ಕನ್ನಡಪುಣ್ಯಕ್ಷೇತ್ರ

ಭಕ್ತರನ್ನು ಸಲಹುತ್ತಿದ್ದಾಳೆ ಗೇರುಸೊಪ್ಪೆಯ ಜ್ವಾಲಮಾಲಿನಿ ತಾಯೆ !

ಪ್ರಾಚೀನ ರಾಜಮನೆತನದವರಿಂದ  ಸುಧೀರ್ಘ ಆರಾಧನೆ, ಹಿಂದೂ ಮತ್ತು ಜೈನ ಯತಿಗಳು ಮತ್ತು ಭಕ್ತರಿಂದ ಪಾರಂಪರಿಕ ಅರ್ಚನೆ ಹಾಗೂ ತನ್ನ ಕಾರಣಿಕ ಶಕ್ತಿಗಳಿಂದ ಗೇರುಸೊಪ್ಪೆಯ ಶ್ರೀಜ್ವಾಲಮಾಲಿನಿ ದೇವಿ ಸಾವಿರಾರು ಕೀ,ಮೀ.ದೂರದ ಭಕ್ತರನ್ನೂ ಸಹ ಆಕರ್ಷಿಸಿ ನಿತ್ಯ ಪೂಜೆ ಪಡೆಯುತ್ತಿದ್ದಾಳೆ.

ಶರಾವತಿ ನದಿಯ ತಟಾಕದಲ್ಲಿ ಗೇರುಸೊಪ್ಪೆಯ ಕ್ಷೇಮಪುರ ಸಾಮ್ರಾಜ್ಯದ ಒಡತಿಯಾಗಿ ,ಅಬೇಧ್ಯ ಅಭಯಾರಣ್ಯದ ಮಡಿಲಲ್ಲಿ ನೆಲೆಯಾಗಿರುವ ಈಕೆ ಪ್ರಾಚೀನ ಕಾಲದಿಂದ ಈವರೆಗೂ ಸದಾ ಅಭಯ ನೀಡಿ ಭಕ್ತರನ್ನು ಸಲಹುತ್ತಿದ್ದಾಳೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಕೇಂದ್ರದಿಂದ 30 ಕಿ.ಮೀ.ದೂರದ ಗೇರುಸೊಪ್ಪೆಯಲ್ಲಿ ಈ ದೇಗುಲವಿದೆ. ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ರಲ್ಲಿರುವ ಗೇರುಸೊಪ್ಪೆಯಿಂದ 5 ಕಿ,ಮೀ .ದೂರದಲ್ಲಿ ದಟ್ಟಾರಣ್ಯದ ನಡುವೆ ದೇಗುಲವಿದೆ.ಎದುರು ಹರಿಯುವ ಶರಾವತಿ, ಹಿಂಭಾಗದಲ್ಲಿ ಘೋರ ಕಾನನ ಹಾಗೂ ಸುತ್ತಮುತ್ತಲು ಅವಶೇಷವಾಗಿರುವ ಹಲವು ಬಸದಿಗಳ ಕಾರಣ ಈ ದೇಗುಲ ಪ್ರಾಚೀನ ಭವ್ಯತೆಯ ಸಾಕ್ಷಿಯಾಗಿ ಉಳಿದಿದೆ.

ಕ್ರಿ.ಶ.1549 ರಿಂದ 1606 ರ ವೆಗೆ ಗೇರುಸೊಪ್ಪೆಯ ಕ್ಷೇಮಪುರ ಸಾಮ್ರಾಜ್ಯವನ್ನು ಆಳಿದ ರಾಣಿ ಚೆನ್ನಭೈರಾದೇವಿಯ ಕಾಲದಲ್ಲಿ ಈ ದೇಗುಲ ಉಚ್ಛ್ರಾಯ ಸ್ಥಿತಿ ತಲುಪಿತ್ತು. ಈ ಕ್ಷೇತ್ರದ ಅಧಿದೇವತೆ ಜ್ವಾಲಮಾಲಿನಿ ದೇವಿ ಚಂದ್ರಪ್ರಭ ತೀರ್ಥಂಕರ ಯಕ್ಷಿಯಾಗಿದೆ. ಗೇರುಸೊಪ್ಪೆ ಸಾಮ್ರಾಜ್ಯ ಆಳಿದ ಸಾಳ್ವ ಅರಸರಿಗೆ ಈಕೆ ಕುಲದೇವತೆಯೂ ಆರಾಧ್ಯ ದೇವಿಯೂ ಆಗಿದ್ದಳು. ಈ ದೇವಿಯ ಆರಾಧನೆಯಿಂದ ರಾಜ ಮನೆತನದವರು ಮತ್ತು ಪ್ರಜೆಗಳು ಇಷ್ಟಾರ್ಥಸಿದ್ಧಿಗಳನ್ನು ಪಡೆಯುತ್ತಿದ್ದರು ಎನ್ನಲಾಗಿದೆ. ಈ ಬಸದಿಗೆ ಆರಂಭದಿಂದಲೂ ಪ್ರಧಾನ ಪೂಜೆ ಸಲ್ಲುವ ಕಾರಣ “ಹಿರಿಬಸದಿ” ಎಂದೇ ಖ್ಯಾತವಾಗಿದೆ.

ವಿದೇಶಿಯರ ಆಕ್ರಮಣ ಮತ್ತು ಕದನದ ಕಾರಣ 1606 ರಲ್ಲಿ ಗೇರುಸೊಪ್ಪೆಯ ಸಾಮ್ರಾಜ್ಯ ಅಳಿಯಿತು. ನಂತರ ಈ ಬಸದಿ ಬಿದಿರು ಕಾಡಿನಿಂದ ಆವೃತವಾಗಿ ಕಣ್ಮರೆಯಾಗಿತ್ತಂತೆ. 300 – 350 ವರ್ಷಗಳ ನಂತರ ಹಸುವೊಂದು ನಿತ್ಯ ಬಿದಿರ ಪೊದೆಗೆ ನುಗ್ಗಿ ಪಂಚ ಲೋಹದ ಈ ದೇವರ ಮೂರ್ತಿಗೆ ಹಾಲು ಸುರಿಸುತ್ತಿದ್ದ ಕಾರಣ ಮತ್ತೆ ದೇವಿಯ ವಿಗ್ರಹ ಪತ್ತೆಯಾಗಿ ಜನರಿಂದ ಬಸದಿಯ ಜೀರ್ಣೋದ್ಧಾರ ನಡೆಯಿತಂತೆ.  ಈಗ ಸುಮಾರು 6 ವರ್ಷಗಳ ಹಿಂದೆ ಈ ದೇವರ ವಿಗ್ರಹದ ಪುನರ್ ಪ್ರತಿಷ್ಠೆ, ಶಕ್ತಿ ವರ್ಧನಾ ಪೂಜೆ ಇತ್ಯಾದಿಗಳು ಜಿನಾಗಮ ರೀತ್ಯಾ ನಡೆಯಲ್ಪಟ್ಟಿತು. ಚಿಕ್ಕಮಗಳೂರಿನ ಎನ್.ಆರ್.ಪುರದ ಸಿಂಹನಗದ್ದೆ ಎಂಬಲ್ಲಿ ಈ ದೇವರನ್ನು ಹೋಲುವ ವಿಗ್ರಹ ಮತ್ತು ಬಸದಿಯಿದ್ದು ಗೇರುಸೊಪ್ಪೆ ಸಾಮ್ರಾಜ್ಯ ಪತನವಾಗುವಾಗ ಕಾರಣಾಂತರದಿಂದ ದೇವಿ ಸುಮಂತ್ರ ಭದ್ರರ ನೆರವಿನಿಂದ ಎತ್ತಿನ ಗಾಡಿಯಲ್ಲಿ ಅಲ್ಲಿಗೆ ತೆರಳಿದ್ದಳು ಎಂದು ನಂಬಲಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಪೂಜೆ ಮತ್ತು ಧಾರ್ಮಿಕ ವಿಧಿಗಳು ಒಂದೇ ರೀತಿ ಆಚರಿಸಲ್ಪಡುತ್ತಿರುವುದು ಗಮನಾರ್ಹ.

ಅಡಕೆ ಹಿಂಗಾರ ಈ ದೇವಿಗೆ ಬಲು ಪ್ರಿಯವಾಗಿದ್ದು ಭಕ್ತರು ಅದನ್ನು ಅರ್ಪಿಸಿ ಪೂಜಿಸುತ್ತಾರೆ. ಮನಸ್ಸಿನ ಇಷ್ಠಾರ್ಥಗಳನ್ನು ತಿಳಿ ಹೇಳುತ್ತಾಳೆ ಎಂಬ ನಂಬಿಕೆಯಿದ್ದು ಕಾರಣಿಕ ಕೆಳಲು ನಿತ್ಯ ನೂರಾರು ಭಕ್ತರು ಆಗಮಿಸಿ ದೇವಿಯಲ್ಲಿ ತಮ್ಮ ಸಮಸ್ಯೆ ನಿವೇದಿಸಿ ಪರಿಹಾರ ಕಂಡುಕೊಂಡು ಸಮಾಧಾನದಿಂದ ಹಿಂತಿರುಗುತ್ತಾರೆ. ಶ್ರಾವಣ ಮಾಸ, ನವರಾತ್ರಿಯ 10 ದಿನಗಳ ಕಾಲ ಹಾಗೂ ದೀಪಾವಳಿ, ಯುಗಾದಿ ಸಂದರ್ಭಗಳಲ್ಲಿ ದೇವಿಗೆ ವಿಶೇಷ ಪೂಜೆ ನೈವೇದ್ಯ ಸಲ್ಲುತ್ತದೆ. ಪ್ರತಿವರ್ಷ ಮಾಘ ಪೂರ್ಣಿಮೆ(ಭರತ ಹುಣ್ಣಿಮೆ)ಯಂದು ದೇವಿಯ ಜಾತ್ರೋತ್ಸವ ವೈಭವದಿಂದ ನಡೆಯುತ್ತಿದ್ದು ಸಾವಿರಾರು ಭಕ್ತರು ಆಗಮಿಸುತ್ತಾರೆ.

ಈ ದೇವಿಯ ಬಸದಿಯ ಗರ್ಬಗುಡಿಯಲ್ಲಿ ಪದ್ಮಾಸನಸ್ಥವಾದ ಸುಂದರ ಪಾಶ್ರ್ವನಾಥ ವಿಗ್ರಹವಿದೆ. ಪ್ರಭಾವಳಿಯಲ್ಲಿ ಚಾಮರ ಕನ್ನಿಕೆಯರು ಸುಂದರ ಉಡುಗೆತೊಡುಗೆ ,ವಿವಿಧ ಆಭರಣಗಳನ್ನು ಧರಿಸಿ ನಿಂತಿರುವ ಭಂಗಿ ಜಿನ ಮೂರ್ತಿಗಳಲ್ಲೇ ಬಹು ಅಪರೂಪದ ವಿಗ್ರಹವಾಗಿದೆ. ಇದರ ಪ್ರಭಾವಳಿಯು ಮುಕ್ಕೊಡೆ, ಕೀರ್ತಿಮುಖ(ಸಿಂಹಮುಖ) ಮತ್ತು 24 ತೀರ್ಥಂಕರರ ಸಣ್ಣ ಸಣ್ಣ ಬಿಂಬಗಳಿವೆ. ವಿಗ್ರಹದ ಸುತ್ತಲೂ ಹೂಗಳ ಕೆತ್ತನೆ, ತಲೆಯ ಮೇಲೆ ಏಳು ಹೆಡೆಯ ಸರ್ಪ ಎಂಥವರಲ್ಲೂ ಭಕ್ತಿ ಸ್ಪುರಿಸುವಂತಿದೆ.

ಗೇರುಸೊಪ್ಪೆಯ ಶರಾವತಿ ಟೇಲ್‍ರೇಸ್ ಅಣೆಕಟ್ಟಿನ ತಿರುವಿನಿಂದ ಈ ದೇಗುಲ ತಲುಪಲು ಮಣ್ಣಿನ ರಸ್ತೆಯಿದೆ. ತೀರಾ ಅಂಕು ಡೊಂಕು ಮತ್ತು ಹೊಂಡ ಗುಂಡಿಗಳ ಶಿಥಿಲ ರಸ್ತೆಯ ಕಾರಣ ಬಹುತೇಕ ವಾಹನಗಳು ದೇಗುಲ ತಲುಪಲು ಸಾಧ್ಯವಿಲ್ಲ. ದ್ವಿಚಕ್ರವಾಹನ , ಜೀಪ್ ಅಥವಾ ಕ್ರೂಸರ್ ಮಾತ್ರ ಈ ರಸ್ತೆಯಲ್ಲಿ ಚಲಿಸಬಹುದಾಗಿದ್ದು ಉತ್ತಮ ವ್ಯವಸ್ಥಿತ ರಸ್ತೆ ನಿರ್ಮಾಣ ಅಗತ್ಯವಿದೆ. ಗೇರುಸೊಪ್ಪೆ ಯಿಂದ ದೋಣಿ ಮೂಲಕ ಶರಾಚತಿ ನದಿ ದಾಟಿ ಈ ದೇಗುಲ ತಲುಪಬಹುದಾಗಿದ್ದು ದೋಣಿ ವಿಹಾರ, ದಟ್ಟಾರಣ್ಯ ವೀಕ್ಷಣೆ ಮತ್ತು ಪ್ರಾಚೀನ ಸಾಮ್ರಾಜ್ಯದ ಅವಶೇಷ ವೀಕ್ಷಣೆಯ  ಅವಿಸ್ಮರಣೀಯ ಅನುಭವ ಹೊಂದಿ ಚಾರಣ, ಪ್ರವಾಸ ಮತ್ತು ತೀರ್ಥಯಾತ್ರೆಯ ಅನುಭೂತಿ ಪಡೆಯು ಸಾಧ್ಯ.

ಲೇಖನ ಮತ್ತು ಫೋಟೋ- ಎನ್.ಡಿ.ಹೆಚ್. ಆನಂದಪುರಂ

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.