ಕನ್ನಡಪುಣ್ಯಕ್ಷೇತ್ರ

ಬೆಂಗಳೂರಿನಲ್ಲೊಂದು ಅಪರೂಪದ ಶಿವದೇವಾಲಯ

ಫೋಟೋ ಮತ್ತು ಲೇಖನ :ಎನ್.ಡಿ.ಹೆಗಡೆ ಆನಂದಪುರಂ

ನಮ್ಮ ನಾಡಿನಲ್ಲಿರುವ ಬಹುತೇಕ ದೇವಾಲಯಗಳಿಗೆ ರಾಮಾಯಣ,ಮಹಾಭಾರತ, ಪುರಾಣ ಅಥವಾ ಐತಿಹಾಸಿಕ ಹಿನ್ನೆಯ ಕಥೆಯ ನಂಟು ಬೆಸೆದಿರುತ್ತದೆ. ಪ್ರಾಚೀನ ದೇವಾಲಯಗಳಲ್ಲಿ ಜನರಿಗೆ ಶ್ರದ್ಧಾ-ಭಕ್ತಿಗಳೂ ಅಧಿಕವಾಗಿರುತ್ತವೆ. ಆದರೆ ಆಧುನಿಕ ಯುಗದಲ್ಲಿ ಹೊಸದಾಗಿ ಸ್ಥಾಪಿತವಾದ ಹಲವು ದೇವಾಲಯಗಳು ಸದಾ ಭಕ್ತರನ್ನು ಆಕರ್ಷಿಸಿ ಹಲವು ಪವಾಡದ ಘಟನೆಗಳು ಸಂಭವಿಸಿ ಶ್ರದ್ಧಾ ಕೇಂದ್ರವಾಗಿ ಪ್ರಸಿದ್ಧಿ ಹೊಂದಿದ ಜ್ವಲಂತ ಉದಾಹರಣೆ ಹಲವು ಇವೆ. ಇಂತಹ ಆಧುನಿಕ ದೇವಾಲಯಗಳಲ್ಲಿ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ (ಹೆಚ್.ಎ.ಎಲ್.) ರಸ್ತೆಯಲ್ಲಿರುವ ಬೃಹತ್ ಶಿವ ದೇವಾಲಯ ಅತ್ಯಂತ ಆಕರ್ಷಕ ಮತ್ತು ಅಪರೂಪದ ಶಿವಾಲಯವಾಗಿದೆ.

ಬೃಹತ್ ಶಿವನ ವಿಗ್ರಹ ವಿರುವ ಈ ದೇವಾಲಯ ವರ್ಷದ ಎಲ್ಲಾ ದಿನಗಳ ಕಾಲವೂ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ರವಿ ಮೇಲ್ವಾನಿ (ಆರ್.ವಿ.ಎಂ.) ಪ್ರತಿಷ್ಠಾನವು 1995 ರಲ್ಲಿ ಈ ಶಿವ ದೇವಾಲಯ ನಿರ್ಮಿಸಿದೆ. ಶಿವಮಂದಿರದ ಪ್ರವೇಶ ದ್ವಾರದ ಬಳಿ 32 ಅಡಿ ಎತ್ತರದ ಬೃಹತ್ ಗಣಪತಿ ವಿಗ್ರಹವಿದೆ. ಇಲ್ಲಿ ಭಕ್ತರು ತಮ್ಮ ಸಂಕಷ್ಟದ ಬಗ್ಗೆ ಹರಕೆ ಹೊತ್ತು ‘ವಿಘ್ನಹರಣ ದಾರ’ವನ್ನು ದೇವರ ಸನ್ನಿಧಿಯಲ್ಲಿ ಕಟ್ಟಿದರೆ ಮನಸ್ಸಿನ ಸಂಕಲ್ಪ ಶೀಘ್ರವಾಗಿ ಈಡೇರುತ್ತದೆ ಎಂಬ ಪ್ರತೀತಿಯಿದೆ. ಮುಂದೆ ಸಾಗುತ್ತಿದ್ದಂತೆ 65 ಅಡಿ ಎತ್ತರದ ಶಿವನ ಬೃಹತ್ ಮೂರ್ತಿ ಎದುರಾಗುತ್ತದೆ. ಕರ್ನಾಟಕದಲ್ಲಿರುವ ಅತಿ ಎತ್ತರದ ಶಿವ ಮೂತಿಗಳಲ್ಲಿ ಇದೂ ಸಹ ಒಂದು ಪ್ರಮುಖ ಶಿವಮೂರ್ತಿಯಾಗಿದೆ. ತೆರೆದ ಬಯಲಿನಲ್ಲಿ ಯೋಗ ಮಂದರೆಯಲ್ಲಿ ಕುಳಿತ ಭಂಗಿಯಲ್ಲಿರುವ ಶ್ವೇತ ವರ್ಣದ ಶಿವನ ಜಡೆಯಿಂದ ಗಂಗೆ ಹರಿದು ಬರುವ ರೀತಿ ಭಕ್ತರಲ್ಲಿ ಧಾರ್ಮಿಕ ಮನೋಭಾವ ಉಂಟುಮಾಡುತ್ತದೆ.

ಶಿವ ಮೂರ್ತಿಯ ಹಿಂಭಾಗದಲ್ಲಿ ಗುಹಾಂತರ ಧಾಮ ನಿರ್ಮಿಸಲಾಗಿದ್ದು ಭಾರತದ ಪ್ರಮುಖ ದ್ವಾದಶ ಜ್ಯೋರ್ತಿಲಿಂಗದ ದರ್ಶನದ ದೃಶ್ಯ ಸೃಷ್ಠಿಸಲಾಗಿದೆ. ಗುಜರಾತಿನ ಸೋಮನಾಥ, ನಾಗೇಶ್ವರ, ಮಹಾರಾಷ್ಟ್ರದ ಗ್ರೀಶ್ನೇಶ್ವರ,ತೃಯಂಬಕೇಶ್ವರ,ಭೀಮಾಶಂಕರ,ಹಿಮಾಚಲ ಪ್ರದೇಶದ ಕೇದಾರನಾಥ,ಉತ್ತರಪ್ರದೇಶದ ಕಾಶಿ ವಿಶ್ವನಾಥ,ಮಧ್ಯಪ್ರದೇಶದ ಮಹಾಲೇಶ್ವರ,ಓಂಕಾರೇಶ್ವರ,ಆಂದ್ರಪ್ರದೇಶದ ಮಲ್ಲಿಕಾರ್ಜುನ, ತಮಿಳುನಾಡಿನ ರಾಮೇಶ್ವರ ಇಷ್ಟೇ ಅಲ್ಲ ಅಮರನಾಥದ ಹಿಮಲಿಂಗದ ದರ್ಶನದ ವ್ಯವಸ್ಥೆ ಸಹ ಇಲ್ಲಿ ರೂಪಿಸಲಾಗಿದ್ದು ಭಕ್ತರಿಗೆ ಹೊಸತನದ ಅನುಭವ ನೀಡುವಲ್ಲಿ ಸಫಲವಾಗಿದೆ. ಇದಕ್ಕಾಗಿಯೇ ನಿತ್ಯ ಸಹಸ್ರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಹಿಮಲಿಂಗವನ್ನು ಸ್ಪರ್ಶಿಸಲು ಸಹ ಅವಕಾಶವಿದ್ದು ಅಮರನಾಥದ ಹಿಮಲಿಂಗದ ಅನುಭೂತಿ ನೀಡುತ್ತದೆ.

ಇಲ್ಲಿನ ಶಿವಮಂದಿರದ ಒಳಾವರಣದಲ್ಲಿ ಗೋಳಾಕೃತಿಯಲ್ಲಿರುವ ನವಗೃಹ ಪೀಠ ನಿರ್ಮಿಸಲಾಗಿದೆ. ಇಲ್ಲಿ ಭಕ್ತರಿಗೆ ನವ ಗ್ರಹ ಪೂಜೆಯ ಅವಕಾಶ ಸಹ ಇದೆ. ಈ ಆವರಣದಲ್ಲಿ ರೋಗ ನಿವಾರಕ ಶಿಲೆ (ಉಪಚಾರ್ ಪತ್ಥರ್ ) ಸಹ ಇದೆ.ಅನಾರೋಗ್ಯ ಪೀಡಿತರು ಈ ಶಿಲೆಯನ್ನು ಸ್ಪರ್ಶಿಸಿದರೆ ರೋಗ ಉಪಶಮನವಾಗುತ್ತದೆ ಎಂಬ ನಂಬಿಕೆಯಿದೆ.

ಇಲ್ಲಿನ ಆವರಣದಲ್ಲಿ ಮಾನಸ ಸರೋವರವನ್ನು ಸಹ ಸೃಷ್ಠಿಸಲಾಗಿದೆ. ಇಲ್ಲಿನ ಆವರಣದಲ್ಲಿ ‘ಇಚ್ಛಾ ನಾಣ್ಯ’ನೀಡಲಾಗುತ್ತದೆ.ಈ ನಾಣ್ಯವನ್ನು ಪಡೆದು ಏಳು ಸಾರಿ ‘ಓಂ ನಮಃ ಶಿವಾಯ’ ಎಂಬ ಮಂತ್ರ ಪಠಿಸಿ ಮಾನಸ ಸರೋವರದಲ್ಲಿ ಎಸೆದರೆ ಭಕ್ತರ ಮನ ಸಂಕಲ್ಪ ಈಡೇರುತ್ತದೆ ಎಂಬ ಪ್ರತೀತಿಯಿದೆ.

ಇಲ್ಲಿನ ಬೃಹತ್ ಶಿವಮೂರ್ತಿಗೆ ನಿತ್ಯ ಬೆಳಿಗ್ಗೆ 7 ರಿಂದ 7.30 ರ ವರೆಗೆ ಕ್ಷೀರಾಭಿಷೇಕ, ರುದ್ರಾರ್ಚನೆ, ಹೋಮ-ಹವನ, ಶನಿಪೂಜೆ, ಮಹಾ ಮಂಗಳಾರತಿ ಇತ್ಯಾದಿ ಸೇವೆಗಳು ಸಹ ನಡೆಯುತ್ತದೆ. ಪ್ರತಿ ಸೋಮವಾರ ವಿಶೇಷ ಪೂಜೆ, ನೈವೇದ್ಯ,ಭಕ್ತರಿಂದ ಭಜನೆ ಇತ್ಯಾದಿ ನಡೆಯುತ್ತದೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ವಿಶೇಷ ಅಭಿಷೇಕ, ಬಗೆ ಬಗೆಯ ಹರಕೆ ಸೇವೆ, ರಾತ್ರಿ ಜಾಗರಣೆ ಸಹ ನಡೆಯುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ತೊಡಗಿಕೊಳ್ಳುತ್ತಾರೆ.

ಫೋಟೋ ಮತ್ತು ಲೇಖನ :ಎನ್.ಡಿ.ಹೆಗಡೆ ಆನಂದಪುರಂ

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.