ಡಾ.ಚಿನ್ಮಯ ಎಂ.ರಾವ್
ಸಮಗ್ರ ಕವನ ಸಂಕಲನ
ಕವಿತೆ-3
ನಾ ಕವಿತೆ ಬರೆಯುವುದು
– ಡಾ.ಚಿನ್ಮಯ ಎಂ.ರಾವ್
(೭೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)
ನಾನೊಬ್ಬನೇ ಕುಳಿತಾಗ ಆ ಕ್ಷಣವ ಅಮೃತವಾಗಿಸಲು
ನನ್ನ ಭಾವಭಂಡಾರವ ಪದಗಳ ಹೂವಿಂದ ಅಲಂಕರಿಸಲು
ನನ್ನ ಭಾಷಾ ಸಾಮರ್ಥ್ಯವ ಪರೀಕ್ಷಿಸಲು
ನನ್ನ ಕಲ್ಪನಾ ಪ್ರಪಂಚದ ಆಳ ಉದ್ದಗಲವನಳೆಯಲು
ನಾ ಕವಿತೆ ಬರೆಯುವುದು
ನಾನೊಬ್ಬಂಟಿಯಲ್ಲ ಎಂದು ಖುಷಿಯಾಗಲು
ನವರಸಗಳೊಳಗೂಡಿ ರಸಋಷಿಯಾಗಲು
ವಾಸ್ತವದ ಗೋಳಾಟಗಳ ಬಿಚ್ಚಲಾಗದಂತೆ
ಬಿಗಿಯಾಗಿ ಗಂಟು ಕಟ್ಟಿ ಆಚೆ ಬಿಸಾಕಲು
ನಾ ಕವಿತೆ ಬರೆಯುವುದು
ಮೌನದಾ ದಾರಿಯಲಿ ವಿಹಾರಿಯಾಗಲು
ಭಾವಾಂತರಂಗದಲಿ ತರಂಗವಾಗಲು
ನನ್ನ ಪಾಲಿನ ಧ್ಯಾನದಲಿ ಸುಖಾಸೀನನಾಗಲು
ಪುಟ್ಟ ಕವಿತೆಯೊಂದ ಬರೆಯುವುದೂ
ಮಹಾಯಜ್ಞ ಎಂದು ತಿಳಿದು
ನಾ ಕವಿತೆ ಬರೆಯುವುದು
ನಾ ನನ್ನೊಳಗೆ ಹೋಗಿ ಹುಡುಕಲು
ನಾ ನನ್ನಿಂದ ಬೇರೆಯಾಗಿ ನಿಂತು ಅರಿಯಲು
ನಿಮಗೆಲ್ಲಾ ನನ್ನ ಅಭಿ“ರುಚಿ”ಯನುಣಬಡಿಸಲು
ನನ್ನ ಅಡುಗೆಯ ನಾನೂ ಸವಿದು ಮೆಲ್ಲಲು
ನಾ ಕವಿತೆ ಬರೆಯುವುದು
ಯಾರೋ ಓದುತ್ತಾರೆಂದು ನಾ ಬರೆಯುವುದಿಲ್ಲ
ಯಾರು ಬದಿಗಿಟ್ಟರೂ ನಾ ಬಿಡುವುದಿಲ್ಲ
ಉಸಿರಾಟವನ್ನೆಂದಾದರೂ ನಾ ನಿಲ್ಲಿಸಲಾದೀತೆ?
ಸುಖನಿದ್ರೆಯಲಿ ಸವಿಗನಸೇನು ಕೇಳಿಬರುವುದೇ?
ಹಾಗೇ…ಮನಸು ಬಂದಾಗ ಸೊಗಸು ಕಂಡಾಗ
ಕನಸು ಬಿದ್ದಾಗ ಅದ ನನಸಾಗಿಸಲು
ನನ್ನಾತ್ಮತೃಪ್ತಿಗೆ ನಾ ಕವಿತೆ ಬರೆಯುವುದು
ಚಿನ್ಮಯ ಎಂ ರಾವ್
೨೦೦೫
*******************