ಅಧ್ಯಯನಸಾಹಿತ್ಯ

“ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ,ಮೈಸೂರಿನ ಅರಸರಿಗೆ ಮಕ್ಕಳಾಗದೇ ಹೋಗಲಿ”

ಅಂಬಾವಿಲಾಸದ ಅಂಗಳದಿಂದ…|ಭಾಗ-3

-ರಾಮಗೋಪಾಲ ಚಕ್ರವರ್ತಿ

ಈ ಶಾಪದ ಬಗ್ಗೆ ತಿಳಿದುಕೊಂಡ ರಾಜಒಡೆಯರು ತುಂಬಾನೊಂದುಕೊಂಡರು. ಆ ಆಭರಣಗಳು ದೇವಸ್ಥಾನದಸಲುವಾಗಿ ಕೇಳಿದ್ದೇ ವಿನಹ ತಮ್ಮ ಸ್ವಂತಕ್ಕಲ್ಲ ಎಂಬುದನ್ನು ಅಲಮೇಲಮ್ಮನವರಿಗೆ ಹೇಳಲಾಗದೇ ಹೋಯಿತು. ಇದೇ ದುಃಖದಲ್ಲಿ ರಾಜಒಡೆಯರು ಅಲಮೇಲಮ್ಮನವರಮೂರ್ತಿರೂಪವನ್ನು ಬಂಗಾರದಲ್ಲಿ ಮಾಡಿಸಿದರು. ಅಷ್ಟೇ ಅಲ್ಲದೆ ಆ ವಿಗ್ರಹವನ್ನು ಮೈಸೂರಿನ ಅರಮನೆಯಲ್ಲಿ ಪೂಜೆ ನಡೆಯುವಂತೆ ನೋಡಿಕೊಂಡರು.ಅಲಮೇಲಮ್ಮನವರ ತಲೆಗೂದಲನ್ನು ಒಂದು ಪೆಟ್ಟಿಗೆಯಲ್ಲಿ ಜೋಪಾನವಾಗಿರಿಸಿದರು.

ಇಂದಿಗೂ ಮೈಸೂರಿನ ಅರಸರು ಅಲಮೇಲಮ್ಮನವರ ವಿಗ್ರಹಕ್ಕೆ ಪೂಜಿಸುವ ವಾಡಿಕೆ ಇದೆ. ಅದೇ ಮೂಗಿನ ನತ್ತು ಇಂದಿಗೂ ರಂಗನಾಯಕಿ ವಿಗ್ರಹ ಹಾಗು ಅಲಮೇಲಮ್ಮನವರ ವಿಗ್ರಹದ ಮೇಲೆ ಕಾಣಬಹುದು. ಪ್ರತಿ ದಸರಾ ಹಬ್ಬದ ಸಮಯದಲ್ಲೂ ನವರಾತ್ರಿಯ ಕೊನೆಯ ದಿನ ಅಲಮೇಲಮ್ಮನವರ ಪೂಜೆಯೊಂದಿಗೆ ಮುಕ್ತಾಯವಾಗುತ್ತದೆ. ವಿಜಯದಶಮಿಯ ಕಂಕಣವನ್ನು ಈ ಪೂಜೆಯೊಂದಿಗೆ ವಿಸರ್ಜಿಸುವುದು ವಾಡಿಕೆಯಾಗಿದೆ.

ವಿಪರ್ಯಾಸವೆಂದರೆ ಇಂದಿಗೂ ಅಲಮೇಲಮ್ಮನವರ ಮನೆತನದವರು ಮೈಸೂರು ಅರಮನೆಯ ಒಳಗಿರುವ ಆ ದೇಗುಲವನ್ನು ಸಂರಕ್ಷಿಸುತ್ತಾ ಬಂದಿರುವುದು. ಮತ್ತೊಂದು ಸೋಜಿಗದ ವಿಷಯವೆಂದರೆ, ಈಮನೆತನದವರಿಗೂ ಆ ಶಾಪದ ಛಾಯೆ ತಟ್ಟಿರುವುದು. ಇವರಿಗೂ ಸ್ವಂತ ಮಕ್ಕಳ ಭಾಗ್ಯವಿಲ್ಲ.

ಶ್ರೀರಂಗಪಟ್ಟಣದಿಂದ ರಾಜಧಾನಿಯನ್ನು ಮೈಸೂರಿಗೆ ವರ್ಗಾಯಿಸಿದ ನಂತರ ೧೬೧೦ರಲ್ಲಿ ರಾಜ ಒಡೆಯರು ದಸರಾ ಉತ್ಸವಗಳನ್ನು ಪ್ರಾರಂಭಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನವರಾತ್ರಿ ಪ್ರಾರಂಭದ ಹಿಂದಿನ ದಿನ ರಾತ್ರಿರಾಜ ಒಡೆಯರ ಏಕೈಕ ಪುತ್ರ ನರಸಿಂಹರಾಜ ಒಡೆಯರು ನಿಧನರಾದರು. ಮೈಸೂರಿನಲ್ಲೆಲ್ಲಾ ನಾಡಬಹಬ್ಬದ ಸ್ವಾಗತಕ್ಕೆ ಸಿದ್ದರಾಗಿದ್ದರೆ ಅರಮನೆಯಲ್ಲಿ ಸೂತಕದ ವಾತಾವರಣ. ಶಾಸ್ತ್ರೋಕ್ತ ರೀತ್ಯಾ ವಿಚಾರಿಸಿದ ರಾಜ ಒಡೆಯರು, ನಾಡಹಬ್ಬಕ್ಕೆ ಯಾವುದೇ ಅಡೆತಡೆ ಇರಬಾರದು, ಒಂದು ವೇಳೆ ರಾಜವಂಶದವರು ನಿಧನರಾದರೂ ಸಹ ದಸರಾ ನಾಡಹಬ್ಬನಿಲ್ಲದೆ ನಿರಂತರವಾಗಿ ನಡೆಯಬೇಕೆಂದು ಷರಾ ಹೊರಡಿಸಿದರು.

ರಾಜ ಒಡೆಯರು ಪರಮ ವೈಷ್ಣವ ಭಕ್ತರಾಗಿದ್ದರು. ಮೇಲುಕೋಟೆಯಲ್ಲಿ ಇವರು ಸಮರ್ಪಿಸಿದ ಕಿರೀಟದಿಂದ,ಇಂದಿಗೂ ನಡೆದು ಬರುತ್ತಿರುವ ರಾಜಮುಡಿ ಉತ್ಸವ ಇದಕ್ಕೆ ಸಾಕ್ಷಿ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಈ ಕಿರೀಟವು ರಾಜಮನೆತನದವರಿಂದ ಕಸಿಯಲ್ಪಟ್ಟು ಸರ್ಕಾರದ ವಶವಾಯಿತು. ಇತಿಹಾಸದ ಪ್ರಕಾರವಾಗಿ ೧೬೧೭ರ ಜೂನ್ ೨೦ರಂದು ರಾಜ ಒಡೆಯರು ಮೇಲುಕೋಟೆ ಚೆಲುವನಾರಾಯಣನ ಗರ್ಭಗೃಹಪ್ರವೇಶಿಸಿ ಅಲ್ಲೇ ಐಕ್ಯರಾದರೆಂದು ತಿಳಿದುಬರುತ್ತದೆ.

ಇಂದಿಗೂ ಈ ದೇವಾಲಯದಲ್ಲಿ ರಾಜರ ಭಕ್ತಿ ವಿಗ್ರಹನೋಡಬಹುದಾಗಿದೆ. ರಾಜ ಒಡೆಯರ ಮತ್ತೊಂದು ಭಕ್ತಿವಿಗ್ರಹ ಮೈಸೂರಿನ ಅರಮನೆಯ ಆವರಣದ ಒಳಗಿರುವ ಲಕ್ಷ್ಮೀನಾರಾಯಣಸ್ವಾಮಿ ಸನ್ನಿಧಿಯಲ್ಲಿ ಕಾಣಬಹುದು.

ತಿರುಮಕೂಡಲು ನರಸೀಪುರದ ಬಳಿ ಕಾವೇರಿ ನದಿಯು ತಿರುವು ತೆಗೆದುಕೊಳ್ಳುವ ಜಾಗದಲ್ಲಿ ಮಾಲಂಗಿ ಮತ್ತುತಲಕಾಡು ಎರಡು ಗ್ರಾಮಗಳು. ತಲಕಾಡು ಪ್ರದೇಶವು ಸಂಪೂರ್ಣವಾಗಿ ಮರಳಿನಿಂದ ಆವೃತಗೊಂಡು ಪ್ರತಿ೧೨ವರ್ಷಗಳಿಗೆ ಒಮ್ಮೆ ದೇವಾಲಯವನ್ನು ಉತ್ಖನನಮಾಡಲಾಗುತ್ತೆ. ಮತ್ತೊಂದು ಕಡೆ ಮಾಲಂಗಿಯಲ್ಲಿ ಮಡುಸೃಷ್ಠಿಯಾಗಿ ಕಾವೇರಿಯ ಆಳವಾದ ಪ್ರದೇಶವಾಗಿದೆ. ಅಲಮೇಲಮ್ಮನವರ ಶಾಪದ ಅನಂತರವೇ ಪ್ರಕೃತಿಯ ಈ ಸೋಜಿಗ ಉಂಟಾಯಿತೇ? ಎಂಬುದು ಇಂದಿಗೂ ಯಕ್ಷಪ್ರಶ್ನೆ. ಆದರೆ ೧೬೧೦ರ ನಂತರ ಒಡೆಯರ ವಿಷಯದಲ್ಲ್ಲಿ ಹಾಕಿದ ಶಾಪಮಾತ್ರ ನಿಜವಾಗುತ್ತಾ ಬಂದಿದೆ.

೧೬೧೭ರಲ್ಲಿ ರಾಜ ಒಡೆಯರು ದೈವೈಕ್ಯವಾದ ನಂತರ೧೭೦೪ರ ಚಿಕ್ಕ ದೇವರಾಜ ಒಡೆಯರವರೆಗೆ ಯದುರಾಯರಸಂತತಿಯೇ ಆಳ್ವಿಕೆ ನಡೆಸುತ್ತಾ ಬಂದಿತು.ಆದರೆ ಯಾರೊಬ್ಬರಿಗೂ ಸ್ವಂತ ಮಕ್ಕಳಾಗಲೇ ಇಲ್ಲ. ಒಂದೇ ಒಂದು ಅತಿಶಯೋಕ್ತಿ ಎಂದರೆ ಚಿಕ್ಕದೇವರಾಜ ಒಡೆಯರಿಗೆ ಸಂತಾನ ಭಾಗ್ಯವಾಗಿದ್ದು. ಅವರೇ ಕಿವುಡು ಮೂಗರಾಗಿದ್ದ ಎರಡನೇ ಕಂಠೀರವ ನರಸರಾಜ ಒಡೆಯರು. ಇವರನ್ನು ಮೂಕರಸು ಎಂದೂ ಸಂಬೋಧಿಸುತ್ತಿದ್ದರು. ಇವರು ೧೭೧೪ರಿಂದ ೧೭೩೨ರವರೆಗೆ ಆಳ್ವಿಕೆ ನಡೆಸಿದರು. ಇವರೊಂದಿಗೆ ಯದುರಾಯರ ನೇರಸಂತತಿ ಮುಕ್ತಾಯವಾಯಿತು. ನಂತರ ಆಗಿದ್ದೆಲ್ಲಾ ಸಾಮಾಜಿಕ ಹೊಣೆ ಹೊತ್ತ ಮಹಾರಾಣಿಯರು ತೆಗೆದುಕೊಂಡ ದತ್ತು ಸ್ವೀಕಾರಗಳು. ಇದರಿಂದಾಗಿ ಮೈಸೂರು ಸಂಸ್ಥಾನದ ಪರಂಪರೆ ಉಳಿದುಕೊಂಡಿತು.

೧೭೬೨ರ ಸುಮಾರಿಗೆ ದಳವಾಯಿಗಳೇ ಸಾಮ್ರಾಜ್ಯದ ಮೇಲೆ ಹಕ್ಕನ್ನು ಸ್ಥಾಪಿಸುತ್ತಾ ಸಂಸ್ಥಾನವನ್ನು ಕಡೆಗಣಿಸಿದರು. ಇದರ ಪ್ರತಿಫಲವೇ ಹೈದರ್ ಅಲಿಯ ಬೆಳವಣಿಗೆ… ಮತ್ತು ಆಳ್ವಿಕೆ. ೧೭೩೨ ರಿಂದ ೧೭೯೬ ರವರೆಗೆ ಸುಮಾರು ಐದು ರಾಜರ ಆಳ್ವಿಕೆಯಿತ್ತು. ಈ ಅವಧಿಯಲ್ಲಿ ಒಂದು ಕ್ರಮಾಂಕ ವಿಧಾನವನ್ನು ನೋಡಬಹುದಿತ್ತು. ದತ್ತು ತೆಗೆದುಕೊಂಡರಾಜರಿಗೆ ಮಾತ್ರ ಸಂತಾನ ಪ್ರಾಪ್ತಿಯಾಗಿದ್ದು. ರಾಜರಾದನಂತರ ಸಂತಾನವಾಗುತ್ತಿರಲಿಲ್ಲ. ಹೈದರ್ ಮತ್ತು ಟಿಪ್ಪು ಇಬ್ಬರೂ ಒಡೆಯರು ಸಿಂಹಾಸನದಲ್ಲಿದ್ದಂತೆಯೇ ತಮ್ಮ ಆಧಿಪತ್ಯ ನಡೆಸುತ್ತಿದ್ದರು. ನಾಡಹಬ್ಬ ದಸರಾ ಕೂಡಾ ಅವಿರತವಾಗಿ ನಡೆಯುತ್ತಿತ್ತು. ಆರ್ಥರ್ ವೆಲ್ಲೆಸ್ಲಿಯ ನಾಯಕತ್ವದಲ್ಲಿ ನಡೆದ ಐತಿಹಾಸಿಕ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಸಾವಿನ ನಂತರ೧೭೯೯ರಲ್ಲಿ ಶ್ರೀರಂಗಪಟ್ಟಣವನ್ನು ಬ್ರಿಟಿಷರು ವಶಪಡಿಸಿಕೊಂಡರು.

ಇದಿಷ್ಟು ಮೈಸೂರಿನ ಸಂಕ್ಷಿಪ್ತ ಇತಿಹಾಸವಾಯಿತು. ಈಗ ಸಿಂಹಾಸನಾರೂಢರಾಗಿರುವ ಯದುವೀರ ಒಡೆಯರಹಾದಿ ಸುಗಮವಾಗಿಲ್ಲ. ಇವರಿಗೆ ಎದುರಾಗಿ ಹೈದರ್, ಟಿಪ್ಪು ಅಥವಾ ಬ್ರೀಟಿಷರಿಲ್ಲ. ಆದರೆ ಇವೆಲ್ಲಕ್ಕಿಂತ ಹೆಚ್ಚಾದ ಸರ್ಕಾರದ ವಿರುದ್ಧ, ನ್ಯಾಯಾಲಯದಲ್ಲಿ ತೀರ್ಪು ಸಿಗದೇ ಉಳಿದುಕೊಂಡಿರುವ ಅಸಂಖ್ಯಾತ ವಾಜ್ಯಗಳು. ತಮ್ಮಸಂಸ್ಥಾನದ ಆಸ್ಥಿಯನ್ನು ಉಳಿಸಿಕೊಳ್ಳುವುದು ಯಾವುದೇ ಯುದ್ಧಗಳಿಗೆ ಕಮ್ಮಿ ಇಲ್ಲ. ಇದಕ್ಕೆ ಅವರಿಗೆ ಈ ತಕ್ಷಣ ಬೇಕಾಗಿರುವುದು ಜನರ ಪ್ರೀತಿ ಮತ್ತು ವಿಶ್ವಾಸ. ಮೈಸೂರಿನ ಜನತೆ ಈಗಲೂ ಮೈಸೂರು ಸಂಸ್ಥಾನಕ್ಕೆ, ಅರಮನೆಗೆ,ರಾಜಪರಿವಾರಕ್ಕೆ ಹಿಂದಿನ ಅದೇ ಪ್ರೀತಿ ಇಟ್ಟುಕೊಂಡಿದ್ದಾರೆ. ಈಗಿನ ಮಹಾರಾಜರು ಮೈಸೂರಿನ ಗತವೈಭವವಾದ ಲಲಿತಕಲೆ, ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತಾರೆ ಎಂದು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ.

ಅಂಬಾವಿಲಾಸದ ಅಂಗಳದಲ್ಲಿ ಈಗ ದತ್ತು ಸ್ವೀಕಾರವಾಗಿದೆ… ಸಿಂಹಾಸನವನ್ನು ಮಹಾರಾಜರು ಅಲಂಕರಿಸಿದ್ದಾಗಿದೆ… ದಸರಾ ಉತ್ಸವಗಳು ಸಾಂಪ್ರದಾಯಿಕವಾಗಿ ನಡೆದದ್ದಾಗಿದೆ… ಮುಂದಿರುವುದು ಅವರ ಲಗ್ನ!!!ಎಲ್ಲಾ ಅಡೆತಡೆಗಳನ್ನು ಸಾವಧಾನವಾಗಿ ಎದುರಿಸಿಕೊಂಡು ಮುನ್ನಡೆಯುತ್ತಿರುವ ಮೈಸೂರು ಸಂಸ್ಥಾನಕ್ಕೆ ಆ ಚಾಮುಂಡೇಶ್ವರಿಯ ಆಶೀರ್ವಾದ ಹಾಗು ಮೈಸೂರು ಮಹಾಜನತೆಯ ಆದರ-ವಿಶ್ವಾಸ ಎಂದೆಂದೂ ಇರಲಿ ಎಂದು ಆಶಿಸೋಣ.

|| ರಾಜಾ ಪ್ರತ್ಯಕ್ಷದೇವತಾ|| || ವರ್ಧತಾಂ ಅಭಿವರ್ಧತಾಂ||

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.