-ದೀಪಕ್ ಕೋರಡಿ
ಹಾಡೋ, ಹರಟೆಯೋ.. ಜಗಳವೋ, ಜಂಜಾಟದ ಕತೆಗಳೋ.. ಒಟ್ಟಿನಲ್ಲಿ ತಮ್ಮದೇ ಭಾಷೆಯ ಮಾತುಗಳನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತ ಗಾಳಿಯ ತಂಪಿನೊಡನೆ ತಮ್ಮ ಚಿಲಿಪಿಲಿ ಸದ್ದಿನ ಲಹರಿಯನ್ನು ಹರಿಬಿಡುತ್ತದ್ದ ಬಗೆ ಬಗೆಯ ಹಕ್ಕಿಗಳು, ಆ ದಟ್ಟ ಮಲೆನಾಡಿನ ಮೌನ ಕಾನನವನ್ನು ಕೆದಕಿ, ಅವುಗಳ ಮೌನ ಮುರಿಯಲೆಂದೇ ಕಚಗುಳಿ ಇಡುತ್ತ ಕೀಟಲೆ ಮಾಡುವಂತೆ ತೋರುತ್ತಿತ್ತು. ಹಿತ್ತಲಿನಲ್ಲಿ ಪರ್ವತ ಶ್ರೇಣಿಯ ಹೊದಿಕೆ, ಎದುರಿಗೆ ಕಣ್ಣು ಚಾಚಿದಷ್ಟೂ ಆ ಊರಿನ ಗದ್ದೆ, ಚಳಿಗೆ ಮೈಗೆದರಿ ಮೆಲ್ಲಗೆ ಅರಳುತ್ತಿದ್ದ ಕಾಡು ಹೂವುಗಳ ಮಧ್ಯೆ ದೂರದಲ್ಲೆಲ್ಲೋ ಮಂಜಿನ ಹೊಗೆಯಾಡುತ್ತಿದ್ದ ನದಿ. ಇವುಗಳ ನಡುವೆ ಬೆಚ್ಚಗೆ ಬದುಕು ನಡೆಸುತ್ತಿದ್ದ ಗಿರಿಜಮ್ಮನ ಸೋಂಗೆ ಮನೆಯ ಗೂಡು. ತಾಯಿಯೊಡನೆ ಸೂರನ್ನು ಹಂಚಿಕೊಂಡು ಆ ಗೂಡಿನಲ್ಲಿದ್ದ ಮತ್ತೊಂದು ಹಕ್ಕಿ, ಕಸ್ತೂರಿ.
ಆ ಊರಿನ ವೈದ್ಯರಾದ ಡಾ. ಕೃಷ್ಣ ಪ್ರಸಾದರ ಮನೆಗೆಲಸಕ್ಕೆ ಹೋಗುತ್ತಿದ್ದ ಕಸ್ತೂರಿಗೆ, ತನ್ನ ತಾಯಿಯ ಕಾಯಿಲೆಯನ್ನು ವಾಸಿಮಾಡಿಸುವ ಚಿಂತೆಯಾದರೆ, ಮನೆಯೆದುರಿಗಿದ್ದ ಗದ್ದೆಕೆಲಸಕ್ಕೆ ಹೋಗುತ್ತಿದ್ದ ಗಿರಿಜಮ್ಮನಿಗೆ ತನ್ನ ಪ್ರಾಯದ ಮಗಳ ಬದುಕಿನ ಚಿಂತೆ. ಆ ಸುಂದರ ಪರಿಸರದಲ್ಲಿ ವಾಸವಾಗಿದ್ದರೂ ಗಿರಿಜಮ್ಮನಿಗೆ ನೆಮ್ಮದಿಯ ಕೊರತೆ. ಕಾರಣ, ಆ ಗೂಡಿನ ಸುತ್ತಲೂ ಹಕ್ಕಿಗಳ ಸದ್ದು ಕೇಳುತ್ತಿತ್ತೇ ವಿನಹ, ಮನೆಯಲ್ಲಿ ಎಂದಿಗೂ ಮೌನ. ಕಸ್ತೂರಿ ಹುಟ್ಟು ಕಿವುಡಿ, ಮೂಗಿ ಕೂಡ.
ಡಾ. ಕೃಷ್ಣರ ಪತ್ನಿ ಶಾಂಭವಿ ನೃತ್ಯ ಕಲಾವಿದೆ. ಭರತನಾಟ್ಯದಲ್ಲಿ ವಿದ್ವತ್ತನ್ನು ಹೊಂದಿ ಹತ್ತಿರದ ಪೇಟೆಯಲ್ಲಿನ ಮಕ್ಕಳಿಗೆ ನಾಟ್ಯ ತರಬೇತಿಯನ್ನು ಕೊಡುತ್ತಿದ್ದಳು. ಅಲ್ಲದೇ ದೇಶದ ವಿವಿಧ ಕಡೆ ನಾಟ್ಯ ಪ್ರದರ್ಶನ ನಡೆಸಿಕೊಡುವುದರೊಡನೆ, ಹಲವು ಕಾರ್ಯಕ್ರಮಗಳ ಮುಖ್ಯ ಅತಿಥಿಯಾಗಿ ಹೋಗುವ ಹೆಗ್ಗಳಿಕೆ ಅವಳದ್ದು. ಪೇಟೆಯ ಜಂಜಾಟಕೆಗೆ ಬೇಸತ್ತು ಹತ್ತಿರದಲ್ಲೇ ಇದ್ದ ಹಳ್ಳಿ ಮನೆಯಲ್ಲಿ ವಾಸಿಸಿ ನಿತ್ಯ ಪೇಟೆಗೆ ಓಡಾಡುವ ದಿನಚರಿ ಈ ಕುಟುಂಬದ್ದು. ಇವರ ಮುದ್ದು ಮಗಳು ಸ್ಮೃತಿ. ಪೇಟೆಯ ಪ್ರತಿಷ್ಠಿತ ಹೈ ಸ್ಕೂಲಿನಲ್ಲಿ ಓದುತ್ತಿದ್ದ ಸ್ಮೃತಿಗೆ, ತಾಯಿಯಿಂದ ನಾಟ್ಯ ಪರಿಣಿತಿ ಒಲಿದು ಬಂದಿತ್ತು. ಆದರೆ ತಾಯಿಯಂತೆ ಪ್ರತಿಷ್ಠೆಯನ್ನು ಮುಡಿಗೇರಿಸಿಕೊಳ್ಳದೆ, ಏಕತೆ-ಸಮಾನತೆಯ ಭಾವವನ್ನು ಮೈಗೂಡಿಸಿಕೊಂಡಿದ್ದಳು. ಹಾಗಾಗಿ ಇವಳಿಗೆ ಕಸ್ತೂರಿಯನ್ನು ಕಂಡರೆ ಸೋದರಿಕೆಯ ಅಕ್ಕರೆ ಮತ್ತು ಬಲು ಸ್ನೇಹ. ಇದೇ ಕಾರಣ ತಾಯಿಯಿಂದ ಹಲವು ಬಾರಿ ಬೈಯಿಸಿಕೊಂಡದ್ದೂ ಇದೆ. ಎಲ್ಲರನ್ನೂ ಒಂದಾಗಿ ಕಾಣುವಂತೆ ಹೇಳುವ ಶಾಲೆ ಒಂದೆಡೆಯಾದರೆ, ತಾರತಮ್ಯದ ಛಾಯೆ ತುಂಬಿದ್ದ ಮನೆ ಇನ್ನೊಂದೆಡೆ. ಈ ದ್ವಂದ್ವ-ಗೊಂದಲಗಳ ನಡುವೆ ಬದುಕುತ್ತಿದ್ದ ಹಲವು ಮಕ್ಕಳಲ್ಲಿ ಸ್ಮೃತಿಯೂ ಒಬ್ಬಳಾಗಿದ್ದಳು. ಆದರೂ ಕಸ್ತೂರಿಯ ಮೇಲಿನ ಅಕ್ಕರೆ ಅವಳಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸುತ್ತಿತ್ತು.
ಮುಂಜಾನೆ ಮನೆಯ ಶುಚಿತ್ವ, ಗಿಡಗಳಿಗೆ ನೀರು ಹಾಕುವುದು, ಮಧ್ಯಾಹ್ನ ಪಾತ್ರೆ-ಬಟ್ಟೆಗಳ ಕೆಲಸ, ಸಂಜೆ ಸ್ಮೃತಿಯನ್ನು ಸ್ಕೂಲ್ ಬಸ್ಸಿನಿಂದ ಮನೆಗೆ ಕರೆತಂದು ಮತ್ತೊಮ್ಮೆ ಸಂಜೆ ಮನೆಯನ್ನು ಶುಚಿಗೊಳಿಸಿ ಕಸ್ತೂರಿ ಹಿಂತಿರುಗುವುದು ಮುಸ್ಸಂಜೆಗೆ. ಪ್ರತಿ ಸಂಜೆ ಶಾಲೆಯಿಂದ ಬಂದೊಡನೆ ಮಗಳಿಗೆ ನಾಟ್ಯಾಭಾಸ ಮಾಡಿಸುತ್ತಿದ್ದಳು ಶಾಂಭವಿ. ದಿನದ ಈ ಸಮಯ ಕಸ್ತೂರಿಗೆ ಬಲು ಪ್ರೀತಿ. ಹಾಗಾಗಿ ಅದೆಷ್ಟೇ ನಿಂದಿಸಿಕೊಂಡರೂ ಇವರ ಮನೆಯ ಕೆಲಸವನ್ನು ಬಿಡುತ್ತಿರಲಿಲ್ಲ. ಅವಳಿಗರಿವಿಲ್ಲದೇ ಕಸ್ತೂರಿಗೆ ಭರತನಾಟ್ಯದ ಮೇಲೆ ಅದೇನೋ ಆಸಕ್ತಿ. ಪ್ರತಿ ನಿತ್ಯ ಸ್ಮೃತಿಗೆ ಪಾಠ ನಡೆಯುವಾಗ ಅತ್ತಿತ್ತ ನೋಡದೆ ಆಲಿಸುತ್ತಿರುತ್ತಿದ್ದಳು ಕಸ್ತೂರಿ. ಏನೂ ಕೇಳಿಸದಿದ್ದರೂ ಆ ಭಂಗಿ, ಭಾವ, ಮುದ್ರೆಗಳ ಸಂಗಮ ಅವಳಲ್ಲೇನೋ ರೋಮಾಂಚನ ಉಂಟು ಮಾಡುತ್ತಿತ್ತು. ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಹೀಗೆ ಮೈಮರೆತಾಗ ಹಲವು ಬಾರಿ ಶಾಂಭವಿಯಿಂದ ನಿಂದನೆಗೊಳಗಾಗುತ್ತಿದ್ದಳು. ಅವಳನ್ನು ಬೈಯ್ಯುವುದೂ ಶಾಂಭವಿಗೆ ಕಷ್ಟದ ಕೆಲಸ ಏಕೆಂದರೆ ಅವಳಿಗೆ ಕೇಳಿಸುವುದಿಲ್ಲ, ಹಾಗಾಗಿ ಸನ್ನೆ ಭಾಷೆಯಲ್ಲಿ ಬೈಯ್ಯಬೇಕು. ಇದೇ ಕಾರಣ, ಕೆಲವು ಬಾರಿ ಶಾಂಭವಿ ಸುಮ್ಮನಿದ್ದದ್ದೂ ಇದೆ.
ಕಸ್ತೂರಿಯ ಆಸಕ್ತಿಯನ್ನರಿತ ಸ್ಮೃತಿ, ರಜಾ ದಿನಗಳಲ್ಲಿ ಅಥವಾ ಅಮ್ಮ ಮನೆಯಲ್ಲಿಲ್ಲದಿದ್ದಾಗ ತನಗೆ ತಿಳಿದಷ್ಟು ನಾಟ್ಯವನ್ನು ಹೇಳಿಕೊಡುತ್ತಿದ್ದಳು. ತಾಳವನ್ನು ಆಲಿಸಲಾಗದ ಕಸ್ತೂರಿಯ ಕೊರತೆಯನ್ನರಿತ ಸ್ಮೃತಿ, ತಾನು ನಾಟ್ಯವಾಡುತ್ತ, ತನ್ನಂತೆಯೇ ಅನುಕರಿಸುವಂತೆ ಕಸ್ತೂರಿಗೆ ಹೇಳಿಕೊಡುತ್ತಿದ್ದಳು. ಆಶ್ಚರ್ಯವೆಂಬಂತೆ ಕಸ್ತೂರಿ ಬಲು ಬೇಗ ವಿದ್ಯೆಯನ್ನು ಮನವರಿಕೆ ಮಾಡಿಕೊಳ್ಳುತ್ತಿದ್ದಳು. ಹಾಗಾಗಿ ಅವಳ ಕಲಿಕೆಯೂ ಸ್ಮೃತಿಯಷ್ಟೇ ಬೆಳೆಯುತ್ತಿತ್ತು. ಒಮ್ಮೆ ಶಾಲೆಯಿಂದ ಹಿಂತಿರುಗುವಾಗ ದಾರಿಯಲ್ಲಿದ್ದ ಪುಟ್ಟ ಕಲ್ಲು ಗುಡಿಯ ಅಂಗಳವನ್ನು ನೋಡಿ, ಸ್ಮೃತಿ, ಅಲ್ಲಿ ಹೋಗಿ ಜೊತೆಯಲ್ಲೇ ಕುಣಿಯೋಣವೇ ಎಂದು ಕಸ್ತೂರಿಗೆ ಸನ್ನೆ ಮಾಡಿದಳು. ತಡವಾದೀತು ಎಂದು ಕಸ್ತೂರಿ ಮುಜುಗರ ವ್ಯಕ್ತಪಡಿಸಿದರೂ ಹಟಮಾಡಿ ಅವಳನ್ನು ಕರೆತಂದು ಇಬ್ಬರೂ ಅಲ್ಲಿ ಕುಣಿಯಲಾರಂಭಿಸಿದರು. ತಡವಾದರೂ ಮನೆಗೆ ಬಾರದ ಈ ಇಬ್ಬರನ್ನೂ ಹುಡುಕಿ ಹೊರಟ ಶಾಂಭವಿ ಕಲ್ಲು ಗುಡಿಯ ಹತ್ತಿರ ನಡೆಯುತ್ತಿದ್ದ ಇವರಿಬ್ಬರ, ಅದರಲ್ಲೂ ಕಸ್ತೂರಿಯ, ನಾಟ್ಯವನ್ನು ನೋಡಿ ಬೆರಗಾದಳು. ಮೊದಲೇ ಕೋಪಗೊಂಡಿದ್ದ ಶಾಂಭವಿಯ ಮನಸಿಗೆ, ಕಸ್ತೂರಿಯ ನಾಟ್ಯವನ್ನು ನೋಡಿದಾಗ, ತನ್ನ ಮಗಳನ್ನು ಎಲ್ಲರನ್ನೂ ಮೀರಿಸುವ ಕಲಾವಿದೆಯನ್ನಾಗಿಸುವ ಕನಸಿಗೆ ತನ್ನ ಮನೆಗೆಲಸದವಳೇ ಕರಿಛಾಯೆಯಾಗಬಹುದೇ ಎಂದು, ಒಂದು ಬಗೆಯ ಅಭದ್ರತೆಯ ಭಾವ ಕಾಡತೊಡಗಿತು. ಕುಪಿತಗೊಂಡು ಮಗಳನ್ನು ಮನೆಗೆ ಕರೆದೊಯ್ಯುತ್ತ ಕಸ್ತೂರಿಗೆ ಅಲ್ಲಿಂದಲೇ ಮನೆಗೆ ಹೋಗುವಂತೆ ಹೇಳಿದಳು.
ಬೇಸರದಿಂದ ಮನೆಗೆ ಹಿಂತಿರುಗಿದ ಕಸ್ತೂರಿಗೆ, ಗಾಯದ ಮೇಲೆ ಬರೆಯೆಂಬಂತೆ, ಮತ್ತೊಂದು ಅವಗಢ ಕಾದಿತ್ತು. ಗಿರಿಜಮ್ಮ ಮೂರ್ಛೆಹೋಗಿದ್ದಳು. ತಕ್ಷಣ ಮತ್ತೆ ಸ್ಮೃತಿಯ ಮನೆಗೆ ಬಂದು ಮನೆಗೆ ಆಗ ತಾನೆ ಕೆಲಸ ಮುಗಿಸಿ ಬಂದಿದ್ದ ಡಾಕ್ಟರನ್ನು ಕರೆದೊಯ್ದಳು. ಸದ್ಯಕ್ಕೆ ಔಷಧಿಯನ್ನು ಕೊಟ್ಟು ಕಸ್ತೂರಿಗೆ ಹೇಗೆ ಹೇಳಬೇಕೋ ತಿಳಿಯದೆ, ಮನೆಗೆ ಬಂದು ಶಾಂಭವಿಗೆ ಹೇಳಿದರು ಗಿರಿಜಮ್ಮನಿಗೆ ಬ್ರೆಸ್ಟ್ ಕ್ಯಾನ್ಸರ್ ಎಂದು. ಮರುದಿನ ಶಾಂಭವಿಯಿಂದ ವಿಷಯವನ್ನರಿತ ಕಸ್ತೂರಿ ದು:ಖಿಸಿದಳು.
ಭರತ ನಾಟ್ಯವೆಂಬುದು ಕೃಷ್ಣ ಪ್ರಸಾದರ ಮನೆಯಲ್ಲಿ ವಂಶಪಾರಂಪರ್ಯವಾಗಿ ಬಂದಿತ್ತು. ಆತನ ಅಜ್ಜಿ ಮತ್ತು ತಾಯಿ ಕೂಡ ಒಳ್ಳೆಯ ಕಲಾವಿದೆಯರಾಗಿದ್ದರು. ಅಂತೆಯೇ ಅವರ ಮನೆಯಲ್ಲಿ ಪುರಾತನ ಕಾಲದ ಅದ್ಭುತ ಕಲೆಯುಳ್ಳ ಗೆಜ್ಜಯೊಂದಿತ್ತು. ಮನೆಯ ಪಡಸಾಲೆಯ ಗೋಡೆಯ ಮೇಲೆ ಗಾಜಿನ ಸುಂದರ ಚೌಕಟ್ಟಿನಲ್ಲಿ ಇದನ್ನು ತೂಗು ಹಾಕಿದ್ದರು. ಮನೆಗೆ ಬಂದವರಿಗೆ ತಮ್ಮ ಮನೆಯ ಪರಂಪರೆಯ ಸಂಕೇತವನ್ನು ತೋರಿಸುವ ಸಹಜವಾದ ಹಿರಿಮೆ ಕೃಷ್ಣ ಪ್ರಸಾದ ದಂಪತಿಗಳಿಗೆ. ತಮ್ಮ ಮನೆಯ ಪರಂಪರೆಯೆಂತೆ ಮುಂದಿನ ಪೀಳಿಗೆಯ ಮನೆಯ ಹೆಣ್ಣು ಮಗಳು ರಂಗಪ್ರವೇಶವಾದ ನಂತರ ಇದನ್ನು ಧರಿಸುವುದು ವಾಡಿಕೆ. ಶಾಂಭವಿಯ ರಂಗಪ್ರವೇಶ ಮದುವೆಗೆ ಮುನ್ನವೇ ಆದ ಕಾರಣ ಈ ಬಾರಿ ಇದನ್ನು ಧರಿಸುವ ಹಿರಿಮೆ ಸ್ಮೃತಿಗೆ ಸೇರಿತ್ತು.
ಇತ್ತ ಸ್ಮೃತಿಯಿಂದ ಕಲಿತ ವಿದ್ಯೆಯನ್ನು ಪ್ರತಿ ನಿತ್ಯ ಮನೆಯಲ್ಲಿ ಅಭ್ಯಸಿಸುತ್ತಿದ್ದಳು ಕಸ್ತೂರಿ. ಗಿರಿಜಮ್ಮನಿಗೆ ಇದು ಹಿಡಿಸುತ್ತಿರಲಿಲ್ಲ. ಬೇರೆ ಯಾವ ಸಮಯದಲ್ಲೂ ಮಗಳ ಬಳಿ ಕೋಪ ತೋರದ ಗಿರಿಜಮ್ಮ, ಅವಳು ನಾಟ್ಯವಾಡುವಾಗ ಮಾತ್ರ ರೌದ್ರಿಯಾಗುತ್ತಿದ್ದಳು. ಯಾಕೆಂದು ಕೇಳಿದರೆ ಅದು ನಮ್ಮಂತವರಿಗಲ್ಲ ಎಂದು ಕೆಂಗಣ್ಣು ಬಿಡುತ್ತಿದ್ದಳು. ಆಶ್ಚರ್ಯ-ಬೇಸರದೊಡನೆ ಇದನ್ನು ಸಹಿಸುತ್ತಿದ್ದ ಕಸ್ತೂರಿಗೆ ತನ್ನ ಮನೆಯಲ್ಲೂ ತನ್ನ ಕನಸನ್ನು ಸಾಕುವಂತಿರಲ್ಲಿಲ್ಲ.
ಮಗಳ ರಂಗಪ್ರವೇಶ ಹತ್ತಿರ ಬರುತ್ತಿದ್ದ ಕಾರಣ ಒಮ್ಮೆ ಗೆಜ್ಜೆಗಳನ್ನು ಶುಚಿಮಾಡಲು ನೋಡಿದಾಗ ಗೆಜ್ಜಗಳು ಅಲ್ಲಿರಲಿಲ್ಲ. ಮುಂಗೋಪಿ ಶಾಂಭವಿ ಎಲ್ಲೆಡೆ ಹುಡುಕಿ, ಎಲ್ಲೂ ಸಿಗದಿದ್ದಾಗ ಅಲ್ಲೇ ಕೆಲಸ ಮಾಡುತ್ತಿದ್ದ ಕಸ್ತೂರಿಯ ಮೇಲೆ ಅಪವಾದ ಹೊರಿಸಿದಳು. ಕೋಪ ತಾರಕಕ್ಕೇರಿ, ಅವಳನ್ನು ಇನ್ನು ಕೆಲಸಕ್ಕೆ ಬರುವುದು ಬೇಡವೆಂದು ಮನೆಗೆ ಕಳಿಸಿದಳು.
ಪೆಚ್ಚು ಮೋರೆಹಾಕಿಕೊಂಡು ಮನೆಗೆ ಬಂದ ಕಸ್ತೂರಿ ತನ್ನದೇ ಸನ್ನೆ ಭಾಷೆಯಲ್ಲಿ ನಡೆದದ್ದನ್ನು ತಾಯಿಗೆ ವಿವರಿಸಿ ತನ್ನ ಮೂಕರೋದನೆಯನ್ನು ತೋಡಿಕೊಂಡಳು. ಮಗಳ ರೋದನೆ ಮತ್ತವಳ ನಾಟ್ಯದ ಹಂಗು, ಅವಳ ಪ್ರಕಾರ ಅದನ್ನೊಪ್ಪದ ಸಮಾಜ – ಇದನ್ನೆಲ್ಲಾ ನೆನೆದು ಗಿರಿಜಮ್ಮ ಮನದಲ್ಲೇ ನೊಂದಳು. ಆ ದಿನ ಸಂಜೆ ಅಮ್ಮನ ಔಷಧಿಯನ್ನು ಹುಡುಕುತ್ತಿದ್ದ ಕಸ್ತೂರಿಗೆ ಹಳೆಯ ಬಟ್ಟೆಯ ಗಂಟೊಂದು ದೊರೆಯಿತು. ಬಿಚ್ಚಿ ನೋಡಿದಾಗ ಅವಳಿಗೆ ಸಿಕ್ಕಿದ್ದು ಒಂದು ಜೋಡಿ ಗೆಜ್ಜೆಗಳು. ಆಶ್ಚರ್ಯ ಮತ್ತು ಸಂತೋಷದಿಂದ ಅವುಗಳನ್ನು ಅಮ್ಮನ ಬಳಿ ತಂದಾಗ ಅದನ್ನು ನೋಡಿದ ಗಿರಿಜಮ್ಮನಿಗೆ ಯಾವುದನ್ನು ತನ್ನ ಮಗಳಿಂದ ಮುಚ್ಚಿಡಬೇಕೆಂದುಕೊಂಡಿದ್ದಳೊ ಅದು ಇಂದು ಬಹಿರಂಗವಾಯಿತೇ ಎಂದುಕೊಂಡಳು. ಇನ್ನು ಮುಚ್ಚಿಡುವಂತಿಲ್ಲ ಎಂದು ಕಸ್ತೂರಿಗೆ ತನ್ನ ಹಿಂದಿನ ಕಥೆಯನ್ನು ಹೇಳಿದಳು.
ಗಿರಿಜಮ್ಮನದ್ದು ದೇವದಾಸಿಯ ವಂಶ. ರಾಜರ ಕಾಲದಲ್ಲಿ ಅವಳ ಪೂರ್ವಜರು ಆಸ್ಥಾನ ನರ್ತಕಿಯರು. ನರ್ತಕಿಯರನ್ನು ದಾಸಿಗಳನ್ನಾಗಿ ಮಾರ್ಪಾಡು ಮಾಡುತ್ತ ಬಂದ ಇತಿಹಾಸ ಕೊನೆಗೆ ಇವಳ ತಾಯಿಯರ ಕಾಲಕ್ಕೆ ಇವರನ್ನು ವೇಶ್ಯೆಯರನ್ನಾಗಿಸುತ್ತಾ ಹೋಯಿತು. ಆದರೆ ತನ್ನ ತಾಯಿ ಎಂದಿಗೂ ಹೇಳುತ್ತಿದ್ದಳು. ಕಲೆ ಎಂದಿಗೂ ದೇವರ ಸಮಾನ. ಗೆಜ್ಜೆ ತಮ್ಮ ವಂಶದ ಸಂಪತ್ತು. ಅಷ್ಟೇ ಪೂಜನೀಯ ಕೂಡ. ತಮ್ಮ ಈ “ಕಸುಬು” ಗೆಜ್ಜೆಯನ್ನು ಕಟ್ಟಲು ಬಿಡುವುದಿಲ್ಲ, ಹಾಗೆ ಮಾಡುವುದು ಶ್ರೇಷ್ಠವಲ್ಲ. ಆದರೆ ನಮ್ಮ ಪೂರ್ವಜರ ಹಿರಿಮೆ ಮತ್ತು ಕಲಾವೈಭವವನ್ನು ಸಾರುವ ಕಾರಣ ಈ ಗೆಜ್ಜೆಗಳನ್ನು ಜೋಪಾನವಾಗಿಡು ಎಂದು ಹೇಳಿದ ಕಾರಣ ಮತ್ತು ತಾಯಿಯಂತೆ ತಾನೂ ವೇಶ್ಯಾವೃತ್ತಿಯನ್ನು ಮಾಡುತ್ತಿದ್ದ ಕಾರಣ ಇದನ್ನು ಗಂಟಿನಲ್ಲಿಟ್ಟಿದ್ದೆ ಎಂದಳು. ಹಾಗೆಯೇ ನಮ್ಮನ್ನು ಕೀಳಾಗಿ ಕಾಣುತ್ತಿದ್ದ ಸಮಾಜ ನಿನ್ನನ್ನು ಹಾಗೆ ಕಾಣಬಾರದು ಎಂದು ದೂರದ ಊರಲ್ಲೊಂದು ಹೊಸತೇ ಬದುಕು ನಿಭಾಯಿಸಲು ಅವರು ಈ ಹಳ್ಳಿಗೆ ಬಂದು ನೆಲೆಸಿದ್ದಾಗಿಯೂ ಹೇಳಿದಳು. ಅಮ್ಮನ ಮಾತುಗಳು ಒಂದೆಡೆ ಅಸಹಾಯಕತೆಯನ್ನು ತೋರಿದರೆ, ಮತ್ತೊಂದೆಡೆ ಒಂದು ಬಗೆಯ ಹೊಸ ಹುರುಪನ್ನು ತರುವಂತಿತ್ತು. ಕಲೆಯು ತನ್ನ ರಕ್ತದಲ್ಲೇ ಇದ್ದ ಕಾರಣ ಬಹುಶ: ಕಸ್ತೂರಿಗೆ ನಾಟ್ಯದ ತುಡಿತ. ಮಗಳ ಕಣ್ಣಲ್ಲಿ ಹುರುಪನ್ನರಿತ ಗಿರಿಜಮ್ಮ ಗೆಜ್ಜೆಗಳನ್ನು ಕಟ್ಟಿಕೊಂಡು ತನ್ನ ತಾಯಿಯಿಂದ ಕಲಿತ ಅಲ್ಪ ಸ್ವಲ್ಪ ನಾಟ್ಯವಿದ್ಯೆಯನ್ನು ಮಗಳಿಗೆ ತೋರಿದಳು. ಅಮ್ಮನನ್ನು ಹೀಗೆಂದೂ ಕಾಣದ ಕಸ್ತೂರಿ ಹಿಗ್ಗಿದಳು. ತಾಯಿಯೊಡನೆ ಕುಣಿದಳು.
ಇತ್ತ ಒಂದು ವಾರಕ್ಕೆಂದು ದೊಡ್ಡ ನಗರವೊಂದಕ್ಕೆ ಹೋಗಿದ್ದ ಕೃಷ್ಣ ಪ್ರಸಾದ್ ಮನೆಗೆ ಹಿಂತಿರುಗಿ ಹೊಸ ಮನೆಗೆಲಸದವಳೊಡನೆ ವ್ಯವಹರಿಸುತ್ತಿದ್ದ ಶಾಂಭವಿಯನ್ನು ನೋಡಿ ಕಸ್ತೂರಿಯ ಬಗ್ಗೆ ವಿಚಾರಿಸಿದಾಗ ಶಾಂಭವಿ ಎಲ್ಲವನ್ನು ವಿವರಿಸಿದಳು. ಹಾಗೆ, ಫೋನಿನಲ್ಲಿ ಈ ವಿಷಯವನ್ನು ತಿಳಿಸಿದರೆ, ತಮ್ಮ ವಂಶದ ಆಸ್ತಿಯನ್ನು ಕಳೆದದ್ದಕ್ಕೆ ಎಲ್ಲಿ ತಾನು ಬೈಯ್ಯಿಸಿಕೊಳ್ಳಬೇಕೋ ಎಂದು ಹೇಳದೆ ಸುಮ್ಮನಿದ್ದೆ ಎಂದಳು. ಅವಳ ಈ ಅವಿವೇಕ ಮತ್ತು ಮುಂಗೋಪದ ಬುದ್ಧಿಗೆ ಅಪವಾದಿಸುತ್ತ, ಆ ಗೆಜ್ಜೆಯು ಬಲು ದಿನದಿಂದ ಅಲ್ಲೇ ಇದ್ದು ಸಡಿಲಗೊಂಡಿತ್ತು. ಹೇಗಿದ್ದರು ದೊಡ್ಡ ನಗರಕ್ಕೆ ಹೊರಟ್ಟಿದ್ದೆ ಹಾಗಾಗಿ ಅದನ್ನು ತೆಗೆದುಕೊಂಡು ಹೋಗಿ ಸರಿ ಮಾಡಿಸಿಕೊಂಡು ಬಂದೆ ಎಂದು ಗೆಜ್ಜೆಗಳನ್ನು ಅವಳ ಕೈಗಿತ್ತನು. ತಪ್ಪಿನ ಅರಿವಾದರೂ, ಮರುದಿನ ಸಂಜೆ ಅವಳ ಮನೆಗೆ ಹೋಗಿ ಅವಳನ್ನು ಕೆಲಸಕ್ಕೆ ಮತ್ತೆ ಬರಲು ಹೇಳಿ ಬರೋಣವೆಂದು ಕೃಷ್ಣ ಹೇಳಿದರೂ, ತಾನು ಬರುವುದಿಲ್ಲ, ಬೇಕಿದ್ದರೆ ಸ್ಮೃತಿಯನ್ನು ಕರೆದೊಯ್ಯಿರಿ ಎಂದು ಜಂಭ ತೋರಿದಳು. ಕೃಷ್ಣ ಅಸಹಾಯಕತೆಯ ನಿಟ್ಟುಸಿರು ಬಿಟ್ಟನು; ಏನೂ ತಪ್ಪು ಮಾಡದ ತನ್ನ ಗೆಳತಿಯ ಸತ್ಯವನ್ನು ತಿಳಿದರೂ ಸುಮ್ಮನಿದ್ದ ಸ್ಮೃತಿ ಮತ್ತೆ ಅವಳನ್ನು ಕರೆತರಲು ಸಿದ್ಧಳಾದಳು.
ಅದೇ ದಿನ, ಕಾಕತಾಳೀಯವೆಂಬಂತೆ, ಗಿರಿಜಮ್ಮನ ಅನಾರೋಗ್ಯ ಮಿತಿಮೀರಿತ್ತು. ಮನೆಗೆಲಸವನ್ನು ಬಿಟ್ಟ ಕಸ್ತೂರಿ, ತಾಯಿ ಬದಲು ಗದ್ದೆ ಕೆಲಸಕ್ಕೆ ಹೋಗುತ್ತಿದ್ದಳು. ಮನೆಗೆ ಹಿಂತಿರುಗಿದ ಕಸ್ತೂರಿ ಅಮ್ಮನ ಸ್ಥಿತಿಕಂಡು ಡಾಕ್ಟರನ್ನು ಕರೆತರಲು ಮುಂದಾದರೂ, ಬೇಡವೆಂದು ಒತ್ತಾಯಿಸಿ ಇದ್ದ ಮಾತ್ರೆಯನ್ನು ಕೊಡು, ಮಲಗುವೆ ಎಂದು ಗಿರಿಜಮ್ಮ ಹಟಹಿಡಿದಳು. ಅಮ್ಮನಿಗೆ ಗಂಜಿ ಉಣಿಸಿ ಮಾತ್ರೆ ಕೊಟ್ಟು ಕಸ್ತೂರಿಯೂ ಮಲಗಿದಳು. ಮಧ್ಯರಾತ್ರಿ ಗಿರಿಜಮ್ಮನ ಕೆಮ್ಮು ಹೆಚ್ಚಿತು. ಉಸಿರಾಟ ನಿಲ್ಲುವಂತಾಯಿತು. ಕಿವಿಕೇಳದ ಕಸ್ತೂರಿ ಗಾಢ ನಿದ್ರೆಯಲ್ಲಿದ್ದಳು. ಮಗಳನ್ನು ಎಬ್ಬಿಸಲು ಹಾಸಿಗೆಯಿಂದ ತೆವಳಲು ಮುಂದಾದ ಗಿರಿಜಮ್ಮ, ಶ್ರಮ ಫಲಿಸದೇ ಅಲ್ಲೇ ಅಸುನೀಗಿದಳು. ಮುಂಜಾವಿನ ಕಿರಣ ಕಸ್ತೂರಿಯ ಕಣ್ಣು ಕುಕ್ಕಿತು. ಕಣ್ಣು ತೆರೆದರೆ ಕಂಡದ್ದು ಬೆಳಕ ಚೆಲ್ಲಿ ಹೊಳೆಯುತ್ತಿದ್ದ ಗೆಜ್ಜೆಗಳು ಮತ್ತು ಅದನ್ನು ಕೈಯಲ್ಲಿಟ್ಟುಕೊಂಡು ಪ್ರಾಣಬಿಟ್ಟ ತಾಯಿ. ಕಸ್ತೂರಿಯ ಮೂಕರೋದನೆ ಕೇಳಿದ ಕೆಲಸಕ್ಕೆ ಹೊರಟ ಜನ ಗಿರಿಜಮ್ಮನ ಶವ ಸಂಸ್ಕಾರಕ್ಕೆ ಅಣಿಯಾದರು.
ಆ ದಿನ ಬೆಳಿಗ್ಗೆ ಹತ್ತಿರದೂರಿನ ದೇವಸ್ಥಾನಕ್ಕೆಂದು ಹೋಗಿದ್ದ ಕೃಷ್ಣ ಪ್ರಸಾದ್ ಕುಟುಂಬ ಸಂಜೆ ಮನೆಗೆ ಬರುತ್ತಿದ್ದಂತೆ ವಿಷಯ ತಿಳಿದು ತಕ್ಷಣವೇ ಕಸ್ತೂರಿಯನ್ನು ನೋಡಲು ಅವಳ ಮನೆಯೆಡೆ ಹೊರಟರು. ಅಮ್ಮನು ಮಲಗಿದ್ದ ಜಾಗದಲ್ಲಿ ಉರಿಯುತ್ತಿದ್ದ ದೀಪವನ್ನೇ ದಿಟ್ಟಿಸುತ್ತಿದ್ದ ಏಕಾಂಗಿ ಕಸ್ತೂರಿ ಗೆಜ್ಜೆಯನ್ನು ಕಟ್ಟಿ ಕಣ್ಣೀರಿನೊಡನೆ ಕುಣಿಯಲಾರಂಭಿಸಿದಳು. ಸ್ಮೃತಿ ಮತ್ತು ಕೃಷ್ಣ ಅವಳ ಮನೆಗೆ ಬರುತ್ತಿದ್ದಂತೆಯೇ ಅಲ್ಲಿಯವರೆಗೂ ಕುಣಿಯುತ್ತಿದ್ದ ಕಸ್ತೂರಿ ಮೂರ್ಛೆಹೋಗಿ ಬಿದ್ದಳು. ಅವಳಿಗೆ ಎಚ್ಚರವಾದಾಗ ಅವಳಿದ್ದದ್ದು ಸ್ಮೃತಿಯ ಮನೆಯಲ್ಲಿ. ನಡೆದ ವಿಷಯವನ್ನೆಲ್ಲಾ ಅವಳಿಗೆ ವಿವರಿಸಿ ಇನ್ನು ಅವಳು ತಮ್ಮ ಮನೆಯಲ್ಲೇ ಇರಬೇಕೆಂದು ಸ್ಮೃತಿ ಮತ್ತು ಕೃಷ್ಣ ಹೇಳಿದರು. ಕಸ್ತೂರಿ ಕಂಗಳು ಸಮಾಧಾನದ ಧಾರೆ ಸುರಿಸಿದವು.
ಪ್ರಖ್ಯಾತ ವಿದ್ವಾನ್ ಗಂಗಾಧರ ಶಾಸ್ತ್ರಿಯವರ ನಾಟ್ಯಾಲಯ ದೇಶದೆಲ್ಲೆಡೆ ಹೆಸರುವಾಸಿ. ಪ್ರಪಂಚದೆಲ್ಲೆಡೆ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟ ಇವರು ಮತ್ತಿವರ ಶಿಷ್ಯವರ್ಗ ಜಗತ್ಪ್ರಸಿದ್ಧ. ಕಾರ್ಯಕ್ರಮವೊಂದಕ್ಕೆ ಅವರ ಹಳ್ಳಿಗೆ ಬಂದ ಶಾಸ್ತ್ರಿಗಳನ್ನು ತಮ್ಮ ಮನೆಗೆ ಅಹ್ವಾನಿಸಿದ್ದಳು ಶಾಂಭವಿ. ತನ್ನ ಮಗಳ ರಂಗಪ್ರವೇಶವು ಇವರ ಮೂಲಕವೇ ಆಗಬೇಕೆಂದು ಕೇಳಿಕೊಂಡಾಗ ಶಾಸ್ತ್ರಿಗಳು ಒಪ್ಪಿದರು. ಆದರೆ ಇದಕ್ಕಾಗಿ ಸ್ಮೃತಿ ತಮ್ಮೊಡನೆ ನಗರಕ್ಕೆ ಬಂದು ಒಂದು ವರ್ಷ ತಮ್ಮಲ್ಲಿಯೇ ಅಭ್ಯಸಿಸಬೇಕೆಂದಾಗ ದಂಪತಿಗಳು ಒಪ್ಪಿದರು. ಒಬ್ಬಳನ್ನೇ ಕಳುಹಿಸುವ ಚಿಂತೆ ಮಾಡಿದ್ದವರಿಗೆ ತಕ್ಷಣವೇ ಹೊಳೆದದ್ದು ಕಸ್ತೂರಿ. ಅವಳನ್ನು ಸ್ಮೃತಿಯೊಡನೆ ಕಳುಹಿಸಲು ನಿರ್ಧರಿಸಿದರು. ಇವರ ಮಾತುಕತೆಗಳ ನಡುವೆ ದೂರದಲ್ಲಿ ಕೆಲಸದ ನಡುವೆ ನಾಟ್ಯ ಭಂಗಿಯನ್ನು ಆಗಾಗ್ಗೆ ತನ್ನ ಪಾಡಿಗೆ ಮಾಡಿತ್ತಿದ್ದ ಕಸ್ತೂರಿಯನ್ನು ನೋಡಿದ ಶಾಸ್ತ್ರಿಗಳಿಗೆ ಅವಳಲ್ಲಿ ನಾಟ್ಯವಿದ್ಯೆ ಇರಬಹುದೇ ಎಂಬ ಕುತೂಹಲದ ಊಹೆ. ಹಾಗೆಯೇ ಶಾಸ್ತ್ರಿಗಳಿಗೆ ತಮ್ಮ ನಾಟ್ಯಶಾಲೆಯ ಕೆಲಸಕ್ಕೊಬ್ಬರು ಬೇಕಿದ್ದರು. ಇವರಲ್ಲಿ ವಿಚಾರಿಸಿದಾಗ ಕೃಷ್ಣ ಪ್ರಸಾದ್ ಕಸ್ತೂರಿಯನ್ನೇ ಕರೆದೊಯ್ಯಲು ಸೂಚಿಸಿದ. ಇದಕ್ಕೆ ಸಮ್ಮತಿಸದ ಶಾಂಭವಿಗೆ, ಸ್ಮೃತಿಯನ್ನು ನೋಡಿಕೊಳ್ಳಲೂ ಒಬ್ಬರಿದ್ದಂತಾಗುತ್ತದೆ ಎಂದು ಮನವರಿಗೆ ಮಾಡಿಕೊಟ್ಟ. ಶಾಸ್ತ್ರಿಗಳು ಹೊರಟರು. ಇದಾಗಿ ಒಂದು ತಿಂಗಳಲ್ಲೇ ಸ್ಮೃತಿ ಮತ್ತು ಕಸ್ತೂರಿಯನ್ನು ನಗರಕ್ಕೆ ಕಳುಹಿಸಲಾಯಿತು.
ಆ ದೊಡ್ಡ ಊರು ಮತ್ತವರ ನಾಟ್ಯ ಶಾಲೆಯನ್ನು ನೋಡಿದ ಕಸ್ತೂರಿಗೆ ಒಂದು ಬಗೆಯ ಪುಳಕ. ಒಮ್ಮೆ ನಾಟ್ಯ ಶಾಲೆಯಲ್ಲಿ ಕೆಲಸ ಮಾಡುವಾಗ ಒಳಗೆ ಶಾಸ್ತ್ರಿಗಳು ಕುರುಡರಿಗೆ ಭರತನಾಟ್ಯವನ್ನು ಮಾಡುವುದನ್ನು ನೋಡಿದ ಕಸ್ತೂರಿಗೆ ಆಶ್ಚರ್ಯ. ತನ್ನಂತೆಯೇ ಇಂದ್ರಿಯವಂಚಿತವಾದ ಆದರೂ ಬೆರಗಾಗುವಂತಹ ನಾಟ್ಯಮಾಡುತ್ತಿದ್ದ ಆ ಅಂಧರನ್ನು ನೋಡಿ ಇವಳೊಳಗೆ ಹೊಸ ಹುಮ್ಮಸ್ಸೊಂದು ಹುಟ್ಟಿತು. ಆ ರಾತ್ರಿ ಎಲ್ಲರೂ ಮಲಗಿರುವಾಗ ತನ್ನ ತಾಯಿ ಕೊಟ್ಟ ಗೆಜ್ಜೆಯನ್ನು ಕಟ್ಟಿ ನಾಟ್ಯಶಾಲೆಯೊಳಗೆ ಕುಣಿಯಲಾರಂಭಿಸಿದಳು. ಸದ್ದು ಕೇಳಿದ ಸ್ಮೃತಿ ತಕ್ಷಣವೇ ಶಾಸ್ತ್ರಿಗಳನ್ನು ಕರೆತಂದು ಕಸ್ತೂರಿಗೆ ತಿಳಿಯದಂತೆ ಕಿಟಕಿಯಿಂದ ಅವಳ ವಿದ್ಯೆಯನ್ನು ತೋರಿಸಿದಳು. ಮೊದಲೇ ಅವರಿಗೆ ಕಸ್ತೂರಿಯ ಕಲೆಯ ಬಗ್ಗೆ ಹೇಳಿದ್ದ ಸ್ಮೃತಿ, ಸಮಯ ಬಂದಾಗ ಅವಳ ವಿದ್ಯೆಯನ್ನು ತಮಗೆ ತೋರಿಸುವೆ ಸಾಧ್ಯವಾದರೆ ಅವಳನ್ನೂ ಹರಸಿ ಎಂದು ಕೋರಿದ್ದಳು.
ಉಪಾಯದಂತೆ ಮರುದಿನ ಬೆಳಿಗ್ಗೆ ಅಭ್ಯಾಸ ನಡೆಯುವಾಗ, ಅಲ್ಲೇ ಕೆಲಸ ಮಾಡುತ್ತಿದ ಕಸ್ತೂರಿಯನ್ನು ಎಲ್ಲರ ಮಧ್ಯೆ ತಂದು ನಿಲ್ಲಿಸಿದಳು ಸ್ಮೃತಿ. ತಕ್ಷಣವೇ ತಾಳ ಹಾಕಲಾರಂಭಿಸಿದರು ಶಾಸ್ತ್ರಿಗಳು. ಮೆಲ್ಲಗೆ ಮುಜುಗರದಿಂದ ಹೊರ ಬಂದ ಕಸ್ತೂರಿ ಸ್ಮೃತಿಯೊಡನೆ ಹೆಜ್ಜೆಹಾಕಿದಳು. ಎಲ್ಲರ ಚಪ್ಪಾಳೆಗೆ ಪಾತ್ರಳಾದಳು. ಸ್ಮೃತಿಯಷ್ಟೇ ಅಭ್ಯಸಿಸಿದ ಕಸ್ತೂರಿಯನ್ನೂ ಶಾಸ್ತ್ರಿಗಳು ಶಿಷ್ಯೆಯನ್ನಾಗಿ ಸ್ವೀಕರಿಸಿದರು. ಅಭ್ಯಾಸ ಶುರುವಾಯಿತು.
ಒಂದು ವರ್ಷದ ಅವಧಿ ಕಳೆಯಿತು. ಶಾಂಭವಿಯ ಮನೆಗೆ ಫೋನು ಮಾಡಿ ಮುಂದಿನ ವಾರ ರಂಗಪ್ರವೇಶ, ದಂಪತಿಗಳಿಬ್ಬರೂ ಬರಬೇಕೆಂದು ಅಹ್ವಾನಿಸಿದರು ಶಾಸ್ತಿಗಳು. ಮಾತಿನ ಮಧ್ಯೆ ಅವಳಿಗೊಂದು ವಿಸ್ಮಯ ಕಾದಿದೆಯೆಂಬ ಕುತೂಹಲವಿಟ್ಟರು. ಹಿಗ್ಗಿದ ಶಾಂಭವಿ ಮಗಳ ರಂಗಪ್ರವೇಶಕ್ಕೆ ಸಜ್ಜಾದಳು. ವಂಶದ ಆಸ್ತಿಯಾದ ಗೆಜ್ಜೆಗಳನ್ನು ಹೊತ್ತು, ಹೊರಡಲು ಮುಂದಾದಳು.
ರಂಗಪ್ರವೇಶದ ವೇದಿಕೆ ಸಜ್ಜಾಗಿತ್ತು. ಕೃಷ್ಣ ಪ್ರಸಾದ್ ದಂಪತಿಗಳು ತಮ್ಮ ಮಗಳ ನಾಟ್ಯವನ್ನು ನೋಡಲು ಇತರ ಅತಿಥಿಗಳೊಡನೆ ಕೂತಿದ್ದರು. ಸ್ಮೃತಿಯ ನಾಟ್ಯ ಶುರುವಾಯಿತು, ಅಂತೆಯೇ ಶಾಂಭವಿಯ ಮೊಗದಲ್ಲಿ ಮಂದಹಾಸ. ನಾಟ್ಯದ ಕೆಲವೇ ನಿಮಿಷಗಳಲ್ಲಿ ಸ್ಮೃತಿಯೊಡನೆ ಇನ್ನೊಬ್ಬ ಕಲಾವಿದೆ ಸೇರಿಕೊಂಡಳು. ಶಾಂಭವಿಯ ಭಾವ ಬದಲಾಗುತ್ತಾ ಹೋಯಿತು. ಇದು ಸತ್ಯವೇ ಎಂದು ನಂಬಲಾದಳು. ಕೃಷ್ಣ ಪ್ರಸಾದರ ಕಂಗಳು ಅರಳಿದವು. ಪೈಪೋಟಿಯೆಂಬಂತೆ ನಾಟ್ಯ ೨ ಘಂಟೆಗಳ ಕಾಲ ನಡೆಯಿತು. ಸಹಕಲಾವಿದೆಗೆ ಸೋತ ಸಂತಸ ಸ್ಮೃತಿಯಲ್ಲಿ ಪ್ರಜ್ವಲಿಸಿತು. ಕಸ್ತೂರಿ ರಂಗಪ್ರವೇಶಿಸಿದಳು. ಶಾಂಭವಿಯ ಕಡೆಗೆ ಕುತೂಹಲದಿಂದ ನೋಡಿದರು ಕೃಷ್ಣ. ಅವಳ ಕಣ್ಣಲ್ಲಿ ಪಶ್ಚಾತಾಪದ ಛಾಯೆ ಮೊಳಗಿತು. ಕಾರ್ಯಕ್ರಮ ಮುಗಿಯಿತು. ವೇದಿಕೆಯೆಡೆ ನಡೆದರು ದಂಪತಿಗಳು. ಕಾರ್ಯಕ್ರಮದ ನಂತರ ಮಗಳ ಕಾಲಿಗೆ ಕಟ್ಟಲು ವಂಶ ಪಾರಂಪರ್ಯವಾಗಿ ಬಂದ ಗೆಜ್ಜೆಯನ್ನು ತಂದ್ದಿದ್ದ ಶಾಂಭವಿ, ನೇರ ಕಸ್ತೂರಿಯ ಬಳಿ ನಡೆದು ಅವಳ ಕಾಲಿಗೆ ಈ ಗೆಜ್ಜೆಗಳನ್ನು ಕಟ್ಟಿ ಅವಳನ್ನು ಬಿಗಿದಪ್ಪಿದಳು.
ಕಸ್ತೂರಿಯ ಬಾಳಿನಲ್ಲಿ ಹೊಸ ಕಂಪು ಹರಿಯಿತು. . . .