“ಹಾಡಿನ ಕಮಲಕ್ಕ”
ಆಕೆಗೆ ಹಾಡಿನ ಕಮಲಕ್ಕ ಅಂತಲೇ ಹೆಸರು. ಸಾವಿರಾರು ಘಂಟೆ ಗುರುಗಳ ಪರವಾಗಿ, ರಾಮದೇವರ ಪರವಾಗಿ ಹಾಡು ಹಾಡುವವಳು. ಆಕೆಗೆ ಸಭೆ, ಧ್ವನಿವರ್ಧಕಗಳೆಲ್ಲಾ ಬೇಕಾಗಿರಲಿಲ್ಲ, ಎಲ್ಲೋ ಒಂದು ಮೂಲೆಯಲ್ಲೆ ಕೂತು ಹಾಡುತ್ತಾ ಇದ್ದರೆ, ದಿನವಿಡೀ ಭಾವದುಂಬಿ ಹಾಡುತ್ತಾ ಇದ್ದಂತಹಾ ಜೀವ ಆಕೆ. ಹಾಗೆಯೇ ತುಳಸಿಮಾಲೆ ಕಟ್ಟುವವಳು. ಸುತ್ತ ಮುತ್ತ ಅನೇಕ ಮನೆಗಳಿಗೆ ಹೋಗಿ, ಅಲ್ಲಿಂದ ತುಳಸಿ ಸಂಗ್ರಹಿಸಿ, ತುಳಸಿ ಮಾಲೆ ಕಟ್ಟಿ ತಂದು ಅರ್ಪಿಸುತ್ತಾ ಇದ್ದಳು. ಆಕೆ ಬರುವಾಗ ಒಂದು ೫೦ ಜನರಿಗೆ ತುಳಸಿ ಮಾಲೆ ಹಾಕುವ ಅವಕಾಶ ಇರುವಷ್ಟು ತುಳಸಿ ಮಾಲೆ ಕಟ್ಟಿ ತರುತ್ತಾ ಇದ್ದವಳು. ಕಮಲಕ್ಕ ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ಕೆಲವಾರು ವರ್ಷಗಳಾದವು. ಕ್ಯಾನ್ಸರ್’ಗೂ ಆಕೆಯನ್ನು ಏನೂ ಮಾಡಲಾಗಲಿಲ್ಲ. ವೈದ್ಯರೂ ಆಶ್ಚರ್ಯ ಪಟ್ಟಿದ್ದಾರೆ.
ಈಗ ತಾನೇ ಬಂದಿರುವ ಸುದ್ದಿ, ಆಕೆಯ ಮಗ ಕೃಷ್ಣಮೂರ್ತಿಯಿಂದ. ಆಕೆ ಲಘು ಆಹಾರ ಸೇವನೆ ಮಾಡಿ ಬಂದು, ತನ್ನ ಗುರುಗಳ ಫೋಟೋ ಮುಂದೆ ಬಿದ್ದು, ಮತ್ತೆ ಏಳಲಿಲ್ಲ. ಅರ್ಧ ನಿಮಿಷ ಕೂಡ ಆಕೆ ಒದ್ದಾಡಲಿಲ್ಲ. ಇದನ್ನೇ ಮುಕ್ತಿ ಅನ್ನುವರು! ಇಂತಹಾದ್ದೊಂದು ಅಂತ್ಯ ಎಲ್ಲರಿಗೂ ಸಿಗುವಂತಹದ್ದಲ್ಲ. ಆಕೆಯ ತರಹದ ಭಕ್ತಿ, ಭಾವವು ಜೀವಕ್ಕೆ ಬಂದಾಗ ಮುಕ್ತಿ ತಾನಾಗೇ ಸಿದ್ಧವಾಗಿ ಬರುವುದು. ಯಾವ ಖಾಯಿಲೆ, ಕಷ್ಟಗಳೂ ಅಂತಹವರನ್ನು ಬಾಧಿಸಲಾರವು. ಅಂತಹವರ ಬಳಿ ಯಮದೂತರು ಬರುವುದು ಸಾಧ್ಯವೇ ಇಲ್ಲ. ಆಕೆಯ ಭಕ್ತಿ ಎಂತಹಾದ್ದು ಎಂದರೆ, ಆಕೆ ಇಲ್ಲಿಯವರೆಗೆ ಬಂದು ಪ್ರಾರ್ಥನೆ ಮಾಡಿ ಕೇಳಿಕೊಂಡದ್ದು ಈಡೇರದೇ ಹೊದದ್ದೇ ಇಲ್ಲ!
ಅಂತಹಾ ಒಂದು ಜೀವ ಇಂದು ಮುಕ್ತಿ ರೂಪದ ಶ್ರೇಷ್ಠವಾದ ಅಂತ್ಯವನ್ನು ಕಂಡಿದೆ !