ಡಾ.ಚಿನ್ಮಯ ಎಂ.ರಾವ್ ಸಮಗ್ರ ಕವನ ಸಂಕಲನ

ಕವಿತೆ-9 : ಚನ್ನಿಗರಾಯರು

ಡಾ.ಚಿನ್ಮಯ ಎಂ.ರಾವ್ ಸಮಗ್ರ ಕವನ ಸಂಕಲನ

– ಡಾ.ಚಿನ್ಮಯ ಎಂ.ರಾವ್

(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)

 

ನವಿಲೂರ ಮನೆಯ ಕಿಟಕಿಯ ತಳಿಗಳಿಗೆಲ್ಲಾ ಬಂದಿತ್ತು ಅಂದು ಪ್ರಾಯ

ಅವರಿವರಿದ್ದರೂ ಇವರೀರ್ವರು ತಪ್ಪಿದ್ದರು ಆಯ

ಕಂಗಳೆರಡು ಜೋಡಿ ಮೋಡಿಹೋಗಿದ್ದವು ಮನಸಾವಾಚಾಕಾಯ

ಚೆಲುವೆಯ ಕಡೆಯ ಕೈಸನ್ನೆಗೆ ಸೊನ್ನೆಯಾಗಿದ್ದ

ನಮ್ಮ ಚೆಲುವ ಚೆನ್ನಿಗರಾಯ ||

 

ಮದುವೆಯಂದಿನ ದಿನ ಕಾಫಿಯ ಲೋಟಕ್ಕೂ ಬಂದಿತ್ತು ನವಪ್ರಾಯ

ರಾಯರ ಚೆಲುವೆಯ ತುಟಿಗೇ ಮುತ್ತಿಕ್ಕಿದ್ದು ಅದ್ಯವ ನ್ಯಾಯ?

ಸಖಿಯೊಡನೆ ಬಂದವಳ ಸುಖಿಸುತ್ತಿದ್ದಂತೆಯೇ ಮಂಗಮಾಯ

ಚೆಲುವೆಯ ಕೆಡಯ ಕಣ್ಣೋಟಕೆ ಕುರುಡಾಗಿದ್ದ

ನಮ್ಮ ಚೆಲುವ ಚೆನ್ನಿಗರಾಯ ||

 

ಅವರಿವರಿದ್ದರೂ ಇವರಿವರಾಗಿರಲಿಲ್ಲ ಇಬ್ಬರೂ ತನ್ಮಯ

ಇವನವಳಾಗಿದ್ದನು ಅವಳಿವನಾಗಿದ್ದಳು ಇರದೇ ಭಯ

ಇವನವಳು ಅವಳವನು ಹಾಕಿದರಂದು ಪ್ರೇಮಕ್ಕಡಿಪಾಯ

ಚೆಲುವೆಯ ಕಡೆಯ ಕುಡಿನೋಟಕೆ ಕುರಿಮರಿಯಾಗಿದ್ದ

ನಮ್ಮ ಚೆಲುವ ಚೆನ್ನಿಗರಾಯ ||

 

ಬಾಳ ದಿಬ್ಬಣವನೇರಿ ಜೊತೆಜೊತೆಯಾಗಿ ಕಟ್ಟಿದರು ಪ್ರೇಮಾಲಯ

ಇಂದು ಚನ್ನಿಗರಾಯರಿಗೆ ಅಮ್ಮನವರಲ್ಲಿ ಏನು ಭಕ್ತಿ ಭಯ

ಒಡತಿಯಪ್ಪಣೆಗೇ ಸಾರ್ಥಕಗೊಳಿಸುತ್ತಿರುವರು

ಸಂಪೂರ್ಣ ಸಮಯ ||

 

ಚೆಲುವೆಯರೂ ಚನ್ನಿಗರಾಯರೂ ಇರದೆ ನಡೆಯದು ಯಾವ ಚಪ್ಪರಗಳಲ್ಲೂ

ಮದುವೆ… ಮುಂಜಿ ಕಾರ್ಯ

ಮಡಿಮಂತ್ರಾಗ್ನಿಗಳ ಮಧ್ಯೆಯೇ ಪ್ರಥಮ ನೋಟಗಳ ಅಡಿಗಲ್ಲುಗಳನಿಡಲು

ಇವರಿಗೆ ಬೇಕಾ? ಇದಕಿಂತಾ ಅಚ್ಚುಕಟ್ಟಾದ ಸೌಕರ್ಯ

ಚಿತ್ತಚಾಂಚಲ್ಯದಿಂದ ಬಾಳಪಯಣದಿ ನಡೆಯದಿರಲಿ ಅಚಾತುರ್ಯ

ಪ್ರೀತಿ ಪ್ರೇಮಾನುಭವಗಳು ಸದಾ ಸವಿನೆನಪಾಗಲಿ ಎಂಬುದೇ

ಈ ಕವಿತೆಯ ಆಶಯ, ನವಪ್ರೇಮಿಗಳಿಗೆ ಸದಾ ಶುಭಾಶಯ ಶುಭಾಶಯ ||

 

ಚಿನ್ಮಯ ಎಂ ರಾವ್

2005

*******************

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.