ಅಧ್ಯಯನಕನ್ನಡ

ಮಹಾತ್ಮನೆಡೆಗೆ..

mahatma-gandhiji-4-ವಿಜಯ್.ಸಿ.ವಿ

ಮೋಹನದಾಸ್ ಕರಮಚಂದ್ ಗಾಂಧಿ “ಮಹಾತ್ಮ ಗಾಂಧಿ”ಯಾದ ಹೆಜ್ಜೆಗಳು ನಮಗೆಲ್ಲಾ ಬಹುಪಾಲು ತಿಳಿದಿವೆ. ನಮ್ಮ “ರಾಷ್ಟ್ರಪಿತ”ನ ಕುರಿತು ನಾವು ಚಿಕ್ಕವಯಸ್ಸಿನಿಂದ ಓದಿದ್ದೇವೆ, ಕೇಳಿದ್ದೇವೆ, ನೋಡಿದ್ದೇವೆ. ಆದರೆ ಅನುಸರಿಸಿಲ್ಲ, ಅವರ ದಾರಿಯಲ್ಲಿ ಹೆಜ್ಜೆ ಇಡಲು ಮನಸ್ಸು ಮಾಡಿಲ್ಲ. ತಮ್ಮ ಜೀವಿತಾವಧಿ ಪೂರ್ಣ ಪ್ರಮುಖವಾಗಿ ಗಾಂಧೀಜಿ ಅಳವಡಿಸಿಕೊಂಡು ಸಾರಿದ್ದು ಸತ್ಯ ಮತ್ತು ಅಹಿಂಸೆಗಳೆರಡನ್ನೇ. ತಮ್ಮನ್ನೇ ಪ್ರಯೋಗಕ್ಕೆ ಒಡ್ಡಿಕೊಂಡು, ತಾವು ಅನುಭವಿಸಿದ್ದನ್ನು ಪ್ರಯೋಗದ ಫಲಿತಾಂಶಗಳಂತೆ ನಮ್ಮ ಮುಂದೆ ಬಿಚ್ಚಿಟ್ಟ ಅವಧೂತ ಮೋಹನದಾಸ್ ಗಾಂಧಿ. ಈ ಪ್ರಕ್ರಿಯೆಯ ಮಧ್ಯೆ ಅವರ ಮನಸ್ಸಿನ ಪಾರದರ್ಶಕತೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ. ಮನುಷ್ಯ ವಿಕಾಸದತ್ತ ಮುಖಮಾಡಿ ನಡೆಯಲು ಆರಂಭಿಸಿದಾಗ ತನ್ನ ಸಹಜ ಸ್ವಭಾವದ ಅನೇಕ ಅಭ್ಯಾಸಗಳನ್ನು, ಲೋಕಾರೂಢಿಗಳನ್ನು ತಾನೇ ಗಮನಿಸಿ ಬದಲಾಯಿಸಿಕೊಳ್ಳಬೇಕಾಗುತ್ತದೆ. ಸ್ವವಿಮರ್ಶೆಯ ಅಳತೆಗೋಲು ಪಾರದರ್ಶಕವಾಗಿದ್ದರೆ ಮಾತ್ರ ವಿಕಾಸದ ಹೆಜ್ಜೆ ಮುಂದಕ್ಕೆ ಕರೆದೊಯ್ಯುತ್ತದೆ, ಇಲ್ಲವಾದಲ್ಲಿ ಹೆಜ್ಜೆ ನಿಂತಲ್ಲೇ ನಿಂತು ಹೂತುಹೋಗುತ್ತದೆ. ಗಾಂಧೀಜಿಯವರ ಬದುಕಿನಲ್ಲಿ ಇಂತಹ ಹಲವಾರು ಘಟನೆಗಳನ್ನು ನಾವು ಕಾಣಬಹುದು. ಅದಕ್ಕಾಗಿಯೇ ಗಾಂಧೀಜಿ ” ಮೇ ಲೈಫ್ ಈಸ್ ಮೈ ಮೆಸೇಜ್” ಎಂದರು.

mahatma-gandhijiಅವರು ಸಾರಿದ ಸತ್ಯದ ಪಾಲನೆ ನಮಗೆ ಈಗಿನ ಸಮಾಜದಲ್ಲಿ ಬಹು ಕಠಿಣವೆಂದು ಅನ್ನಿಸಿದರೂ ಕೂಡ, ದೇಶದ ಪ್ರಜೆಯ ಆರೋಗ್ಯಕರ ವ್ಯಕ್ತಿತ್ವ ನಿರ್ಮಾಣದತ್ತ ಅವರಿಗಿದ್ದ ದೂರದೃಷ್ಠಿಯ ಕೈಗನ್ನಡಿಯಿದು. ಇನ್ನು ಅಹಿಂಸೆಯ ಕೂಸು ಶಾಂತಿಯಂದು ಗಾಂಧೀಜಿ ತಮ್ಮ ನುಡಿಗಿಂತಲೂ ನಡೆಯಲ್ಲಿ ತೋರಿಸಿದರು. ವಿಶ್ವದಲ್ಲಿ ಆ ‘ಶಾಂತಿ’ ಎಷ್ಟು ಕದಡಿದೆ ಎಂದರೆ ಶಾಂತಿಯ ಸಂದೇಶ ಸಾರಿ, ಪ್ರೇರೆಪಿಸಿದವರಿಗೆ, ಶಾಂತಿ ಪ್ರಶಸ್ತಿಯಿತ್ತು, ಗೌರವಿಸುತ್ತಿದೇವೆ. ಅಷ್ಟು ಅಪರೂಪವಾಗಿದೆ ಶಾಂತಿಯ ನೆಲೆ. ನಮ್ಮ ದೇಶ ಹಾಗೂ ಇಡೀ ಪ್ರಪಂಚದಲ್ಲಿ ಅಹಿಂಸೆಯ ಈ ವಿರಳತೆ ಉಂಟಾಗಬಹುದು ಎಂದು ಗಾಂಧೀಜಿ ಸುಮಾರು ೭೦-೮೦ ವರ್ಷಗಳ ಹಿಂದೆಯೇ ಮನದಟ್ಟು ಮಾಡಿಕೊಂಡಿದ್ದರೆಂದರೆ ಅದು ಅವರ ಚಿಂತನೆಯ ವಿಶಾಲತೆಯನ್ನು ತೋರುತ್ತದೆ.

ಗಾಂಧೀಜಿಯವರ ಹೆಸರನ್ನು ಹೇಳಿಕೊಂಡು ನಿರ್ಮಿಸಿದ ಆಡಳಿತ ವ್ಯವಸ್ಥೆ, ಸಂಘ, ಪಾರ್ಟಿಗಳು ಕೇವಲ ಭಾವಚಿತ್ರಕ್ಕೆ ಅವರನ್ನು ಸೀಮಿತಗೊಳಿಸಿರುವುದು ನಿಜಕ್ಕೂ ಬಹಳ ಖೇದಕರ ಮತ್ತು ಭಾರತ ದೇಶದ ಸ್ವಾತಂತ್ರ್ಯ ಚರಿತ್ರೆಗೆ ಆದ ಅವಮಾನಕರ ಸಂಗತಿ. ಹಲವು ವರ್ಷಗಳ ಕಾಲ ಸುಖವನ್ನೇ ಅನುಭವಿಸಿದ ಮನಸ್ಸಿಗೆ ಸುಖವೇ ನೀರಸವೆನಿಸಿ ಅದರ ದುಖವಾಗುವಂತೆ, ಸುಮಾರು ೬ ದಶಕಗಳನ್ನು ಬಹುಪಾಲು ಶಾಂತಿಯುತ ಮತ್ತು ಸ್ವತಂತ್ರವಾಗಿ ಬಾಳಿ ಬದುಕಿದ ನಮಗೆ ಅದರ ಮಹತ್ವ ಅರಿಯದಂತಾಗಿದೆ.

mahatma-gandhiji-3ಆದರೆ ಯುದ್ಧ, ಭಷ್ಟಾಚಾರ, ಸಾರ್ವಭೌಮತ್ವ, ಹಿಂಸೆ, ಅವಮಾನ, ದುರಾಡಳಿತಗಳಿಂದ ಬೇಸತ್ತ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ನಮ್ಮತ್ತ ಮುಖಮಾಡಿ ಗಾಂಧೀಜಿಯವರ ಚಿಂತನೆ ಸಂದೇಶಗಳಿಂದ ನೂತನ ಭದ್ರ ಬುನಾದಿಯನ್ನು ಪುನರ್ ನಿರ್ಮಿಸಿಕೊಳ್ಳಲು ಹಪಹಪಿಸಿ ಕಾದುಕುಳಿತಿವೆ. ನಮ್ಮಲ್ಲಿ ವಿವಿಧತೆಯಿದೆ, ಅಸಮಾನತೆಯಿದೆ, ಹಾಗಿದೆ ಹೀಗಿದೆ ಎನ್ನುವ ನಾವೇ ನಮ್ಮಲ್ಲಿ ಶಾಂತಿಯಿದೆ ಎನುವುದನ್ನು ಮರೆತಿದ್ದೇವೆ. ‘ಸ್ವದೇಶಿಯತೆ’ ಮರೆತು ವಿದೇಶೀಯತೆಗೆ ಮಾರುಹೋಗಿದ್ದೇವೆ.
ನಾವು ಸ್ವತಂತ್ರದಿಂದ ಸ್ವಾಭಿಮಾನದೆಡೆಗೆ ಸುಭದ್ರ ಮತ್ತು ದಿಟ್ಟ ಹೆಜ್ಜೆಗಳನ್ನು ಇಡುವ ಬದಲು ಎಡವಿದ್ದೇವೆ.

ಮೊದಲು ಗಾಂಧೀಜಿಯವರ ಸಂದೇಶದ ಚಿಂತನೆ ಮತ್ತು ಪಾಲನೆಯಾಗಬೇಕಿರುವುದು ಅವರ ಸ್ವಂತ ನೆಲವಾದ ಭಾರತದಲ್ಲಿ, ಅದು ಕೂಡ ಈಗಲೇ ಎನ್ನುವುದು ಇಂದಿನ ಗಾಂಧಿ ಜಯಂತಿಯ ಪ್ರಮುಖ ಅಂಶ. ಹಳಿತಪ್ಪಿದ ಶಾಸಕಾಂಗ, ಭ್ರಷ್ಟಾಚಾರವನ್ನು ಹೊದ್ದು ಮಲಗಿರುವ ಕಾರ್ಯಾಂಗ, ಆಜ್ಞೆ ಮಾಡಿ ಮಾಡಿ ಸುಸ್ತಾಗಿರುವ ನ್ಯಾಯಾಂಗ, ಇವೆಲ್ಲವನ್ನೂ ನೋಡಿಕೊಂಡು ಕೂಡ ಮನೆ-ಮಡದಿ/ಗಂಡ-ಮಕ್ಕಳ ಹಿತರಕ್ಷಣೆಯಲ್ಲಿ ಬಂಧಿತನಾಗಿರುವ/ಬಂಧಿತಳಾಗಿರುವ ಪ್ರಜೆ ಬಲವಂತವಾಗಿ ಕುರುಡನ/ಳಂತೆ ನಟಿಸಬೇಕಾಗಿದೆ.

mahatma-gandhiji-2ದಿನನಿತ್ಯದ ಬದುಕಿನಲ್ಲಿ ಅಲ್ಪ ವಿರಾಮವೆಂಬ ಮಹದಾಸೆಯನ್ನು ಬಯಸುವ ನಾಗರಿಕ ದೂರ ದೂರದ ಸಮುದ್ರ, ನಿಸರ್ಗಧಾಮ, ಆಶ್ರಮ ಹಾಗೂ ರೆಸಾರ್ಟ್‌ಗಳತ್ತ ಶಾಂತಿ ಪಡೆಯಲು ಓಡುವುದನ್ನು ಸರ್ವೇ ಸಾಮಾನ್ಯವಾಗಿ ಕಾಣುತ್ತಿದ್ದೇವೆ. ಶಾಂತಿ, ಪ್ರೀತಿ, ನಿರ್ಭಯತೆ, ಅಹಿಂಸೆಗಳು ನೀವಿದ್ದಲ್ಲಿಯೇ ನಿರ್ಮಿಸಿಕೊಳ್ಳಲು ತನ್ನ ಜೀವನವನ್ನೇ ತೆರೆದ ಪುಸ್ತಕದಂತೆ ನಮ್ಮ ಮುಂದೆ ಇರಿಸಿ ಹೋದ ಮಹಾತ್ಮ ಗಾಂಧಿಯವರನ್ನು, ಅವರ ತತ್ತ್ವಗಳನ್ನು ಗೋಡೆಗೆ ನೇತು ಹಾಕಿದ ಪರಿಣಾಮವಿದು ಎಂದು ಅನ್ನಿಸುವುದಿಲ್ಲವೇ?

ವಿಜಯ್.ಸಿ.ವಿ
ರೇಡಿಯೋ ಸಿದ್ಧಾರ್ಥ ೯೦.೮ ಎಫ್.ಎಮ್
ತುಮಕೂರು
+೯೧-೯೪೪೮೯೧೪೮೬೬

Related Articles

Check Also
Close
Back to top button

Adblock Detected

Please consider supporting us by disabling your ad blocker