ ನಾನು ಬೆಳೆದವಳು. ಬಾಲ್ಯದಿಂದಲೂ ಭಜನೆ, ಸಂಗೀತ-ಸಾಹಿತ್ಯ, ಶ್ಲೋಕ ಪಠಣ ಇಂತಹ ವಿಚಾರಗಳನ್ನು ಧಾರೆ ಎರೆದವರು ನನ್ನ ತಂದೆ ತಾಯಿಗಳು.ಇದಕ್ಕೆ ಇನ್ನೂ ಪುಷ್ಟಿ ಕೊಡಲು ನನ್ನ ಚಿಕ್ಕಪ್ಪನವರಾದ ಪುರುಷೋತ್ತಮ ಕಾರಂತರು ಅದ್ಭುತ ಕಲಾವಿದರು.ಇವರ ವರ್ಣಚಿತ್ರ , ರೇಖಾಚಿತ್ರಗಳು ಜಗದ್ವಿಖ್ಯಾತ.

ಪುರುಷೋತ್ತಮ ಕಾರಂತರು ೨೬-೦೨-೧೯೪೦ ರಲ್ಲಿ ದಕ್ಷಿಣಕನ್ನಡದ ಪಣಂಬೂರಿನಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಹೊಂದಿದ್ದರು.ಇವರು ಮಂಗಳೂರಿನ ಮಣ್ಣಗುಡ್ಡ ಪ್ರಾಥಮಿಕ ಶಾಲೆಯಲ್ಲಿ ಹಾಗೂ ರಥಬೀದಿಯ ಸೆಂಟ್ರಲ್ ವಾರ್ಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹೊಂದಿ ಮುಂದೆ ಗಣಪತಿ ಹೈಸ್ಕೂಲ್ನಲ್ಲಿ ಕಲಿಕೆಯನ್ನು ಮುಂದುವರಿಸಿದರು.ಇವರ ಕಲಾಸಕ್ತಿಯನ್ನು ಗುರುತಿಸಿ ಸಂತ ಅಲೋಶಿಯಸ್ ಹೈಸ್ಕೂಲಿನಲ್ಲಿ ಚಿತ್ರಕಲಾ ಅಧ್ಯಾಪಕರಾದ ಶ್ರೀ ಬಿ. ನರಸಿಂಹರಾವ್ ಅವರಲ್ಲಿ ಚಿತ್ರಕಲಾ ಅಭ್ಯಾಸವನ್ನು ಗೊತ್ತುಮಾಡಿದರು. ಒಂದೆರಡು ವರ್ಷದಲ್ಲಿ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ತೇರ್ಗಡೆ ಹೊಂದಿದರು.ಆಗಿನ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಂಡಂತೆ ಚಿತ್ರಕಲೆಯನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಂಡು ಮುಂದೆ ಬೆಳ್ತಂಗಡಿಯ ಶಾಲೆಯಲ್ಲಿ ಶಿಕ್ಷಕರಾಗಿ ನಿರ್ವಹಿಸಿದರು. ಸುಮಾರು ನಾಲ್ಕು ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ ಅಲ್ಲಿಯೂ ತಮ್ಮ ಬಣ್ಣಗಾರಿಕೆ ಹಾಗೂ ಚಿತ್ರಗಾರಿಕೆ ಚಾತುರ್ಯವನ್ನು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ಪರಮಹಂಸರ ಹಾಗೂ ವಿವೇಕಾನಂದರ ಜೀವನಗಳ ಒಂದಿಷ್ಟು ಅಧ್ಯಯನವನ್ನು ಮಾಡಿದರು .ಸಣ್ಣಪುಟ್ಟ ಬರಹ, ಕಥೆಗಳನ್ನು ಬರೆಯುತ್ತಿದ್ದರು. ಅವರು ಬರೆದು ಪ್ರಕಟಿಸಿದ ಗುರು-ಶಿಷ್ಯ ಎಂಬ ಪುಸ್ತಕ ಈ ಸಂದರ್ಭದಲ್ಲಿ ಪ್ರಚಲಿತವಾಯಿತು . ಕಾಜಾಣ ಸಾಹಿತ್ಯ ಪ್ರಕಾಶನ ಆರಂಭಿಸಿದ್ದು ಇದೇ ಸಂದರ್ಭದಲ್ಲಿ. ಇನ್ನೂ ಉನ್ನತ ಕಲಿಕೆಗಾಗಿ ವೃತ್ತಿಯನ್ನು ತೊರೆದು ಮುಂಬೈಯ ಜೆ ಜೆ ಕಲಾ ಶಾಲೆಗೆ ಸೇರಿಕೊಂಡರು. ಕಾರಂತರ ಕಲಿಕೆಯ ಉತ್ಸುಕತೆಯ ಅರಿವು ನಮಗಾಗುವುದು ಇದರಿಂದ. ಕಾರಂತರ ವಿಶೇಷತೆ ಎಂದರೆ ಅವರು ಕೊನೆಯ ವರ್ಷದ ತನಕವೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಯಾಗಿದ್ದರು.

ಇವರ ಸಾಧನೆಯನ್ನು ಪರಿಗಣಿಸುತ್ತಾ ಅಂದಿನ ಮಹಾರಾಷ್ಟ್ರ ಸರ್ಕಾರವು ಪ್ರತಿಭಾ ವೇತನವನ್ನು ಕೊಟ್ಟು ಗೌರವಿಸಿತು. ಅಂತಿಮವಾಗಿ ವಿದ್ಯಾರ್ಥಿಗಳ ವಾರ್ಷಿಕ ಪ್ರದರ್ಶನದಲ್ಲಿ ಚಿನ್ನದ ಪದಕಗಳನ್ನು ಗಳಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದರು. ಕಾರಣಾಂತರಗಳಿಂದ ತನ್ನ ಹುಟ್ಟೂರಾದ ಮಂಗಳೂರಿಗೆ ಮರಳಿ ಬಂದರು .ತನ್ನ ತಾಯಿಯವರಾದ ಸಾವಿತ್ರಿ ಅವರನ್ನು ನೋಡಿಕೊಳ್ಳುತ್ತಾ ಮುಂದೆ ೧೯೬೭ ರಲ್ಲಿ ಪಣಂಬೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಕಲಾ ಶಿಕ್ಷಕರಾಗಿ ಸೇರಿಕೊಂಡರು.

ಈ ನಡುವೆ ಮನೆ ಪಾಠವನ್ನು ಮಾಡುತ್ತಾ ಹಲವಾರು ಮಕ್ಕಳಿಗೆ ಚಿತ್ರಕಲಾ ಶಿಕ್ಷಕರಾದರು.ಹಾಗೆಯೇ ಆಸಕ್ತಿಯನ್ನು ಹುಟ್ಟಿಸಿದರು ಅವರ ಸರಳತೆ ಹೇಗಿತ್ತೆಂದರೆ ಎಂದಿಗೂ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಪಾಠ ಮಾಡಿದವರಲ್ಲ. ಒಂದು ವಿದ್ಯಾರ್ಥಿ ಇಂದಲೂ ಹಣವನ್ನು ಪಡೆದು ಕೊಂಡವರಲ್ಲ. ಅವರ ತರಗತಿಗಳಿಗೆ ಒಂದು, 2 ಎಂಬ ಎಣಿಕೆ ಇರಲಿಲ್ಲ. ಮಕ್ಕಳ ಆಸಕ್ತಿ ಮೇರೆಗೆ ಎಂದೂ ಪಾಠವನ್ನು ನಡೆಸುತ್ತಿದ್ದರು. ಅವರ ರೇಖಾಚಿತ್ರಗಳು ಎಂದೆಂದಿಗೂ ಸ್ಮರಣೀಯ. ಚಿತ್ರಕಲೆಯನ್ನು ಸುಲಭವಾಗಿ ರಚಿಸಲು ಹೇಗೆ ಸಾಧ್ಯ ಎಂಬುದು ನಾವು ಅವರ ರೇಖಾಚಿತ್ರ ಗಳಿಂದ ತಿಳಿಯಬಹುದು.

ವೈಯಕ್ತಿಕ ಜೀವನದಲ್ಲಿ ಕಾರಂತರು ಅವಿವಾಹಿತರಾಗಿದ್ದರು. ಯಾವಾಗಲೂ ರಾಮಕೃಷ್ಣ ಮಿಷನ್ ಭಜನೆಗಳಲ್ಲಿ ಪಾಲ್ಗೊಳ್ಳುತ್ತಾ ಪರಮಹಂಸರ ಅನುಯಾಯಿಯಾಗಿದ್ದರು.

೧೯೮೦-೯೦ ರವರೆಗೆ ಮಹಾಲಸಾ ಕಲಾಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ನಿರ್ವಹಿಸಿದರು. ಚಿತ್ರಕಲೆಯನ್ನೇ ಸಂಪೂರ್ಣವಾಗಿ ಕಲಿಯುವುದಕ್ಕಾಗಿ ಬರುವ ವಿದ್ಯಾರ್ಥಿಗಳ ದಾಹಕ್ಕೆ ತಮ್ಮಲ್ಲಿದ್ದ ಎಲ್ಲಾ ಕಲೆಯನ್ನು ಇವರು ಧಾರೆ ಎರೆಯುತ್ತಿದ್ದರು.ಬೇರೆಬೇರೆ ಪ್ರಯೋಗದಲ್ಲಿ ಚಿತ್ರಗಳನ್ನು ಬಿಡಿಸುತ್ತಿದ್ದರು. ಇಂದಿಗೂ ಮಂಗಳೂರಿನ ಸುತ್ತಲೂ ಇರುವ ಹಲವಾರು ಕಲಾ ಶಿಕ್ಷಕರು ಕಾರಂತರ ಶಿಷ್ಯರೇ ಆಗಿದ್ದಾರೆ.

ಪಿ.ಪಿ. ಕಾರಂತರ ಸಾಧನೆಗಳಲ್ಲಿ ಮುಂಬೈ ಆರ್ಟ್ ಸೊಸೈಟಿಯವರ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಪ್ರದರ್ಶನದಲ್ಲಿ ಪುರಸ್ಕಾರ, ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ೨೦೦೮ ರಲ್ಲಿ ರಾಜ್ಯಪ್ರಶಸ್ತಿ, ಹಾಗೆಯೇ ೧೯೯೯- ೨೦೦೦ ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿ ನೇಮಕ. ಇದಿಷ್ಟು ಅಲ್ಲದೆ ಚೆನ್ನೈ ರಾಮಕೃಷ್ಣ ಆಶ್ರಮ ‘ವಿವೇಕಾನಂದ ಇಲ್ಲಂ’ನಲ್ಲಿ ಭಾರತೀಯ ಪರಂಪರೆಯ ಕುರಿತು ೫೦ ತೈಲವರ್ಣದ ಮ್ಯೂಸಿಯಂ, ಹೈದರಾಬಾದ್ ರಾಮಕೃಷ್ಣ ಆಶ್ರಮದಲ್ಲಿ ಉಪನಿಷತ್ ಆಧರಿಸಿ ೪೫ ತೈಲ ಚಿತ್ರಗಳು, ಚೆಂಗಲ್ಪೆಟ್ ರಾಮಕೃಷ್ಣ ಆಶ್ರಮದಲ್ಲಿ ೪೦ ವರ್ಣಚಿತ್ರಗಳು, ಹೈದ್ರಾಬಾದ್ ಆಶ್ರಮದಲ್ಲಿ ಗೀತಾ ದರ್ಶನಂನಲ್ಲಿ ೧೦೮ ವರ್ಣಚಿತ್ರದ ಮ್ಯೂಸಿಯಂ ಬೆಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ೪೦ ವರ್ಣಚಿತ್ರಗಳು, ಧರ್ಮಸ್ಥಳದ ನವೀಕೃತ ಬಸದಿಯಲ್ಲಿ ಕಲಾ ಕೆತ್ತನೆಯ ಚಿತ್ರಗಳು ಹೀಗೆ ಇನ್ನೂ ಹಲವಾರು.

ಯುವಪೀಳಿಗೆಗೆ ಉತ್ತೇಜಿಸುತ್ತಾ ಕಲಾ ಸ್ಪಂದನ ಎಂಬ ಸಂಘಟನೆಯನ್ನು ರಚಿಸಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವಸಂತ ವರ್ಣ ಎಂಬ ಕಲಾ ಕಾರ್ಯಾಗಾರವನ್ನು ರಚಿಸಿದ್ದರು .ಮಕ್ಕಳಿಗಾಗಿ ವರ್ಷಂಪ್ರತಿ ಶರದ್ ವರ್ಣ, ವರ್ಣ ನರ್ತನ ,ಸ್ವರ ವರ್ಣ ಹಾಗೂ ಯಕ್ಷ ವರ್ಣ, ರಾಮಾಯಣದರ್ಶನ ಎಂಬ ಹೆಸರಿನಲ್ಲಿ ನಾಲ್ಕು ವರ್ಷಗಳ ಕಾಲ ಕಲಾ ಕಾರ್ಯಾಗಾರವನ್ನು ರಚಿಸಿದರು.

ಎಂದಿಗೂ ಪ್ರಶಸ್ತಿ, ಗೌರವ, ಮನ್ನಣೆ ಇದರಿಂದ ದೂರ ಉಳಿದ ಕಾರಂತರು ನಮ್ಮೆಲ್ಲರ ಹೃದಯದಲ್ಲಿ ಸದಾ ಪರಿಚಿತ. ಕಾರಂತರು ದೈಹಿಕವಾಗಿ ಅಗಲಿದ್ದರೂ ನಿಸ್ವಾರ್ಥದಿಂದ ತನ್ನ ಕಲೆಯನ್ನು ಮಕ್ಕಳಿಗೆ ಧಾರೆ ಎರೆದು ಅವರ ಪ್ರೀತಿಯ ಶಿಕ್ಷಕರಾಗಿದ್ದರು. ನನ್ನ ಪ್ರೀತಿಯ ಚಿಕ್ಕಪ್ಪನಾದ ಕಾರಂತರು ನನ್ನಲ್ಲಿಯೂ ಕಲಾಸಕ್ತಿಯನ್ನು ಹುಟ್ಟಿಸಿದವರು. ತನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶನಕ್ಕೆ ಬಳಸದೆ ಎಲೆಮರೆಯ ಕಾಯಿಯಂತೆ ಇದ್ದು ಸಾರ್ಥಕತೆಯ ಜೀವನವನ್ನು ನಡೆಸಿದ್ದಾರೆ. ಕಲಾಸಕ್ತರ ಮನದಲ್ಲಿ ತನ್ನ ಸಹಿಯನ್ನು ಹಾಕಿದ್ದಾರೆ. ಇಂತಹ ಕಲಾ ಆರಾಧಕರಿಗೆ ದೊಡ್ಡ ನಮನ.


.

Related Articles

Back to top button

Adblock Detected

Please consider supporting us by disabling your ad blocker