-ಎನ್.ಡಿ.ಹೆಗಡೆ ಆನಂದಪುರಂ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೋಬಳಿ ಕೇಂದ್ರವಾದ ಆನಂದಪುರಂ ಸುತ್ತ ಮುತ್ತ ಪೌರಾಣಿಕ ಹಾಗೂ ಐತಿಹಾಸಿಕವಾದ ಹಲವು ಸ್ಮಾರಕಗಳಿವೆ. ಹಲವೆಡೆ ಮಹತ್ತರ ಶಾಸನಗಳು ಸಹ ದೊರೆತಿವೆ. ಈ ಹೋಬಳಿಯ ವ್ಯಾಪ್ತಿಯ ಮಲಂದೂರು ಗ್ರಾಮದಲ್ಲಿ ವಿಶಾಲವಾದ ಕೊಳದ ನಡುವೆ ನಿರ್ಮಿತವಾದ ದೇಗುಲವನ್ನೊಳಗೊಂಡ ಚಂಪಕ ಸರಸ್ಸು ಎಂಬ ಆಕರ್ಷಕ ಕೊಳವಿದೆ. ಇಲ್ಲಿ ಪ್ರಾಚೀನ ಕಾಲದಲ್ಲಿ ಮಠವೊಂದು ಅಸ್ತಿತ್ವದಲ್ಲಿತ್ತು. ಇದಕ್ಕೆ ಮಹಂತೇಶ್ವರ ಮಠ, ಮಹಾಂತ ಮಠ ಎಂಬ ಹೆಸರುಗಳು ಇವೆ.
ಪ್ರೇಕ್ಷಣೀಯ ಸ್ಥಳ
ಪ್ರಾಚೀನ ಕಾಲದಲ್ಲಿ ನಿರ್ಮಾಣವಾದ ಇಲ್ಲಿನ ಕೊಳ ಚಿಕ್ಕದಾಗಿದ್ದು ನೀರಿನಿಂದ ಕೂಡಿತ್ತು ಎಂದು ತಿಳಿದು ಬರುತ್ತದೆ. ಕೆಳದಿ ಅರಸು ವಂಶದ ದೊರೆ ವೆಂಕಟಪ್ಪ ನಾಯಕನ ಕಾಲದಲ್ಲಿ ಈ ಕೊಳ ಪುನರ್ ನಿರ್ಮಾಣಗೊಂಡು ವಿಶಾಲವಾದ ನೀರಿನ ಕೊಳವಾಗಿ ನಿರ್ಮಿಸಲ್ಪಟ್ಟಿತು. ಈ ಸಂದರ್ಭದಲ್ಲಿ ಕೊಳದ ಮಧ್ಯದಲ್ಲಿ ಸುಂದರವಾದ ನಂದಿ ಮಂಟಪ, ಆ ಮಂಟಪ ತಲುಪಲು ಶಿಲಾ ಕಲ್ಲಿನ ಸೇತುವೆ, ಸುತ್ತಮುತ್ತಲು ಜಂಬಿಟ್ಟಿಗೆಯ ಪಾವಟಿಗೆಗಳು, ರಕ್ಷಣಾ ಗೋಡೆ, ಆಳೆತ್ತದ ಶಿಲಾ ಕಲ್ಲಿನ ಆನೆಗಳು, ಮೇಲ್ಭಾಗದ ಎದುರು ಭಾಗದಲ್ಲಿ ಶಿಲಾ ನಿರ್ಮಿತ ಶಿವದೇಗುಲಗಳು ನಿರ್ಮಾಣಗೊಂಡು ಆಕರ್ಷಣೀಯ ತಾಣವಾಗಿ ಮಾರ್ಪಟ್ಟಿತು. ಕೊಳದ ಹಿಂಭಾಗದ ಮೂಲಕ ಗ್ರಾಮಕ್ಕೆ ತಲುಪಲು ಅಗತ್ಯವಾದ ದ್ವಾರ ನಿರ್ಮಾಣ ಇತ್ಯಾದಿ ಇಲ್ಲಿ ಹಲವು ಬಗೆಯ ಐತಿಹಾಸಿಕ ಕುರುಹುಗಳು ಇದ್ದು ಇದೊಂದು ಪ್ರೇಕ್ಷಣೀಯ ಸ್ಥಳವಾಗಿದೆ.
ಉಪ ಪತ್ನಿಯೊಂದಿಗೆ ವಿಹರಿಸಲು…
ವೆಂಕಟಪ್ಪ ನಾಯಕನ ಕಾಲದಲ್ಲಿ (ಕ್ರಿ.ಶ.ಸುಮಾರು ೧೭೫೦)ಆನಂದಪುರಂನಲ್ಲಿ ಕೋಟೆ ಪುನರುಜ್ಜೀವನ ಗೊಂಡು ರಾಜ್ಯ ರಕ್ಷಣೆಯ ಸೈನಿಕರ ಒಂದು ತುಂಡು ಕೋಟೆಯೊಳಗೆ ಬೀಡು ಬಿಟ್ಟಿತ್ತು. ಕೆಳದಿ ಸಾಮ್ರಾಜ್ಯದ ಆಡಳಿತ ಕೇಂದ್ರವಾದ ಇಕ್ಕೇರಿ ರಾಜಧಾನಿಯಿಂದ ಹೊಸ ರಾಜಧಾನಿಯಾದ ನಗರದ ಸಮೀಪದ ಬಿದನೂರು ಕೋಟೆಗೆ ಹೋಗುವ ಮಾರ್ಗದಲ್ಲಿ ರಾಜ ವೆಂಕಟಪ್ಪ ನಾಯಕ ಈ ಕೋಟೆಗೆ ಬಂದು ತಂಗುತ್ತಿದ್ದನಂತೆ. ರಾಜನಿಗೆ ಚಂಪಕ ಎಂಬ ಹೆಸರಿನ ಉಪ ಪತ್ನಿ ಇದ್ದು ಇವಳು ಆನಂದಪುರಂ ಗ್ರಾಮದ ಸ್ಥಳೀಯ ನಿವಾಸಿ ಆಗಿರುತ್ತಾಳೆ. ಈಕೆ ಬಹು ಆಪ್ತಳಾಗಿದ್ದು ಅವಳ ಜೊತೆ ವಿಹರಿಸಲು ಈ ಕೊಳ ವಿಸ್ತಾರಗೊಳಿಸಿ ಅಭಿವೃದ್ಧಿಪಡಿಸಿ ಪುನರ್ ನಿರ್ಮಿಸಿದ್ದನೆಂದು ಲಿಂಗಣ್ಣ ಕವಿ ವಿರಚಿತ ಕೆಳದಿ ನೃಪ ವಿಜಯ ಗೃಂಥದಿಂದ ವೇದ್ಯವಾಗುತ್ತದೆ. ಚಂಪಕ ಎಂಬ ಈ ಪತ್ನಿಯೊಂದಿಗೆ ವಿಹರಿಸಲು ನಿಸರ್ಗದ ಮಡಿಲಲ್ಲಿರುವ ಈ ಕೊಳವನ್ನು ಸುಂದರವಾಗಿ ಪುನರ್ ನಿರ್ಮಿಸಿದ ಈ ಸಂದರ್ಭದಲ್ಲಿ ಈ ಕೊಳಕ್ಕೆ ಚಂಪಕ ಸರಸ್ಸು ಎಂದು ಹೆಸರಿಸಲಾಯಿತು. ಈ ಕೊಳ ವಿಶಾಲವಾಗಿದ್ದು ವರ್ಷವಿಡೀ ತಿಳಿಯಾದ ನೀರಿನಿಂದ ತುಂಬಿರುತ್ತದೆ. ಕಡು ಬೇಸಿಗೆಯಲ್ಲಿ ಸಹ ಸುತ್ತಮುತ್ತಲು ಇರುವ ಮಲಂದೂರು, ಆನಂದಪುರಂ, ಸಿದ್ದೇಶ್ವರ ಕಾಲೋನಿ ಮತ್ತು ದಾಸಕೊಪ್ಪ ಗ್ರಾಮಗಳ ಕುಡಿಯುವ ನೀರಿನ ಬಾವಿ ಬತ್ತಿದರೂ ಸಹ ಈ ಕೊಳ ಬರಿದಾಗುವುದಿಲ್ಲ.
ಈ ಕೊಳದ ಪ್ರವೇಶ ದ್ವಾರದಲ್ಲಿ ಪ್ರವಾಸಿಗರನ್ನು ಸ್ವಾಗತಿಸುತ್ತಾ ನಿಂತಿರುವಂತೆ ಭಾಸವಾಗುವ ಕಲ್ಲಿನಿಂದ ನಿರ್ಮಿಸಿದ ಆಳೆತ್ತರದ ಆನೆಯ ವಿಗ್ರಹವಿದೆ. ಕೊಳದ ನಡುವಿನ ನಂದಿ ಮಂಟಪಕ್ಕೆ ತಲುಪಲು ಕಲ್ಲಿನ ಸೇತುವೆ ಸಹ ಇದೆ. ಈ ಕೊಳ ಸ್ವಾಭಾವಿಕ ಜಂಬಿಟ್ಟಿಗೆ ನೆಲದಲ್ಲಿ ಕೊರೆಯಲಾಗಿದ್ದು ಮೆಟ್ಟಿಲುಗಳಿಂದ ಕೂಡಿದೆ. ಕೊಳದ ಪಶ್ಚಿಮ ಭಾಗದ ಮೂಲೆಯಲ್ಲಿ ಸುರಂಗ ಮಾರ್ಗವಿದ್ದು ಆನಂದಪುರಂನ ಕೋಟೆಯನ್ನು ಸಂಪರ್ಕಿಸುತ್ತದೆ ಎಂಬ ಪ್ರತೀತಿ ಸಹ ಇದೆ.
ಗತವೈಭವ ಮತ್ತೆ ಮರುಕಳಿಸೀತೇ…?
ಅತ್ಯಂತ ಸುಂದರವಾದ ಈ ಕೊಳದ ಪಾವಟಿಗೆಗಳು ಕುಸಿಯುವ ಹಂತದಲ್ಲಿವೆ. ಕಲ್ಲಿನ ಸೇತುವೆ ಸಹ ಮೊದಲಿನ ಗಟ್ಟಿತನ ಕಳೆದುಕೊಂಡಿದೆ. ಕೊಳದ ಸುತ್ತಲೂ ನಿರ್ಮಿಸಿದ ರಕ್ಷಣಾತ್ಮಕ ಗೋಡೆಗಳು ಮರದ ಬೇರುಗಳ ಹೊಡೆತಕ್ಕೆ ಸಿಲುಕಿ ಹಲವೆಡೆ ಬಿರುಕು ಬಿಟ್ಟಿವೆ. ಅಲ್ಲಲ್ಲಿ ಗೋಡೆಯ ನಿರ್ಮಾಣಕ್ಕೆ ಬಳಸಿದ ಜಂಬಿಟ್ಟಿಗೆ ಕಲ್ಲುಗಳು ಉರುಳಿ ಬಿದ್ದಿವೆ. ಕೊಳದ ಸುತ್ತಲಿನ ಗೋಡೆಯ ಸುತ್ತ ಗಿಡ ಗಂಟಿಗಳು ಬೆಳೆದು ಭಯ ಹುಟ್ಟಿಸುವಂತಾಗಿದೆ. ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುತ್ತಾರೆ ಪ್ರಾಚೀನ ಐತಿಹಾಸಿಕ ವೈಭವ ಮತ್ತೆ ಮರಳುತ್ತದೆಂದು ಈ ಕೊಳ ನಿರೀಕ್ಷೆಯಲ್ಲಿದೆ. ಇಲ್ಲಿ ನಿಂತ ಆನೆಗಳು ಹಿಂದಿನ ವೈಭವ ಸವಿಯಲು ಕಾತರಿಸುತ್ತವೆಯೆನೋ ಅನಿಸುತ್ತವೆ. ಕೊಳದ ದಂಡೆಯಲ್ಲಿ ಬಿದ್ದಿರುವ ಕಲ್ಲಿನ ಮರಿಗೆ, ಬೀಸುವ ಕಲ್ಲು, ರುಬ್ಬುವ ಕಲ್ಲುಗಳು ಪ್ರಾಚೀನ ವೈಭವದ ಮೂಕ ಸಾಕ್ಷಿಗಳಾಗಿದೆ. ಪ್ರಾಚೀನ ಕಾಲದ ಮಹಂತೇಶ್ವರ ದೇಗುಲ ಕಟ್ಟಡ ನೆಲಸಮವಾಗಿ ಅಡಿಪಾಯ ಮಾತ್ರ ಉಳಿದುಕೊಂಡಿದೆ. ದೇವರ ಪಾಣಿ ಪೀಠ ಬರಿದಾಗಿದ್ದು ಪ್ರವಾಸಿಗರಲ್ಲಿ ಮರುಕ ಹುಟ್ಟಿಸುವಂತಿದೆ. ಪ್ರಾಚ್ಯವಸ್ತು ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿಯ ಈ ಸ್ಥಳವನ್ನು ಅಭಿವೃದ್ಧಿಪಡಿಸಿ ಸುಸಜ್ಜಿತ ಸಂಪರ್ಕ ರಸ್ತೆ, ಮಾರ್ಗಸೂಚಿಯ ಸೂಚನಾ ಫಲಕ, ಇಲ್ಲಿನ ಹಳೆಯ ಇತಿಹಾಸದ ಅಂಶಗಳ ಫಲಕಗಳನ್ನು ಅಳವಡಿಸಿದರೆ ಜೋಗ ಮಾರ್ಗದಲ್ಲಿ ಪ್ರಯಾಣಿಸುವ ಪ್ರವಾಸಿಗರಿಗೆ ಸಂತಸ ನೀಡಿವ ತಾಣವಾಗುವುದರಲ್ಲಿ ಸಂದೇಹವೇ ಇಲ್ಲ.
***********