ಫೋಟೋ ಮತ್ತು ಲೇಖನ- ಎನ್.ಡಿ.ಹೆಗಡೆ ಆನಂದಪುರಂ
ಕರ್ನಾಟಕದಲ್ಲಿ ಹಲವು ನದಿಗಳು ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ಎತ್ತರದಿಂದ ಧುಮ್ಮಿಕ್ಕಿ ಜಲಪಾತ ಸೃಷ್ಠಿಸಿವೆ. ಇಂತಹ ಹಲವು ನದಿಗಳಿಗೆ ಅಣೆಕಟ್ಟುಗಳಾಗಿ ಅಥವಾ ನೀರಾವರಿ ಯೋಜನೆಗಳು ನಿರ್ಮಾಣಗೊಂಡು ಮಳೆಗಾಲದಲ್ಲಿ ಮಾತ್ರ ಜಲಪಾತದ ದರ್ಶನವಾಗಿ ಉಳಿದ ದಿನ ಬಿಕೋ ಎನ್ನುತ್ತಿರುತ್ತವೆ. ಕೆಲವು ಬೆರಣೆಣಿಕೆಯ ನದಿ ಹೊಳೆಗಳು ವರ್ಷದ ಬಹುತೇಕ ದಿನಗಳಲ್ಲಿ ಧುಮ್ಮಿಕ್ಕಿ ಸುರಿದು ಜಲಪಾತವಾಗಿ ಪ್ರವಾಸಿಗರನ್ನು ಸೆಳೆಯುತ್ತಿವೆ. ಇಂತಹ ಜಲಪಾತಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿರುವ ಉಂಚಳ್ಳಿ ಜಲಪಾತವು ಅತ್ಯಾಕರ್ಷಕವಾಗಿದೆ.
ಸಿದ್ಧಾಪುರ ಮತ್ತು ಶಿರಸಿ ತಾಲೂಕಿನ ಗಡಿ ಭಾಗದಲ್ಲಿರುವ ಈ ಜಲಪಾತ ವೀಕ್ಷಣೆ ಪ್ರವಾಸಿಗರಿಗೆ ಪುಳಕ ನೀಡುವಂತಹುದು. ಅಘನಾಶಿನಿ ನದಿ ದಟ್ಟ ಅರಣ್ಯದ ಮಧ್ಯದಿಂದ ಹರಿದು ಬಂದು ಕಲ್ಲಿನ ಬಂಡೆಗಳಲ್ಲಿ ಹೊರಳುತ್ತಾ ನೊರೆ ನೊರೆ ಸೃಷ್ಠಿಸುತ್ತಾ ಉಂಚಳ್ಳಿ ಎಂಬ ಈ ಸ್ಥಳದಲ್ಲಿ ಧುಮ್ಮಿಕ್ಕುತ್ತದೆ. ಹೆಗ್ಗರಣೆ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಈ ಸ್ಥಳದಲ್ಲಿ ವೀಕ್ಷಣೆಗೆ ಪ್ರವಾಸೋಧ್ಯಮ ಇಲಾಖೆಯವರು ಮೆಟ್ಟಿಲು ಮತ್ತು ವೀಕ್ಷಣಾ ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಈ ಕಟ್ಟೆಗಳು ಹಂತ ಹಂತವಾಗಿದ್ದು ಪ್ರತಿ ಹಂತದಿಂದ ನಿಂತು ವೀಕ್ಷಿಸಿದಾಗಲೂ ಜಲಪಾತದ ಸೌಂದರ್ಯ ವಿಭಿನ್ನವಾಗಿ ಕಾಣುತ್ತದೆ. ಕಿವಿ ಗಡಚಿಕ್ಕುವ ಶಬ್ದದೊಂದಿಗೆ ಸಾಬೂನಿನ ನೊರೆಯಂತೆ ಕಂಗೊಳಿಸುತ್ತಾ ಸುಮಾರು ೩೫೦ ಅಡಿ ಎತ್ತರದಿಂದ ಬೀಳುವ ಈ ಜಲಪಾತ ಮೈನವಿರೇಳುವಂತಹುದು. ಜಲಪಾತದ ಭೋರ್ಗರೆತದ ಶಬ್ಧ ಅತ್ಯಧಿಕವಾಗಿದ್ದು ಅಕ್ಕಪಕ್ಕ ನಿಂತು ಮಾತನಾಡಿದರೂ ಪರಸ್ಪರರಿಗೆ ಸ್ಪಷ್ವವಾಗಿ ಕೇಳಿಸದಷ್ಟು ದೊಡ್ಡದಾಗಿರುತ್ತದೆ.
ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಬ್ರಿಟೀಷ್ ಸಾರ್ಜಂಟ್ ಸರ್ ಲೂಶಿಂಗ್‌ಟನ್ ಇಲ್ಲಿಗೆ ಭೇಟಿ ನೀಡಿದ್ದರಿಂದ ಇದಕ್ಕೆ ಲೂಶಿಂಗ್‌ಟನ್ ಜಲಪಾತ ಎಂಬ ಹೆಸರೂ ಸಹ ಇದೆ. ಸ್ಥಳೀಯರು ಈ ಜಲಪಾತಕ್ಕೆ ಕೆಪ್ಪಜೋಗ ಎಂದೂ ಕರೆಯುವ ರೂಢಿ ಇದೆ.
ಸಿದ್ಧಾಪುರದಿಂದ ಶಿರಸಿ ಮಾರ್ಗದಲ್ಲಿ ೪ ಕಿ,ಮೀ.ಸಾಗಿ ಎಡಕ್ಕೆ ತಿರುಗಿ ಕೋಲಸಿರ್ಸಿ, ಹಾರ್ಸಿಕಟ್ಟ ,ಹೆಗ್ಗರಣೆ ಮಾರ್ಗವಾಗಿ ೩೨ ಕಿ,.ಮೀ.ದೂರದಲ್ಲಿ ಈ ಜಲಪಾತ ತಲುಪಬಹುದು. ಅಥವಾ ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯಲ್ಲಿ ಹೆಗ್ಗರಣೆ ಕ್ರಾಸ್ ನಿಂದ ೧೫ ಕಿ,ಮೀ ದೂರ ಪ್ರಯಾಣಿಸಿದರೆ ಈ ಜಲಪಾತವನ್ನು ತಲುಪಬಹುದಾಗಿದೆ.
ಫೋಟೋ ಮತ್ತು ಲೇಖನ- ಎನ್.ಡಿ.ಹೆಗಡೆ ಆನಂದಪುರಂ
21-2-2013