ಸಂಗೀತ ಸಮಯ

ಇದೇ ಭಾರತೀಯ ಸಂಗೀತ, ಮಿಗಿಲಾವುದು ಇದಕಿಂತ?

ಭಾರತೀಯ ಸಂಗೀತವೇ ಹಾಗೆ. ಇದು ಹೀಗೆಂದು ಬಣ್ಣಿಸಲಸದಳ. ಕಲಿತಷ್ಟೂ ಮುಗಿಯದು ಇದರ ಆಳ. ಪೂರ್ಣ ಬಲ್ಲವರಾರು? ಸಾಗರ ಇದರ ಅಂತರಾಳ. ಕಲಿತವರ ಸಂಖ್ಯೆ ಬಹಳ. ಸಿದ್ದಿಸಿಕೊಂಡವರು ವಿರಳ. ಹಾಗಾದರೆ ಸಿದ್ಧಿಸಿಕೊಳ್ಳುವುದೆಂದರೆ ಏನು? ಎಂಬ ಪ್ರೆಶ್ನೆಗೆ ಉತ್ತರದ ಹತ್ತಿರ ಹೋಗಿಬರಬಹುದಷ್ಟೆ. ಸರಳವಾಗಿ ಹೇಳುವುದಾದರೆ ಇಹದ ಅಸ್ತಿತ್ವವನ್ನೇ ಮರೆತು ಆಹಾ.. ಎನ್ನುವ ಆಹ್ಲಾದಕರ ಸಂಗೀತ. ಇಲ್ಲಿ ಸಂಗೀತವೆಂಬುದು ಪಾಶ್ಚಾತ್ಯರಂತೆ ಕೇವಲ ಮನೋರಂಜನೆಯಾಗಿರದೆ ಅದಕ್ಕೂ ಮಿಗಿಲಾಗಿ ಸಂಗೀತ ಹೇಳುವವರನ್ನೂ ಕೇಳುವವರನ್ನೂ ಹೇಳದೆ ಕೇಳದೆ ಮೈಮರೆಸಿ ಬೇರೊಂದು ಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ಅಂತಹ ಆನಂದದ ಸನ್ನಿವೇಶ ಆಕಸ್ಮಿಕವಾಗಿ ಒಮ್ಮೊಮ್ಮೆ ಘಟಿಸಿಹೋಗುತ್ತದೆ. ಧ್ಯಾನಕ್ಕೆಂದು ಕೂರದೆಯೇ ಧ್ಯಾನದ ನಂಟು ಸಹಜವಾಗಿ ಅಂಟಿಕೊಂಡುಬಿಡುತ್ತದೆ. ಅಂತಹ ಒಂದೆರಡು ಘಟನೆಗಳನ್ನು ಗಮನಿಸಿ ನಮ್ಮ ಸಂಗೀತದ “ಗಮನಿಸ” ಘಮಲನ್ನು ಲೋಕಕ್ಕೆ ಬಿತ್ತರಿಸಿ ಎತ್ತರಿಸೋಣ ಬನ್ನಿ.

ಪ್ರತಿವರುಷದಂತೆ ದಕ್ಷಿಣಾದಿ ಸಂಗೀತದ ದಿಗ್ಗಜ ಆರ್.ಕೆ.ಪದ್ಮನಾಭ್ ಈ ಬಾರಿ ಉತ್ತರಕನ್ನಡದ ಸಿದ್ದಾಪುರದಲ್ಲಿ ಸಂಗೀತ ಸಮ್ಮೇಳನವನ್ನೇರ್ಪಡಿಸಿದ್ದರು. ಉತ್ತರಾದಿ-ದಕ್ಷಿಣಾದಿ ಎಂದು ಒಂದೊಂದು ಬದಿ ಮುಖತಿರುಗಿಸಿಕೊಂಡು ಕುಳಿತುಕೊಳ್ಳುವ ಸಂಗೀತವನ್ನು ಅರೆಕಲಿತ ಮಂದಿಗೆ ಉತ್ತರವೆಂಬಂತೆ ಆರ್.ಕೆ.ಪಿ ಸಂಗೀತವನ್ನು ಅರೆದು ಕುಡಿದು,ಅಳೆದು ಸುರಿದು ಎರಡೂ ಸಂಗೀತವೂ ಒಂದೇ, ಶೈಲಿಗಳು ಬೇರೆ ಅಷ್ಟೆ,ನಾದವೇ ಮುಂದೆ ಎಂದು ಸಾರಿದ್ದಾರೆ. ಇಂತಹ ಆರ್.ಕೆ.ಪಿ ತಾವು ಕಣ್ಮುಚ್ಚಿ ಹಾಡುವಾಗ ಉತ್ತರಾದಿಯವರನ್ನೂ ಬರಸೆಳೆಯುತ್ತಾರೆ. ಉತ್ತರಾದಿಯವರು ಹಾಡುವಾಗ ಅದೇ ವರವೆಂದು ತಾವೂ ತಲೆದೂಗುತ್ತಾರೆ. ಅಂತೆಯೇ ಸಿದ್ದಾಪುರದ ಸಮ್ಮೇಳನದಲ್ಲಿ ಮೊದಲಿಗೆ ಪ್ರಾರ್ಥನೆಯಲ್ಲಿ ಉತ್ತರಾದಿ ಶೈಲಿಯ ಗಾಯನ, ಸಾಗರದ ಸಂಗೀತ ಶಿಕ್ಷಕಿ ವಿದುಷಿ ವಸುಧಾ ಶರ್ಮ ಅವರಿಂದ.

“ಪೊರೆಯೋ ನೀ ಗಜಮುಖ…” ನಾಟರಾಗದಲ್ಲಿ ಕೇಳಿಬರುತ್ತಿದ್ದಂತೆ ಭಾವಪರವಶರಾಗಿ ಮನಕರಗಿ ಕರತಾಡನ ಮಾಡಿದವರು ದಕ್ಷಿಣಾದಿ ಸಂಗೀತದ ಖ್ಯಾತನಾಮರಾದ ಮಣಿತ್ರಯರಾದ ಟಿ.ಏ.ಎಸ್ ಮಣಿ, ರಮಾ ಮಣಿ, ನಾಗಮಣಿ ಮತ್ತು ಎಮ್.ಎಸ್.ಶೀಲ. ಅಲ್ಲಿದ್ದ ಆರ್.ಕೆ.ಪಿ ಅವರಿಗೆ ಕಾಲುಗಂಟೆ ಸರಿದದ್ದೇ ಗೊತ್ತಾಗಲಿಲ್ಲ. ಅತ್ತಿತ್ತ ಕಾಲನ್ನಿಡದೆ ನಿಂತಲ್ಲೇ ನಿಂತುಬಿಟ್ಟರು. ಇಷ್ಟು ಅಲ್ಪಕಾಲ ಇವರ ಪಾಂಡಿತ್ಯಕ್ಕಲ್ಲ, ದೀರ್ಘಾವಧಿಯ ಸಂಗೀತಕಛೇರಿಯನ್ನೇ ಅವಕಾಶಮಾಡಿಕೊಡಬೇಕಾಗಿತ್ತು ಎಂದು ಅಂದುಕೊಂಡರು.

ಸರಿ….ಕಾಲ ಸರಿಯಿತು.ಮುಂದೊಮ್ಮೆ ವಸುಧಾ ಶರ್ಮ ತಮ್ಮ ಸಂಗೀತ ಶಾಲೆಯ ವಾರ್ಷಿಕೋತ್ಸವದಲ್ಲಿ ಆರ್.ಕೆ.ಪಿ ಅವರ ದಕ್ಷಿಣಾದಿ ಸಂಗೀತವನ್ನು ಆಯೋಜಿಸಿದರು.ಸಿದ್ದಾಪುರದ ವಸುಧಾ ನಾದವನ್ನು ನೆನಪಿಸಿಕೊಂಡು ಕೊಂಡಾಡಿದ ಆರ್.ಕೆ.ಪಿ ಗಾಯನವನ್ನು ಆರಂಭಿಸಿದರು. ದಕ್ಷಿಣಾದಿ ಸಂಗೀತದ ಚೌಕಟ್ಟಿನಲ್ಲೇ ಉತ್ತರಾದಿಯ ತರಂಗಗಳನ್ನು ಸ್ಪರ್ಷಿಸಿ ಅಹೋರಾತ್ರಿ ಕೇಳುಗರ ಅಂತರಂಗವನ್ನು ತಮ್ಮ ನಾದದಿಂದ ಮಿಡಿದರು. ಸನ್ಮಾನಿತರಾಗಿ ಹಿಂದಿರುಗಿದರು.

ಈಗ ಮತ್ತೆ ಆರ್.ಕೆ.ಪಿ ಅವರ ಸರದಿ. ಸಿದ್ಧಾಪುರದಲ್ಲಿ ಹಿಂದೆ ವಸುಧಾ ಅವರ ಪೂರ್ಣಗಾಯನದಿಂದ ವಂಚಿತರಾಗಿದ್ದ ಅವರು ಬೆಂಗಳೂರಿನ ಹುಳಿಮಾವು ಎಂಬಲ್ಲಿ ಈಚೆಗೆ ನಡೆದ ವಾದಿರಾಜ ಆರಾಧನಾ ಮಹೋತ್ಸವದಲ್ಲಿ ಕಛೇರಿ ಮಾಡುವಂತೆ ವಸುಧಾ ಅವರಿಗೆ ಆಹ್ವಾನವಿತ್ತರು.

 

ಕಾರ್ಯಕ್ರಮ ನೀಡಲು ಬಂದ ವಸುಧಾ ಸಹಕಲಾವಿದರೊಡನೆ ಸಭಾಭವನದ ಎದುರಿಗಿದ್ದ ವಾದಿರಾಜ ಗೋಪುರವನ್ನೊಮ್ಮೆ ನೋಡಿಬರಲು ತೆರಳಿದರು. ಗೋಪುರವನ್ನು ಪ್ರವೇಶಿಸಿದಾಕ್ಷಣವೇ ಧ್ಯಾನಸ್ಥರಾದ ವಸುಧಾ ಅಯ್ಯೊ ತನ್ನ ಗಾಯನಕಾರ್ಯಕ್ರಮ ಇಲ್ಲೇ ನಡೆದಿದ್ದರೆ ಎಷ್ಟು ಚೆನ್ನಾಗಿತ್ತೆಂದು ಮನದಲ್ಲೇ ಅಂದುಕೊಂಡು ನಿರಾಸೆಯಿಂದ ಹೊರಬಂದರು.

 

ಇತ್ತ ಸಭಾಗಂಣದಲ್ಲಿ ಮೊದಲು ವೇದಿಕೆಯನ್ನೇರಿ ನಾದೋಪಾಸನೆಯಲ್ಲಿ ತೊಡಗಿದ ಆರ್.ಕೆ.ಪಿ ಕಣ್ಮುಚ್ಚಿ ಧ್ಯಾನಸ್ಥರಾದರು. ಯಾವುದೋ ಅತೀಂದ್ರಿಯಶಕ್ತಿಯ ಪ್ರೇರಣೆಯಾಯಿತೇನೊ ಎಂಬಂತೆ ಕಣ್ ತೆರೆದು ಒಮ್ಮೆಲೇ ಚುರುಕಾದ ಅವರು ಧ್ವನಿವರ್ಧಕಯಂತ್ರಗಳನ್ನು ಪೂರ್ಣ ಕಳಚಿ ವಾದಿರಾಜ ಗೊಪುರದೊಳಗೆ ಈ ಕೂಡಲೆ ಜೋಡಿಸಬೇಕೆಂದು ಅದೇಶಿಸಿದರು!

ಕೇವಲ ಅರ್ಧಗಂಟೆಯಲ್ಲಿ ಎಲ್ಲರೂ,ಎಲ್ಲವೂ ವಾದಿರಾಜಗೋಪುರಕ್ಕೆ ಸ್ಥಳಾಂತರ. ಬಿಟ್ಟ ಕಣ್ಣು ಬಿಟ್ಟಂತೇ ಇದೆಲ್ಲವನ್ನೂ ನೋಡುತ್ತಿದ್ದ ವಸುಧಾ ಅವರಿಗೆ ಆಶ್ಚರ್ಯ! ತಾನು ಬಯಸಿದ್ದೇ ಇಲ್ಲಿ ಆಗುತ್ತಿದೆಯಲ್ಲ,ಇದೇ ವಾದಿರಾಜಯತಿಗಳ ಮಹಿಮೆಯ?ಎಂದು ಮನದಲ್ಲೇ ಪ್ರಶ್ನಿಸಿಕೊಂಡರು.

ಗೋಪುರದೊಳಗೆ ತಂಬೂರಿಯ ನಾದ ಅಲೆಅಲೆಯಾಗಿ ಆವರಿಸಿಕೊಂಡಿತು. ಕೇಳುಗರು ಮನಸ್ಸನ್ನು ಶೃತಿಮಾಡಿಕೊಂಡರು. ಗೋಪುರ ಕಟ್ಟಿ ಹನ್ನೊಂದುವರುಷಗಳಾದರೂ ಅಲ್ಲಿ ಜರುಗುತ್ತಿರುವ ಮೊದಲ ಕಾರ್ಯಕ್ರಮ ಅದು!

“ಕೈಸೆ ಕೈಸೆ ಜಾವೋ…” ಶುದ್ಧಸಾರಂಗದಲ್ಲಿ ಶುದ್ಧವಾಗಿ ವಸುಧಾ ರಾಗಸುಧೆಯನ್ನು ಹರಿಸುತ್ತಾ ಹೋದಂತೆ ಕೆಲವರು ಭಾವುಕರಾಗಿ ಕಣ್ಣೀರ ಹರಿಸಿದರು! ನೆನಪಿರಲಿ ಅಲ್ಲಿ ಕುಳಿತ ಬಹುಪಾಲು ಮಂದಿ ದಕ್ಷಿಣಾದಿ ವಿದ್ವನ್ಮಣಿಗಳು ಹಾಗು ಆರ್.ಕೆ.ಪಿ ಅವರ ಶಿಷ್ಯ ಸಮೂಹ! ತಲ್ಲೀನರಾಗಿ ಸ್ವರದೊಳಗೆ ವಿಹರಿಸುತ್ತಾ ಧ್ಯಾನದೊಳಗೆ ಲೀನವಾದರು. ಗೋಪಾಲಕೃಷ್ಣ ಹೆಗಡೆ ಕಲ್‌ಬಾಗ್

ಅವರ ತಬಲ ಗಾನಾಮೃತದ ಒಂದುಭಾಗವಾಗಿ ಗಾಯಕಿಗೆ ಇಂಪಾದ ಮನೋಬಲವನ್ನು ತಂದುಕೊಡುತ್ತಿತ್ತು. ರಾಗದ ಜಾಡನ್ನು ಹಿಡಿದೆಳೆದು ಹಾರ್ಮೋನಿಯಮ್‌ನಲ್ಲಿ ಜೀವಸ್ವರಗಳನ್ನು ಮಾತನಾಡಿಸುತ್ತಿದ್ದ ನೀತಾ ಬೆಳೆಯೂರು ಅವರ ಕೈಬೆರಳುಗಳು ಅತ್ತಿತ್ತ ಚಲಿಸುತ್ತ ಕೇಳುಗರ ಮನಸ್ಸು ಎಲ್ಲೂ ಚಲಿಸದಂತೆ ನೋಡಿಕೊಂಡಿತ್ತು. ಅಂತೂ ಗೋಪುರ ನಾದಮಯವಾಗಿ ತಂಗಾಳಿಯೂ ಸ್ವರವಾಯಿತು. ಗಾಯನ ತಾರಸ್ಥಾಯಿಯವರೆಗೂ ಸಾಗಿ ಶಿಖರದ ಉತ್ತುಂಗವನ್ನು ತಲುಪಿ ಮಂದ್ರದಲ್ಲಿ ಶಾಂತವಾಯಿತು.ಸಂಗೀತಪ್ರೇಮಿಗಳು ಗಂಧರ್ವಲೋಕದಲ್ಲಿ ತೇಲಿ ಭುವಿಗಿಳಿದಂತಾಯಿತು. ಆರ್.ಕೆ.ಪಿ ಅವರಿಗೆ ಸಾರ್ಥಕಭಾವ ಉಂಟಾಯಿತು. ಸಂತಸ ಉಕ್ಕಿಬಂತು. ಸಾಧಕರಿಗೆ ಸನ್ಮಾನವಾಯಿತು. ಎರಡೂ ಶೈಲಿಯ ಕಲಾವಿದರಲ್ಲಿ ಪರಸ್ಪರ ಧನ್ಯತಾ ಭಾವ ಮೂಡಿತು.

ಭಾರತೀಯ ಸಂಗೀತ ಒಂದೇ,ಅದು ಹರಿಯುವ ನದಿ

ಉತ್ತರಾದಿ-ದಕ್ಷಿಣಾದಿ ಅದಾಗಿರಬಹುದು ಯಾವುದಾದರೂ ಆದಿ,

ಆದರೆ ಅದಾಗಿರಬೇಕಷ್ಟೆ ಆತ್ಮಸಂತೋಷದ ಹಾದಿ,

ಎಂದು ಅಲ್ಲಿ ಸೇರಿದವರೆಲ್ಲರಿಗೂ ಮನವರಿಕೆಯಾಯಿತು.

ಮನಸ್ಸುಗಳನ್ನು ಒಗ್ಗೂಡಿಸುವ ಶಕ್ತಿ ಭಾರತೀಯ ಸಂಗೀತಕ್ಕಿದೆ. ಕಾಣದ ದೇವರನ್ನು ಕಾಣುವುದಕ್ಕೆ ಇದುವೇ ಸುಲಭಸಾಧನ ಎಂದರೆ ಅದು ಅತಿಶಯೋಕ್ತಿಯೇನಲ್ಲ. ಈ ಸಂಗೀತವನ್ನು ಸಿದ್ಧಿಸಿಕೊಂಡು ಮಹಾತ್ಮರಾದವರ ದೊಡ್ಡ ಪಟ್ಟಿಯೇ ನಮ್ಮಲ್ಲಿದೆ. ಶಾಶ್ವತ ಆನಂದವನ್ನು ಆತ್ಮದೊಳಗೆ ತುಂಬುವ ನಮ್ಮ ಸಂಗೀತದ ಮುಂದೆ ಕ್ಷಣಿಕ ಉನ್ಮಾದವನ್ನು ನೀಡುವ ಪಾಶ್ಚಾತ್ಯಸಂಗೀತ ಸಾಟಿಯಾಗುವುದೇ?ಪಾಶ್ಚಾತ್ಯರಂತೆ ಕಿಕ್ಕಿರದ ಶೋಗಳಲ್ಲಿ ಕಿರುಚುತ್ತಾ ಕುಣಿದು ಕುಪ್ಪಳಿಸಿ ರಾತ್ರೋರಾತ್ರಿ ಪ್ರಖ್ಯಾತರಾಗಿ ಬೆಳಗಾಗುವದರೊಳಗೇ ಕಳೆದುಹೋಗುವ ಗಾಯಕರಂತೆ ನಮ್ಮ ಶಾಸ್ತ್ರೀಯ ಸಂಗೀತದಲ್ಲಿ ಇಲ್ಲ. ಜೀವನಪರ್ಯಂತ ನಾದಾನುಸಂಧಾನವನ್ನು ತಪಸ್ಸಿನಂತೆ ಆಚರಿಸುತ್ತಾ ಹಣ-ಕೀರ್ತಿಗೆ ಕೈಚಾಚದೆ ದೇವಾನುದೇವತೆಗಳನ್ನು ಬಾಚಿ ತಬ್ಬಿಕೊಳ್ಳುವರು ನಮ್ಮವರು. ಈಗ ಹೇಳಿ ವಸುಧೆಯಲ್ಲಿ ಪರಮಾದ್ಭುತವಲ್ಲವೇ ಭಾರತೀಯಸಂಗೀತ, ಮಿಗಿಲಾವುದು ಇದಕಿಂತ?

ಲೇಖನ-ಚಿನ್ಮಯ.ಎಂ.ರಾವ್ ಹೊನಗೋಡು

‎May 18th, 2011

*********************

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.