ಹರಿಯುವ ನದಿಯನ್ನು ತಡೆದು ನಿರ್ಮಿಸುವ ಅಣೆಕಟ್ಟುಗಳನ್ನು ನೋಡುವ, ಅದರ ಮೇಲ್ಭಾಗದಲ್ಲಿ ಓಡಾಡುವ ಆಸೆ ಹಲವರದ್ದಾಗಿರುತ್ತದೆ.ಪಟ್ಯ ಪುಸ್ತಕಗಳಲ್ಲಿ ಸಾಕಷ್ಟು ವರ್ಣನೆ ಹಾಗೂ ವಿಸ್ತಾರಗಳಿಂದ ವರ್ಣಿತವಾಗುವ ಜಗತ್ ಪ್ರಸಿದ್ಧ ಜೋಗ ಜಲಪಾತ ಮತ್ತು ಅದಕ್ಕೆ ಹಿನ್ನೆಲೆಯಾಗಿರುವ ಲಿಂಗನಮಟ್ಟಿ ಅಣೆಕಟ್ಟೆಯನ್ನು ನೋಡುವ ಕಾತುರತೆ ಪ್ರವಾಸಿಗರಿಗೆ ಸಹಜವಾಗಿಯೇ ಉಂಟಾಗಿರುತ್ತದೆ.ಆದರೆ ಭದ್ರತೆಯ ದೃಷ್ಠಿಯಿಂದ ಲಿಂಗನಮಕ್ಕಿ ಅಣೆಕಟ್ಟೆಯ ಮೇಲೆ ಓಡಾಡುವದಿರಲಿ ಸನಿಹದಿಂದ ವೀಕ್ಷಿಸುವ ಅವಕಾಶ ಸಹ ಈಗ ಇಲ್ಲವಾಗಿದೆ.
ಜೋಗದ ಪ್ರವಾಸಕ್ಕೆ ಶಿವಮೊಗ್ಗ ಮೂಲಕ ಆಗಮಿಸುವ ಪ್ರವಾಸಿಗರಿಗೆ ಮೋಜು ಮಸ್ತಿ ನೀಡುವ ಪುಟ್ಟ ಅಣೆಕಟ್ಟು ಇಲ್ಲಿದೆ. ಶಿವಮೊಗ್ಗದಿಂದ ಜೋಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸುಮಾರು 40 ಕಿ.ಮೀ.ದೂರ ಸಾಗಿದರೆ ಗಿಳಾಲಗುಂಡಿ ಎಂಬ ಪುಟ್ಟ ಊರಿದೆ. ಇಲ್ಲಿಂದ ಬಲಕ್ಕೆ 2 ಕಿ,ಮೀ.ಒಳಕ್ಕೆ ಇರುವ ಕೊಲ್ಲಿಬಚ್ಚಲು ಅಣೆಕಟ್ಟು ಸೌಂದರ್ಯ , ಗಂಭೀರತೆ ಮತ್ತು ನಿರ್ಸಗದ ಮಡಿಲುಗಳಿಂದ ಎಂಥವರನ್ನಾದರೂ ಆಕರ್ಷಿಸುತ್ತದೆ.
ಆಲ್ಲಿ ರಸ್ತೆಯಲ್ಲಿ ಚಾರಣದ ಮೂಲಕ ಸಾಗಿದರೆ ಸುಮಾರು 50 ಎಕರೆ ವಿಸ್ತೀರ್ಣದ ಅಮ್ಮನಕೆರೆ ಎಂಬ ಸುಂದರ ಕೆರೆ, ಬಲಗಡೆ ಎತ್ತರದ ಗುಡ್ಡಗಳ ಶ್ರೇಣಿ, ಬಗೆ ಬಗೆಯ ಪಕ್ಷಿ ಸಂಕುಲ, ಹಲವು ಔಷಧಿಯ ಗುಣಗಳ ಸ್ವಾಭಾವಿಕ ಸಸ್ಯಗಳು ಮೈ ಮರೆಸುತ್ತವೆ. ನಾಲ್ಕಾರು ಜನರು ಹರಟೆ ಹೊಡೆಯುತ್ತಾ ಸುತ್ತಮುತ್ತಲ ಮಲೆನಾಡ ನಿಸರ್ಗ ಸೊಬಗನ್ನು ಸವಿಯುತ್ತಾ ಸಾಗಿದರೆ ದಾರಿ ಸವೆದದ್ದೆ ಅರಿವಾಗುವುದಿಲ್ಲ.
ಸಣ್ಣ ನೀರಾವರಿ ಯೋಜನೆಯಡಿ 2005ರಲ್ಲಿ ಪ್ರಾರಂಭಗೊಂಡ ಈ ಅಣೆಕಟ್ಟು 2008 ರಲ್ಲಿ ಸಾರ್ವಜನಿಕರಿಗೆ ಮುಕ್ತಗೊಂಡಿತು.ಒಟ್ಟು 9 ಮೀಟರ್ ಎತ್ತರ ಹಾಗೂ 62 ಮೀಟರ್ ಅಗಲದ ಈ ಅಣೆಕಟ್ಟು ಪ್ರವಾಸಿಗರಿಗೆ ಮುಕ್ತ ಪ್ರವಾಸಕ್ಕೆ ತೆರೆದುಕೊಂಡಿದೆ.8 ಮೀಟರ್ ಅಗಲದ ವಿಸ್ತಾರದಲ್ಲಿ ನೀರು ಉಕ್ಕಿ ಹರಿಯುವ ಇಲ್ಲಿನ ದೃಶ್ಯ ಅವಿಸ್ಮರಣೀಯ ಅನುಭವ ನೀಡುತ್ತದೆ.ಸುಮಾರು 3 ಟಿ.ಎಂ.ಸಿ ನೀರು ಸಂಗ್ರಹಣಾ ಸಾಮಥ್ರ್ಯದ ಈ ಅಣೆಕಟ್ಟು ಹಿನ್ನೀರ ನೋಟ ಮೈ ಮನ ಪುಳಕಗೊಳಿಸುತ್ತದೆ.
ಲೇಖನ ಮತ್ತು ಫೋಟೋ-ಎನ್.ಡಿ.ಹೆಗಡೆ ಆನಂದಪುರಂ
ನಿವಾಸ ಮತ್ತು ಅಂಚೆ-ಆನಂದಪುರಂ
ತಾಲೂಕು-ಸಾಗರ ಜಿಲ್ಲೆ-ಶಿವಮೊಗ್ಗ 577412
ಮೊಬೈಲ್-9632450025 ಅಥವಾ 9449686050