ಅಧ್ಯಯನ

ತ್ರಿಭಾಷಾ ಸೂತ್ರವೇ ಉತ್ತಮ

shilpa-sreeharsha-writer-ಶಿಲ್ಪ ಶ್ರೀಹರ್ಷ

ಭಾರತ ಒಂದು ಬಹುಭಾಷಿಕರ ದೇಶ. ಸಾವಿರಾರು ಭಾಷೆಗಳು, ಸಾವಿರಾರು ಸಂಸ್ಕೃತಿಗಳು ಭಾರತದ ಹೆಮ್ಮೆಯಾಗಿವೆ. ಮಾತೃಭಾಷೆಯನ್ನು ಕಲಿಯುವುದು, ಮಾತನಾಡುವುದು ಪ್ರತಿ ವ್ಯಕ್ತಿಯ ಹಕ್ಕು.
ಆದರೆ ಒಬ್ಬ ವ್ಯಕ್ತಿ ಕೇವಲ ಒಂದೇ ಭಾಷೆಯನ್ನು ಕಲಿಯುತ್ತಾನೆಂದೇನೂ ಇಲ್ಲವಲ್ಲ? ತಿಳುವಳಿಕೆಗಾಗಿ, ವ್ಯವಹಾರಕ್ಕಾಗಿ ಬೇರೆ ಬೇರೆ ಭಾಷೆ ಕಲಿಯುವುದು ಸಾಮಾನ್ಯ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಅನೇಕ ಕಾರಣಗಳಿಗೆ ಬೇರೆ ರಾಜ್ಯಗಳನ್ನು, ಬೇರೆ ದೇಶಗಳನ್ನು ಸುತ್ತುವ ಅವಕಾಶಗಳೂ, ಅನಿವಾರ್ಯತೆಗಳೂ ಇರುವಾಗ ’ಕೇವಲ ಕನ್ನಡ ಮಾತ್ರ ಕಲಿಯುತ್ತೇನೆ, ಬೇರೆ ಭಾಷೆಗಳು ಬೇಡ ’ ಎಂಬ ಧೋರಣೆ ಆ ವ್ಯಕ್ತಿಗೇ ನಷ್ಟದಾಯಕ.

ಹೀಗಾಗಿಯೇ ಕರ್ನಾಟಕದಲ್ಲಿ ಶಿಕ್ಷಣ ಪದ್ಧತಿಯಲ್ಲೇ ತ್ರಿಭಾಷಾ ಸೂತ್ರವನ್ನು ಅಳವಡಿಸಲಾಗಿದೆ. ಮಾತೃಭಾಷೆಯಾಗಿ ಕನ್ನಡವನ್ನೂ ಅಂತರ್ರಾಷ್ಟ್ರೀಯ ಭಾಷೆಯಾದ ಇಂಗ್ಲೀಷನ್ನೂ, ದೇಶದ ಪ್ರಧಾನ ಭಾಷೆಯಾದ ಹಿಂದಿಯನ್ನೂ ಮಕ್ಕಳಿಗೆ ಶಾಲಾ ದಿನಗಳಿಂದಲೇ ಬೋಧಿಸಲಾಗುತ್ತದೆ. ಇದರಿಂದಾಗಿ ಮಕ್ಕಳು ಪ್ರಾಥಮಿಕ ಶಾಲಾ ವ್ಯಾಸಂಗ ಮುಗಿಸುವುದರೊಳಗಾಗಿ ಮೂರೂ ಭಾಷೆಗಳ ಕನಿಷ್ಠ ಜ್ಞಾನ ಪಡೆದುಕೊಂಡಿರುತ್ತಾರೆ.

ಹಲವು ದೇಶಗಳು ಒಂದು ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಘೋಷಿಸಿಕೊಂಡು ಅದರಲ್ಲೇ ಕಡ್ಡಾಯವಾಗಿ ಆಡಳಿತಾತ್ಮಕ ಸಂವಹನ ಮಾಡುತ್ತಾರೆ. ಹೀಗಾಗಿ ಭಾರತದ ಏಕತೆಗೆ, ಭಾರತೀಯರ ಅನುಕೂಲಕ್ಕೆ ಎಲ್ಲರೂ ಒಂದು ಭಾಷೆ – ಹಿಂದಿ- ಕಲಿತರೆ ಒಳ್ಳೆಯದು ಎಂದಾದರೆ ಏಕೆ ಕಲಿಯಬಾರದು? ಹಿಂದಿ ಕಲಿಯುವುದು ಕಷ್ಟ ಎಂಬ ವಿಚಾರ ಹಲವರದ್ದಾಗಿರಬಹುದು. ವಿದೇಶೀ ಭಾಷೆಯಾಗಿ ಇಂಗ್ಲೀಷನ್ನು ಕಲಿಯಬಹುದಾದರೆ ಭಾರತೀಯ ಭಾಷೆಯಾದ ಹಿಂದಿಯನ್ನೇಕೆ ಕಲಿಯಲು ಆಗುವುದಿಲ್ಲ? ಭಾರತದಲ್ಲಿ ಅದರಲ್ಲೂ ಉತ್ತರ ಭಾರತದಲ್ಲಿ ಹೆಚ್ಚಿನ ಜನರು ಹಿಂದಿಯನ್ನು ಅರ್ಥ ಮಾಡಿಕೊಳ್ಳಬಲ್ಲರು.
ಇನ್ನು ಇದರಿಂದಾಗಿ ಕನ್ನಡದ ಹಿತಕ್ಕೆ ಧಕ್ಕೆಯಾಗುತ್ತದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡದ ಅಭಿವೃದ್ಧಿಗೆ ಬೇರೆ ರೀತಿಯ ಮಾರ್ಗಗಳ ಅಗತ್ಯವಿದೆ. ಪ್ರಮುಖವಾಗಿ ಎಲ್ಲಾ ಸರ್ಕಾರಿ ಕಛೇರಿಗಳು, ಬ್ಯಾಂಕ್ ಮುಂತಾದವುಗಳಲ್ಲಿ , ಎಲ್ಲಾ ರೀತಿಯ ಅಂಗಡಿಗಳ ನಾಮಪಲಕಗಳಲ್ಲಿ ಕನ್ನಡದ ಬಳಕೆ ಕಡ್ಡಾಯಗೊಳಿಸುವುದು, ಅತಿಮುಖ್ಯವಾಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಓದಿ ಬರೆಯುವುದು ಹಾಗೂ ಮಾತನಾಡುವುದನ್ನು ಕಲಿಸುವುದನ್ನು ಕಡ್ಡಾಯಗೊಳಿಸುವುದು ಇತ್ಯಾದಿ. ಕನ್ನಡದ ಕಥೆ ಕಾದಂಬರಿ,ಲೇಖನಗಳನ್ನು ಬೇರೆ ಭಾಷೆಗಳಿಗೆ ಭಾಷಾಂತರ ಮಾಡುವುದರ ಮೂಲಕ ಅನ್ಯ ಭಾಷಿಕರಲ್ಲಿ ಕನ್ನಡದ ಬಗ್ಗೆ ಆಸಕ್ತಿ ಮೂಡಿಸುವುದೂ ಒಂದು ಉತ್ತಮ ಮಾರ್ಗ.ಕನ್ನಡಿಗರೂ ತಮ್ಮ ಮಕ್ಕಳಿಗೆ ಕನ್ನಡವನ್ನೇ ಮಾತಾಡಲು ಪ್ರೇರೇಪಿಸಬೇಕು. ನೆರೆಮನೆಯವರು, ಸ್ನೇಹಿತರು ಅನ್ಯ ಭಾಷಿಕರಾಗಿದ್ದರೆ ಅವರನ್ನು ಕನ್ನಡ ಕಲಿಯಲು ಪ್ರೋತ್ಸಾಹಿಸಬೇಕು. ಅಂಗಡಿಗಳಿಗೆ ಹೋದಾಗ ಕನ್ನಡದಲ್ಲೇ ವ್ಯವಹರಿಸಬೇಕು.

ಹೀಗೆ ನಾವೆಲ್ಲರೂ ಹಿಂದಿ ಕಲಿತು ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳೋಣ. ಹಾಗೇ ಕನ್ನಡವನ್ನು ಹೆಚ್ಚಾಗಿ ಬಳಸುವುದರ ಮೂಲಕ ಕನ್ನಡವನ್ನು ಕಟ್ಟೋಣ. ಹಲವು ಭಾಷೆಗಳನ್ನು ಕಲಿತು ನಮ್ಮ ಜ್ಞಾನವನ್ನು ಬೆಳೆಸಿಕೊಳ್ಳೋಣ.

-ಶಿಲ್ಪ ಶ್ರೀಹರ್ಷ

10-7-2014

 

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker