ಅಧ್ಯಯನ

ಜನತಾ ಜೀವವೈವಿಧ್ಯ ದಾಖಲಾತಿ

ಮಾಹಿತಿ ಸಂಗ್ರಹ, ಚಿತ್ರಗಳು :- ಆನೆಗುಳಿ ಸುಬ್ಬರಾವ್, 

ದೂರವಾಣಿ:- ೦೮೧೮೩-೨೩೯೯೩೯/೯೪೮೦೦ ೨೩೯೩೯

ಜೀವವೈವಿಧ್ಯ
ಭೂಮಿಯ ಮೇಲ್ಮೈ ಪದರು, ನೀರು, ವಾತಾವರಣದ ಗಾಳಿಯನ್ನೊಳಗೊಂಡ ಜೀವಿಗಳಿರುವ ಭೂಭಾಗವನ್ನು ಜೀವಗೋಳ ಎನ್ನುತ್ತಾರೆ. ಭೂಮಿಯ ಜೀವ ಗೋಳದಲ್ಲಿರುವ ಕಣ್ಣಿಗೆ ಕಾಣದ ಅಸಂಖ್ಯಾತ ಸೂಕ್ಷ್ಮ ಜೀವಿಗಳು, ಕೀಟಗಳು, ಪ್ರಾಣಿಗಳು, ಪಕ್ಷಿಗಳು, ಜಲಚರಗಳು, ಉಭಯವಾಸಿಗಳು, ಸಸ್ಯ ಪ್ರಭೇಧಗಳು ಈ ಎಲ್ಲವನ್ನೂ ಒಟ್ಟಾರೆಯಾಗಿ ಜೀವವೈವಿಧ್ಯ ಎನ್ನುತ್ತಾರೆ.

ಭೂವೈಶಿಷ್ಟ್ಯ :- ಉಷ್ಣ ವಲಯ, ಶೀತ ವಲಯ, ಸಮಶೀತೋಷ್ಣ ವಲಯ ಹೀಗೆ ಗುರುತಿಸಬಹುದು. ಜೀವ ಗೋಳದಲ್ಲಿ ಉಷ್ಣ ವಲಯ ಪ್ರದೇಶ ಅತ್ಯಂತ ಶ್ರೀಮಂತ ಜೀವವೈವಿಧ್ಯ ತಾಣವಾಗಿದೆ. ಮಣ್ಣು, ನೀರು, ಗಾಳಿ ಇವುಗಳಿಂದ ನಿರ್ಧಾರವಾಗುವ ಜೈವಿಕ ಅಂಶಗಳಿಂದ ಭೂವೈಶಿಷ್ಟ್ಯ ರಚನೆಯಾಗುತ್ತದೆ. ನಿತ್ಯ ಹರಿದ್ವರ್ಣ ಕಾಡು, ಗುಡ್ಡ ಬೆಟ್ಟಗಳು, ಝರಿಗಳು, ನದಿಗಳು, ಜೀವಸಂಕುಲಗಳು ಜೀವ ಗೋಳದ ಜೈವಿಕ ಸ್ಥಿತಿಗಳಾಗಿವೆ. ಇದುವರೆಗೆ ಸುಮಾರು ೯ ಲಕ್ಷ ಬಗೆಯ ಸೂಕ್ಷ್ಮ ಜೀವಿಗಳು, ೩.೫ ಲಕ್ಷ ಬಗೆಯ ಸಸ್ಯ ವರ್ಗಗಳು, ೪.೫ ಲಕ್ಷ ಬಗೆಯ ಜೀವಸಂಕುಲಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಜೀವಿಗಳು ಹಲವು ರೀತಿಯಲ್ಲಿ ಪರಸ್ಪರ ಹೊಂದಿಕೊಂಡಿವೆ, ಅವಲಂಬಿಸಿವೆ.

ಜೀವವೈವಿಧ್ಯ ದಾಖಲಾತಿ ಏಕೆ?
ಆಧುನಿಕ ಜಗತ್ತಿನ ಅಭಿವೃದ್ಧಿಯ ನೇರ ಪರಿಣಾಮ ಜೀವವೈವಿಧ್ಯದ ಮೇಲಾಗಿದೆ. ಹಲವು ಕಾಣೆಯಾಗಿವೆ, ಕಾಣೆಯಾಗುತ್ತಿವೆ, ಅಪಹರಿಸಲ್ಪಡುತ್ತಿವೆ. ಪ್ರತಿಯೊಂದು ಜೈವಿಕ ಉತ್ಪನ್ನಕ್ಕೆ ಆರ್ಥಿಕ ಮಹತ್ವವಿದೆ. ಹಾಗಾಗಿ ಜೀವವೈವಿಧ್ಯದ ರಕ್ಷಣೆ ಸಾಮೂಹಿಕ ಹೊಣೆಗಾರಿಕೆಯಾಗಿದೆ.
ಪ್ರಪಂಚದ ಎಲ್ಲಾ ದೇಶಗಳ ವಿಜ್ಞಾನಿಗಳು ಎಚ್ಚರಿಸಿದ್ದರ ಪರಿಣಾಮ ಎರಡು ಪ್ರಮುಖ ಒಪ್ಪಂದಗಳನ್ನು ಎಲ್ಲಾ ದೇಶಗಳು ಅಂಗೀಕರಿಸಿವೆ.

೧. ಬೌದ್ಧಿಕ ಸಂಪನ್ಮೂಲ ಹಕ್ಕು :- ಹೊಸದಾಗಿ ಅವಿಷ್ಕಾರಮಾಡಿದ ಯಾವುದೇ ವಸ್ತು, ಔಷಧ, ಸೂಕ್ಷ್ಮ ಜೀವಿಗಳ ಮೇಲೆ ನಮಗೆ ಹಕ್ಕು ಲಭಿಸುತ್ತದೆ. ವ್ಯಾಪಾರೋತ್ಪಾದನೆಯಯಿಂದ ಬರುವ ಲಾಭದಲ್ಲಿ ಪಾಲು ಸಿಗುತ್ತದೆ. ಸ್ಥಳೀಯ ಜೈವಿಕ ಉತ್ಪನ್ನ, ಆಯುರ್ವೇದ, ಜನಪದ ವೈದ್ಯ, ಆವಿಷ್ಕಾರಗಳ ಹಕ್ಕು ಸ್ಥಾಪನೆಗೆ ಒಳಪಡುತ್ತದೆ. ಅಂತರಾಷ್ಟ್ರೀಯ ಒಪ್ಪಂದದ ಪ್ರಕಾರ ಪೇಟೆಂಟಿಗೆ ಒಳಪಡುವಂತಹುದು. ಪಾರಂಪರಿಕ ಜ್ಞಾನ, ತಂತ್ರ ಜ್ಞಾನ ಇವುಗಳ ದಾಖಲಾತಿಯು, ಹಕ್ಕು ಸ್ಥಾಪನೆಗೆ ಪ್ರಾಮುಖ್ಯತೆ ಪಡೆಯುತ್ತದೆ.
೨. ಜೀವವೈವಿಧ್ಯ ಒಪ್ಪಂದ :- ವಂಶ ವಾಹಕ ಸಂಪನ್ಮೂಲವು ಮೂಲ ದೇಶದ ಆಸ್ತಿ ಎಂದು ಪರಿಗಣಿಸುತ್ತದೆ. ಸ್ಥಳೀಯ ಪರಂಪರೆ, ಜನಪದ ವೈದ್ಯ ಪದ್ದತಿ, ತಂತ್ರ ಜ್ಞಾನ, ಬುಡಕಟ್ಟು ಜನಾಂಗದ ವಿಷೇಶ ಜ್ಞಾನ ಇವುಗಳೆಲ್ಲಾ ಜೀವೈವಿಧ್ಯ ಒಪ್ಪಂದ ಒಳಗೊಂಡಿದೆ. ಲಾಭಾಂಶದ ಪಾಲಿನೊಂದಿಗೆ ಜ್ಞಾನ ತಂತ್ರಜ್ಞಾನ ವರ್ಗಾವಣೆಗೆ ಅವಕಾಶವಿದೆ. ಹಕ್ಕು ಪ್ರತಿಪಾದಿಸಲು ಪ್ರಮುಖವಾಗಿ ದಾಖಲಾತಿಯ ಅವಶ್ಯಕತೆಇದೆ.

ಕನ್ನಡ ಟೈಮ್ಸ್-೨೦-೭-೨೦೧೩
**********

Related Articles

Back to top button
Close
Close

Adblock Detected

Please consider supporting us by disabling your ad blocker