ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಕನ್ನಡಲ್ಲಿ ಹಾಟ್ ಬೆಡಗಿಯರಿದ್ದರೂ ಮುಂಬೈ…ಚೆನ್ನೈ…ಎನ್ನುವ ನಿರ್ದೇಶಕರ ದಂಡೇ ನಮ್ಮಲ್ಲಿದೆ. ಪ್ರಾಯಶಹ ಅವರ “ಐ” ಕೈ ಕೊಟ್ಟ ಕಾರಣ ಹಿಂದೆ ಮುಂದೆ ನೋಡದೆ ಪರಭಾಷಾ ನಾಯಕಿಯರಿಗೆ ಜೈ ಎಂದುಬಿಡುತ್ತಾರೆ. ನಮ್ಮಲ್ಲಿ ಎಕ್ಸ್‌ಪೋಸ್ ಎಂದರೆ ಸ್ವಲ್ಪ ದೂರ ಸರಿಯುವ ಸುಂದರಿಯರಿಗೆ ಸ್ವಲ್ಪ ಸಂಕೋಚ ಜಾಸ್ತಿ ಎಂದು ನಿಸ್ಸಂಕೋಚವಾಗಿ ಹೇಳಿ ಹಳಿಯುವ ನಿರ್ಮಾಪಕರು ಒಮ್ಮೊಮ್ಮೆ ಹಳಿಲ್ಲದೆ ರೈಲು ಬಿಡುತ್ತಾರೆ ಎಂದೆನಿಸುತ್ತದೆ. “ಮರ್ಡರ್”ನ ರೀಮೇಕ್ “ಗಂಡ-ಹೆಂಡತಿ”ಯಲ್ಲಿ ಕನ್ನಡದ ಸಂಜನಾ ಹಿಂದಿಯ “ಮಲ್ಲಿಕಾ”ಳನ್ನೇ ಹಿಂದಿಕ್ಕುವಷ್ಟು ತನುಮನ”ಬಿಚ್ಚಿ” ನಟಿಸಿದ್ದಳು. ತೀರಾ ಇತ್ತೀಚೆಗೆ ರಮ್ಯಾ ಕೂಡ “ಊರಿಗೊಬ್ಳೇ ಪದ್ಮಾವತಿ…” ಎನ್ನುತ್ತಾ ಬಚ್ಚಿಟ್ಟಿದ್ದ ಹೆಚ್ಚಿನದನ್ನು ಸ್ವಲ್ಪ ಹೆಚ್ಚಾಗಿಯೇ ತೋರಿಸಿದ್ದಳು. ಹೀಗೆ ಇಂತಹ ಮುದ್ದು ಕನ್ನಿಕೆಯರ ದೊಡ್ಡ ದಂಡೇ ನಮ್ಮಲ್ಲಿದ್ದರೂ ನಮ್ಮವರು ಉಪಯೋಗವಿಲ್ಲ …ದಂಡ ಎನ್ನುವಂತೆ ಉದ್ದುದ್ದ ವಾದ ಮಂಡಿಸುವ ಚಿತ್ರಪಂಡಿತರಿಗೆ ಏನನ್ನಬೇಕು? ಈ ಮುದ್ದು ಮಣಿಯರಿದ್ದರೂ ಆಮದು ಮಾಡಿಕೊಂಡು ಅಪಾರ ಹಣ ಚೆಲ್ಲಿ ಪರಭಾಷಾ ನಟಿಮಣಿಯರಿಗೆ ಮಣೆ ಹಾಕಿ ಕಾಲ್‌ಶೀಟ್‌ಗಾಗಿ ಪರ ಪರ ತಲೆ ಕೆರೆದುಕೊಳ್ಳುವವರಿಗೆ ಏನನ್ನಬೇಕು? ಈ ಕಾರಣಕ್ಕೆ ಪ್ರತಿಭಾ ಪಲಾಯನವಾಗಿ ನಮ್ಮವರೇ ಈಗ ಪರಭಾಷಾ ನಟಿಯರಾಗುತ್ತಿದ್ದಾರೆ! ತಮಿಳಿನಲ್ಲಿ ವಿಜಯಕಾಂತ್ ಜೊತೆ “ವಿರುತಗಿರಿ”
ಚಿತ್ರದಲ್ಲಿ ನಟಿಸಿ ಜಯಭೇರಿ ಬಾರಿಸಿ ಬಂದ ಇವಳೂ ಹಾಗೆಯೇ….ಬೇರೆಲ್ಲೋ ಬೆಳಕಿಗೆ ಬಂದ ನಂತರ ನಮ್ಮವರ ಅರಿವಿಗೆ ಬಂದರೆ ಆಶ್ಚರ್ಯವಿಲ್ಲ. ಯಾರೀ ಕುವರಿ ಎನ್ನುವಿರಾ?
ಹುಬ್ಬಳ್ಳಿಯ ಹೂಬಳ್ಳಿ ಮಾಧುರಿ–ಇವಳಲ್ಲ ದುಬಾರಿ !
ಈಕೆ ಮಾಧುರಿ ಇಟಗಿ. ಮಾದಕತೆಗೆ ಇನ್ನೊಂದು ಹೆಸರು. ಬಾಲಿವುಡ್‌ನ ಯಾವ ಹೀರೋಇನ್‌ಗಳಿಗಿಂತ ತಾನೆನು ಕಮ್ಮಿ ಇಲ್ಲ ಎಂದು ಇವಳ ಅಂದ…ರಸಿಕರ ಕಂಗಳ ಸೆಳೆಯುವ ನೋಟ. ಫೇಸ್‌ಬುಕ್‌ನಲ್ಲಿ ಈಕೆ ಅಪ್‌ಲೋಡ್ ಮಾಡಿರುವ ಫೋಟೋಗಳನ್ನು ನೋಡಿ ಸ್ವಲ್ಪ ಲೋಡ್ ಹೆಚ್ಚಾದಂತಾಗಿ ಪಡ್ಡೆಹುಡುಗರು ನಿದ್ದೆ ಕೆಡಿಸಿಕೊಂಡಿರುವು ಸುಳ್ಳಲ್ಲ. ದಿಕ್ಕು ದಿಕ್ಕುಗಳಲ್ಲೂ ಬೇರೆ ಬೇರೆ ರೀತಿ ಕಾಣುತ್ತಿರುವ ಇವಳ ಮೈಮಾಟವನ್ನು ನೋಡಿ ದಿಕ್ಕೇ ತೋಚದಂತಾಗಿ ಮೈಮರೆತಿದ್ದಾರೆ ಇವಳ ಅಭಿಮಾನಿಗಳು. ಅಯ್ಯೋ….ಕನ್ನಡದ ಹುಡುಗಿಯರಿಗೆ ಫೋಟೊಜೆನಿಕ್ ಲುಕ್ ಇಲ್ಲ ಎನ್ನುವ ನಿರ್ದೇಶಕರು ಇವಳನ್ನು ತಮ್ಮ ಮುಂದಿನ ಚಿತ್ರಗಳಿಗೆ ಬುಕ್ ಮಾಡಿ ಲಕ್ ತಿರುಗಿಸಬಾರದೆ? ಎನ್ನುತ್ತಿದ್ದಾರೆ ಇವಳ ಅಂದಾ(ಧಾ)ಭಿಮಾನಿಗಳು!
ಕಾಲೇಜು ಮೆಟ್ಟಿಲು ಹತ್ತಿದ್ದ ಹದಿನೇಳರ ಹರೆಯದ ಮಾಧುರಿಯನ್ನು ಚಿತ್ರರಂಗ ಕೈಬೀಸಿ ಕರೆದದ್ದು ಯಾವಾಗ ಎನ್ನುವಿರಾ? ಮಾಡೆಲಿಂಗ್‌ನಲ್ಲಿ ಬಳುಕುತ್ತಿದ್ದ ಹುಬ್ಬಳ್ಳಿಯ ಈ ಹೂಬಳ್ಳಿ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದಳು. ಕುಮಾರ್ ಗೋವಿಂದ್ ಅವರ “ಸತ್ಯ”ಚಿತ್ರ ಇವಳನ್ನು ನಾಯಕಿಯನ್ನಾಗಿಸಿತು. ಸತ್ಯ ಬಿಡುಗಡೆಯಗಿದ್ದಷ್ಟೇ ಸತ್ಯ! ಆನಂತರ ಕನ್ನಡದಲ್ಲಿ ನಾಲ್ಕೈದು…ತಮಿಳಿನಲ್ಲಿ ಒಂದೆರಡು (ವಿರುತಗಿರಿ ಹಾಗು ತರಗು) ಚಿತ್ರಗಳಲ್ಲಿ ನಾಯಕಿಯ ರೋಲ್. ಇವಳ ಅಭಿನಯದ ಕನ್ನಡ ಚಿತ್ರಗಳು ತೆನಾಲಿರಾಮ, ಚಿಕ್‌ಪೇಟೆ ಸಾಚಾಗಳು ಹಾಗು ಅಪ್ಪು-ಪಪ್ಪು ಸೂಪರ್ ಹಿಟ್ ಎಂಬುದರಲ್ಲಿ ಎರಡು ಮಾತಿಲ್ಲ. ಚಿಕ್ ಪೇಟೆ ಸಾಚಾಗಳು ಚಿತ್ರದಲ್ಲಿ ಎಸ್.ನಾರಾಯಣ್ ಅವರ ಪತ್ನಿಯಾಗಿ ಭರ್ಜರಿಯಾಗಿ ನಟಿಸಿದ್ದ ಮಾಧುರಿ ಸೀರೆಯುಟ್ಟು ಗೃಹಿಣಿಯ ಪಾತ್ರದಲ್ಲೂ ಸೈ, ಗ್ಲಾಮರ್‌ನ ಗ್ರಾಮರ್‌ಗೂ ಜೈ, ಉತ್ತಮ ಭಾವಭಿನಯದಲ್ಲೂ ಎತ್ತಿದ ಕೈ !
ಆದಳು “ಮಿಸ್ ಕರ್ನಾಟಕ“-ಈ ವಿಶ್ವ ಕನ್ನಡತಿ–
ಇಂತಿಪ್ಪ ಮಾಧುರಿ ಇತ್ತೀಚೆಗಷ್ಟೆ ಪ್ರಖ್ಯಾತ ನಿರ್ದೇಶಕಿ ರೂಪಾ ಅಯ್ಯರ್ ನೇತೃತ್ವದಲ್ಲಿ ಬೆಂಗಳೂರಿನ ಚೌಡಯ್ಯ ಹಾಲ್‌ನಲ್ಲಿ ನಡೆದ “ಮಿಸ್ ಕರ್ನಾಟಕ” ಕಾಂಟೆಸ್ಟ್‌ನಲ್ಲಿ ವಿನ್ ಆಗಿದ್ದು ಇವಳ ತನುಮನದ ಸೌಂದರ್ಯಕ್ಕೆ ಮತ್ತೊಂದು ಸಾಕ್ಷಿ. ಅದೇ ಕಾರಣಕ್ಕೆ ಬರುವ ಅಕ್ಟೋಬರ್‌ನಲ್ಲಿ ಲಂಡನ್ ಮಹಾನಗರದಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದಲ್ಲಿ “ವಿಶ್ವ ಕನ್ನಡತಿ”ಯಾಗಿ ಮಿಂಚಲಿದ್ದಾರೆ. ಸ್ಯಾಂಡಲ್‌ವುಡ್‌ನ ಈ ಸಖತ್ ಸುಂದರಿ ಬಾಲಿವುಡ್‌ನಲ್ಲೂ ಬೆಳಗಿ ಹಾಲಿವುಡ್‌ನಲ್ಲೂ ಹೊಳೆದರೆ ಇವಳ ಅಭಿಮಾನಿಗಳಿಗೆ…ಕನ್ನಡಿಗರಿಗೆ ಖುಷಿ ಅಲ್ಲವೆ?
ಚಿನ್ಮಯ.ಎಂ.ರಾವ್ ಹೊನಗೋಡು
Sunday, July 31, 2011