ಒಂದು ಸಂಗೀತ ಕಛೇರಿ ನಡೆಯಬೇಕೆಂದರೆ ಒಂದು ಸಂಘ,ಅಥವಾ ಸಂಸ್ಥೆ ಬೇಕು. ಅದು ಸಮಾನ ಮನಸ್ಕರ ಸಂಘಟನೆಯಾಗಿರಬೇಕು. ಅಲ್ಲೊಬ್ಬ ಅತ್ಯುತ್ಸಾಹಿ ಕಲಾಭಿಮಾನಿ ವ್ಯಕ್ತಿ ಸಕ್ರಿಯನಾಗಿ ಸುತ್ತಲಿನ ಎಲ್ಲಾ ಕಲಾಸಕ್ತರನ್ನೂ ಕರೆಸಿ ಅತಿಥಿಕಲಾವಿದರೊಬ್ಬರಿಂದ ಕಲಾಪ್ರದರ್ಶನವನ್ನೇರ್ಪಡಿಸಬೇಕು. ಅಲ್ಲಿ ಉಂಟಾಗುವ ಸದಭಿರುಚಿಯ ರಂಜನೆಯಿಂದ ಕೇವಲ ಕಲಾವಿದ್ಯಾರ್ಥಿಗಳಲ್ಲದೆ ಜನಸಾಮಾನ್ಯರೂ ಕಲೆಯನ್ನು ಗೌರವಿಸುವಂತಾಗಬೇಕು. ಇದು ಸಮಾಜದಲ್ಲಿ ಸಂಸ್ಕೃತಿಯನ್ನು ಬೆಳಗಲು ದಾರಿದೀಪ. ಇಂತಹ ದೀಪ ದಕ್ಷಿಣಾದಿ ಶಾಸ್ತ್ರೀಯ ಸಂಗೀತದ ಮೂಲಕ ಸಾಗರದಲ್ಲಿ ಇತ್ತೀಚೆಗೆ ಬೆಳಗಿದ್ದು ವಿಶೇಷ. ಇದಕ್ಕೆ ಶ್ರಮವೆಂಬ ತೈಲಧಾರೆಯನ್ನು ‘ರಾಗಸುಧಾ’ ಸಂಸ್ಥೆಯ ಮೂಲಕ ಹರಿಸುತ್ತಿರುವವರೇ ಸಂಗೀತಾಭಿಮಾನಿ,ಸಂಗೀತ ವಿಮರ್ಶಕ,ನಿವೃತ್ತ ಅಧ್ಯಾಪಕ ಎಸ್ ಆರ್.ಶಾಂತಾರಾಮ್.
ಶಾಂತಾರಾಮ್ ಸಾಗರದ ಗಣಪತಿ ಕೆರೆಯ ಏರಿಯ ಮೇಲಿರುವ ತಮ್ಮ ಮನೆಯ ಮೇಲೆಯೇ ಒಂದು ‘ಸ್ವರಾಲಯ’ ಎಂಬ ವ್ಯವಸ್ಥಿತಸಭಾಂಗಣವನ್ನು ನಿರ್ಮಿಸಿಕೊಂಡಿದ್ದಾರೆ. ತಮ್ಮದೇ ಧ್ವನಿಮುದ್ರಣ ವ್ಯವಸ್ಥೆಗಳನ್ನು ಹೊಂದಿದ್ದಾರೆ. ಮಳೆನಾಡಿನ ಮಲೆನಾಡಿನ ಸಾಗರದಂತಹ ಸಣ್ಣ ಊರಿನಲ್ಲಿ ಅದೂ ಈ ಭೋರ್ಗರೆವ ಮಳೆಗಾಳಿಯ ನಡುವೆ ಶಾಸ್ತ್ರೀಯ ಸಂಗೀತ ಕಛೇರಿಯನ್ನೇರ್ಪಡಿಸಿದ್ದಾರೆ ಎಂದರೆ ಅವರ ಈ ಹುಚ್ಚನ್ನು ಮೆಚ್ಚಲೇ ಬೇಕು.ಪ್ರತೀ ವರ್ಷವೂ ಹೊಚ್ಚಹೊಸ ಕಲಾವಿದರನ್ನು ಸಾಗರದ ಜನತೆಗೆ ಪರಿಚುಸುವ ಶಾಂತಾರಾಮ್ ಈ ಬಾರಿ ಉದಯೋನ್ಮುಖ ಕಲಾವಿದೆ ತೇಜಸ್ವಿನಿ ಎಂ.ಕೆ ಅವರ ರಾಗಾಮೃತರ್ವಣಿಯ ಅನುಭವವನ್ನು ಕಲಾರಸಿಕರಿಗೆ ಉಣಬಡಿಸಲು ಅನುವು ಮಾಡಿಕೊಟ್ಟಿದ್ದಾರೆ.
ತೇಜಸ್ವಿನಿ ಎಂ.ಕೆ– ಪರಿಚಯ ಬೇಕೆ?
ಮದ್ರಾಸಿನ ಸುಗುಣಾ ವರದಾಚಾರಿ ಅವರಲ್ಲಿ ಆರಂಭಿಕ ಶಿಕ್ಷಣ ಪಡೆದ ಈಕೆಯ ಈಗಿನ ಗುರುಗಳು ಬೆಂಗಳೂರಿನ ವಿದುಷಿ ನೀಲಾ ರಾಮ್ ಗೋಪಾಲ್. ಕರ್ನಾಟಕ ಫ್ರೌಢ ಶಿಕ್ಷಣ ಮಂಡಳಿಯವರು ನಡೆಸುವ ಜ್ಯೂನಿಯರ್ ಪರೀಕ್ಷೆಯಲ್ಲಿ,ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ರಾಜ್ಯಕ್ಕೆ ಮೊದಲ ರಾಂಕ್ ಪಡೆದಿದ್ದ ತೇಜಸ್ವಿನಿ ಸೀನಿಯರ್ನಲ್ಲಿ ರಾಜ್ಯಕ್ಕೆ ಡಿಸ್ಟಿಂಕ್ಷನ್ ಪಡೆದಿದ್ದರು,ಆಲ್ ಇಂಡಿಯಾ ‘ಬಿ’ ಶ್ರೇಣಿ ಕಲಾವಿದೆ.
ಈಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಮ್ಯೂಸಿಕ್ ಅಭ್ಯಾಸ ಮಾಡುತ್ತಿದ್ದಾರೆ. ಉತ್ತಮವಾದ ಗಮಕಗಳಿರುವಂತಹ ಬಿಗಿಯಾದ ಶೈಲಿಯಲ್ಲಿ ಹಾಡುವಂತಹ ಪ್ರವರ್ಧಮಾನಕ್ಕೆ ಬರುತ್ತಿರುವಂತಹ ಕಿರಿಯ ಕಲಾವಿದೆ ತೇಜಸ್ವಿನಿ.
ಇವರಿಗೆ ಪಕ್ಕಾವಾದ್ಯದಲ್ಲಿ ಸಹಕರಿಸಿದ ಆನಂದ್ ವಿಶ್ವನಾಥನ್ ಪಾಲ್ಗಾಟ್ನ ವಯೋಲಿನ್ ಕಲಾವಿದ, ಬಾಂಬೆ ಆರ್ ಮಾಧವನ್ ಅವರ ಶಿಷ್ಯ. ಮೃದಂಗ ನುಡಿಸಿದ ಎಸ್ ಜಿ.ಬಾಲಕೃಷ್ಣ ಶ್ರೀ ಸುರುಳಿ ಗಣೇಶ್‌ಮೂರ್ತಿ ಅವರ ಪುತ್ರ ,ಶಿಷ್ಯ. ಮದ್ರಾಸಿನ ಸುಪ್ರಸಿದ್ದ ಮೃದಂಗವಾದಕ ಶ್ರೀ ಮೂಷ್ಣಂ ವಿ.ರಾಜಾರಾವ್ ಅವರಲ್ಲಿ ೩ ವರ್ಷ ಗುರುಕುಲವಾಸ ಮಾಡಿದ್ದಾರೆ.
ತೇಜಸ್ವಿನಿ–ಸಂಗೀತವಾಹಿನಿ
ಅನ್ನ ಬೆಂದಿದೆಯೋ ಇಲ್ಲವೊ ಎಂದು ತಿಳಿಯುವುದಕ್ಕೆ ಒಂದೇ ಅಗಳು ಸಾಕು.ಹಾಗೆಯೇ ತೇಜಸ್ವಿನಿ ಆರಂಭದಲ್ಲಿ ಆರಂಭಿಸಿದ ನವರಾಗಮಾಲಿಕಾ ವರ್ಣದಲ್ಲಿಯೇ ಅವರ ಪ್ರಭುತ್ವ ಎರಬಹುದೆಂದು ಸಾಬೀತಾಗಿತ್ತು, ಮುಂದೆ ಅದನ್ನು ಸವಿಯುವುದಷ್ಟೇ ಬಾಕಿ ಉಳಿದಿತ್ತು.
ಅಠಾಣ ರಾಗದ ಕಿರು ಆಲಾಪನೆಯ ನಂತರ ಜಯಚಾಮರಾಜೇಂದ್ರ ಒಡೆಯರ್ ಅವರ ಸುಪ್ರಸಿದ್ದ ಕೃತಿ ‘ಶ್ರೀ ಮಹಾಗಣಪತಿಂ ಭಜೇ‘ ಸುಂದರವಾಗಿ ಕೇಳಿ ಬಂತು.
ತದನಂತರ ತೇಲಿ ಬಂದ ನಾಸಿಕಭೂಣಿಯ ಆಲಾಪ ತೇಜಸ್ವಿನಿಯ ಮಧುರವಾದ ಕಂಠವನ್ನು ಪರಿಚುಸಿತು. ತೇಜಸ್ವಿನಿ ಅಪರೂಪದ ವಿಶೇಷವಾದ ನಾಸಿಕಭೂಷಿಣಿಯನ್ನು ಶ್ರೋತೃಗಳಿಗೆ ಸ್ವಲ್ಪ ವಿಸ್ತಾರವಾಗಿಯೇ ಪರಿಚಯಿಸಿದರು. ಮಂದ್ರ,ಮಧ್ಯ ಹಾಗು ತಾರ ಈ ಮೂರೂ ಸ್ತರಗಳಲ್ಲಿ ಗಾಯಕಿಯ ಧ್ವನಿ ಮೂರು ರೀತಿ ವಿಭಿನ್ನವಾಗಿ ಕೇಳುತ್ತಿತ್ತು.
ಅಷ್ಟೇನು ಪ್ರಚಲಿತವಲ್ಲದ ಈ ರಾಗವನ್ನು ಕಛೇರಿಯ ಆರಂಭದಲ್ಲಿಯೇ ಮೂರನೆಯ ಕೃತಿಯಾಗಿ ಹಾಡಿದ್ದು ನಿಜಕ್ಕೂ ಸಂತಸದ ಸಂಗತಿ. ಒಂದಷ್ಟು ಪ್ರಸಿದ್ದ ಕೃತಿಗಳಿಗಷ್ಟೇ ಕರ್ನಾಟಕ ಸಂಗೀತ ಸೀಮಿತ ಎಂಬಂತಿರುವ ಈ ಕಾಲ ಘಟ್ಟದಲ್ಲಿ ಅದೂ ಯುವಪೀಳಿಗೆ ಸಾಧಿಸುತ್ತಾ ಇಂತಹ ಪ್ರಯೋಗಕ್ಕೆ ತೆರೆದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ನಾಸಿಕಭೂಷಣಿ ರಾಗಕ್ಕಿರುವ ಒಂದು ಪ್ರತ್ಯೇಕ ಭಾವವನ್ನು ಆಲಾಪನೆಯಲ್ಲಿ ಬಿಂಬಿಸುತ್ತಾ ಸಾಗಿದ ಗಾಯಕಿಯ ಮನೋಭಾವಕ್ಕೆ ಪ್ರತಿಬಂಬವೇನೋ ಎಂಬಂತೆ ಪಿಟೀಲಿನಲ್ಲೂ ರಾಗದ ವಿವಿಧ ಹಂತ ಪರಿಚಯವಾತು. ನಂತರ ಇದೇ ರಾಗದ ಮುತ್ತು ಸ್ವಾಮಿ ದೀಕ್ಷಿತರ ‘ಶ್ರೀ ರಮಾ ಸರಸ್ವತಿ‘ ಕೃತಿಯಲ್ಲಿ,ಚಿಟ್ಟೆ ಸ್ವರದಲ್ಲಿರುವ ದಾಟು ಪ್ರಯೋಗ ರಂಜನೀಯವೆನಿಸಿತು. ‘ತಾರಾ ಸದೃಶ‘ ಎಂಬ ಜಾಗದಲ್ಲಿ ನಿಂತು ತೇಜಸ್ವಿನಿ ಕಲ್ಪನಾ ಸ್ವರ ಲೀಲಾಜಾಲವಾಗಿ ಹಾಡಿದರು. ಇದಕ್ಕೆ ವಯೋಲಿನ್ ಸಹಕಾರ ಕೂಡ ಅಷ್ಟೇ ಅದ್ಭುತವಾಗಿತ್ತು. ಅಂತೂ ಆರಂಭದ ಅರ್ಧ ಗಂಟೆಯಲ್ಲೇ ಪಕ್ಕ ಶಾಸ್ತ್ರೀಯ ಸಂಗೀತದೆಡೆಗೆ ಸಾಗಿ ಪೂರ್ಣ ಕಾರ್ಯಕ್ರಮಕ್ಕೆ ಭದ್ರಬುನಾದಿ ಒದಗಿಸಿಕೊಟ್ಟಿತು.
ನಂತರ ಆನಂದಭೈರವಿಯ ಮರಿವೇರೆ, ಆರಂಭದ ವೇಗಕ್ಕೆ ಸ್ವಲ್ಪ ವಿರಾಮ ನೀಡೋಣವೆಂದು ವಿಳಂಬಕಾಲದ ಕೃತಿಯಾಗಿ ಸಮಾಧಾನವಾಗಿ ಹೊರಹೊಮ್ಮಿತು.
ಆಗಲೇ ನಾಸಿಕಭೂಣಿಯಂತಹ ರಾಗದಲ್ಲೇ ಪ್ರತಿಭೆಯನ್ನು ಹರವಿದ್ದ ತೇಜಸ್ವಿನಿಯ ಅಮೃತರ್ವಣಿಯನ್ನು ಇನ್ನು ಕೇಳಬೇಕೆ? ಕೇಳಲೇ ಬೇಕು ಹಾಗಿತ್ತು. ತೇಜಸ್ವಿನಿ ತಾರಾಸ್ವರಗಳಲ್ಲಿ ಸುಲಲಿತವಾಗಿ ಹಾಡುತ್ತಾರೆಂದು ಕಛೇರಿಯ ಪ್ರಾರಂಭದಲ್ಲಿ ಭಾಸವಾಗಿತ್ತು, ಅಂತೆಯೇ ಅದನ್ನು ಅಮೃತರ್ವಣಿಯಲ್ಲಿ ಸಾಬೀತು ಪಡಿಸಿದರು. ಆಲಾಪನೆಯಲ್ಲಿ ತಾರದ ಪಂಚಮವನ್ನು ಇಂಪಾಗಿಯೇ ಇಣುಕಿ ಬಂದರು. ಸಭಾಂಗಣದ ಒಳಗೆ ಅಮೃತರ್ವಣಿ ಮಳೆ ಸುರಿಸಿತು. ವರ್ಷಧಾರೆ ‘ಸುಧಾಮಯಿ ಸುಧಾನಿಧಿಯಾಗಿ‘ ಸಂಗೀತಸುಧೆ ಹರಿಸಿತು.
‘ಸನಾತನ ಪರಮಪಾವನ‘ ಫಲಮಂಜರಿ ರಾಗದ ತ್ಯಾಗರಾಜರ ಕೃತಿ ಮತ್ತೊಂದು ಅಪರೂಪಕ್ಕೆ ಸಾಕ್ಷಿಯಾತು.
ಫಲಮಂಜರಿ ಖರಹರಪ್ರಿಯ ಜನ್ಯ ಅಪರೂಪದರಾಗ.
ಇನ್ನು ಕಛೇರಿಯ ಮುಖ್ಯಭಾಗವಾಗಿ ಚಾರುಕೇಶಿ ರಾಗವನ್ನು ಸವಿಸ್ತಾರವಾಗಿ ತೇಜಸ್ವಿನಿ ನಿರೂಪಿಸಿದರು. ಚಾರುಕೇಶಿ ವಾದ್ಯಕ್ಕೆ ಮಾತ್ರ ಸೀಮಿತ ಗಾಯನಕ್ಕೆ ಅಷ್ಟೊಂದು ಪ್ರಶಸ್ತವಲ್ಲ ಎಂಬುದನ್ನು ಸುಳ್ಳಾಗಿಸಿದರು.
‘ಪಾರ್ವತಿ ನಿನು ನೇ..’ ಹೀಗೆ ಬಂದು ಹಾಗೆ ಮುಗಿದು ಹೋಯಿತು.
‘ಆರೇನು ಮಾಡುವರು ಅವನಿಯೊಳಗೆ ..’ಪುರಂದರದಾಸರ ಪದಕ್ಕೂ ಆಲಾಪನೆಯನ್ನು ಮಧುಕೌಂಸ್ ರಾಗದಲ್ಲಿ ಚೆನ್ನಾಗಿಯೇ ಮಾಡಿದ ತೇಜಸ್ವಿನಿ ಕಛೇರಿಯ ಅಂತ್ಯಭಾಗವನ್ನೂ ಕರ್ನಾಟಕ ಸಂಗೀತದ ಬಿಗಿ ಮುಷ್ಟಿಯಲ್ಲೇ ಇಟ್ಟುಕೊಂಡರು. ಪಕ್ಕ ಹಿಂದೂಸ್ಥಾನಿ ರಾಗವಾದ ಮಧುಕೌಂಸ್ ಅನ್ನು ದಕ್ಷಿಣಾದಿ ಶೈಲಿಗೆ ಒಗ್ಗಿಸಿ ಬಗ್ಗಿಸಿ ಶಾಸ್ತ್ರದ ಹತೋಟಿಯಲ್ಲೇ ಇಟ್ಟರು.
‘ಹರಿಗುಣಗಾವತ್..’ ಹಿಂದುಸ್ಥಾನಿ ಭಜನ್ ಶೈಲಿಯಲ್ಲಿ ಪ್ರಸ್ತುತ ಪಡಿಸಿದ ತೇಜಸ್ವಿನಿ ಬೇಹಾಗ್ ನಲ್ಲಿ ವೀಣೆ ಶೇಷಣ್ಣನವರ ತಿಲ್ಲಾನವೊಂದನ್ನು ಹಾಡಿದರು. ಕಡೆಯದಾಗಿ ‘ಮಂದಾರು ಕೃಷ್ಣಗೆ..’ ಮಂಗಳವನ್ನು ಹಾಡಿ ಕಛೇರಿಯನ್ನು ಮುಗಿಸಿದರು.
ಆರಂಭದಿಂದ ಅಂತ್ಯದವರೆಗೂ ಶಾಸ್ತ್ರಕ್ಕೆ ಅಪಚಾರವಾಗದಂತೆ ಅಪರೂಪದ ರಾಗ, ಕೃತಿಗಳನ್ನು ಹಾಡಿದ ತೇಜಸ್ವಿನಿ ಅವರ ಕಾರ್ಯಕ್ರಮ ನಿಜಕ್ಕೂ ಅಪರೂಪವಾಗಿತ್ತು. ಇಂತಹ ಅಪರೂಪದ ಸಂಗೀತ ಸಾಗರವನ್ನು ರಾಗಸುಧಾಸಾಗರವಾಗಿಸಿತ್ತು. ಸಭಾಂಗಣದಿಂದ ಹೊರಬಂದಾಗ ಸುರಿಯುತ್ತಿದ ಭಾರೀ ಮಳೆಯೂ ಸಂಗೀತವಾಗಿಯೇ ಕೇಳುತ್ತಿತ್ತು.
ಲೇಖನ– ಚಿನ್ಮಯ ಎಂ.ರಾವ್ ಹೊನಗೋಡು.
July 28, 2011