ಅಧ್ಯಯನಸಾಹಿತ್ಯ

ದತ್ತು ಸ್ವೀಕಾರಕ್ಕೂ ಮೈಸೂರು ಸಂಸ್ಥಾನಕ್ಕೂ ಒಂದು ಅವಿನಾಭಾವನಂಟಿದೆ..!

ಅಂಬಾವಿಲಾಸದ ಅಂಗಳದಿಂದ…|ಭಾಗ-2

-ರಾಮಗೋಪಾಲ ಚಕ್ರವರ್ತಿ

ದತ್ತು ಸ್ವೀಕಾರದ ಹಿನ್ನೆಲೆ

ಒಡೆಯರ ವಂಶವು ೧೪ ಮತ್ತು ೧೫ನೇ ಶತಮಾನದಲ್ಲಿ ವಿಜಯನಗರದ ಅರಸರ ಅಧೀನದಲ್ಲಿದ್ದರು. ವಿಜಯನಗರದ ದಂಡನಾಯಕರ ರಾಜಧಾನಿ ಶ್ರೀರಂಗಪಟ್ಟಣವಾಗಿದ್ದಿತು. ಯದುರಾಯರ ಆಳ್ವಿಕೆಯ ಅವಧಿಯಲ್ಲಿ ಸಂಸ್ಥಾನದ ಪರಿಧಿ ಹೆಚ್ಚಿಸಲಾಯಿತು. ಒಂಬತ್ತನೇ ಮಹಾರಾಜರಾಗಿದ್ದ ರಾಜಒಡೆಯರು ಅತ್ಯಂತ ಪರಾಕ್ರಮಶಾಲಿಗಳಾಗಿದ್ದರಲ್ಲದೆ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಮನ್ನಣೆ ಕೊಡುತ್ತಿದ್ದರು.ಇವರು ೧೫೭೮ರಿಂದ ೧೬೧೭ರವರೆಗೆ ರಾಜ್ಯಭಾರ ನಡೆಸಿದ್ದರು. ವಿಜಯನಗರದ ದಂಡನಾಯಕ ತಿರುಮಲನನ್ನು ಜಯಿಸಿ ಶ್ರೀರಂಗಪಟ್ಟಣದ ಕೋಟೆಯನ್ನು ಸ್ವಾಧೀನ ಪಡಿಸಿಕೊಂಡರು. ಆಗ ತಿರುಮಲನು ತನ್ನ ಇಬ್ಬರು ಪತ್ನಿಯರೊಡನೆ ಕೂಡಿ ತಲಕಾಡಿನಲ್ಲಿ ಆಶ್ರಯ ಪಡೆದಿದ್ದನು. ಪತ್ನಿಯರಲ್ಲಿಒಬ್ಬರಾದ ಅಲಮೇಲಮ್ಮನವರು ಶ್ರೀರಂಗಪಟ್ಟಣದ ಶ್ರೀರಂಗನಾಥನ ಅರ್ಧಾಂಗಿ ರಂಗನಾಯಕಿಯ ಪರಮ ಭಕ್ತೆಯಾಗಿದ್ದರು.

ತಿರುಮಲನು ಅನೇಕ ವರ್ಷಗಳಿಂದ ರೋಗ ಪೀಡಿತನಾಗಿ ನರಳುವಿಕೆಯ ನಂತರ ಇಹಲೋಕ ತ್ಯಜಿಸಿದನು. ಆಗ ಅಲಮೇಲಮ್ಮನವರ ಬಳಿ ಅನೇಕ ಬಗೆಯ ರತ್ನಾಭರಣಗಳು ಇದ್ದವು. ಅವುಗಳಲ್ಲಿ ಮುತ್ತಿನದು ಒಂದು ವಿಶೇಷತೆಯಿಂದ ಕೂಡಿತ್ತು. ಈಗ ತಾನು ವಿಧವೆಯಾದ ಕಾರಣ ಅದರ ಉಪಯೋಗ ಕಾಣದೆ ಅಲಮೇಲಮ್ಮನವರು ತಮ್ಮ ಆಭರಣಗಳನ್ನೆಲ್ಲಾ ರಂಗನಾಯಕಿ ಅಮ್ಮನವರ ಸನ್ನಿಧಿಗೆ ಸಮರ್ಪಿಸಿದ್ದರು. ಪ್ರತಿಮಂಗಳವಾರ ಮತ್ತು ಶುಕ್ರವಾರ ಅಮ್ಮನವರ ವಿಗ್ರಹಕ್ಕೆ ಈ ದೊಡ್ಡ ಮುತ್ತಿನ ನತ್ತು ಹಾಗೂ ಇನ್ನಿತರ ಆಭರಣಗಳನ್ನುತೊಡಿಸಿ, ಮಿಕ್ಕೆಲ್ಲ ದಿನಗಳಲ್ಲಿ ಅದು ಅಲಮೇಲಮ್ಮನವರ ಸುಪರ್ದಿಯಲ್ಲಿರುತ್ತಿತ್ತು.

ದೇವಾಲಯದ ಮೇಲ್ವಿಚಾರಕರು ಈ ವಿಷಯವನ್ನು ರಾಜಒಡೆಯರಿಗೆ ತಿಳಿಸಿ, ದೇವಾಲಯದ ಪದ್ದತಿಯಂತೆ ಅಲ್ಲೇ ಉಳಿಸಿಕೊಳ್ಳುವಂತೆ ಕೋರಿದರು. ಅವರ ಕೋರಿಕೆಯಂತೆ ರಾಜ ಒಡೆಯರು ತಮ್ಮ ದೂತರನ್ನು ಮಾಲಂಗಿಯಲ್ಲಿ ತಂಗಿದ್ದ ಅಲಮೇಲಮ್ಮನವರಿಂದ ಆಭರಣ ತೆಗೆದುಕೊಳ್ಳಲು ಕಳುಹಿಸಿದರು .ಇದಕ್ಕೆ ಅಲಮೇಲಮ್ಮನವರು ನಿರಾಕರಿಸಿದರು.

ಆಗ ರಾಜ ಒಡೆಯರು ತಮ್ಮ ಸೈನಿಕರನ್ನು ಕಳುಹಿಸಿ, ಮತ್ತೆಯೂ ಅಲಮೇಲಮ್ಮನವರು ನಿರಾಕರಿಸಿದರೆ ಬಲವಂತದಿಂದ ಆಭರಣಗಳನ್ನು ತೆಗೆದುಕೊಂಡು ದೇವಾಲಯದ ಸುಪರ್ದಿಗೆ ಒಪ್ಪಿಸುವಂತೆ ಕಳುಹಿಸಿದರು. ಮೈಸೂರಿನ ಸೈನಿಕರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಅಲಮೇಲಮ್ಮನವರು ಮಾಲಂಗಿಯ ಕಾವೇರಿ ನದಿಯಲ್ಲಿ ತನ್ನೆಲ್ಲಾ ಆಭರಣಗಳೊಂದಿಗೆದೇ ದೇಹತ್ಯಾಗ ಮಾಡಿಬಿಟ್ಟರು. ನದಿಗೆ ಹಾರುವ ಮೊದಲು ಐತಿಹಾಸಿಕವಾದ ೩ ಶಾಪಗಳನ್ನು ಹಾಕಿ ಕಾವೇರಿಯ ಒಡಲನ್ನು ಸೇರಿದರು. ಇದೇ ಶಾಪ ಕಳೆದ ೪೦೦ವರ್ಷಗಳಿಂದ ಕಾಡುತ್ತಿದೆ…

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker