ವ್ಯಕ್ತಿ ಪರಿಚಯಸಾಹಿತ್ಯ

ಸಾಹಿತ್ಯರಂಗಕ್ಕೆ ರಂಗು ತಂದವರು… ಹಿರಿಯ ಕವಿ ಡಾ. ದೊಡ್ಡರಂಗೇಗೌಡರು

AARYAMITRA G S-ಜಿ.ಎಸ್. ಆರ್ಯಮಿತ್ರ, ಸಾಗರ ಮೊ:೯೪೪೮೯೭೧೨೪೮ 

[email protected]

ಬೆಂಗಳೂರಿನ ಮೆಜೆಸ್ಟಿಕ್ ಒಂದು ಮಾಯಾಲೋಕ. ನಿಧಾನವಾಗಿ ಕಣ್ಣು ಹಾಯಿಸುತ್ತಾ ಸಾಗಿದರೆ ತರಹೇವಾರಿ ವಸ್ತುಗಳ ಜೊತೆ ಪರಿಚಿತ-ಅಪರಿಚಿತ ಮುಖಗಳ ದರ್ಶನವೂ ಆಗುತ್ತದೆ.

ದಿನಾಂಕ ೨೪-೧೨-೨೦೧೨ರಂದು ಕಾರ್‍ಯನಿಮಿತ್ತ ಮೆಜೆಸ್ಟಿಕ್‌ನಲ್ಲಿ ಹೋಗುತ್ತಿದ್ದಾಗ ಒಬ್ಬ ವ್ಯಕ್ತಿ ನೋಡಿ ಥಟ್ಟನೆ ನಿಂತೆ. ಅಣ್ಣಮ್ಮನ ದೇವಸ್ಥಾನದ ಹತ್ತಿರ ನಿಧಾನವಾಗಿ ಹೋಗುತ್ತಿದ್ದರು. ಅವರು ಹೌದೋ ಅಲ್ಲವೋ ಅನುಮಾನ. ಹತ್ತಿರದಿಂದ ನೋಡಿದಾಗ ನನ್ನ ಊಹೆ ನಿಜವಾಯಿತು. ಸ್ವಲ್ಪ ಅಳುಕಿನಿಂದಲೇ ನಮಸ್ಕಾರ ಸಾರ್ ಎಂದೆ. ಅವರಿಗೂ ನಾನು ಅಪರಿಚಿತ. ಪ್ರತಿ ನಮಸ್ಕರಿಸಿದ ಅವರಿಗೆ ನನ್ನ ಪರಿಚಯ ಹೇಳಿಕೊಂಡೆ. ಅವರಿಗೆ ಬಹಳ ಖುಷಿ ಆಯಿತು. ತಮ್ಮ ಕಾಡು ಕಣಿವೆ ಕಡಲು ಕೃತಿಯನ್ನು ನನ್ನ ಕೈಗಿತ್ತರು.

ಸರ್, ನನಗೆ ನಿಮ್ಮ ಭೇಟಿ ಬಹಳ ಸಂತೋಷ ಕೊಟ್ಟಿದೆ. ನನಗೆ ಸಾಹಿತಿಗಳನ್ನು ಭೇಟಿ ಮಾಡುವುದು, ಹಸ್ತಾಕ್ಷರ ಪಡೆಯುವುದು ಹವ್ಯಾಸ. ಹಸ್ತಾಕ್ಷರದ ಪುಸ್ತಕ ಬಿಟ್ಟು ಬಂದಿದ್ದೇನೆ. ನಿಮ್ಮ ಪುಸ್ತಕದಲ್ಲಿಯೇ ನಿಮ್ಮ ಹಸ್ತಾಕ್ಷರ ಬರೆದುಕೊಡಿ ಎಂದು ವಿನಮ್ರವಾಗಿ ವಿನಂತಿಸಿದೆ. ಖುಷಿಯಿಂದ ಹಸ್ತಾಕ್ಷರ ಹಾಕಿಕೊಟ್ಟು ಒಳ್ಳೆ ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗೆಂದು ಬೆನ್ನು ಚಪ್ಪರಿಸಿದರು.

ಹೌದು! ಅವರೇ ದೊಡ್ಡರಂಗೇಗೌಡರು. ಹೆಸರಿಗೆ ತಕ್ಕಂತೆ ಸಾಹಿತ್ಯರಂಗದಲ್ಲಿಯೂ ರಂಗೇಗೌಡರು ರಂಗು ತಂದವರು. ಅವರ ಸಾಧನೆಯ ಮಜಲುಗಳು ಚಿತ್ರರಂಗ, ಸಾಹಿತ್ಯದಲ್ಲಿ ಮೇರುಶಿಖರವಾಗಿವೆ.

DR. DODDARANGE GOWDA WRITER (1)ಬಾಲ್ಯ, ಶಿಕ್ಷಣ, ವೃತ್ತಿ

ದಿನಾಂಕ ೭-೨-೧೯೪೬ರಲ್ಲಿ ತುಮಕೂರು ಜಿಲ್ಲೆಯ ಕುರುಬರಹಳ್ಳಿಯ ರಂಗೇಗೌಡ-ಅಕ್ಕಮ್ಮ ದಂಪತಿಗಳ ಮಗನಾಗಿ ಜನಿಸಿದರು. ಪ್ರಾಥಮಿಕ ಶಾಲೆ ಹಾಗೂ ಪ್ರೌಢ ವಿದ್ಯಾಭ್ಯಾಸವನ್ನು ಅವರ ಹುಟ್ಟೂರಿನಲ್ಲಿ ಮುಗಿಸಿದರು. ಮುಂದೆ ೧೯೭೦ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಆನರ್‍ಸ್ ಪದವಿ ಪಡೆದ ನಂತರ ೧೯೭೨ರಲ್ಲಿ ಜಾನಪದ ಅಧ್ಯಯನದಲ್ಲಿ ಎಂ.ಎ. ಪದವಿ ಗಳಿಸಿದರು.

೧೯೭೨ರಿಂದ ೮೦ರವರೆಗೆ ಎಸ್‌ಎಲ್‌ಎನ್ ಕಲೆ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ೧೯೮೦ರಿಂದ ೮೫ರವರೆಗೆ ಕನ್ನಡ ಪ್ರವಾಚಕರಾಗಿ, ೮೫ರಿಂದ ೯೦ರವರೆಗೆ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ೯೦ರಿಂದ ೯೯ರವರೆಗೆ ಪ್ರಾಧ್ಯಾಪಕರಾಗಿ, ೯೯ರಿಂದ ೨೦೦೪ರವರೆಗೆ ಕಾಲೇಜಿನ ಪ್ರಾಂಶುಪಾಲರಾಗಿ, ಮುಂದೆ ಶೇಷಾದ್ರಿಪುರಂ ಕಾಲೇಜನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾದರು.

ಬಂಗಾರದ ದಿನ ಹಾಡಿನಿಂದಾಯಿತು ಚಿತ್ರರಂಗ ಪ್ರವೇಶ

೧೯೭೭ರಲ್ಲಿ ತೆರೆಕಂಡ ಮಾಗಿಯ ಕನಸು ಚಿತ್ರದ ಬಂದಿದೆ ಬದುಕಿನ ಬಂಗಾರದ ದಿನ ಎಂಬ ಹಾಡನ್ನು ಬರೆದು ತಮ್ಮ ಬದುಕನ್ನು ಹೊಸ ದಿಕ್ಕಿನತ್ತ ಕೊಂಡೊಯ್ದರು. ಮುಂದೆ ೧೯೭೮ರಲ್ಲಿ ತೆರೆ ಕಂಡ ಪುಟ್ಟಣ್ಣನವರ ಪಡುವಾರಹಳ್ಳಿ ಪಾಂಡವರು ಚಿತ್ರದ ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೇ ಮರೆಯಲಿ ಹಾಡು ಅಪಾರ ಜನಪ್ರಿಯ ಗೀತೆಯಾಗಿ ಜನಮನ್ನಣೆ ಪಡೆಯಿತು.

ಈವರೆಗೆ ಸುಮಾರು ೬೦೦ ಚಿತ್ರಗೀತೆ ಬರೆದಿರುವ ಗೌಡರ ಗೀತೆಗಳು ಬಹುತೇಕ ಜನಮನ ಸೂರೆಗೊಂಡಿವೆ. ಇದಲ್ಲದೆ ಸುಮಾರು ೧೦ ಚಿತ್ರಗಳಿಗೆ ಸಂಭಾಷಣೆಯನ್ನೂ ನೀಡಿದ್ದಾರೆ.

ಸಾಹಿತ್ಯರಂಗದಲ್ಲಿ. .

ಸಾಹಿತ್ಯರಂಗದಲ್ಲಿ ಒಟ್ಟು ೬೦೦ಕ್ಕೂ ಹೆಚ್ಚಿನ ಕೃತಿ ರಚಿಸಿದ್ದು, ಸಾಹಿತ್ಯರಂಗದಲ್ಲೂ ಇವರ ಹೆಸರು, ಹೆಜ್ಜೆ ಮೂಡಿದೆ. ಇವುಗಳಲ್ಲಿ ಭಾವಗೀತೆಗಳು, ಕವನಸಂಕಲನ, ಭಕ್ತಿಗೀತೆಗಳು, ಪ್ರಗಾಥಗಳು, ಮುಕ್ತಕಗಳು, ಗದ್ಯಕೃತಿಗಳು, ವಿಮರ್ಶೆಗಳು, ಸಂಭಾವನಾ ಗ್ರಂಥಗಳು ಸೇರಿವೆ.

ಧ್ವನಿಸುರುಳಿಗಳು

ಸುಮಾರು ೧೫ಕ್ಕೂ ಹೆಚ್ಚಿನ ಧ್ವನಿಸುರುಳಿಗಳಿಗೆ ಸಾಹಿತ್ಯ ಒದಗಿಸಿದ್ದಾರೆ, ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಸಿರಿ-ಸಂವರ್ಧನ ಧ್ವನಿ ಸುರುಳಿಗೆ ಸಾಹಿತ್ಯದ ಜೊತೆ ಸಂಗೀತ ನಿರ್ದೇಶನ ಕೂಡಾ ಮಾಡಿದ್ದಾರೆ. ಅಷ್ಟೇ ಅಲ್ಲದೆ ಏಳು ಧ್ವನಿಸುರುಳಿಗಳಿಗೆ ಹಾಡಿದ್ದಾರೆ.

DR. DODDARANGE GOWDA WRITER (3)ಧಾರಾವಾಹಿಗಳು

ಅನೇಕ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ ರಚಿಸಿರುವರಲ್ಲದೇ ಖೆಡ್ಡಾ, ಮನೆತನ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಅತ್ಯುತ್ತಮ ಗೀತೆಗೆ ಪ್ರಶಸ್ತಿ

೧೯೮೨ರಲ್ಲಿ ತೆರೆ ಕಂಡ ಆಲೆಮನೆ ಚಿತ್ರದ ನಮ್ಮೂರ ಮಂದಾರ ಹೂವೇ ಹಾಡಿಗೆ ಮೊದಲಬಾರಿ, ೧೯೯೨ರಲ್ಲಿ ತೆರೆ ಕಂಡ ಗಣೇಶನ ಮದುವೆ ಚಿತ್ರದ ಅನುರಾಗ ತೋಟದಲ್ಲಿ ಹೂವಂತೆ ಹಾಡಿಗೆ ಎರಡನೇ ಬಾರಿ, ೧೯೯೫ರಲ್ಲಿ ತೆರೆ ಕಂಡ ಕಾವ್ಯ ಚಿತ್ರದ ವಂದನೆ ವಂದನೆ ಹಾಡಿಗೆ ಮೂರನೇ ಬಾರಿ, ೧೯೯೭ರಲ್ಲಿ ತೆರೆ ಕಂಡ ಜನುಮದ ಜೋಡಿ ಚಿತ್ರದ ಕೋಲುಮಂಡೆ ಜಂಗಮ ದೇವರು ಹಾಡಿಗೆ ನಾಲ್ಕನೇ ಬಾರಿ ಚಿತ್ರಗೀತೆಗಳಿಗೆ ರಾಜ್ಯಪ್ರಶಸ್ತಿ ಪಡೆದಿದ್ದಾರೆ.

ಹಾಡಿನ ವೈಶಿಷ್ಟ್ಯಗಳು

ಇವರ ಹಾಡಿನ ವೈಶಿಷ್ಟ್ಯಗಳು ಆಕರ್ಷಣೀಯ. ಡಿಂಗುಡಾಂಗು ಸಾಂಗು ಬರೆಯದೇ ಮನುಷ್ಯನ ಭಾವಗಳ ನೈಜತೆಯನ್ನು ಅಭಿವ್ಯಕ್ತಿಸುವುದು ಇವರ ತಂತ್ರಗಾರಿಕೆ.. ಗ್ರಾಮೀಣ ಸೊಗಡಿನ, ಗ್ರಾಮ್ಯ ಭಾಷೆಯ ಹಾಡುಗಳು ಒಂದಕ್ಕಿಂತ ಒಂದು ಅರ್ಥಗರ್ಭಿತವಾಗಿವೆ. ದ್ವಂದ್ವಾರ್ಥರಹಿತವಾಗಿದ್ದು ಬಹಳ ಕಾಲ ಜನರ ಮನಸ್ಸಿನಲ್ಲಿ ಉಳಿಯುವಂತಹವುಗಳಾಗಿವೆ.

ಸಾಧನೆಗೆ ಸಂದ ಪುರಸ್ಕಾರಗಳು

ಅಂತರಾಷ್ಟ್ರೀಯ ಮಟ್ಟದಲ್ಲಿ
೧ ಅಮೆರಿಕನ್ ಬಯೋಗ್ರಾಫಿಕಲ್ ಸೆಂಟರ್‌ನ ೧೯೯೨-೧೯೯೩ನೇ ಸಾಲಿನ ಜನಪ್ರಿಯ ವಿಶ್ವಮಾನ್ಯ ಐದುನೂರು ಗಣ್ಯರಲ್ಲಿ ಒಬ್ಬರು.
೨ ಕೇಂಬ್ರಿಡ್ಜ್‌ನಿಂದ ಒeಟಿ oಜಿ ಂಛಿhievemeಟಿಣ ಪುರಸ್ಕಾರ ಪಡೆದಿದ್ದಾರೆ.
೨ ಅಮೆರಿಕನ್ ಬಯೋಗ್ರಾಫಿಕಲ್ ಇನ್ಸ್‌ಸ್ಟಿಟ್ಯೂಟ್ ಸಂಸ್ಥೆಯವರು ೧೯೯೭ರಿಂದ ಭಾರತೀಯ ಸಲಹೆಗಾರರನ್ನಾಗಿ ನೇಮಿಸಿದೆ.
೩ ಪ್ಲಿಂಟ್ (ಯು.ಎಸ್.ಎ.) ಮಿಚಿಗನ್ ರಾಜ್ಯದಿಂದ ಖeಛಿogಟಿiಣioಟಿ ಂತಿಚಿಡಿಜ.
ರಾಷ್ಟ್ರಮಟ್ಟದಲ್ಲಿ
೪ ೧೯೯೭ರಲ್ಲಿ ಕೇಂದ್ರ ಸರ್ಕಾರ ಸರ್ವಭಾಷಾ ಕವಿಗೋಷ್ಠಿಗೆ ಪಾಲ್ಗೊಳ್ಳಲು ಅವಕಾಶ ನೀಡಿತು.
ರಾಜ್ಯಮಟ್ಟದಲ್ಲಿ
೫ ೧೯೭೨ರಲ್ಲಿ ಕಣ್ಣು ನಾಲಿಗೆ ಕಡಲು ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ
೬ ಪ್ರೀತಿ ಪ್ರಗಾಥ ಕೃತಿಗೆ ೧೯೯೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವರ್ಷದ ಶ್ರೇಷ್ಠ ಕಾವ್ಯಕೃತಿ ಎಂದು ಪರಿಗಣನೆ
೭ ೧೯೯೭ರಲ್ಲಿ ಆರ್ಯಭಟ ಪ್ರಶಸ್ತಿ.
೮ ರತ್ನಾಕರವರ್ಣಿ ಪ್ರಶಸ್ತಿ, ಕವಿ ಮುದ್ದಣ ಕಾವ್ಯ ಪುರಸ್ಕಾರಗಳು
೯ ೧೯೯೯ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ
೧೦ ೨೦೦೨ರಲ್ಲಿ ಶ್ರವಣಬೆಳಗೊಳದ ವರ್ಧಮಾನ ಮಹಾವೀರ ಪ್ರಶಸ್ತಿ
೧೧ ೨೦೧೪ರಲ್ಲಿ ಚನ್ನರೇಣುಕ ಬಸವ ಪ್ರಶಸ್ತಿ
ಇವರ ಹೆಗಲೇರಿದ ಜವಾಬ್ದಾರಿಗಳು
೧೨ ಸರ್ವಭಾಷಾ ಕವಿಗೋಷ್ಠಿಯಲ್ಲಿ ಕನ್ನಡವನ್ನು ೧೯೭೭ರಲ್ಲಿ ಪ್ರತಿನಿಧಿಸಿರುವುದು.
೧೩ ೧೯೮೫ರಲ್ಲಿ ಕುವೆಂಪುರವರ ಅಧ್ಯಕ್ಷತೆಯಲ್ಲಿ ಜರುಗಿದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಯುವಜನರ ಪ್ರತಿನಿಧಿಯಾಗಿ ಪಾಲ್ಗೊಳ್ಳುವಿಕೆ.
೧೪ ಕನ್ನಡ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ತೀರ್ಪುಗಾರರಾಗಿ ೧೯೯೯ರಲ್ಲಿ ಆಯ್ಕೆ.

ಪಠ್ಯವಾದ ಚಿತ್ರಗೀತೆ

ಮಹಾರಾಷ್ಟ್ರ ಸರಕಾರದ ಏಳನೇ ಇಯತ್ತೆಯ ಕನ್ನಡ ಪುಸ್ತಕದಲ್ಲಿ ಎರಡು ಅವಧಿಗೆ ಇವರು ಬರೆದ ತೇರಾನೇರಿ ಅಂಬರದಾಗೆ ಹಾಡು ಪಠ್ಯವಾಗಿ ಆಯ್ಕೆ ಆಗಿ ಪಠ್ಯವಾದ ಏಕೈಕ ಚಿತ್ರಗೀತೆ ಎಂಬ ಕೀರ್ತಿಗೆ ಭಾಜನವಾಗಿದೆ.

ಸಂಭಾವನಾ ಗ್ರಂಥ

ಸುಮಾರು ೭೪ ಲೇಖನಗಳನ್ನು ಒಳಗೊಂಡ ಹಿತೈಷಿಗಳಿಂದ, ಅಭಿಮಾನಿಗಳಿಂದ ಹಾಗೂ ವಿದ್ಯಾರ್ಥಿಗಳಿಂದ ಸಮಾಜಮುಖಿ ಎಂಬ ಸಂಭಾವನಾ ಗ್ರಂಥ ಬಿಡುಗಡೆ
ದೊಡ್ಡರಂಗೇಗೌಡ ವಿರಚಿತ ಜನಪ್ರಿಯ ಹತ್ತು ಚಿತ್ರಗೀತೆಗಳು
೧) ನಿನ್ನ ರೂಪು ಎದೆಯ ಕಲಕಿ ಕಣ್ಣು ಮಿಂದಾಗ [ಚಿತ್ರ: ಪರಸಂಗದ ಗೆಂಡೆತಿಮ್ಮ] ೨) ಒಲುಮೆ ಸಿರಿಯಾ ಕಂಡು ಬಯಕೆ ಸಿರಿಯ ಉಂಡು [ಚಿತ್ರ: ಬಂಗಾರದ ಜಿಂಕೆ] ೩) ಒಲುಮೆ ಪೂಜೆಗೆಂದೇ ಕರೆಯಾ ಕೇಳಿ ಬಂದೆ [ಚಿತ್ರ: ಅನುಪಮ] ೪) ನಲಿವಿನ ಬಾಳಿಗೆ ಒಲುಮೆಯೆ ಕಾಣಿಕೆ [ಚಿತ್ರ: ಬಾಡದ ಹೂ] ೫) ನೀಲಿಯ ಬಾನಿಂದ ತಾರೆಯ ಊರಿಂದ ತೇಲುತ ಬಂದನು [ಚಿತ್ರ: ಟೋನಿ] ೬) ಮಲೆನಾಡಿನ ಮೂಲೆನಾಗೆ ಇತ್ತೊಂದು ಸೋಮನಹಳ್ಳಿ [ಚಿತ್ರ: ಸುವರ್ಣಸೇತುವೆ] ೭) ಓಂಕಾರ ಗಣಪತಿಯೇ ಕೋಟಿ ವಂದನೆ [ಚಿತ್ರ: ಮರ್ಯಾದೆ ಮಹಲ್] ೮) ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ [ಚಿತ್ರ: ಅಶ್ವಮೇಧ] ೯) ನಾನೊಂದು ತೀರ ನೀನೊಂದು ತೀರ [ಚಿತ್ರ: ಅರುಣರಾಗ] ೧೦) ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ [ಚಿತ್ರ: ನಮ್ಮೂರ ಮಂದಾರ ಹೂವೇ]

ಸುಖೀ ಕುಟುಂಬ

ಪತ್ನಿ ದಿ. ಡಾ. ರಾಜೇಶ್ವರಿ-ಬರಹಗಾರ್ತಿ ಸಂಶೋಧಕಿ
ಮಗ ಭರತ್-ಕನ್ನಡ ಅಧ್ಯಾಪಕರು, ತಂದೆಯ ಹಾಗೆ ಕವಿ. ಆರು ಚಿತ್ರಕ್ಕೆ ಹಾಡು ಬರೆದಿದ್ದಾರೆ.
ಮಗಳು ಸ್ಮಿತಾ-ಅಧ್ಯಾಪಕಿ, ಕಾವ್ಯರಚನೆಯಲ್ಲಿ ಆಸಕ್ತಿ
ಸೊಸೆ ಪ್ರತಿಮಾ-ವಿಜ್ಞಾನಿ
ಪ್ರಸ್ತುತ ವಿಧಾನಪರಿಷತ್ ಸದಸ್ಯರಾಗಿದ್ದು ಹೊಸದಿಗಂತ ಕನ್ನಡ ದಿನಪತ್ರಿಕೆಯ ಅಂಕಣಕಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಯುತರು ನೂರ್‍ಕಾಲ ಬಾಳಿ ಬದುಕಬೇಕು. ಚಿತ್ರರಂಗ ಇವರ ಬಳಿ ಹಾಡು ಬರೆಸದೇ ಕೆಲ ವರ್ಷಗಳಾದ್ದರಿಂದ ಹಾಡನ್ನು ಬರೆಸಿ ಕನ್ನಡ ಸರಸ್ವತಿ ಸೇವೆ ಮಾಡುವಂತೆ ಆಗಲಿ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿಪತಾಕೆ ಸದಾ ಹಾರುತ್ತಿರಲಿ ಎಂದು ಆಶಿಸೋಣ.

-ಜಿ.ಎಸ್. ಆರ್ಯಮಿತ್ರ, ಸಾಗರ ಮೊ:೯೪೪೮೯೭೧೨೪೮ 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.