ವಿಚಾರಲಹರಿ

ಸಾವು – ಭಯ

– ಶಾರದಾ ಕಾರಂತ್

ಬಾಳಿನ ಕೊನೆಯ ಹಂತಕ್ಕೆ ತಲುಪಿದ್ದರೂ ಮನುಷ್ಯನಿಗೆ ಸಾವಿನ ಭಯ ಕಾಡದೆ ಇರದು. ಜನನ,ಸಾವು ನಿರಂತರ ನಡೆಯುವ ವಿಧಿಯ ಆಟ. ಇವುಗಳ ಅರಿವಿದ್ದರೂ ಸಾವು ಎಂಬ ಪದ ಭೀತಿಯನ್ನು ಹುಟ್ಟಿಸುತ್ತದೆ. ಕಾರಣ ಅನೇಕ ವಿದ್ದರೂ ಸಾವು ಸನಿಹ ಸುಳಿಯಲು ಯಾರೂ ಬಯಸುವುದಿಲ್ಲ.

ಎಲ್ಲ ತಂತ್ರಜ್ಞಾನಗಳನ್ನು ಬದಿಗೊತ್ತಿ ಮನೆಯಲ್ಲೇ ಪಾಠ,ಉದ್ಯೋಗ, ವ್ಯವಹಾರಗಳನ್ನು ನಡೆಸುವಂಥ ಸಮಯ ಇದು. ಎಂದೆಂದೂ ಕಾಣದಂಥ ನಿಬಂಧನೆಗಳೊಂದಿಗೆ ನಾವು ಬದುಕುತ್ತಿದ್ದೇವೆ. ಇದು ಒಂದೆಡೆಯಾದರೆ ಇನ್ನೊಂದೆಡೆ ತಂತ್ರಜ್ಞಾನವನ್ನೂ ನಂಬಿಕೆಗಳನ್ನೂ ಮೀರಿಸುವಂತಹ ಕೆಲಸಗಳನ್ನು ಮನುಷ್ಯನು ಸಾಧಿಸುತ್ತಿದ್ದಾನೆ. ಆತ್ಮದ ಜೊತೆ ಮಾತನಾಡಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾನೆ. ಅದೇನಿದ್ದರೂ ಮರಣವನ್ನು ತಪ್ಪಿಸಲು ಅಥವಾ ಮುಂದೂಡಲು ಯಾರಿಂದಲೂ ಸಾಧ್ಯವಿಲ್ಲ. ಹೌದು ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ. ಅಂತಕನು ಬಂದರೆ ಸಂಪತ್ತು, ಐಶ್ವರ್ಯ,ಸಂಸಾರ ಎಲ್ಲವನ್ನೂ ತೊರೆದು ಇಹಲೋಕ ತ್ಯಜಿಸಿ ಹೊರಡಬೇಕಾಗುತ್ತದೆ.

ಆದರೆ ಪುರಾಣದಲ್ಲಿ ಮರಣದ ಗತಿಯನ್ನೇ ತಪ್ಪಿಸಿದ ಮಹಾನ್ ಪತಿವೃತೆ ಒಬ್ಬಳ ಕಥೆಯನ್ನು ಕಾಣಬಹುದು ಅವಳೇ ಸತ್ಯವಾನ ಸಾವಿತ್ರಿ. ತನ್ನ ಪತಿ ಸತ್ಯವಾನನು ಅಲ್ಪಾಯು ಎಂದು ತಿಳಿದಿದ್ದರೂ ಅವನೇ ತನ್ನ ಪತಿ ಎಂದು ನಿರ್ಧರಿಸಿ ವಿವಾಹವಾದಳು. ಯಮಧರ್ಮರಾಯನು ನಿನ್ನ ಪತಿಯ ಆಯುಷ್ಯ ಮುಗಿಯಿತೆಂದು ಹೇಳಲು ಸಾವಿತ್ರಿ ದೃತಿಗೆಡದೆ ಅವನನ್ನು ಹಿಂಬಾಲಿಸಿದಳು. ನನ್ನ ಗಂಡನು ಎಲ್ಲಿರುತ್ತಾನೆ ಅಲ್ಲಿ ನಾನಿರಬೇಕಾದುದು ಧರ್ಮ ಎಂದುಕೊಂಡು ಯಮ ಧರ್ಮರಾಯನ ಮನವನ್ನು ಗೆದ್ದಳು ಸಜ್ಜನರಾದವರು ಎಂದೆಂದೂ ಧರ್ಮಮಾರ್ಗದಲ್ಲಿ ನಡೆಯುತ್ತಾರೆ ಎಂತಹ ಕಷ್ಟ ಬಂದರೂ ಧರ್ಮವನ್ನು ಬಿಡುವುದಿಲ್ಲ ಪ್ರತಿ ಉಪಕಾರವನ್ನು ಬಯಸದೆ ಉಪಕಾರ ಮಾಡುತ್ತಾರೆ ಎಂದಳು.ಸಾವಿತ್ರಿಯ ಮಾತುಗಳನ್ನು ಕೇಳಿ ಅವಳ ಧೈರ್ಯ, ಸದ್ಗುಣಗಳನ್ನು ಮೆಚ್ಚಿ ಯಮಧರ್ಮರಾಯನು ಸತ್ಯವಾನನನ್ನು ಬದುಕಿಸಿ ಕೊಡುತ್ತಾನೆ.ಇಂದಿನ ಕಲಿಯುಗದಲ್ಲಿ ಸಾವಿತ್ರಿಯ ಧೈರ್ಯ ಪ್ರಾಮಾಣಿಕತೆಯನ್ನು ನಾವು ಹೊಂದಿಲ್ಲವಾದರೂ ಜೀವಿತ ಅವಧಿಯಲ್ಲಿ ಸ್ವಾರ್ಥಿಗಳಾಗದೆ ಧರ್ಮಮಾರ್ಗದಲ್ಲಿ ನಡೆಯುವಂತಾಗಬೇಕು.

ಲೋಕದ ಜನರು ಸ್ಮರಿಸುವಂತಹ ಸತ್ಕಾರ್ಯವನ್ನು ಪೂರೈಸಿ ಸಾವು ಬಂದಾಗ ತಬ್ಬಿಕೊಳ್ಳುತ್ತ ಸಾರ್ಥಕತೆಯಿಂದ ಹೊರಡಬೇಕು. ಜೀವಿತ ಅವಧಿಯಲ್ಲಿ ಹಣ ಗಳಿಸುವುದೊಂದೇ‌‌ ಕಾರ್ಯವಲ್ಲದೆ ಪರೋಪಕಾರದಂತಹ ಒಳ್ಳೆಯ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ. ಇದರಿಂದ ಸಾವಿನ ಭೀತಿ ಇಲ್ಲದೆ ನಮ್ಮ ಜೀವನವು ಪರಿಪೂರ್ಣತೆ ಹೊಂದಿದೆ ಎಂಬ ತೃಪ್ತಿಯಿಂದ ಲೋಕವನ್ನು ತೊರೆಯಬಹುದು
ಇದೆ ಜೀವನ ಸಾಕ್ಷಾತ್ಕಾರ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.