ಶಿವಮೊಗ್ಗ ಜಿಲ್ಲಾ ಕೇಂದ್ರದ ನಗರ ಪ್ರದೇಶದ ಹೃದಯ ಭಾಗದಲ್ಲಿ ನೆಲೆಯಾಗಿರುವ ದುರ್ಗಮ್ಮ ತನ್ನ ಸೋದರಿ ಮರಿಯಮ್ಮನ ಜೊತೆ ಭಕ್ತ ವತ್ಸಲೆಯಾಗಿ ನೂರಾರು ವರ್ಷಗಳಿಂದ ಆರಾಧಕರನ್ನು ಕರುಣೆಯಿಂದ ಕೈಹಿಡಿದು ಮುನ್ನಡೆಸುತ್ತಿದ್ದಾಳೆ.ದುರ್ಗಾದೇವಿಯ ಆಲಯವಿರುವ ಕಾರಣ ನಗರದ ಒಂದು ವಿಶಾಲ ವ್ಯಾಪ್ತಿಗೆ ದುರ್ಗಿಗುಡಿ ಎಂಬ ಹೆಸರು ರೂಢಿಗೆ ಬಂದಿದೆ.
ನೂರಾರು ವರ್ಷಗಳ ಹಿಂದೆ ಹೊಸಪೇಟೆಯ ಹುಲಗಿಯಿಂದ ತನ್ನ ಆರಾಧಕ ಕುಟುಂಬ ಶಿವಮೊಗ್ಗಕ್ಕೆ ವಲಸೆ ಬಂದಾಗ ಶ್ರೀದುರ್ಗಮ್ಮ ತಾನೂ ಸಹ ಅವರ ರಕ್ಷಣೆಗಾಗಿ ಹಿಂಬಾಲಿಸಿ ಬಂದು ನೆಲೆ ನಿಂತಳು ಎಂಬುದು ಪ್ರತೀತಿ.ಈ ದೇವತೆ ಈ ಸ್ಥಳದಲ್ಲಿ ಏಳು ಕೊಪ್ಪರಿಗೆ ಹೊನ್ನು ಮತ್ತು ಏಳು ಕೊಪ್ಪರಿಗೆ ಅನ್ನದ ರಾಶಿಯ ಮೇಲೆ ನೆಲೆಯಾಗಿದ್ದಾಳೆ ಎಂಬ ನಂಬಿಕೆಯಿದೆ.ಈ ದೇವರನ್ನು ನಂಬಿ ಶ್ರದ್ಧಾ ಭಕ್ತಿಗಳಿಂದ ಆರಾಧಿಸುವ ಭಕ್ತರಿಗೆ ಸಾಕಷ್ಟು ದವಸ ಧಾನ್ಯ,ಆಹಾರ ಸಂಪತ್ತು ಹಾಗೂ ಧನ ಕನಕ ಪ್ರಾಪ್ತಿಯಾಗುತ್ತದೆ ಎಂಬ ಅಚಲ ನಂಬಿಕೆಯಿದೆ. ನೂರಾರು ವರ್ಷಗಳ ಹಿಂದೆ ದೇವರಿಗೆ ಚಿಕ್ಕ ಗುಡಿ ನಿರ್ಮಿಸಿದಂದಿನಿಂದ ನಿರಂತರವಾಗಿ ಭಕ್ತರ ನೆರವಿನಿಂದ ಅಭಿವೃದ್ಧಿ ಹೊಂದುತ್ತಿದೆ.
ದೇವಿಯ ಕೃಪೆಗೆ ಪಾತ್ರರಾದ ವಿಪ್ರರೋರ್ವರು 1928ರಲ್ಲಿ 1 . 36 ಎಕರೆ ಭೂಮಿಯನ್ನು ಈ ದೇವರ ಗುಡಿ ಹಾಗೂ ಸುತ್ತಲಿನ ಪ್ರದೇಶವನ್ನು ದಾನವಾಗಿ ನೀಡಿದರು. ಈಗ ನಗರ ಪ್ರದೇಶವಾಗಿರುವುದರಿಂದ ಈ ಸ್ಥಳ ಅತಿ ಜನ ದಟ್ಟಣೆಯ ವ್ಯಾಪಾರಿ ಕೇಂದ್ರವಾಗಿ ಬದಲಾಗಿದೆ.ದೇಗುಲ ಜೀರ್ಣೋದ್ಧಾರ ಸಮಿತಿ ಹಾಗೂ ಉತ್ಸವ ಸಮಿತಿಯ ಪ್ರಯತ್ನದಿಂದ ದೇಗುಲಕ್ಕೆ ಅತ್ಯಾಕರ್ಷಕ ಗೋಪುರ ಹಾಗೂ ನಿರಂತರ ಪೂಜೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ನಿತ್ಯ ನೂರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿ ಹಣ್ಣು-ಕಾಯಿ, ಮೊಸರು,ಬಾಳೆಹಣ್ಣುಗಳನ್ನು ನೈವೇದ್ಯವಾಗಿ , ಕುಂಕುಮ, ಅರಿಶಿನ, ಬಳೆ, ಸೀರೆ, ಒಡವೆ ಹಾಗೂ ಬೆಳ್ಳಿ, ಬಂಗಾರ, ಪಂಪಲೋಹದ ವಿವಿಧ ಆಭರಣಗಳನ್ನು , ತೊಟ್ಟಿಲು, ಛತ್ರಿ ಹಾಗೂ ಬಾಗೀನಗಳನ್ನು ಕಾಣಿಕೆಯಾಗಿ ಸಮರ್ಪಿಸುತ್ತಾರೆ.
ಪ್ರತಿವರ್ಷ ಶ್ರಾವಣ ಮಾಸವಿಡೀ ವೈಭವದ ಅಲಂಕಾರ , ಪೂಜೆ, ನವರಾತ್ರಿಯಂದು ನಿತ್ಯ ಸಪ್ತಶತೀ ಪರಾಯಣ, ಅಲಂಕಾರ ಪೂಜೆ, ದಶಮಿಯಂದು ಪಲ್ಲಕ್ಕಿ ಉತ್ಸವ, ಸೀಮೋಲ್ಲಂಘನ ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬನ್ನಿ ಮುರಿಯುವ ಕಾರ್ಯಕ್ರಮ ಜರುಗುತ್ತದೆ.ಕಾರ್ತೀಕ ಮಾಸದಲ್ಲಿ ನಿತ್ಯ ಸಂಜೆ ದೀಪೋತ್ಸವ, ಮಂಗಳವಾರ ಮತ್ತು ಶುಕ್ರವಾರ ಬಾಳೆ ದಿಂಡಿನ ದಂಡಾವಳಿ ಪೂಜೆಗಳು ಜರುಗುತ್ತವೆ.ಪ್ರತಿ ವರ್ಷ ಹೋಳಿ ಹುಣ್ಣಿಮೆಯಂದು 5 ದಿನಗಳ ಕಾಲ ವೈಭವದಿಂದ ಮಹಾರಥೋತ್ಸವ ನಡೆಸಲಾಗುತ್ತದೆ.ಪ್ರತಿ ವರ್ಷ ಮಾರ್ಗಶಿರ ಅಮಾವಾಸ್ಯೆ(ಶೂನ್ಯ ಅಮಾವಾಸ್ಯೆ) ಯಂದು ಭಕ್ತರಿಂದ ಕೋಳಿ, ಕುರಿ ಇತ್ಯಾದಿ ಪ್ರಾಣಿಗಳ ನೈವೇದ್ಯ, ಬಲಿ ಪೂಜೆ, ಪ್ರಕಾರ ಬಲಿ ಉತ್ಸವ ಸಂಜೆ ಶುದ್ಧ ಮಂಗಲ ಪೂಜೆ ನಡೆಯುತ್ತದೆ.
ಉಳಿದಂತೆ ವರ್ಷವಿಡೀ ಈ ದೇವರಿಗೆ ಸಸ್ಯಾಹಾರವೇ ನೈವೇದ್ಯ ವಾಗಿ ಸಮರ್ಪಿಸಲ್ಪಡುತ್ತದೆ. ದೇವರ ಉತ್ಸವ ಮೂರ್ತಿ ಬೇವಿನ ಮರದಿಂದ ಮಾಡಲಾಗಿದ್ದು ಉತ್ಸವ, ಮೆರವಣಿಗೆ ,ಪ್ರಾಕಾರ ಬಲಿಯ ಸಂದರ್ಭದಲ್ಲಿ ದುರ್ಗಮ್ಮ ಮತ್ತು ಮರಿಯಮ್ಮರ ಮೂರ್ತಿಯನ್ನು ಒಟ್ಟೊಟ್ಟಿಗೆ ಪೂಜಿಸಲಾಗುತ್ತದೆ. ಈ ದೇವರಿಗೆ ಮೊಸರನ್ನ ಅತ್ಯಂತ ಪ್ರಿಯವಾಗಿದ್ದು ಭಕ್ತರು ತಮ್ಮ ಸಮಸ್ಯೆ ನಿವಾರಣೆಗೆ ಮೊರೆಹೋಗಿ ಮೊಸರನ್ನ ನೈವೇದ್ಯದ ಹರಕೆ ಹೊತ್ತುಕೊಳ್ಳುತ್ತಾರೆ.ಮಂಗಳವಾರ ಮತ್ತು ಶುಕ್ರವಾರಗಳು ಮೊಸರನ್ನದ ನೈವೇದ್ಯ ಮತ್ತು ಸಾರ್ವಜನಿಕರಿಗೆ ಪ್ರಸಾದ ವಿತರಣೆ ನಡೆಯುತ್ತದೆ. ಉದ್ಯೋಗ ಪ್ರಾಪ್ತಿ, ವಿವಾಹ, ಮಾರಕ ರೋಗ, ಶತ್ರು ಪೀಡೆ ನಿವಾರಣೆ, ಸಂತಾನ ಪ್ರಾಪ್ತಿ , ಕುಟುಂಬದಲ್ಲಿ ಶಾಂತಿ ,ಸುಖಕರ ಪ್ರಯಾಣ, ಕಳುವಾದ ವಸ್ತುವಿನ ಪುನಃ ಪ್ರಾಪ್ತಿ ಇತ್ಯಾದಿಗಳ ಕುರಿತು ಈ ದೇವರ ಸನ್ನಿಧಿಗೆ ಆಗಮಿಸಿ ಭಕ್ತರು ಹರಕೆಹೊತ್ತು ದೇವರ ಕರುಣೆಗೆ ಪ್ರಾರ್ಥಿಸುತ್ತಾರೆ. ಭಕ್ತರಿಂದ ನಿತ್ಯ ಭಜನೆ, ಬಾಗೀನ ಸಮರ್ಪಣೆ, ಉರುಳೆಸೇವೆ ಹಾಗೂ ದೇವಿ ಸ್ತೋತ್ರಗಳಿಂದ ದೇವಾಲಯದ ಆವರಣ ಭಕ್ತಿಮಯವಾಗಿ ಕಂಗೊಳಿಸುತ್ತಾ ನಗರಕ್ಕೆ ಆಗಮಿಸಿದ ಗ್ರಾಮೀಣ ಜನರಲ್ಲೂ ಸಹ ಭಕ್ತ ಭಾವ ಸ್ಪುರಿಸುವಂತೆ ಪ್ರೇರೇಪಿಸುತ್ತಿರುತ್ತದೆ.
ಫೋಟೋ ಮತ್ತು ಲೇಖನ; ಕೌಸ್ತುಭಪಿತ ಆನಂದಪುರಂ